ಪ್ರಭಾರ ಮುಖ್ಯ ಶಿಕ್ಷಕರಿಗೆ ‘ಪ್ರಭಾರ ಭತ್ಯೆ?’
ಮುಖ್ಯ ಶಿಕ್ಷಕ ಹುದ್ದೆಯ ಪ್ರಭಾರ ಜವಾಬ್ದಾರಿ ಹೊತ್ತಿರುವ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡಲು ಶಿಕ್ಷಕರ ಸಂಘ ಮಾಡಿರುವ ಮನವಿಯನ್ನು ಇಲಾಖಾ ಸಚಿವರಾದ ಬಿ.ಸಿ.ನಾಗೇಶ್ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲು ಮುಂದಾಗಿದ್ದಾರೆ.
ಬೆಂಗಳೂರು(ಡಿ.02): ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಮಂಜೂರಾದ ಮುಖ್ಯಶಿಕ್ಷಕ ಹುದ್ದೆಗಳಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡಲು ಒಪ್ಪಿಗೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಂತನೆ ನಡೆಸಿದೆ.
ಮುಖ್ಯ ಶಿಕ್ಷಕ ಹುದ್ದೆಯ ಪ್ರಭಾರ ಜವಾಬ್ದಾರಿ ಹೊತ್ತಿರುವ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡಲು ಶಿಕ್ಷಕರ ಸಂಘ ಮಾಡಿರುವ ಮನವಿಯನ್ನು ಇಲಾಖಾ ಸಚಿವರಾದ ಬಿ.ಸಿ.ನಾಗೇಶ್ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
13,000 ಶಿಕ್ಷಕರ ನೇಮಕ ಪಟ್ಟಿಗೆ ಹೈಕೋರ್ಟ್ ತಡೆ
ಪ್ರಭಾರ ಭತ್ಯೆ ಏಕೆ?:
ಸರ್ಕಾರ ಈಗಾಗಲೇ 60ಕ್ಕಿಂತ ಹೆಚ್ಚು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ಮುಖ್ಯ ಶಿಕ್ಷಕ ಹುದ್ದೆ ಮತ್ತು 250ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಓರ್ವ ಹಿರಿಯ ಮುಖ್ಯ ಶಿಕ್ಷಕ ಹುದ್ದೆ ಮಂಜೂರು ಮಾಡಿದೆ. ಆ ಪ್ರಕಾರ 3396 ಹಿರಿಯ ಮುಖ್ಯ ಶಿಕ್ಷಕರು ಮತ್ತು 13,096 ಮುಖ್ಯ ಶಿಕ್ಷಕ ಹುದ್ದೆಗಳನ್ನು ಕಳೆದ ಆಗಸ್ಟ್‌ನಲ್ಲಿ ಮಂಜೂರು ಮಾಡಿದೆ. ಈ ಪೈಕಿ ಖಾಲಿ ಇರುವ ಹುದ್ದೆಗಳಿಗೆ ಆಯಾ ಶಾಲೆಯಲ್ಲೇ ಇತರೆ ಸಹ ಶಿಕ್ಷಕರನ್ನು ಪ್ರಭಾರ ಮುಖ್ಯ ಶಿಕ್ಷಕರಾಗಿ ನೇಮಿಸಲಾಗಿದೆ. ಅಂತಹ ಶಿಕ್ಷಕರು ತಮ್ಮ ಜವಾಬ್ದಾರಿಯ ಜತೆಗೆ ಮುಖ್ಯ ಶಿಕ್ಷಕರ ಕೆಲಸಕಾರ್ಯಗಳನ್ನೂ ಹೆಚ್ಚುವರಿಯಾಗಿ ನಿರ್ವಹಿಸಬೇಕಿರುವ ಕಾರಣ ಅವರಿಗೆ ಪ್ರಭಾರ ಭತ್ಯೆ ನೀಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಇಲಾಖೆಗೆ ಬೇಡಿಕೆ ಇಟ್ಟಿದೆ.
ಈ ಬೇಡಿಕೆ ಪರಿಶೀಲಿಸಿರುವ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಸಹ ಶಿಕ್ಷಕರನ್ನು ಮುಖ್ಯ ಶಿಕ್ಷಕ ಹುದ್ದೆಗಳ ಪ್ರಭಾರ ವಹಿಸಿದಾಗ ಅವರು ಶಾಲಾ ಶೈಕ್ಷಣಿಕ, ಆಡಳಿತ ಮತ್ತು ಶಾಲಾಭಿವೃದ್ಧಿ ಕಾರ್ಯಗಳನ್ನು ಹೆಚ್ಚುವರಿಯಾಗಿ ನಿರ್ವಹಿಸುವುದರಿಂದ ಅವರಿಗೆ ಪ್ರಭಾರ ಭತ್ಯೆ ನೀಡಲು ಆರ್ಥಿಕ ಇಲಾಖೆಯ ಸಹಮತಿ ಪಡೆಯಬೇಕಿದೆ. ಹಾಗಾಗಿ ಪ್ರಭಾರ ಭತ್ಯೆ ವಿಚಾರವಾಗಿ 400 ಮಕ್ಕಳಿಗಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಮಾತ್ರ ಮುಖ್ಯ ಶಿಕ್ಷಕ ಹುದ್ದೆ ನಿಯೋಜಿಸಲು ಅವಕಾಶವಿದೆ ಎಂದು ಈ ಹಿಂದೆ ನೀಡಿದ್ದ ವಿಚಾರವನ್ನು ಮರುಪರಿಶೀಲಿಸಿ ಸೂಕ್ತ ಆದೇಶ ನೀಡಲು ಕೋರಿದ್ದಾರೆ. ಇದನ್ನು ಗಮನಿಸಿರುವ ಇಲಾಖೆಯು ಪ್ರಭಾರ ಭತ್ಯೆಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಇಲಾಖಾ ಸಚಿವರ ಕಚೇರಿ ಮೂಲಗಳು ತಿಳಿಸಿವೆ.