Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ
ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು (ಜೂ.1): ಪಠ್ಯಪುಸ್ತಕ ಪರಿಷ್ಕರಣೆ (Textbook Revision) ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ವರದಿ ನೀಡಲಿದ್ದಾರೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಅವರು ಮಂಗಳವಾರ ಹೇಳಿದ್ದಾರೆ.
ಶಿಕ್ಷಣ ಸಚಿವ ಬಿ. ಸಿ. ನಾಗೇಶ್ (BC Nagesh) ನೀಡುವ ವರದಿ ಆಧಾರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ (textbook revision committee) ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohith chakrathirtha) ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ವರದಿ ನೀಡಲು ಶಿಕ್ಷಣ ಸಚಿವರಿಗೆ ತಿಳಿಸಲಾಗಿದೆ. ಪ್ರಕರಣದ ಎಲ್ಲ ಆಯಾಮಗಳ ಪರಿಶೀಲನೆಯ ನಂತರ ವರದಿ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಸಚಿವರು ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ. ಸತ್ಯಾಂಶವನ್ನು ದಾಖಲೆ ಸಮೇತ ನೀಡುವುದಾಗಿ ಸಚಿವರು ತಿಳಿಸಿದ್ದು, ವರದಿ ಬಂದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಈ ಹಿನ್ನೆಲೆಯಲ್ಲಿ ನಾಳೆ ಮುಖ್ಯಮಂತ್ರಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Bagalkoteಯಲ್ಲಿ ಥಳಿತ ಪ್ರಕರಣ, ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲವೆಂದ ಪೊಲೀಸರು
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಟಿಪ್ಪು ಸುಲ್ತಾನ್, ಲಿಂಗಾಯತ ಸಮಾಜ ಸುಧಾರಕ ಬಸವಣ್ಣ, ದ್ರಾವಿಡ ಚಳವಳಿಯ ಹರಿಕಾರ ಪೆರಿಯಾರ್ ಮತ್ತು ಸುಧಾರಕ ನಾರಾಯಣ ಗುರು, ರಾಷ್ಟ್ರಕವಿ ಕುವೆಂಪು ಅವರ ಅಧ್ಯಾಯಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ ಮತ್ತು ಕೆಲ ಪಠ್ಯಗಳನ್ನು ಪರಿಷ್ಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕಾರಣಕ್ಕೆ ಕುವೆಂಪು (Kuvempu) ನಾಡಗೀತೆ ಅವಮಾನಿಸಿರುವ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ (Textbook Revision Committee) ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohith Chakrathirtha) ಅವರನ್ನು ಪದಚ್ಯುತಗೊಳಿಸುವಂತೆ ಲೇಖಕರು, ರಾಜಕೀಯ ನಾಯಕರು ಹಾಗೂ ಸಾಹಿತಿಗಳಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಬಸವಣ್ಣ ಪಠ್ಯ ತಿದ್ದುಪಡಿ ನೋಡಿ ಎದೆಗೆ ಕಲ್ಲು ಹೊಡೆದಂತಾಗಿದೆ: ಕೂಡಲ ಶ್ರೀ
ಈ ಹಿನ್ನೆಲೆಯಲ್ಲಿ ಕುಪ್ಪಳ್ಳಿಯ (Kuppalli) ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಹಂಪ ನಾಗರಾಜಯ್ಯ (Nadoja Hampa Nagarajaiah) ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರಿಗೆ ಆಗುತ್ತಿರುವ ಅವಮಾನವನ್ನು ನೋಡುತ್ತಾ ಸುಮ್ಮನೆ ಕೂರಲಾಗದು. ರಾಷ್ಟ್ರಕವಿಗಳಿಗೆ ಅವಮಾನ ಮಾಡಿದವರಿಗೆ ಸರ್ಕಾರ ಮಹತ್ವದ ಸ್ಥಾನಗಳನ್ನು ನೀಡಬಾರದು. ಕುವೆಂಪು ಅವರಿಗೆ ಅವಮಾನ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು.
ಈ ಬೆಳವಣಿಗೆಯಲ್ಲಿ ಸರಕಾರ ಮೂಕಪ್ರೇಕ್ಷಕರಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ, ನಾಡಗೀತೆಯನ್ನು ಅವಮಾನಿಸುವವರಿಗೆ ಸರಕಾರಿ ಸಮಿತಿಗಳ ಸದಸ್ಯರಾಗಿ ಅವಕಾಶ ಸಿಗುತ್ತದೆ ಎಂಬ ತಪ್ಪು ಸಂದೇಶ ರವಾನಿಸಲಾಗುತ್ತಿದೆ. “ವ್ಯಕ್ತಿಗಳ ಮೇಲಿನ ದಾಳಿಯನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಭರವಸೆ ವ್ಯರ್ಥವಾಯಿತು, ಮತ್ತು ಕುವೆಂಪು ಮತ್ತು ನಾಡಗೀತೆಯ ಅವಮಾನವಾಗುತ್ತಿದ್ದರೂ ಮೌನವಾಗಿರುವುದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ಮುಖ್ಯಮಂತ್ರಿಗಳು ಈ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆಂದು ನಾಗರಾಜಯ್ಯ ಹೇಳಿದ್ದಾರೆ.
Textbook Revision: ರಾಜಕೀಯಕ್ಕಾಗಿ ನನ್ನ ತೇಜೋವಧೆ: ರೋಹಿತ್
ಸಾಹಿತಿಗಳ ಆಂದೋಲನ: ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮತ್ತು ಪಠ್ಯಪುಸ್ತಕ ಕೇಸರೀಕರಣದ ಆರೋಪದ ವಿರುದ್ಧ ನಡೆದಿರುವ ‘ಪಠ್ಯ ವಾಪಸಿ’ ಬೆಳವಣಿಗೆ ಇದೀಗ ಆಂದೋಲನದ ಸ್ವರೂಪ ಪಡೆದಿದೆ. ಹಿರಿಯ ಸಾಹಿತಿ ಸರಜೂ ಕಾಟ್ಕರ್ ಸೇರಿದಂತೆ ಆರು ಸಾಹಿತಿಗಳು ತಮ್ಮ ರಚನೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಮಂಗಳವಾರ ಹಿಂಪಡೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಸಾಹಿತಿ ಪ್ರೊ.ಕೆ.ಎಸ್.ಮಧುಸೂದನ ಅವರು ಒಂಬತ್ತನೇ ತರಗತಿ ಪಠ್ಯ ಪುಸ್ತಕ ರಚನೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಎಸ್.ಜಿ.ಸಿದ್ದರಾಮಯ್ಯ ಅವರು ತಮ್ಮ ಪಠ್ಯ ಬೋಧಿಸದಂತೆ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಮಂಗಳವಾರ ಡಾ.ಸರಜೂ ಕಾಟ್ಕರ್, ಮೂಡ್ನಾಕೂಡು ಚಿನ್ನಸ್ವಾಮಿ, ಚಂದ್ರಶೇಖರ್ ತಾಳ್ಯ, ಈರಪ್ಪ ಎಂ.ಕಂಬಳಿ, ಕವಯತ್ರಿ ರೂಪಾ ಹಾಸನ, ದಕ್ಷಿಣ ಕನ್ನಡದ ಬೊಳುವಾರು ಮಹಮ್ಮದ್ ಕುಂಞ ಸೇರಿದಂತೆ ಆರು ಸಾಹಿತಿಗಳು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದು ತಮ್ಮ ಪಠ್ಯ ಮತ್ತು ಪದ್ಯಗಳನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.