Covid 19 Spike: ಶಾಲೆ, ಕಾಲೇಜಲ್ಲಿ ಕೋವಿಡ್ ಸ್ಫೋಟ: 208 ವಿದ್ಯಾರ್ಥಿಗಳಿಗೆ ಸೋಂಕು
* ಒಂದೇ ವಾರದಲ್ಲಿ 850 ಮಕ್ಕಳಿಗೆ ಸೋಂಕು
* ಕಾಲೇಜು ಮಾತ್ರವಲ್ಲದೆ ಶಾಲೆಗಳಲ್ಲೂ ಸೋಂಕು ಏರಿಕೆ
* ವಸತಿ ಶಾಲೆಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಹೆಚ್ಚಳ
ಬೆಂಗಳೂರು(ಜ.12): ರಾಜ್ಯದ(Karnataka) ಶಾಲಾ-ಕಾಲೇಜುಗಳಲ್ಲಿ ಕೋವಿಡ್(Covid19) ಮಹಾಮಾರಿ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಮಂಗಳವಾರ ಮತ್ತೆ 208ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ 850ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ(Students) ಸೋಂಕು ತಗಲಿದಂತಾಗಿದೆ.
ಕಾಲೇಜು(College) ವಿದ್ಯಾರ್ಥಿಗಳು ಮಾತ್ರವಲ್ಲದೆ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ(Schools) ವಿದ್ಯಾರ್ಥಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗಲುತ್ತಿದೆ. ವಸತಿ ಶಾಲೆ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳಿರುವ ವೈದ್ಯ, ನರ್ಸಿಂಗ್, ಎಂಜಿನಿಯರಿಂಗ್ ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ತೀವ್ರಗತಿಯಲ್ಲಿ ಸೋಂಕು ಹಬ್ಬುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
Coronavirus ರಾಜ್ಯದಲ್ಲಿ ಕೊರೋನಾ ಸ್ಫೋಟ, ಶಾಲೆ ಬಂದ್ ಮಾಡುವ ಸುದ್ದಿಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ತುಮಕೂರು(Tumakuru) ಜಿಲ್ಲೆಯಲ್ಲಿ ಮಂಗಳವಾರ ಅತಿ ಹೆಚ್ಚು 54 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ. ಶಿರಾ ತಾಲೂಕಿನ ಅಂಬೇಡ್ಕರ್ ವಸತಿ ಶಾಲೆಯ 38 ಹಾಗೂ ಮಧುಗಿರಿಯ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಇನ್ನು ಸೋಮವಾರ 32 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ವಸತಿ ಶಾಲೆಯಲ್ಲಿ ಮಂಗಳವಾರ ಮತ್ತೆ 23 ವಿದ್ಯಾರ್ಥಿಗಳಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಜಗಳೂರಿನ ಎನ್‌ಎಂಕೆ ಪ್ರೌಢಶಾಲೆಯ 6 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಶಾಲೆಯನ್ನು 10 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.
ಬೆಳಗಾವಿ(Belagavi) ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಮತ್ತೆ 10 ವಿದ್ಯಾರ್ಥಿನಿಯರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 87ಕ್ಕೆ ತಲುಪಿದೆ. ಇದೇ ಶಾಲೆಯಲ್ಲಿ 10 ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಇದೊಂದೇ ಶಾಲೆಯಲ್ಲಿ 97 ಕೇಸ್ ಪತ್ತೆಯಾದಂತೆ ಆಗಿದೆ.
ಬಳ್ಳಾರಿಯ(Ballari) ವಿಮ್ಸ್‌ನ 24 ವಿದ್ಯಾರ್ಥಿಗಳಲ್ಲಿ ಸೋಮವಾರ ಪಾಸಿಟಿವ್ ಕಂಡುಬಂದಿದ್ದು, ಇದರೊಂದಿಗೆ ಒಟ್ಟು ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 55ಕ್ಕೆ ತಲುಪಿದೆ. ಇನ್ನುಳಿದಂತೆ ಹಾವೇರಿ ಜಿಲ್ಲೆಯ ದೇವಗಿರಿಯ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ 1, ಕೊಪ್ಪಳ ತಾಲೂಕಿನ ಘಟರಟ್ಟಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆಯ 2, ಗಂಗಾವತಿಯ ಖಾಸಗಿ ಪಿಯು ಕಾಲೇಜಿನಲ್ಲಿ 1 ವಿದ್ಯಾರ್ಥಿ, ಧಾರವಾಡ ತಾಲೂಕಿನ ಅಮ್ಮಿನಭಾವಿಯ ಶಾಂತೇಶ್ವರ ಪ್ರೌಢಶಾಲೆಯ 14 ವಿದ್ಯಾರ್ಥಿಗಳು ಸೋಂಕಿತರಾಗಿದ್ದಾರೆ.
ಮಂಗಳೂರು(Magaluru) ನಗರದ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಒಂದರಲ್ಲಿ 10 ಕೇಸ್‌ಗಳು ಪತ್ತೆಯಾಗಿವೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ 42 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರು ಹಾಗೂ ಹಾಸನದ ಮಲೆನಾಡು ತಾಂತ್ರಿಕ ಕಾಲೇಜಿನಲ್ಲಿ ಎಚ್‌ಒಡಿ ಸೇರಿದಂತೆ 22 ವಿದ್ಯಾರ್ಥಿಗಳಿಗೆ ಕೊರೋನಾ ಹಬ್ಬಿದೆ.
Guest Lecturers ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ ಸಚಿವ ಅಶ್ವತ್ಥನಾರಾಯಣ
ಹಾಟ್‌ಸ್ಪಾಟ್:
ಎರಡನೇ ಅಲೆಯಲ್ಲಿ ಕೊರೋನಾ ಹಾಟ್‌ಸ್ಪಾಟ್ ಆಗಿದ್ದ ಉಡುಪಿ-ಮಣಿಪಾಲ ಅವಳಿ ನಗರಗಳ ಶಿಕ್ಷಣ ಸಂಸ್ಥೆಗಳಲ್ಲೇ ಈ ಬಾರಿಯೂ ಅತಿ ಹೆಚ್ಚು ಸೋಂಕು ಕಂಡುಬಂದಿದೆ. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಜ.5ರಿಂದ 11ರವರೆಗೆ ಒಟ್ಟು 134 ಪಾಸಿಟಿವ್ ವರದಿಯಾಗಿದ್ದರೆ, ಕಸ್ತೂರ್ಬಾ ಮೆಡಿಕಲ್ ಕಾಲೇಜಿ(ಕೆಎಂಸಿ)ನಲ್ಲಿ 113 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.
ಇನ್ನುಳಿದಂತೆ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನ ಸೈನಿಕ ವಸತಿ ಶಾಲೆಯಲ್ಲಿ ಜ.10ರಿಂದ ಈವರೆಗೆ ಅತಿಹೆಚ್ಚು 87 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಜ.5ರಂದು ಮೊದಲ ಬಾರಿಗೆ 21 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿ ಬಂದಿದ್ದ ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈವರೆಗೆ ಒಟ್ಟು 55 ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಜ.9ರಂದು 60 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿತ್ತು. ಇನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಒಂದು ವಾರದೊಳಗೆ ಒಟ್ಟಾರೆ 54 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು.