ರಾಜ್ಯದ ಎಲ್ಲಾ ಶಾಲೆ, ಕಾಲೇಜಿನಲ್ಲಿ ನಿತ್ಯ 10 ನಿಮಿಷ ಧ್ಯಾನ: ಸಚಿವರ ಸೂಚನೆ

ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಾಲ ಧ್ಯಾನ ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Daily 10 minutes meditation in all schools colleges in karnataka gow

ಬೆಂಗಳೂರು (ನ.3): ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಾಲ ಧ್ಯಾನ ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಪತ್ರ ಬರೆದು ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಚಿವರು ಈ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನಧ್ಯಾನವನ್ನು ಮಾಡಿಸುವುದು ಅಗತ್ಯವಾಗಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ. ಈಗಾಗಲೇ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಧ್ಯಾನವನ್ನು ಮಾಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಪತ್ರ ಬರೆದು ಕೋರಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಿ ಅಗತ್ಯ ಕ್ರಮವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

"ಇದು ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ, ಉತ್ತಮ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು ಒಟ್ಟಾರೆಯಾಗಿ ಉತ್ತಮ ನಾಗರಿಕರಾಗಲು ಸಹಾಯ ಮಾಡುತ್ತದೆ" ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಲಾಗಿದೆ.

ಪ್ರತಿದಿನ ತಮ್ಮ ತರಗತಿಯನ್ನು ಪ್ರಾರಂಭಿಸುವ ಮೊದಲು, ಕರ್ನಾಟಕ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳು ಈ ವ್ಯಾಯಾಮದಲ್ಲಿ ಭಾಗವಹಿಸುತ್ತಾರೆ. ಶಾಲೆಗಳು ಮತ್ತು ಪಿಯುಸಿಗಳನ್ನು ಹೊರತುಪಡಿಸಿ, ಎಲ್ಲಾ ಪದವಿ ಪೂರ್ವ ಕಾಲೇಜುಗಳು ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಈ ನೀತಿಯನ್ನು ಜಾರಿಗೆ ತರಲು ತಿಳಿಸಲಾಗಿದೆ. 

ಧ್ಯಾನವನ್ನು ಪರಿಚಯಿಸುವ ಕ್ರಮವು  "ಶಾಲಾ ಶಿಕ್ಷಣದ ಕೇಸರಿಕರಣ"  ಮತ್ತು ಧಾರ್ಮಿಕ ಅಂಶಗಳನ್ನು ಪರಿಚಯಿಸುತ್ತದೆ ಎಂಬ ಟೀಕೆಗಳು ಕೇಳಿಬಂದಿದೆ.

ರಾಜ್ಯದಲ್ಲಿ ಒಟ್ಟು‌ 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಆದೇಶ

ಈ ಟೀಕಾಕಾರರಿಗೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್, ಧ್ಯಾನವು ಧಾರ್ಮಿಕ ಅಭ್ಯಾಸವಲ್ಲ ಮತ್ತು ಈ ಅಭ್ಯಾಸವು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸುಮಾರು 2 ವರ್ಷಗಳ ಆನ್‌ಲೈನ್ ಶಾಲೆಗಳ ನಂತರ ಸಾಂಕ್ರಾಮಿಕ ನಂತರದ ಶಿಕ್ಷಣದ ವ್ಯವಸ್ಥೆಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

29 ಪಿಯು ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರದ ಮಂಜೂರಾತಿ

 ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗ: ಮುಂದಿನ ಶೈಕ್ಷಣುಕ ವರ್ಷದಿಂದ ಶಾಲೆ, ಕಾಲೇಜುಗಳಲ್ಲಿ ಯೋಗ ಶಿಕ್ಷಣ ಜಾರಿಗೆ ತರಲಾಗುವುದು ಎಂದು ಕಳೆದ ಮೇ. ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದರು.  8 ನೇ ತರಗತಿಯಿಂದ ಕಾಲೇಜು ಹಂತದವರೆಗೆ ಯೋಗ ಶಿಕ್ಷಣ ಜಾರಿಗೆ ತರಲು ತಜ್ಞರ ಜೊತೆಗೆ ಚರ್ಚಿಸುತ್ತಿರುವುದಾಗಿ ಹೇಳಿದ್ದರು. ಹೀಗಾಗಿ ರಾಜ್ಯದಲ್ಲಿ ಧ್ಯಾನದ ಜೊತೆಗೆ ಯೋಗ ಶಿಕ್ಷಣ ಕೂಡ ಶೀಘ್ರದಲ್ಲಿ ಜಾರಿಗೆ ಬರುವ ಲಕ್ಷಣ ಕಾಣುತ್ತಿದೆ.
 

Latest Videos
Follow Us:
Download App:
  • android
  • ios