ಕರ್ನಾಟಕ ಸೇರಿ 18 ರಾಜ್ಯಗಳ ವಿವಿಧ ನಗರಗಳಲ್ಲಿ ಶನಿವಾರ ನಿಗದಿಯಂತೆ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಪರೀಕ್ಷೆ ನಡೆಯಲಿದೆ.  

ಬೆಂಗಳೂರು (ಮೇ.10): ಕರ್ನಾಟಕ ಸೇರಿ 18 ರಾಜ್ಯಗಳ ವಿವಿಧ ನಗರಗಳಲ್ಲಿ ಶನಿವಾರ ನಿಗದಿಯಂತೆ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಪರೀಕ್ಷೆ ನಡೆಯಲಿದೆ. ಆದರೆ, ಆಪರೇಷನ್‌ ಸಿಂದೂರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗುಜರಾತ್‌ ಸೇರಿ ನಾಲ್ಕು ರಾಜ್ಯಗಳ ವಿವಿಧ ನಗರಗಳಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಸಂಯೋಜಿತ ಪರೀಕ್ಷೆಗಳು ಮೇ 10ರ ಶನಿವಾರ ದೇಶಾದ್ಯಂತ 28 ರಾಜ್ಯಗಳ 179 ನಗರಗಳ 248 ಕೇಂದ್ರಗಳಲ್ಲಿ ನಡೆಯಲಿದೆ. 

ಈ ಬಾರಿ ಒಟ್ಟು 1.31, 937 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ ಎಂದು ಕಾಮೆಡ್‌-ಕೆ ತಿಳಿಸಿತ್ತು. ಆದರೆ, ಆಪರೇಷನ್‌ ಸಿಂದೂರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗುಜರಾತ್‌ನ ಜಮ್ನಾನಗರ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಜಮ್ಮು, ಪಂಜಾಬ್‌ನ ಲುದಿಯಾನಾ, ಜಲಂದರ್‌, ಮೊಹಾಲಿ, ಪಟಿಯಾಲ, ಅಮೃತಸರ್‌, ಬಥಿಂದಾ ಮತ್ತು ರಾಜಸ್ಥಾನದ ಜೋಧಪುರ, ಬಿಕನೇರ್‌, ಶ್ರೀಗಂಗಾ ನಗರದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ. ಉಳಿದಂತೆ ಕರ್ನಾಟಕ ಸೇರಿದಂತೆ ಇತರೆ 18 ರಾಜ್ಯಗಳಲ್ಲಿ ನಿಗದಿತ ಕೇಂದ್ರಗಳಲ್ಲಿ ಶನಿವಾರ ಪರೀಕ್ಷೆ ನಡೆಯಲಿದೆ ಎಂದು ಕಾಮೆಡ್‌-ಕೆ ತಿಳಿಸಿದೆ.

ಭಾರತ ಪಾಕ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: CA ಪರೀಕ್ಷೆ ಮುಂದೂಡಿದ ICAI

ನೀಟ್‌ ಪರೀಕ್ಷೆಗೂ ಜೈಲು ಜಾಮರ್‌ ಕಾಟ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ದ.ಕ. ಜಿಲ್ಲೆಯ 21 ಕೇಂದ್ರಗಳಲ್ಲಿ ಭಾನುವಾರ ನಡೆಯಿತು. 9,065 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆದಿದ್ದಾರೆ. ಮಂಗಳೂರಿನ ಕೆನರಾ ಮತ್ತು ಬೆಸೆಂಟ್‌ ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಜೈಲಿನ ಜಾಮರ್‌ನಿಂದ ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್‌ ವಿಚಾರದಲ್ಲಿ ತೊಂದರೆಯಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಬಯೋಮೆಟ್ರಿಕ್‌ಗಾಗಿ ಕಾದು ಬಳಿಕ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕಾಯಿತು.

ಹೊರ ಜಿಲ್ಲೆಗಳಿಂದ ಬಂದ ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪರೀಕ್ಷಾ ಕೇಂದ್ರಗಳನ್ನು ಹುಡುಕಲು ಕಷ್ಟವಾಗಿದ್ದು, ಸ್ವಲ್ಪ ತಡವಾದರೂ ಪರೀಕ್ಷಾ ಸಮಯಕ್ಕೆ ಸರಿಯಾಗಿ ಕೇಂದ್ರ ತಲುಪಿದ್ದರು. ಹೊರ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಷ್ಟೂ ಸಮಯ ಅವರ ಪೋಷಕರು ಕಾಲೇಜಿನ ಹೊರಗೆ ರಸ್ತೆ ಬದಿಯಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು. ಯಾವುದೇ ದೊಡ್ಡ ಮಟ್ಟದ ಅಡಚಣೆಯಿಲ್ಲದೆ ನೀಟ್‌ ಪರೀಕ್ಷೆ ಸುಸೂತ್ರವಾಗಿ ನಡೆಯಿತು.