13,000 ಶಿಕ್ಷಕರ ನೇಮಕ ಪಟ್ಟಿಗೆ ಹೈಕೋರ್ಟ್ ತಡೆ
40 ಅಭ್ಯರ್ಥಿಗಳಿಂದ ತಕರಾರು, ಡಿ.9ರವರೆಗೆ ಆಯ್ಕೆ ಪಟ್ಟಿಗೆ ತಡೆ, ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ಸಾಮಾನ್ಯ ವರ್ಗಕ್ಕೆ ಸೇರಿಸಿದ ಆರೋಪ
ಬೆಂಗಳೂರು(ಡಿ.01): ರಾಜ್ಯದ 13,363 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ತಾತ್ಕಾಲಿಕ ಆಯ್ಕೆಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ‘ಅರ್ಹತೆ ಇದ್ದರೂ ನಮ್ಮನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಹೀಗಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಪಡಿಸಿ’ ಎಂದು ಕೋರಿ ಉಡುಪಿಯ ಯಡತಾಡಿ ಗ್ರಾಮದ ಅನಿತಾ ಸೇರಿ 40ಕ್ಕೂ ಅಧಿಕ ಮಹಿಳಾ ಹುದ್ದೆ ಆಕಾಂಕ್ಷಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2022ರ ನ.18ರಂದು ಹೊರಡಿಸಿದ ತಾತ್ಕಾಲಿಕ ಪಟ್ಟಿಗೆ ಡಿ.9ರವರೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದೆ.
Karnataka Teacher Recruitment: 13363 ಶಿಕ್ಷಕರ ನೇಮಕ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಕೇಂದ್ರೀಕೃತ ನೇಮಕಾತಿ ವಿಭಾಗ ವಿಶೇಷಾಧಿಕಾರಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ತಾತ್ಕಾಲಿಕ ಪಟ್ಟಿಗೆ ತಕರಾರು ಏಕೆ?:
ತಕರಾರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಹಿಂದೆ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ (6-8 ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಲಿಖಿತ ಪರೀಕ್ಷೆಗೆ ಹಾಜರಾಗಿ ಉತ್ತಮ ರಾರಯಂಕ್ ಗಳಿಸಿದ್ದರು. ಅಲ್ಲದೆ, 1:2 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಹರಾಗಿದ್ದರು. ಆದರೆ, ದಾಖಲೆಗಳನ್ನು ಪರಿಶೀಲಿಸಿದ್ದ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 2022ರ ನ.18ರಂದು 1:1 ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಿದ್ದು, ಅರ್ಜಿದಾರರು ಅದರಲ್ಲಿ ಸ್ಥಾನ ಪಡೆದಿರಲಿಲ್ಲ. ಇದರಿಂದ ಅರ್ಜಿದಾರರು ತಾತ್ಕಾಲಿಕ ಪಟ್ಟಿಯನ್ನು ಪ್ರಶ್ನಿಸಿದ್ದಾರೆ.
KEA Recruitment 2022: ಪಶುವೈದ್ಯ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಇಎ
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿವಾದ ಮಂಡಿಸಿ, ‘1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅರ್ಜಿದಾರರಿಗಿಂತ ಕಡಿಮೆ ಅಂಕ ಪಡೆದಿರುವವರ ಅಭ್ಯರ್ಥಿಗಳ ಹೆಸರುಗಳಿವೆ. ಈ ಬಗ್ಗೆ ಡಿಡಿಪಿಐಗಳನ್ನು ವಿಚಾರಿಸಿದಾಗ ‘ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳು ಪತಿಯ ಆದಾಯ/ಜಾತಿ ಪ್ರಮಾಣಪತ್ರದ ಬದಲಾಗಿ ತಂದೆಯ ಆದಾಯ/ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿರುವುದರಿಂದ ಅರ್ಜಿದಾರರ ಹೆಸರುಗಳನ್ನು ಕೈಬಿಡಲಾಗಿದೆ’ ಎಂಬುದಾಗಿ ತಿಳಿಸಿದ್ದಾರೆ’ ಎಂದು ವಿವರಿಸಿದರು.
ಅಲ್ಲದೆ, ‘ಇದೇ ಕಾರಣದಿಂದ ಅರ್ಜಿದಾರರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ. ಅಭ್ಯರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ, ಸಾಮಾನ್ಯ ಅಭ್ಯರ್ಥಿಗಳ ವರ್ಗಕ್ಕೆ ಸೇರ್ಪಡೆ ಮಾಡಿರುವ ಕ್ರಮ ಸರಿಯಿಲ್ಲ. ಜತೆಗೆ, ಪತಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕೋರುವುದು ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ 2022ರ ನ.18ರಂದು ಪ್ರಕಟಿಸಿರುವ 1:1 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.