ಜಿಲ್ಲಾಡಳಿತದ ಬಿಡುವಿಲ್ಲದ ಕಾರ್ಯಭಾರಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿ ಕೆ.ಎನ್.ರಮೇಶ್  ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿ ಪಿಯು ವಿದ್ಯಾರ್ಥಿಗಳಿಗೆ ಸ್ವತಃ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿಯನ್ನು ಮೆರೆದರು.

ಚಿಕ್ಕಮಗಳೂರು (ಸೆ.26): ಜನರ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ದಿ ಕೆಲಸಗಳ ಪರಿಶೀಲನೆ ಜಿಲ್ಲೆಯ ಆಡಳಿತ ನಿರ್ವಹಣೆಯ ಸದಾ ಅಧಿಕಾರಿಗಳೊಂದಿಗೆ ಇರುತ್ತಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಒಂದು ದಿನದ ಮಟ್ಟಿಗೆ ಉಪನ್ಯಾಸಕರಾಗಿದ್ದರು. ಜಿಲ್ಲಾಡಳಿತದ ಬಿಡುವಿಲ್ಲದ ಕಾರ್ಯಭಾರಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿ ಪಿಯು ವಿದ್ಯಾರ್ಥಿಗಳಿಗೆ ಸ್ವತಃ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿಯನ್ನು ಮೆರೆದರು. ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಗಳನ್ನು ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳಿಗೆ ಒಂದು ದಿನ ಪಾಠ ಮಾಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕಾಲೇಜಿಗೆ ತೆರಳಿ ಎರಡು ಗಂಟೆಗೂ ಅಧಿಕ ಕಾಲ ಪಿಯು ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕುರಿತು ಸುಧೀರ್ಘವಾಗಿ ಪಾಠ ಮಾಡಿದರು. ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕಗ್ಗಂಟುಗಳನ್ನು ವಿದ್ಯಾರ್ಥಿಗಳೆದುರು ಎಳೆಎಳೆಯಾಗಿ ಬಿಡಿಸಿಟ್ಟ ಜಿಲ್ಲಾಧಿಕಾರಿ ಪೂರಕವಾದ ಉಪಮೆಗಳು, ಕಥೆಗಳನ್ನು ಮನಮುಟ್ಟುವಂತೆ ವಿವರಿಸುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಟ್ಟರು.

ತಾವೊಬ್ಬ ಜಿಲ್ಲಾಧಿಕಾರಿ ಎಂಬುದನ್ನು ಬದಿಗಿಟ್ಟು ವಿದ್ಯಾರ್ಥಿಗಳೊಂದಿಗೆ ಪ್ರೀತಿ ವಿಶ್ವಾಸ ಮತ್ತು ಸ್ನೇಹದಿಂದ ಮಾತನಾಡಿದ ಅವರು ಕಲಿಕೆಯಲ್ಲಿ ಯಶಸ್ವಿಯಾಗುವಲ್ಲಿನ ಒಳಮರ್ಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸುವ ಮೂಲಕ ತಾವೊಬ್ಬ ಉತ್ತಮ ಬೋಧಕ ಎಂಬುದನ್ನು ಸಾಬೀತುಪಡಿಸಿದರು.

ಐಎಂಎಗೆ ಸೇರಿದ ಶಾಲೆ ಮುಚ್ಚಲು ನೋಟಿಸ್‌: ಪೋಷಕರ ಪ್ರತಿಭಟನೆ

ಕಾನ್ಸೆಪ್ಟ್ ಅರ್ಥವಾದರೆ ಕಲಿಕೆ ಸುಲಭವಾಗುತ್ತದೆ, ವಿದ್ಯಾರ್ಥಿಗಳು ಎಲ್ಲವನ್ನೂ ಒಂದೇ ಸಲ ತಲೆಯಲ್ಲಿ ತುಂಬಿಕೊಳ್ಳಬಾರದು, ಎಷ್ಟು ಬೇಕೋ ಅಷ್ಟು ಸ್ವಲ್ಪ ಸ್ವಲ್ಪವಾಗಿ ವಿಷಯಗಳನ್ನು ತುಂಬಿಕೊಳ್ಳಬೇಕು, ವಿಜ್ಞಾನ ಅಧ್ಬುತಗಳ ಆಗರ, ಮುಕ್ತಮನಸ್ಸಿನಿಂದ ಅಭ್ಯಾಸ ಮಾಡಿದರೆ ಅದರ ದರ್ಶನವಾಗುತ್ತದೆ ಮತ್ತು ಅರ್ಥವಾಗುತ್ತದೆ ಎಂದು ತಿಳಿ ಹೇಳಿದರು. 

ನರ್ಸಿಂಗ್‌, ಆರೋಗ್ಯ ಕೋರ್ಸ್‌ಗೆ ಸೆಪ್ಟೆಂಬರ್ 28ರಿಂದ ದಾಖಲೆ ಪರಿಶೀಲನೆ

ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ಮಾತನಾಡಿ ಆಡಳಿತ ಮಂಡಳಿ ಮತ್ತು ತಮ್ಮ ಮನವಿಗೆ ಓಗೊಟ್ಟು ಆಗಮಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾಲೇಜಿಗೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪ್ರಾಚಾರ್ಯೆ ಎಂ.ಬಿ.ಜಯಶ್ರೀ ಮತ್ತು ಬೋಧಕ ವೃಂದ ಸಂಭ್ರಮದಿಂದ ಸ್ವಾಗತಿಸಿತು, ವಾಣಿಜ್ಯ ವಿಭಾಗದ ಮುಖ್ಯಸ್ಥ ಮಂಜುನಾಥ ಭಟ್, ವಿಜ್ಞಾನ ವಿಭಾಗದ ಮುಖ್ಯಸ್ಥ ಗೋಪಾಲ್, ಉಪನ್ಯಾಸಕರಾದ ಹೆಚ್.ಕೆ.ಸುಭಾಷ್, ಉಪಸ್ಥಿತರಿದ್ದರು.

ಎನ್‌ಐಟಿಕೆಯಲ್ಲಿ 2 ಹೊಸ ಸ್ನಾತಕ ಪದವಿ ಕೋರ್ಸ್‌
ಮಂಗಳೂರು: ಪರ್ವ ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕ್‌ ವೆಹಿಕಲ್‌ ಕಂಟ್ರೋಲ್‌ನಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ಬಾಷ್‌ನೊಂದಿಗೆ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ(ಎನ್‌ಐಟಿಕೆ) ಒಪ್ಪಂದ ಮಾಡಿಕೊಂಡಿದೆ.

ಎನ್‌ಐಟಿಕೆಯ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗ ಉದ್ದಿಮೆ ಪ್ರಾಯೋಜಿತ ಸ್ನಾತಕೋತ್ತರ ಪದವಿ(ಎಂ-ಟೆಕ್‌) ಪ್ರಾರಂಭಿಸಲು ಈ ಒಪ್ಪಂದ ಮಾಡಿಕೊಂಡಿದೆ. ಇದು ಈ ವಿಭಾಗ ನೀಡುವ ಎರಡನೇ ಸ್ನಾತಕೋತ್ತರ ಪದವಿಯಾಗಿದೆ. ಎನ್‌ಐಟಿಕೆಯಲ್ಲಿರುವ ದೊಡ್ಡ ವಿಭಾಗಗಳಲ್ಲಿ ಈ ವಿಭಾಗವೂ ಒಂದು.

ಕಸ್ಟಮೈಸ್‌ ಮಾಡಿದ ಸ್ನಾತಕೋತ್ತರ ಪದವಿಯು ಎನ್‌ಐಟಿಕೆಯ ಚೌಕಟ್ಟಿನ ಆಧಾರದ ಮೇಲೆ ಮೊದಲ ಬಾರಿ ಪ್ರಾರರಂಭಿಸಿದ ಸ್ನಾತಕೋತ್ತರ ಪದವಿಯ ವಿಭಾಗವಾಗಿದೆ.

ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ!

ಇದೇ ಅಕ್ಟೋಬರ್‌ನಿಂದ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿದ್ದು, ಆನ್‌ಲೈನ್‌ ತರಗತಿ ಮತ್ತು ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದೆ. ಸೋಮವಾರದಿಂದ ಶುಕ್ರವಾರ ವರೆಗೆ ಸಂಜೆ 5ರಿಂದ ರಾತ್ರಿ 9ರ ವರೆಗೆ ತರಗತಿ ನಡೆಯಲಿದೆ. ಎನ್‌ಐಟಿಕೆಯ ಪೂರ್ಣಕಾಲಿಕ ಪದವಿಗಳಿಗೆ ಇದು ಸಮಾನಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.