ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ದೇಶಾದ್ಯಂತ ಶೈಕ್ಷಣಿಕ ಪ್ರವಾಸಕ್ಕೆ ಅವಕಾಶ
ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ರಾಜ್ಯ ವ್ಯಾಪ್ತಿ ಮಾತ್ರವಲ್ಲ ದೇಶದ ಯಾವುದೇ ಭಾಗಕ್ಕೆ ಶೈಕ್ಷಣಿಕ ಪ್ರವಾಸ ಹೋಗಲು ಶಿಕ್ಷಣ ಇಲಾಖೆ ಅನುಮತಿ ನೀಡಲಾಗಿದೆ.
ಬೆಂಗಳೂರು (ನ.24): ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ರಾಜ್ಯ ವ್ಯಾಪ್ತಿ ಮಾತ್ರವಲ್ಲ ದೇಶದ ಯಾವುದೇ ಭಾಗಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲು ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಶೈಕ್ಷಣಿಕ ಪ್ರವಾಸ ಸಂಬಂಧ ಈ ಮೊದಲು ಹೊರಡಿಸಿದ್ದ ಸುತ್ತೋಲೆಯಲ್ಲಿ ಹೊರ ರಾಜ್ಯಗಳಿಗೆ ಕರೆದೊಯ್ಯುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳನ್ನು ಹೊರ ರಾಜ್ಯಗಳಿಗೆ ಕರೆದೊಯ್ಯಲು ಶಾಲೆಗಳಿಂದ ಬೇಡಿಕೆ ಬಂದಿದ್ದರಿಂದ ವಿವಿಧ ಜಿಲ್ಲಾ ಉಪನಿರ್ದೇಶಕರು ಇಲಾಖೆಯಿಂದ ಅನುಮತಿ ಕೇಳಿದ್ದರು. ಇದಕ್ಕೆ ಇಲಾಖೆಯು ರಾಜ್ಯ ಮಾತ್ರವಲ್ಲ, ಭಾರತದಾದ್ಯಂತ ಪ್ರವಾಸ ಕೈಗೊಳ್ಳಬಹುದು ಎಂದು ಸ್ಪಷ್ಟನೆ ನೀಡಿದೆ.
ಡಿ.23ರಂದು ಪಿಎಸ್ಐ ಮರು ಪರೀಕ್ಷೆ, ದಿಢೀರ್ ನಿರ್ಧಾರಕ್ಕೆ ಆಕಾಂಕ್ಷಿಗಳ ವಿರೋಧ
ಅಲ್ಲದೆ, ಭಾರತೀಯ ರೈಲುಗಳಲ್ಲೂ ಪ್ರವಾಸ ಕೈಗೊಳ್ಳಬಹುದು. ಇದಕ್ಕೆ ಷರತ್ತುಗಳನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮತಿ ನೀಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ.ಕಾವೇರಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಮಾರ್ಗದರ್ಶನ ಮತ್ತು ಅನುಮತಿ ನೀಡಲು ಕೋರಿದ ಹಿನ್ನೆಲೆಯಲ್ಲಿ ಷರತ್ತುಗಳ ಅನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮನವಿಗಳನ್ನು ಪರಿಶೀಲಿಸಿ ಅನುಮತಿ ನೀಡಲು ಸೂಚಿಸಲಾಗಿದೆ.
ಬೀಫ್ ತಿನ್ನುವ ಕಾರಣಕ್ಕೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಹಿಜಾಬ್ ನಿಂದ ಶೂ ಕ್ಲೀನ್ ಮಾಡಿಸಿದ ಶಿಕ್ಷಕರು!
ಷರತ್ತುಗಳು ಏನೇನು?
ಪ್ರತಿ ವರ್ಷ ಡಿಸೆಂಬರ್ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಬೇಕು. ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಬೇಕು. ಪ್ರವಾಸ ಶೈಕ್ಷಣಿಕ ಪ್ರವಾಸವಾಗುವಂತೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ಸ್ಥಳಗಳನ್ನು ಮಾತ್ರ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಿರಬೇಕು.
ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಂದು ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದರೆ ಶನಿವಾರ ಪೂರ್ಣ ದಿನ ಅಥವಾ ಭಾನುವಾರ ಶಾಲೆ ನಡೆಸಿ ಕೊರತೆ ಬೀಳುವ ಪಠ್ಯ ಚಟುವಟಿಕೆಗಳನ್ನು ಸರಿದೂಗಿಸಬೇಕು. ಇಲಾಖೆಯಿಂದ ಪ್ರವಾಸಕ್ಕೆ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರೇ ನೇರ ಹೂಣೆಗಾರರಾಗಿರುತ್ತಾರೆ. ಶಿಕ್ಷಣ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.
ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು. ಕೋವಿಡ್ 19ಗೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳಬೇಕು.
ದೇಶದ ಯಾವುದೇ ಭಾಗಕ್ಕೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯಲು ಅನುಮತಿ ನೀಡಲಾಗಿದೆ. ಜತೆಗೆ ರೈಲುಗಳಲ್ಲೂ ಪ್ರವಾಸಕ್ಕೆ ತೆರಳಬಹುದು, ಇದಕ್ಕೆ ಷರತ್ತುಗಳನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮತಿ ನೀಡಬಹುದು ಎಂದು ಆಯುಕ್ತೆ ಬಿ.ಬಿ. ಕಾವೇರಿ ತಿಳಿಸಿದ್ದಾರೆ.
- ಹೊರ ರಾಜ್ಯಗಳಿಗೆ ಕರೆದೊಯ್ಯುವ ಬಗ್ಗೆ ಸುತ್ತೋಲೆಯಲ್ಲಿ ಸ್ಪಷ್ಟತೆ ಇರಲಿಲ್ಲ
- ವಿದ್ಯಾರ್ಥಿಗಳನ್ನು ಹೊರ ರಾಜ್ಯಗಳಿಗೆ ಕರೆದೊಯ್ಯುವ ಬಗ್ಗೆ ಶಾಲೆಗಳಿಂದ ಬೇಡಿಕೆ
- ಇದಕ್ಕೆ ಇಲಾಖೆಯಿಂದ ಅನುಮತಿ ಕೇಳಿದ್ದ ವಿವಿಧ ಜಿಲ್ಲಾ ಉಪನಿರ್ದೇಶಕರು
- ಭಾರತದಾದ್ಯಂತ ಪ್ರವಾಸ ಕೈಗೊಳ್ಳಬಹುದು ಎಂದು ಸ್ಪಷ್ಟನೆ ನೀಡಿದ ಇಲಾಖೆ
- ಅಲ್ಲದೆ, ಭಾರತೀಯ ರೈಲುಗಳಲ್ಲೂ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳಬಹುದು
- ಇದಕ್ಕೆ ಷರತ್ತುಗಳನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮತಿ ನೀಡಬಹುದು