Asianet Suvarna News Asianet Suvarna News

ವಿದ್ಯಾರ್ಥಿಗಳಿಗೆ ವರವಾದ ಬಾಲಸ್ವಾಸ್ಥ್ಯ ಯೋಜನೆ

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಯೋಜನೆಯಡಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಹುಕ್ಕೇರಿ, ಗೋಕಾಕ, ಮೂಡಲಗಿ ಸೇರಿ ಎಂಟು ವಲಯಗಳಲ್ಲಿ 18 ವರ್ಷದ ಒಳಗಿನ ವಯೋಮಾನದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 5.16 ಲಕ್ಷಕ್ಕೂ ಅಧಿಕ ಮಕ್ಕಳು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. 

Child Health Scheme isBoon for Students at Chikkodi Educational District in Belagavi grg
Author
First Published Jan 3, 2023, 7:06 PM IST

ಸಿ.ಎ.ಇಟ್ನಾಳಮಠ

ಅಥಣಿ(ಜ.03):  ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಯೋಜನೆಯಡಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಹುಕ್ಕೇರಿ, ಗೋಕಾಕ, ಮೂಡಲಗಿ ಸೇರಿ ಎಂಟು ವಲಯಗಳಲ್ಲಿ 18 ವರ್ಷದ ಒಳಗಿನ ವಯೋಮಾನದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 5.16 ಲಕ್ಷಕ್ಕೂ ಅಧಿಕ ಮಕ್ಕಳು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಈ ಎಲ್ಲ ವಲಯಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಈಗಲೂ ನಿರಂತರವಾಗಿ ಮುಂದುವರಿದಿದೆ. ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಲಹೆಯೊಂದಿಗೆ ವೈದ್ಯಕೀಯ ತಪಾಸಣೆ ವರದಿ ಪಡೆದು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಬಿದ್ದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.

ಕಣ್ಣಿನ ನ್ಯೂನತೆಗಳು ಸಹ ಹಲವು ವಿದ್ಯಾರ್ಥಿಗಳಲ್ಲಿ ಕಂಡುಬಂದಿವæ. ಅಂತಹ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ನೇತ್ರದೋಷ ಹೊಂದಿರುವ ಅಥಣಿ ತಾಲೂಕಿನ 4 ಮಕ್ಕಳ ಪೈಕಿ ಇಬ್ಬರಿಗೆ, ಚಿಕ್ಕೋಡಿ ತಾಲೂಕಿನ 8 ಮಕ್ಕಳ ಪೈಕಿ ಐವರಿಗೆ, ಗೋಕಾಕ ತಾಲೂಕಿನ 19 ಮಕ್ಕಳ ಪೈಕಿ 12 ವಿದ್ಯಾರ್ಥಿಗಳಿಗೆ, ಹುಕ್ಕೇರಿ ತಾಲೂಕಿನ 6 ಮಕ್ಕಳ ಪೈಕಿ ಮೂವರಿಗೆ, ರಾಯಬಾಗ ತಾಲೂಕಿನ ಇಬ್ಬರು ಮಕ್ಕಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಡಿಡಿಪಿಐ ಹಂಚಾಟೆ ತಿಳಿಸಿದ್ದಾರೆ.

Chikkamagaluru News: ಶಾಶ್ವತ ಮುಚ್ಚಿದ ಶ್ರೀ ಅಭಿನವ ರಮಾನಂದ ಪ್ರೌಢಶಾಲೆ!

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ವಿಶಾಲ್‌ ಆರ್‌., ಧಾರವಾಡದ ಶಿಕ್ಷಣ ಇಲಾಖೆಯ ಅಪರ ಆಯುಕ್ತರು, ಇಲಾಖೆಯ ಹಿರಿಯ ಅಧಿಕಾರಿಗಳಾದ ಗಜಾನನ ಮನ್ನಿಕೇರಿ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಯೋಜನೆಯು ಯಶಸ್ವಿಯಾಗಲು ಮಾರ್ಗದರ್ಶನ ಮಾಡುತ್ತ ನಿರಂತರ ಶ್ರಮಿಸುತ್ತಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ ಅಡಿಯಲ್ಲಿ ಎಲ್ಲ ಮಕ್ಕಳನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಮಕ್ಕಳನ್ನು ವಿಶೇಷ ಸೌಲಭ್ಯಗಳಿರುವ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಯೋಜನೆಯಿಂದ ಅನೇಕ ಮಕ್ಕಳಿಗೆ ಪ್ರಯೋಜನವಾಗಿದೆ. ಉಚಿತವಾಗಿ ಚಿಕಿತ್ಸೆ ಕೊಡಿಸುವ ಯೋಜನೆ ಇದಾಗಿದೆ. ಮಗುವಿನ ಕಲಿಕೆಗೆ ಆರೋಗ್ಯ ಸಮಸ್ಯೆಯೇ ಮಾರಕ ಆಗಬಾರದು ಎಂಬುದು ಈ ಯೋಜನೆ ಮೂಲ ಉದ್ದೇಶವಾಗಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯಡಿ ಅನೇಕ ಮಕ್ಕಳಿಗೆ ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಅಗತ್ಯವಿರುವ ಇನ್ನೂ ಹಲವು ಮಕ್ಕಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಕ್ರಮವಹಿಸಲಾಗಿದೆ. ಈ ಯೋಜನೆಯ ಪ್ರಯೋಜನ ಕುರಿತು ಎಲ್ಲ ಹಂತಗಳಲ್ಲಿ ಕಾರ್ಯಾಗಾರ ನಡೆಸುವ ಜೊತೆಗೆ ಪಾಲಕರಿಗೂ ಈ ಯೋಜನೆಯ ಪ್ರಯೋಜನಗಳನ್ನು ತಿಳಿಸಲು ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ, ಮುಖ್ಯಶಿಕ್ಷಕರು, ಶಿಕ್ಷಕರ ವರ್ಗದವರು ಶ್ರಮಿಸುತ್ತಿದ್ದಾರೆ.

ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ: ನಾಗೇಶ್‌

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಅತಿ ಮುಖ್ಯವಾಗಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲು ಇಲಾಖೆ ಮುಂದಾಗಿದ್ದು, ಅಥಣಿ ತಾಲೂಕಿನ 25, ಚಿಕ್ಕೋಡಿ ತಾಲೂಕಿನ 31, ಗೋಕಾಕ ತಾಲೂಕಿನ 25, ಹುಕ್ಕೇರಿ ತಾಲೂಕಿನ 06, ರಾಯಬಾಗ ತಾಲೂಕಿನ 20, ಮಕ್ಕಳು ಸೇರಿ ಒಟ್ಟು 107 ಮಕ್ಕಳಿಗೆ ಹೃದ್ರೋಗಕ್ಕೆ ಸಂಬಂಧಿಸಿದ ಆಪರೇಶನ್‌ ಮಾಡಿಸಲಾಗಿದೆ ಅಂತ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ತಿಳಿಸಿದ್ದಾರೆ. 

ಅಥಣಿ ವಲಯದಿಂದ 70 ಸಾವಿರಕ್ಕಿಂತ ಹೆಚ್ಚು ಪ್ರಾಥಮಿಕ ಪೌಢಶಾಲಾ ಮಕ್ಕಳ ಆರೋಗ್ಯ ಪರೀಕ್ಷೆ ಮಾಡಿಸಲಾಗಿದೆ. ಅದರಲ್ಲಿ 25 ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಆಯ್ಕೆಮಾಡಿ ಕಳುಹಿಸಲಾಗಿತ್ತು. ಅವರೆಲ್ಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂಥ ಒಳ್ಳೆಯ ಯೋಜನೆ ಸರ್ಕಾರದ ಮಟ್ಟದಲ್ಲಿ ಇದೆ ಎಂಬುದರ ಬಗ್ಗೆ ಪಾಲಕರಲ್ಲಿ ಜಾಗ್ರತಿ ಮೂಡಿಸುವುದು ಅಗತ್ಯವಾಗಿದೆ ಅಂತ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದ್ದಾರೆ. 

Follow Us:
Download App:
  • android
  • ios