ಶಾಲೆ ಮಕ್ಕಳಿಗೆ ಮೊಟ್ಟೆ ಬೇಡ: ಕೇಂದ್ರಕ್ಕೆ ವರದಿ
‘ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಸುವಾಸನೆಯುಕ್ತ (ಫ್ಲೇವರ್ಡ್) ಹಾಲು, ಬಿಸ್ಕೆಟ್‌ನಂತಹ ಆಹಾರ ನೀಡದೆ ಸಾತ್ವಿಕ ಆಹಾರಕ್ಕೆ ಒತ್ತು ನೀಡಬೇಕು. ಶಾಲಾ ಅವಧಿಯಲ್ಲಿ 10 ದಿನ ಬ್ಯಾಗ್ ರಹಿತ ದಿನ ಆಚರಿಸಿ ಅಂದು ಶೂ ಧರಿಸುವುದನ್ನು ಕೂಡ ನಿಲ್ಲಿಸಬೇಕು.’
ಬೆಂಗಳೂರು (ಜು.15): ‘ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಸುವಾಸನೆಯುಕ್ತ (ಫ್ಲೇವರ್ಡ್) ಹಾಲು, ಬಿಸ್ಕೆಟ್‌ನಂತಹ ಆಹಾರ ನೀಡದೆ ಸಾತ್ವಿಕ ಆಹಾರಕ್ಕೆ ಒತ್ತು ನೀಡಬೇಕು. ಶಾಲಾ ಅವಧಿಯಲ್ಲಿ 10 ದಿನ ಬ್ಯಾಗ್ ರಹಿತ ದಿನ ಆಚರಿಸಿ ಅಂದು ಶೂ ಧರಿಸುವುದನ್ನು ಕೂಡ ನಿಲ್ಲಿಸಬೇಕು.’ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ (ಎನ್‌ಇಪಿ) ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರದ ಕಾರ್ಯಪಡೆಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಅಂಶಗಳಿವು.
ಶಾಲಾ ಹಂತದಲ್ಲಿ ಎನ್‌ಇಪಿ ಜಾರಿ ಮಾಡಲು ಯಾವ್ಯಾವ ತರಗತಿ ಮಕ್ಕಳಿಗೆ ಪಠ್ಯಕ್ರಮ ಹೇಗಿರಬೇಕು, ಏನನ್ನು ಬೋಧಿಸಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಗಳಿಂದಲೂ ಕೇಂದ್ರ ಸರ್ಕಾರ ವರದಿ ಕೇಳಿತ್ತು. ಈ ಸಂಬಂಧ ಕರ್ನಾಟಕ ಸರ್ಕಾರ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಮದನ್‌ಗೋಪಾಲ್ ನೇತೃತ್ವದ ಕಾರ್ಯಪಡೆ ರಚಿಸಿ ಒಟ್ಟು 26 ವಿಷಯ ಪತ್ರಿಕೆಗಳಿಗೆ (ಪೊಜಿಷನ್ ಪೇಪರ್ಸ್) ಪ್ರತ್ಯೇಕ ಸಮಿತಿ ರಚಿಸಿ ವರದಿ ಪಡೆದಿದೆ.
Bengaluru: ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ
ಈ ಪೈಕಿ ನಿಮ್ಹಾನ್ಸ್ ಮಕ್ಕಳು ಮತ್ತು ಹದಿಹರೆಯದವರ ಮನೋ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜಾನ್ ವಿಜಯ್ ಸಾಗರ್ ಅವರ ನೇತೃತ್ವದಲ್ಲಿ ಮಕ್ಕಳ ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ತಯಾರಿಸಿರುವ ಹೊಸ ವಿಷಯ ಪತ್ರಿಕೆಯಲ್ಲಿ ಇಂತಹ ಅಂಶಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಈ ಅಂಶಗಳಿಗೆ ವಿವಿಧ ಸಂಘಟನೆಗಳು ಹಾಗೂ ವೈದ್ಯಕೀಯ ಕ್ಷೇತ್ರದ ತಜ್ಞರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿರುವುದರಿಂದ ಶಾಲೆಗಳಲ್ಲಿ ಮೊಟ್ಟೆನೀಡಲಾಗುತ್ತಿದೆ.
ಮೊಟ್ಟೆ ಏಕೆ ಬೇಡ?: ಬದಲಾದ ಆಹಾರ ಪದ್ಧತಿಯಿಂದ ಹೆಣ್ಣುಮಕ್ಕಳು ಬಹಳ ಬೇಗ ಪ್ರೌಢಾವಸ್ಥೆಗೆ ತಲುಪುತ್ತಿದ್ದಾರೆ. ಗಂಡು ಮಕ್ಕಳೂ ಬೇಗ ಯೌವನಾವಸ್ಥೆಗೆ ತಲುಪುವಂತಹ ಬದಲಾವಣೆಗಳಾಗುತ್ತಿವೆ. ಸುವಾಸನೆಯುಕ್ತ ಹಾಲು, ಬಿಸ್ಕೆಟ್, ಹೆಚ್ಚು ಕೊಬ್ಬಿನ ಅಂಶವಿರುವ ಮೊಟ್ಟೆಮತ್ತಿತರ ಆಹಾರ ಸೇವನೆಯಿಂದ ಮಕ್ಕಳ ಹಾರ್ಮೋನ್ಸ್ ವ್ಯತ್ಯಯವಾಗಿ ಇಂತಹ ಅಸಮತೋಲನತೆಯುಂಟಾಗುತ್ತದೆ. ಅಲ್ಲದೆ, ಮೊಟ್ಟೆ, ಮಾಂಸದಂತಹ ಆಹಾರ ಸೇವನೆಯು ವಿವಿಧ ಕಾಯಿಲೆಗಳಿಗೂ ದಾರಿಯಾಗುತ್ತದೆ. ಹಾಗಾಗಿ ಬಿಸಿಯೂಟದಲ್ಲಿ ಇಂತಹ ಆಹಾರಗಳನ್ನು ಆಯ್ಕೆ ಮಾಡದೆ ಕೊಬ್ಬಿನ ಅಂಶವಾಗಿ ಪರಿವರ್ತನೆಯಾಗದ, ಕಡಿಮೆ ಕ್ಯಾಲರಿಯುಕ್ತ ಸಾತ್ವಿಕ ಆಹಾರಗಳನ್ನು ನೀಡುವತ್ತ ಗಮನ ಹರಿಸಬೇಕು ಎಂದು ಸಮಿತಿ ಶಿಫಾರಸು ಮಾಡಲಾಗಿದೆ.
ಶೂ ಧರಿಸುವುದರಿಂದ ಬೆಳವಣಿಗೆ ಕುಂಠಿತ: ಸಮವಸ್ತ್ರದ ನೆಪದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಕುಂದು ತರಬಾರದು. ಮಕ್ಕಳು ಶೂ ಹಾಕುವುದರಿಂದ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಬ್ಯಾಗ್‌ರಹಿತ ದಿನದಂದು ಶೂ ಕಡ್ಡಾಯ ಮಾಡಬಾರದು ಎಂದು ರಾಜ್ಯ ಸರ್ಕಾರದ ಎನ್‌ಇಪಿ ಕಾರ್ಯಪಡೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಹೇಳಿದೆ. ಪ್ರತಿಯೊಂದು ಶಾಲೆಗಳು ವಿಭಿನ್ನವಾದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿವೆ. ಇದು ತಪ್ಪು. ಎಲ್ಲರಿಗೂ ಒಂದೇ ರೀತಿಯಾದ ಸಮವಸ್ತ್ರ ಇರುವುದು ಉತ್ತಮ. ಭಾರತದಲ್ಲಿ ಸಮವಸ್ತ್ರವನ್ನು ಸರಳೀಕರಿಸಿ, ಸ್ಥಳೀಯವಾಗಿರುವಂತೆ ನೋಡಿಕೊಳ್ಳಬೇಕು. ಖಾದಿ ಬಳಕೆ ಮಾಡುವುದು ಉತ್ತಮ ಎಂದೂ ವರದಿಯಲ್ಲಿ ಹೇಳಲಾಗಿದೆ.
1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್
10 ದಿನ ಬ್ಯಾಗ್‌ರಹಿತ ದಿನಕ್ಕೆ ಸಲಹೆ: ಶೈಕ್ಷಣಿಕ ವರ್ಷದ ಕೊನೆಯ 10 ದಿನಗಳು ಬ್ಯಾಗ್ ರಹಿತ ದಿನವೆಂದು ಘೋಷಿಸಿ, ಆ ದಿನಗಳನ್ನು ‘ಸೇವಾ ದಿನ’ ಎಂದು ಪರಿಗಣಿಸಿ ಮಕ್ಕಳನ್ನು ವೃತ್ತಿಪರ ಕುಶಲ ಕರ್ಮಿಗಳ ಬಳಿ ತರಬೇತಿಗೆ ಕಳುಹಿಸಬೇಕು. ಕುಂಬಾರ, ಮರಗೆಲಸ, ಕಲಾವಿದರ ಬಳಿಗೆ ಮಕ್ಕಳನ್ನು ಕರೆದೊಯ್ದು ಕಲೆ, ಕರಕುಶಲ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಲಾಗಿದೆ.