ಹೆಚ್ಚು ಶುಲ್ಕ ಕೇಳಿದರೆ ಕಾಲೇಜು ಮಾನ್ಯತೆ ರದ್ದು: ಸಚಿವ ನಾಗೇಶ್
* ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಆಮಿಷ ಒಡ್ಡಿ ಶುಲ್ಕ ವಸೂಲಿ
* ಹೀಗೆ ಮಾಡಿದರೆ ಖಠಿಣ ಕಾನೂನು ಕ್ರಮ: ಶಿಕ್ಷಣ ಇಲಾಖೆ ಎಚ್ಚರಿಕೆ
* ಬೇರೆ ಪಠ್ಯ ಖರೀದಿಗೂ ಒತ್ತಾಯಿಸುವಂತಿಲ್ಲ
ಲಿಂಗರಾಜ ಕೋರಾ
ಬೆಂಗಳೂರು(ಮೇ.20): ರಾಜ್ಯದ ಯಾವುದೇ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವೈಯಕ್ತಿಕವಾಗಿ ಆಗಲಿ ಇಲ್ಲವೇ ಬೇರೆ ಕೋಚಿಂಗ್ ಸಂಸ್ಥೆಗಳ ಮೂಲಕವಾಗಲಿ ತರಬೇತಿ ನೀಡುವ, ತರಬೇತಿ ಹೆಸರಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದಾಗುತ್ತದೆ! ಅಷ್ಟೇ ಅಲ್ಲ, ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಸುವ ಕಾಲೇಜಿನ ಮಾನ್ಯತೆ ರದ್ದಿನ ಜೊತೆಗೆ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿಯೂ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಶುಲ್ಕ ವಸೂಲಿ ಪ್ರವೃತ್ತಿ:
ಪದವಿ ಪೂರ್ವ ಶಿಕ್ಷಣ ಸರ್ಕಾರದಿಂದ ಮಾನ್ಯತೆ ಪಡೆದು ಕಾಲೇಜು ಆರಂಭಿಸಿರುವ ಸಾಕಷ್ಟುಆಡಳಿತ ಮಂಡಳಿಗಳು ಇತ್ತೀಚೆಗೆ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ, ‘ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಯುವ ಸಿಇಟಿ, ನೀಟ್, ಜೆಇಇ, ಎಐಇಇಇ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ನಮ್ಮಲ್ಲಿ ತರಬೇತಿ ನೀಡಲಾಗುವುದು. ಇದಕ್ಕಾಗಿ ನಮ್ಮ ಕಾಲೇಜು, ಪ್ರತಿಷ್ಠಿತ ಕೋಚಿಂಗ್ ಕೇಂದ್ರಗಳೊಂದಿಗೆ ಒಪ್ಪಂದ ವಿನಿಮಯ ಮಾಡಿಕೊಂಡಿದೆ’ ಎಂದು ಹೇಳಿ ಪಿಯು ಪ್ರವೇಶ ಶುಲ್ಕದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೂ ಭಾರೀ ಪ್ರಮಾಣದ ಶುಲ್ಕ ವಸೂಲಿ ಮಾಡುವುದನ್ನು ಪ್ರವೃತ್ತಿಯಾಗಿಸಿಕೊಂಡಿವೆ.
ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ವಿವಾದ, ಸಮರ್ಥಿಸಿಕೊಂಡ BC Nagesh
ಆದರೆ, ‘ಇದು ಕಾನೂನು ಬಾಹಿರ’ ಎಂದು ಪಿಯು ಇಲಾಖೆ ಸ್ಪಷ್ಟವಾಗಿ ಹೇಳಿದೆ. ಇನ್ನು ಮುಂದೆ ಯಾವುದೇ ಕಾಲೇಜುಗಳು ಸ್ಮರ್ಧಾತ್ಮಕ ಪರೀಕ್ಷೆಗಳ ಹೆಸರಲ್ಲಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವುದು. ಅಥವಾ ತಾವೇ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ತಂತ್ರಜ್ಞಾನ ಆಧಾರಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೋಧನೆ ಮಾಡುವುದು ಕಂಡು ಬಂದಲ್ಲಿ ಅಂತಹ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸುವುದಾಗಿ ತಿಳಿಸಿದೆ. ಜೊತೆಗೆ ಅಂತಹ ಕಾಲೇಜುಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಬೇರೆ ಪಠ್ಯ ಖರೀದಿಗೂ ಒತ್ತಾಯಿಸುವಂತಿಲ್ಲ:
ಇತ್ತೀಚೆಗಷ್ಟೆಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶಕ್ಕೆ ವೇಳಾಪಟ್ಟಿಮತ್ತು ಮಾರ್ಗಸೂಚಿ ಪ್ರಕಟಿಸಿರುವ ಇಲಾಖೆಯು, ಪಿಯು ಕಾಲೇಜುಗಳಲ್ಲಿ ಇಲಾಖೆ ನಿಗದಿಪಡಿಸಿರುವ ಪಠ್ಯಕ್ರಮದ ಬೋಧನೆಯನ್ನು ಹೊರತುಪಡಿಸಿ, ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಇನ್ಯಾವುದೇ ರೀತಿಯ ಪರೀಕ್ಷೆಗಳಿಗೆ ಬೇರೆ ಪಠ್ಯಕ್ರಮ ಬೋಧಿಸುವುದಾಗಲಿ, ಅಂತಹ ಪಠ್ಯ ಪುಸ್ತಕಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದಾಗಲಿ ಮಾಡುವಂತಿಲ್ಲ. ಒತ್ತಾಯ ಮಾಡಿದ್ದು ಕಂಡುಬಂದರೆ ಅಂತಹ ಕಾಲೇಜುಗಳ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಹೇಳಿದೆ.
ಯಾವುದೇ ಪಿಯು ಕಾಲೇಜುಗಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನಡೆಸುವುದು, ಇದಕ್ಕಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಕಂಡುಬಂದರೆ ಅಂತಹ ಕಾಲೇಜುಗಳ ವಿರುದ್ಧ ಪೋಷಕರು, ಮಕ್ಕಳು, ಸಾರ್ವಜನಿಕರು ದೂರು ನೀಡಿದರೆ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗುವುದು ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.