ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮಿನಿ ಬಸ್ ಸೇವೆ
ಮುಂದಿನ ಶೈಕ್ಷಣಿಕ ವರ್ಷದ ಶಾಲೆ ಆರಂಭವಾದಾಗ ಎಲ್ಲ ತಾಲೂಕುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮಿನಿ ಬಸ್ ಸೇವೆ ಆರಂಭವಾಗಬೇಕು. ಕನಿಷ್ಠ 3-5 ಹೊಸ ಬಸ್ ಸಂಚರಿಸಬೇಕು. ಈ ಮೂಲಕ ಎಲ್ಲೆಡೆ ಮಿನಿ ಶಾಲೆ ಬಸ್ ಗಳನ್ನು ಪರಿಚಯಿಸಬೇಕು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಬೆಂಗಳೂರು (ಫೆ.21): ಮುಂದಿನ ಶೈಕ್ಷಣಿಕ ವರ್ಷದ ಶಾಲೆ ಆರಂಭವಾದಾಗ ಎಲ್ಲ ತಾಲೂಕುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮಿನಿ ಬಸ್ ಸೇವೆ ಆರಂಭವಾಗಬೇಕು. ಕನಿಷ್ಠ 3-5 ಹೊಸ ಬಸ್ ಸಂಚರಿಸಬೇಕು. ಈ ಮೂಲಕ ಎಲ್ಲೆಡೆ ಮಿನಿ ಶಾಲೆ ಬಸ್ ಗಳನ್ನು ಪರಿಚಯಿಸಬೇಕು. ನಿಮ್ಮ ಬಳಿ ಇದ್ದರೆ ಓಡಿಸಿ, ಇಲ್ಲದಿದ್ರೆ ಗುತ್ತಿಗೆ ಪಡೆಯಿರಿ. ಅಗತ್ಯ ಬಿದ್ದರೆ ಇನ್ನಷ್ಟು ಶೆಡ್ಯೂಲ್ ಮಾಡಲು ಸಹಕಾರ ನೀಡಲಾಗುತ್ತೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಏಪ್ರಿಲ್ 1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು. ಏಪ್ರಿಲ್ 1 ರಿಂದ ಉಚಿತ ಬಸ್ ಪಾಸ್ ವಿತರಣೆ ಆರಂಭವಾಗಲಿದೆ. ಮಹಿಳೆಯರಿಗೆ ಗೌರವದ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿರುವ ಸಿಎಂ, ಸಾರಿಗೆ ನೌಕರರ 7 ರಿಂದ 8 ಬೇಡಿಕೆ ಈಡೇರಿಸಿದ್ದೇವೆ. ಈಗ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಇತಿಮಿತಿಯಲ್ಲಿ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಉತ್ತಮ ಸೇವೆ: ಆರ್ಥಿಕ ಬೆಳವಣಿಗೆಯಲ್ಲಿ ಸಂಚಾರ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈ ಬಾರಿಯ ಬಜೆಟ್ ನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಉಚಿತ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದು,
ಸರ್ಕಾರ ನೌಕರ ವರ್ಗ ಹಾಗೂ ಆಡಳಿತ ಮಂಡಳಿ ಜೊತೆಗಿರುತ್ತದೆ . ಜನರಿಗೆ ಉತ್ತಮ ಸೇವೆ ಒಡಗಿಸೋಣ ಎಂದರು.
ಸಂಚಾರದ ಹೊಸ ಪಡೆ:
ಹೊಸ ಸಂಚಾರದ ವಿಶೇಷ ಒಂದು ಪಡೆ ಅಂಬಾರಿಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇದೆ. ದೊರ ಪ್ರಯಾಣಕ್ಕೆ ಅಗತ್ಯವಿರುವ ರೈಲ್ವೆ ಮಾದರಿಯಲ್ಲಿವುದಕ್ಕಿಂತ ಉತ್ತಮವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದೆ ವೊಲ್ವೊ ಬಸ್ ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ. ಹಿಂದಿನ ಸಮಸ್ಯೆಗಳನ್ನು ಅರಿತು ಈ ಬಸ್ ಗಳಲ್ಲಿ ಮಲ್ಟಿ ಎಕ್ಸೆಲ್ ವ್ಯವಸ್ಥೆ ಕಲ್ಪಿಸಿ, ಉತ್ತಮ ವ್ಯವಸ್ಥೆ ರೂಪಿಸಲಾಗಿದೆ. ಸುಲಭವಾಗಿ, ಸುಖವಾಗಿ ರಾತ್ರಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯ ಸಾರಿಗೆಗೆ ಇನ್ನಷ್ಟು ಬಸ್ಸುಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದರು.
ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಯೋಜನೆ ಅಗತ್ಯ:
ಕೆ.ಎಸ್.ಆರ್.ಟಿ. ಸಿ ತನ್ನದೇ ಇತಿಹಾಸವನ್ನು ಹೊಂದಿದ್ದು, ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಕೆಂಪ್ ಬಸ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದುದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಆಗ ಡ್ರೈವರ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಗ್ರಾಮೀಣ ಜನರು ತಮ್ಮ ಪ್ರಯಾಣವನ್ನು ಕೆ.ಎಸ್.ಆರ್.ಟಿ. ಸಿ ಬಸ್ ಗಳ ಮೂಲಕವೇ ಗುರುತಿಸಿಕೊಳ್ಳುತ್ತಾರೆ. ಇಂಥ ಸೇವೆಯು ಖಾಸಗೀಕರಣದಿಂದ ಪೈಪೋಟಿ ಎದುರಿಸುತ್ತಿದೆ. ಖಾಸಗಿಯವರು ಲಾಭದಾಯಕ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸುತ್ತಾರೆ. ಸಾಮಾಜಿಕವಾಗಿ ಕೆಲಸ ಮಾಡುವ ಮಾರ್ಗಗಳಮ್ಮ ಕರಾರಸಾನಿಕ್ಕೆ ಬಿಡುತ್ತಾರೆ. ನಾವು ಸೇವಾ ವಲಯದಲ್ಲಿಯೂ ಹಾಗೂ ವಾಣಿಜ್ಯ ಮಾರ್ಗಗಳಲ್ಲಿಯೂ ಸಂಚರಿಸಿ ನಿಗಮವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ಸಂಚಾರ ಮಾಡಬೇಕಾಗುತ್ತದೆ ಎಂದರು.
ಸೋರಿಕೆ ತಡೆಗಟ್ಟಿ ಆದಾಯ ಹೆಚ್ಚಿಸಿ:
ಬರುವ ದಿನಗಳಲ್ಲಿ ನಿಗಮ ಬಹಳ ದೊಡ್ಡ ಬದಲಾವಣೆಯನ್ನು ಕಾಣುವ ವಿಶ್ವಾಸವಿದೆ. ತನ್ನದೇ ಶಕ್ತಿಯ ಮೇಲೆ ನಿಲ್ಲಬೇಕೆನ್ನುವುದು ನಮ್ಮ ಅಭಿಲಾಷೆ. ಹಿಂದೆ ಇದ್ದಂತೆಯೇ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಕೋವಿಡ್ ಹಾಗೂ ನಂತರದಲ್ಲಿ ಎಲ್ಲಾ ರಂಗಗಳಲ್ಲಿ ಕುಸಿತ ಕಂಡಿತು. ಈ ಸಂದರ್ಭದಲ್ಲಿ ಕರಾರಸಾ ಸಂಸ್ಥೆ ಸಾಕಷ್ಟು ತೊಂದರೆ ಅನುಭವಿಸಿದೆ. ಆ ಸಂದರ್ಭದಲ್ಲಿ ಸರ್ಕಾರ ಸಂಪೂರ್ಣವಾಗಿ ಹಣಕಾಸಿನ ಬೆಂಬಲ ನೀಡಿದೆ. 2 ವರ್ಷವೂ ಬೆಂಬಲ ನೀಡಿ ನೌಕರರಿಗೆ ವೇತನ, ಡೀಸೆಲ್ ಬಿಲ್ ಗೆ ಅನುದಾನ ಒದಗಿಸಲಾಗಿದೆ. ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ 4600 ಕೋಟಿ ರೂ. ನೀಡಲಾಗಿದೆ. ಇತ್ತೀಚೆಗೆ ಒಂದು ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲು ಸಿದ್ದವಿದ್ದು, ತೆರಿಗೆ ವಿನಾಯ್ತಿ ನೀಡಲು ಕೂಡ ಸಿದ್ಧವಿದೆ. ನಿಗಮಗಳು ವಾಣಿಜ್ಯ ಮಾರ್ಗಗಳ ಸಂಚಾರ ಹಾಗೂ ಸೋರಿಕೆ ತಡೆಯುವ ಮೂಲಕ ಆದಾಯ ಹೆಚ್ಚಳಕ್ಕೆ ಪ್ರಯತ್ನ ಪಡಬೇಕು. ಖರೀದಿಯಲ್ಲಿನ ಪಾರದರ್ಶಕತೆ ತರಬೇಕು. ಬಿಡಿ ಭಾಗ, ಆಯಿಲ್, ಟೈಯರ್ ಖರೀದಿಯಲ್ಲಿ ಪಾರದರ್ಶಕತೆ ತಂದು ವೆಚ್ಚವನ್ನು ಕಡಿಮೆ ಮಾಡಬೇಕು. ಸಾರಿಗೆ ಸಂಸ್ಥೆಯನ್ನು ಮತ್ತೊಮ್ಮೆ ಲಾಭದಾಯಕವಾಗಿ ನಡೆಸಬೇಕು ಎಂಬ ಅಭಿಲಾಷೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಏಪ್ರಿಲ್ 1ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್: ಸಿಎಂ ಬೊಮ್ಮಾಯಿ ಸೂಚನೆ
ಜನಮನ ಗೆಲ್ಲಬೇಕು:
ಸಿಬ್ಬಂದಿಯ ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸಿನ ಇತಿಮಿತಿಯಲ್ಲಿ ನೌಕರರೊಂದಿಗೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ತಂತ್ರಜ್ಞಾನ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಪ್ರಯಾಣಿಕರ ಆಯ್ಕೆಗಳು ಬದಲಾಗುತ್ತಿದೆ. ಇದನ್ನು ಗಮನಿಸಿ, ಖಾಸಗಿಯವರೊಂದಿಗೆ ಪೈಪೋಟಿ ಮಾಡಿ ಅವರಿಗಿಂತ ಹೆಚ್ವು ಸೇವೆ ನೀಡಿ ಜನಮನ ಗೆಲ್ಲಬೇಕು ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಇದೊಂದು ಉತ್ತಮ ನಡೆಯಾಗಿದೆ. ಇದರ ಕಾರ್ಯಸೂಚಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದರು.
Namma Bengaluru: ಮಹಿಳೆಯರಿಗೆ BMTC ಉಚಿತ ಪಾಸ್ ನೀಡುವಂತೆ ಪ್ರಯಾಣಿಕರ ವೇದಿಕೆ ಆಗ್ರಹ
ಕಂದಾಯ ಸಚಿವ ಆರ್.ಅಶೋಕ್, ಕೆ.ಎಸ್.ಆರ್.ಟಿ. ಸಿ ಅಧ್ಯಕ್ಷ ಚಂದ್ರಪ್ಪ , ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಶಾಸಕರಾದ ಸೋಮಶೇಖರ್ ರೆಡ್ಡಿ, ಸತೀಶ್ ರೆಡ್ಡಿ, ಯಾದವ್ , ನಿವೃತ್ತ ಐ.ಎ. ಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.