Asianet Suvarna News Asianet Suvarna News

22 ಬ್ರಾಹ್ಮಣರ ಬರಹ ಸೇರಿಸಿದ್ದು ಬರಗೂರು: ರೋಹಿತ್‌ ಚಕ್ರತೀರ್ಥ

 *  33 ಬೇರೆ ಬೇರೆ ಸಾಹಿತಿಗಳ ಬರಹ ಕೈಬಿಟ್ಟಿದ್ದರು
*   ಬರಗೂರು ಮಾಡಿದ್ದು ಬ್ರಾಹ್ಮಣೀಕರಣ ಆಗುವುದಿಲ್ಲ
*  ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ್ದು ಮಾತ್ರ ಬ್ರಾಹ್ಮಣೀಕರಣ ಆಗುವುದು ಹೇಗೆ?
 

Rohit Chakrathirtha Talks Over Baraguru Ramachandrappa grg
Author
Bengaluru, First Published May 28, 2022, 5:45 AM IST

ಬೆಂಗಳೂರು(ಮೇ.28): ‘ಡಾ.ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಪಠ್ಯ ಪರಿಷ್ಕರಣೆ ವೇಳೆ 1ರಿಂದ 10ನೇ ತರಗತಿಯ ಕನ್ನಡ ಪಠ್ಯವೊಂದರಿಂದಲೇ ಬ್ರಾಹ್ಮಣೇತರರಾದ 33 ಸಾಹಿತಿಗಳ ಬರಹಗಳನ್ನು ಕೈಬಿಟ್ಟು ಪ್ರತಿಯಾಗಿ 33 ಬೇರೆ ಬೇರೆ ಸಾಹಿತಿಗಳ ಬರಹಗಳನ್ನು ಸೇರಿಸುವಾಗ 22 ಮಂದಿ ಬ್ರಾಹ್ಮಣ ಸಾಹಿತಿಗಳ ಬರಹಗಳನ್ನು ಸೇರಿಸಲಾಗಿತ್ತು. ಆದರೆ, ಅವರು ಮಾಡಿದ್ದು ಬ್ರಾಹ್ಮಣೀಕರಣ ಆಗುವುದಿಲ್ಲ, ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ್ದು ಮಾತ್ರ ಬ್ರಾಹ್ಮಣೀಕರಣ ಆಗುವುದು ಹೇಗೆ?’

ಇದು, ತಮ್ಮ ನೇತೃತ್ವದ ಸಮಿತಿಯ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಬ್ರಾಹ್ಮಣೀಕರಣ ವಾದ ಮಾಡುತ್ತಿರುವ ಬರಗೂರು ರಾಮಚಂದ್ರಪ್ಪ ಬಳಗಕ್ಕೆ ರೋಹಿತ್‌ ಚಕ್ರತೀರ್ಥ ಮಾಡಿರುವ ಪ್ರಶ್ನೆ ಹಾಗೂ ಅಂಕಿ-ಸಂಖ್ಯೆಗಳ ತಿರುಗೇಟು. ತನ್ಮೂಲಕ ತಮ್ಮ ನೇತೃತ್ವದ ಪಠ್ಯ ಪರಿಷ್ಕರಣೆ ವೇಳೆ ವಿವಿಧ ಬ್ರಾಹ್ಮಣ ಲೇಖಕರ ಬರಹ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ರೋಹಿತ್‌ ಚಕ್ರತೀರ್ಥ ಯಾರು? ಕನ್ನಡ ಬಾವುಟವನ್ನು ಒಳುಡುಪಿಗೆ ಹೋಲಿಸಿದ್ದ: ಡಿಕೆಶಿ ವಾಗ್ದಾಳಿ

ಈ ಸಂಬಂಧ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಬರಗೂರು ರಾಮಚಂದ್ರಪ್ಪನವರ ಬಳಗ ಈಗಿನ ಸಮಿತಿ ಬ್ರಾಹ್ಮಣೀಕರಣ ಮಾಡಿದೆ ಎಂಬ ವಾದವನ್ನು ಮುಂದಿಡುತ್ತಿದೆ. ಸಂತೋಷ, ಸ್ವಲ್ಪ ಸತ್ಯಾಂಶಗಳನ್ನು ಗಮನಿಸೋಣ. ಬರಗೂರು ಸಮಿತಿ ಕಯ್ಯಾರ ಕಿಞ್ಞಣ್ಣ ರೈ, ಚನ್ನವೀರ ಕಣವಿ, ಸಂಗಮೇಶ ನಿಜಗುಂಡ, ಸಿದ್ಧಯ್ಯ ಪುರಾಣಿಕ, ಎಸ್‌.ಈ. ಮಾಲತಿ ಶೆಟ್ಟಿ, ಬಿ.ಆರ್‌. ಪೊಲೀಸ ಪಾಟೀಲ, ನರೇಂದ್ರ ರೈ ದೇರ್ಲ, ಸಾ.ಶಿ. ಮರುಳಯ್ಯ, ಸರ್ಪಭೂಷಣ ಶಿವಯೋಗಿ, ಏಣಗಿ ಬಾಳಪ್ಪ, ಹೀಗೆ ಸಾಲು ಸಾಲು ಬ್ರಾಹ್ಮಣರಲ್ಲದವರನ್ನು ಪಠ್ಯದಿಂದ ಕೈಬಿಟ್ಟರು. ಜತೆಗೆ ಕುವೆಂಪು ಅವರ ಎರಡು ಬರಹಗಳನ್ನು ಕೈಬಿಟ್ಟಿದೆ. ಅಕ್ಕಮಹಾದೇವಿ, ವಿಶ್ವವಂದ್ಯ ಬಸವಣ್ಣ, ಜೇಡರ ದಾಸಿಮಯ್ಯ, ಸರ್ವಜ್ಞ, ಸಬಿಹಾ ಭೂಮಿಗೌಡ ಅವರನ್ನೂ ಕೈಬಿಟ್ಟರು. ಅವರೂ ಬ್ರಾಹ್ಮಣರಾ ಎಂದು ಪ್ರಶ್ನಿಸಿದ್ದಾರೆ.

ಕೈಬಿಟ್ಟ 33 ಸಾಹಿತಿಗಳಿಗೆ ಪ್ರತಿಯಾಗಿ ಬಿ.ವಿ. ಕಾರಂತ, ಎಚ್‌.ಎಸ್‌. ವೆಂಕಟೇಶಮೂರ್ತಿ, ಕೃಷ್ಣಾನಂದ ಕಾಮತ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಯು.ಆರ್‌. ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ತಿ.ತಾ. ಶರ್ಮ, ಸಿದ್ಧವನಹಳ್ಳಿ ಕೃಷ್ಣಶರ್ಮ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಸು.ರಂ. ಎಕ್ಕುಂಡಿ ಹೀಗೆ ಪರಿಷ್ಕರಣೆ ವೇಳೆ ಪಠ್ಯದಲ್ಲಿ ಜಾಗ ಪಡೆದ 22 ಮಂದಿ ಸಾಹಿತಿಗಳೂ ಹೌದು, ಜತೆಗೆ ಬ್ರಾಹ್ಮಣರೂ ಆಗಿದ್ದರು ತಾನೆ? ಹಾಗಾದರೆ ಬರಗೂರು ಮಾಡಿದ ಕೆಲಸ ಬ್ರಾಹ್ಮಣೀಕರಣ ಆಗುವುದಿಲ್ಲ, ರೋಹಿತ್‌ ಮಾಡಿದ್ದು ಮಾತ್ರ ಬ್ರಾಹ್ಮಣೀಕರಣ ಆಗುವುದು ಹೇಗೆ ಎಂದಿದ್ದಾರೆ.

ಹೇಗಾದರೂ ಸರಿಯೆ, ನನ್ನ ನೇತೃತ್ವದ ಸಮಿತಿ ಮಾಡಿದ್ದನ್ನು ಬ್ರಾಹ್ಮಣೀಕರಣವಾದ ಪಠ್ಯಪುಸ್ತಕ ಎಂದು ತೋರಿಸಬೇಕಾಗಿದೆ. ಪಠ್ಯ ವಿವಾದ ಎದ್ದಾಗ ಮೊದಲು ಕೇಳಿಬಂದ ಕೇಸರೀಕರಣ ಶಬ್ಧ ಈಗ ಬ್ರಾಹ್ಮಣೀಕರಣಕ್ಕೆ ತಿರುಗಿದೆ. ಹಾಗೆ ಹೇಳುವುದರಿಂದ ಬ್ರಾಹ್ಮಣರಲ್ಲದ ಎಲ್ಲರ ವಿಶ್ವಾಸವನ್ನೂ ತಮ್ಮ ಕಡೆ ತಿರುಗಿಸಿಕೊಳ್ಳಬಹುದು ಎಂಬುದು ಎದುರು ಪಾಳೆಯದ ಗುಪ್ತ ಯೋಜನೆ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios