ಜಾಗತಿಕ ಮಟ್ಟದ 'ಸೈನ್ಸ್ ಗ್ಯಾಲರಿ ಬೆಂಗಳೂರು' ಸಂಕೀರ್ಣ ಉದ್ಘಾಟಿಸಿದ ಸಿಎಂ
ಯುವಜನರು ವಿಜ್ಞಾನದ ಬಗ್ಗೆ ಹೆಚ್ಚು ಹೆಚ್ಚಾಗಿ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುವ ಮಹತ್ತ್ವಾಕಾಂಕ್ಷೆಯಿಂದ ಕರ್ನಾಟಕ ಸರಕಾರವು ರೂಪಿಸಿರುವ 'ವಿಜ್ಞಾನ ಗ್ಯಾಲರಿ ಬೆಂಗಳೂರು' ಸಂಕೀರ್ಣವನ್ನು ಸಿಎಂ ಬೊಮ್ಮಾಯಿ ಶನಿವಾರ ಲೋಕಾರ್ಪಣೆ ಮಾಡಿದರು.
ಬೆಂಗಳೂರು (ಮಾ.18): ಯುವಜನರು ವಿಜ್ಞಾನದ ಬಗ್ಗೆ ಹೆಚ್ಚು ಹೆಚ್ಚಾಗಿ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡುವ ಮಹತ್ತ್ವಾಕಾಂಕ್ಷೆಯಿಂದ ಕರ್ನಾಟಕ ಸರಕಾರವು ರೂಪಿಸಿರುವ 'ವಿಜ್ಞಾನ ಗ್ಯಾಲರಿ ಬೆಂಗಳೂರು' (ಸೈನ್ಸ್ ಗ್ಯಾಲರಿ ಬೆಂಗಳೂರು- ಎಸ್‌ಜಿಬಿ) ಸಂಕೀರ್ಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಲೋಕಾರ್ಪಣೆ ಮಾಡಿದರು. ಸಂಜಯನಗರದ ಪಶು ವೈದ್ಯ ಕಾಲೇಜು ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಜ್ಣಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಕೂಡ ಇದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, "ಇಂದು ಶಿಕ್ಷಣ ಮತ್ತು ಉದ್ಯೋಗರಂಗಗಳಲ್ಲಿ ತಂತ್ರಜ್ಞಾನದ ಪಾರಮ್ಯವಿದೆ. ಆದರೆ, ಮೂಲವಿಜ್ಞಾನ ಹಿಂದಕ್ಕೆ ಸರಿಯುತ್ತಿದೆ. ವಾಸ್ತವವಾಗಿ, ಮೂಲವಿಜ್ಞಾನ ಮತ್ತು ಸಂಶೋಧನೆಗಳು ನಮ್ಮ ಬದುಕಿನ ಮತ್ತು ಚಿಂತನೆಯ ಭಾಗವಾಗಬೇಕು. ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ನೀತಿ ರೂಪಿಸಿದ ಮೊಟ್ಟ ಮೊದಲ ರಾಜ್ಯವಾಗಿದೆ" ಎಂದರು.
"ಇದನ್ನು ಮನಗಂಡು ರಾಜ್ಯ ಸರಕಾರವು ಈ ವಿಜ್ಞಾನ ಗ್ಯಾಲರಿಯನ್ನು ಸ್ಥಾಪಿಸಿದ್ದು, ಇದು ಇಂತಹುದೇ ಉದ್ದೇಶದ ಜಾಗತಿಕ ಸ್ತರದ ಕಾರ್ಯಜಾಲದ ಭಾಗವಾಗಿ ಕೆಲಸ ಮಾಡಲಿದೆ. ಮುಖ್ಯವಾಗಿ ಪಬ್ಲಿಕ್ ಲ್ಯಾಬ್ಸ್, ಸಾಮುದಾಯಿಕ ಪಾಲ್ಗೊಳ್ಳುವಿಕೆ, ಪ್ರೋತ್ಸಾಹ ಉಪಕ್ರಮಗಳು ಮತ್ತಿತರ ಚಟುವಟಿಕೆಗಳ ಮೂಲಕ 15ರಿಂದ 28 ವರ್ಷದೊಳಗಿನ ಯುವಜನರನ್ನು ಸೆಳೆಯಲಿದೆ. ಜೊತೆಗೆ ಇದು ಸಾರ್ವಜನಿಕರಿಗೂ ಮುಕ್ತವಾಗಿರಲಿದೆ" ಎಂದರು.
"ನಾವಿನ್ನೂ ನಮ್ಮ ಮೆದುಳಿಗಿರುವ ಶಕ್ತಿಯಲ್ಲಿ ಶೇಕಡ 25ರಷ್ಟನ್ನು ಮಾತ್ರ ಬಳಸಿ ಕೊಂಡಿರಬಹುದು. ಇನ್ನೂ 75% ಹಾಗೆಯೇ ಉಳಿದುಕೊಂಡಿದೆ. ತತ್ತ್ವಶಾಸ್ತ್ರ, ಅಧ್ಯಾತ್ಮ ಎಲ್ಲದರಲ್ಲೂ ಅಂತಿಮವಾಗಿ ವಿಜ್ಞಾನವೇ ಇದೆ. ಹೀಗಿದ್ದೂ ವಿಜ್ಞಾನ ಸಂಶೋಧನೆಗಳಿಗೆ ಅಪಾರ ಅವಕಾಶಗಳಿವೆ. ಇದೊಂದು ಅನಂತ ಲೋಕವಾಗಿದ್ದು, ವಿಜ್ಞಾನದ ಲಾಭವು ಕೊನೆಗೆ ಶ್ರೀಸಾಮಾನ್ಯನನ್ನು ತಲುಪಬೇಕು" ಎಂದು ಅವರು ಆಶಿಸಿದರು.
ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, "ಬೆಂಗಳೂರು ನಗರವು ಇಡೀ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನಗಳ ರಾಜಧಾನಿಯಾಗಿದೆ. 1.40 ಲಕ್ಷ ಚದರ ಅಡಿಗಳಷ್ಟು ವಿಸ್ತಾರದ ಈ ಗ್ಯಾಲರಿಯು ಅಟ್ಲಾಂಟಾದ ಎಮೋರಿ ಯೂನಿವರ್ಸಿಟಿ, ಬರ್ಲಿನ್‌ನ ಟೆಕ್ನಿಶ್ ಯೂನಿವರ್ಸಿಟಿ, ಡಬ್ಲಿನ್‌ನ ಟ್ರಿನಿಟಿ ಕಾಲೇಜು, ಲಂಡನ್‌ನ ಕಿಂಗ್ಸ್ ಕಾಲೇಜ್, ಅಮೆರಿಕದ ಮೆಲ್ಬೋರ್ನ್ ಯೂನಿವರ್ಸಿಟಿ, ಮೆಕ್ಸಿಕೋದ ಟೆಕ್ನಾಲಜಿಕೋ ಡಿ ಮಾಂಟೆರಿ ಮತ್ತು ರೋಟರ್‍ಡ್ಯಾಮ್‌ನ ಎರಸ್ಮಸ್ ಯೂನವರ್ಸಿಟಿ ಮೆಡಿಕಲ್ ಸೆಂಟರ್‍ಗಳು ಇರುವ ಜಾಗತಿಕ ವಿಜ್ಞಾನ ಗ್ಯಾಲರಿಗಳ ಜಾಲದ ಭಾಗವಾಗಿ ಇರಲಿದೆ" ಎಂದರು.
ಇಲ್ಲಿ 2019ರಿಂದಲೇ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಟುವಟಿಕೆಗಳು ನಡೆಯುತ್ತಿದ್ದು, ಈಗಾಗಲೇ 12 ಲಕ್ಷಕ್ಕೂ ಹೆಚ್ಚು ಜನರನ್ನು ಹಲವು ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ತಲುಪಲಾಗಿದೆ. ಬೆಂಗಳೂರು ವಿಜ್ಞಾನ ಗ್ಯಾಲರಿಯ ಉಪಕೇಂದ್ರಗಳು ರಾಜ್ಯದ ಎಲ್ಲ ಭಾಗಗಳಲ್ಲೂ ಅಸ್ತಿತ್ವಕ್ಕೆ ಬರಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಈ ಗ್ಯಾಲರಿಗೆ ಭಾರತೀಯ ವಿಜ್ಞಾನ ಮಂದಿರ, ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರ ಮತ್ತು ಸೃಷ್ಟಿ ಆರ್ಟ್, ಡಿಸೈನ್ & ಟೆಕ್ನಾಲಜಿ ಇನ್ಸ್‌ಟಿಟ್ಯೂಟ್‌ಗಳು ಶೈಕ್ಷಣಿಕ ಪಾಲುದಾರಿಕೆ ನೀಡಿವೆ ಎಂದು ಅವರು ನುಡಿದರು.
ಖಾಸಗಿ ಶಾಲಾ ಮಕ್ಕಳ ಪಠ್ಯಪುಸ್ತಕ ಶೇ.25ರಷ್ಟು ದುಬಾರಿ: ಬೆಲೆ ಏರಿಕೆ, ಜಿಎಸ್‌ಟಿ ಕಾರಣ
ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಉದ್ಯಮಿ ಕಿರಣ್ ಮಜುಂದಾರ್ ಷಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕ ಬಸವರಾಜ, ಎಸ್‌ಜಿಬಿ ಸಂಸ್ಥಾಪಕ ನಿರ್ದೇಶಕಿ ಡಾ.ಜಾಹ್ನವಿ ಫಾಲ್ಕಿ ಮುಂತಾದವರು ಉಪಸ್ಥಿತರಿದ್ದರು.
10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಗೊಂದಲಕ್ಕೆ ಪರೀಕ್ಷಾ ಸಹಾಯವಾಣಿ ಆರಂಭ
ಸೈನ್ಸ್ ಗ್ಯಾಲರಿಯ ವಿಶೇಷಗಳು
ಲಾಭದ ಉದ್ದೇಶವಿಲ್ಲದ ಸೈನ್ಸ್ ಗ್ಯಾಲರಿ ಬೆಂಗಳೂರು 'ಪಬ್ಲಿಕ್ ಲ್ಯಾಬ್' ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವ ಏಕೈಕ ಸಂಸ್ಥೆಯಾಗಿದ್ದು, ಇಲ್ಲಿ ಬ್ಲ್ಯಾಕ್ ಬಾಕ್ಸ್ ಥಿಯೇಟರ್, ಫುಡ್ ಲ್ಯಾಬ್, ಹ್ಯುಮಾನಿಟೀಸ್, ಮೆಟೀರಿಯಲ್ಸ್, ನೇಚರ್, ನ್ಯೂ ಮೀಡಿಯಾ ಮತ್ತು ಥಿಯರಿ ಹೀಗೆ 7 ಪ್ರಯೋಗಾಲಯಗಳಿವೆ. ಇಲ್ಲಿ ಆಸಕ್ತರು ಆಯಾಯ ಕ್ಷೇತ್ರಗಳಿಗೆ ಸಂಬಂಧಪಟ್ಟ ಸಂಶೋಧನೆಗಳನ್ನು ಕೈಗೊಳ್ಳಬಹುದು. ಗ್ಯಾಲರಿಯು ತನ್ನ 'ಮೀಡಿಯೇಟರ್ ಪ್ರೋಗ್ರಾಂ' ಅಡಿಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದೆ. ಅಲ್ಲದೆ ಎಲಿಮೆಂಟ್ಸ್, ಸಬ್‌ಮರ್ಜ್, ಫೈಟೋಪಿಯಾ, ಕಾಂಟೇಜಿಯನ್ ಮತ್ತು ಸೈಕಿ ಎನ್ನುವ ಐದು ಪ್ರದರ್ಶನಗಳನ್ನು ನಡೆಸಿದೆ. ಜತೆಗೆ ಅಂತರ್ಶಿಸ್ತೀಯ ಅಧ್ಯಯನದ ಮಾದರಿಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಇದು 'ಓಪನ್ ಕೋರ್ಸ್‌ವೇರ್' ಉಪಕ್ರಮವನ್ನು ಈ ವರ್ಷ ಆರಂಭಿಸಿದೆ. ಇದರ ಜತೆಗೆ ಜಾನ್ ಇನ್ಸ್ ಸೆಂಟರ್, ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಸ್ಮಿತ್‌ಸೋನಿಯನ್ ತರಹದ 25ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಎಸ್‌ಜಿಬಿ ಕೈಜೋಡಿಸಿದೆ.