*  ಕುಂಬ್ರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಶಾಲಾ ನೂತನ ಕಟ್ಟಡಗಳ ಲೋಕಾರ್ಪಣೆ*  ಪುತ್ತೂರು ಕ್ಷೇತ್ರದಲ್ಲಿ 40 ಕೋಟಿ ಕಾಮಗಾರಿ*  ಸರ್ಕಾರಿ ಶಾಲೆಗಳು ಮೂಲ ಸೌಕರ್ಯದಿಂದ ವಂಚಿತ ಆಗಬಾರದು  

ಪುತ್ತೂರು(ಮೇ.22): ರಾಜ್ಯ ಸರ್ಕಾರ ಶಿಕ್ಷಣದ ಕಡೆ ಹೆಚ್ಚು ಒಲವು ತೋರುತ್ತಿದ್ದು, ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 7000 ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.
ಅವರು ಕುಂಬ್ರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸರ್ಕಾರಿ ಶಾಲೆಗಳು ಮೂಲ ಸೌಕರ್ಯದಿಂದ ವಂಚಿತ ಆಗಬಾರದು ಎಂಬ ಉದ್ದೇಶದಿಂದ ಶೌಚಾಲಯ, ಪ್ರಯೋಗಾಲಯ ಸೇರಿದಂತೆ ಬೇಡಿಕೆ ಇರುವ ಎಲ್ಲ ಸೌಲಭ್ಯಗಳ ಕಡೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿರುವ ಎಸ್‌ಡಿಎಂಸಿ ಸಮಿತಿಯು ಹೆಚ್ಚು ಸಕ್ರಿಯವಾಗಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಪೋಷಕರ ಸಹಭಾಗಿತ್ವ ಅತೀ ಅಗತ್ಯವಾಗಿದೆ ಎಂದು ಹೇಳಿದರು.

ಹೆಚ್ಚು ಶುಲ್ಕ ಕೇಳಿದರೆ ಕಾಲೇಜು ಮಾನ್ಯತೆ ರದ್ದು: ಸಚಿವ ನಾಗೇಶ್‌

15,000 ಶಿಕ್ಷಕರ ನೇಮಕ

ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಶಿಕ್ಷಕರ ಕೊರತೆ ನೀಗಿಸುವಲ್ಲಿ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಇದರಿಂದ ತುಂಬಾ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು.

ಪುತ್ತೂರು ಕ್ಷೇತ್ರದಲ್ಲಿ 40 ಕೋಟಿ ಕಾಮಗಾರಿ: ಮಠಂದೂರು

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ವರ್ಷದಲ್ಲಿ ಶಾಲಾ ಕೊಠಡಿ ಮತ್ತು ಶಾಲಾ ಮೂಲ ಸೌಕರ್ಯ ವೃದ್ಧಿಗಾಗಿ ಒಟ್ಟು 40 ಕೋಟಿ ರು. ಅನುದಾನ ನೀಡಲಾಗಿದೆ. ಬೇಡಿಕೆ ಮತ್ತು ಅಗತ್ಯವಿರುವ ಎಲ್ಲ ಸರ್ಕಾರಿ ಶಾಲೆಗಳಿಗೆ ಸಮಪ್ರಮಾಣದಲ್ಲಿ ಅನುದಾನವನ್ನು ಹಂಚಲಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೊರತೆ ಇರುವ ಶಾಲೆಗಳಲ್ಲಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಶಾಲೆಗಳು ಈಗ ಮೊದಲಿನಂತಿಲ್ಲ ಎಲ್ಲ ವ್ಯವಸ್ಥೆಗಳೂ ಇದ್ದು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮವನ್ನು ಸಚಿವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲೆಯ ನೂತನ ಎರಡು ಕೊಠಡಿ ಮತ್ತು ಪ್ರಯೋಗಾಲಯವನ್ನು ರಿಬ್ಬನ್‌ ಕತ್ತರಿಸುವ ಮೂಲಕ ಸಚಿವರು ಉದ್ಘಾಟಿಸಿದರು.

ಶಾಲಾ ಎಸ್‌ಡಿಎಂಸಿ ಸಮಿತಿ ವತಿಯಿಂದ ಸಚಿವರು ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು. ಕಟ್ಟಡದ ಗುತ್ತಿಗೆದಾರ ಪ್ರಭಾಕರ್‌ ಮಾಸ್ಟರ್‌ ಪ್ಲಾನರಿ, ಕುಂಬ್ರದ ಯುವರಾಜ್‌ ಹಾಗೂ ಆಶಿಕ್‌ ಅವರನ್ನು ಸಚಿವರು ಸನ್ಮಾನಿಸಿದರು. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕಪಡೆದ ಖತೀಜತ್‌ ಶಮ್ಲಾ, ಆಯಿಷತ್‌ ಅರ್ಫಾನ ಮತ್ತು ವೀಕ್ಷಾ ಅವರನ್ನು ಸಚಿವರು ಸನ್ಮಾನಿಸಿದರು.

ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ವಿವಾದ, ಸಮರ್ಥಿಸಿಕೊಂಡ BC Nagesh

ವಿಧಾನಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಕುಂಬ್ರ ಕೆಪಿಎಸ್‌ ಸ್ಕೂಲ್‌ ಕಾರ್ಯಾಧ್ಯಕ್ಷ ನಿತೀಶ್‌ಕುಮಾರ್‌ ಶಾಂತಿವನ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಿ.ಡಿ., ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ., ಅಭಿವೃದ್ಧಿ ಸಮಿತಿ ಸದಸ್ಯ ಮಾಧವ ರೈ ಕುಂಬ್ರ, ಒಳಮೊಗ್ರು ಗ್ರಾ.ಪಂ. ಸದಸ್ಯ ಲತೀಫ್‌ ಕುಂಬ್ರ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್‌ ರೈ ಪರ್ಪುಂಜ, ಒಳಮೊಗ್ರು ಗ್ರಾ.ಪಂ. ಸದಸ್ಯರಾದ ಅಶ್ರಫ್‌ ಉಜಿರೋಡಿ, ಶೀನಪ್ಪ ನಾಯ್‌್ಕ, ಚಿತ್ರಾ ಬಿ.ಸಿ., ನಿಮಿತಾ, ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ರತನ್‌ ರೈ ಕುಂಬ್ರ, ಸಿಆರ್‌ಪಿ ಶಶಿಕಲಾ ಟೀಚರ್‌, ಕೆದಂಬಾಡಿ ಗ್ರಾ.ಪಂ. ಸದಸ್ಯ ಕೃಷ್ಣ, ಸುಧಾಕರ್‌ ರೈ ಕುಂಬ್ರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕೆಪಿಎಸ್‌ ಸ್ಕೂಲ್‌ ಪ್ರಾಂಶುಪಾಲ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಶಿಕ್ಷಕಿ ಮಮತಾ ಕೆ.ಎಸ್‌. ವಂದಿಸಿದರು. ಶಿಕ್ಷಕಿ ಪ್ರಶಾಂತಿ ಮತ್ತು ಶ್ರೀನಿವಾಸ್‌ ಬಡೆಕಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ವೀಣಾ ಕುವೆಲ್ಲೋ, ಶಿಕ್ಷಕಿಯರಾದ ಸಂಧ್ಯಾ, ಶಾರದಾ, ಜೂಲಿಯಾನ ಮೊರಾಸ್‌, ಎಲ್‌ಕೆಜಿ ಶಿಕ್ಷಕಿ ಚಿತ್ರಾ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.