Science Day ಮುಂದಿನ ವರ್ಷದಿಂದ 'ವಿಜ್ಞಾನ ದಿನ' ಆಚರಣೆ: ಅಶ್ವತ್ಥನಾರಾಯಣ ಘೋಷಣೆ
* ಮುಂದಿನ ವರ್ಷದಿಂದ 'ವಿಜ್ಞಾನ ದಿನ' ಆಚರಣೆ
*ವಿಜ್ಞಾನ-ತಂತ್ರಜ್ಞಾನ ಇಲಾಖೆಯಿಂದಲೇ `ವಿಜ್ಞಾನ ದಿನ’ ಆಚರಣೆ
* ಉನ್ನತ ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಘೋಷಣೆ
ಬೆಂಗಳೂರು, (ಫೆ.25): ಮುಂದಿನ ವರ್ಷದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದಲೇ ರಾಜ್ಯದಾದ್ಯಂತ `ರಾಷ್ಟ್ರೀಯ ವಿಜ್ಞಾನ ದಿನ’ವನ್ನು (Science Day) ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಶುಕ್ರವಾರ ಇಲ್ಲಿ ಏರ್ಪಡಿಸಿದ್ದ 29ನೇ ವರ್ಷದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಾಜ್ಯವು ಇಂದು ಗಳಿಸಿರುವ ಆರ್ಥಿಕ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ಅಗಾಧವಾಗಿದೆ ಎಂದರು.
ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ: ಮಾರ್ಚ್ 1ರ ಗಡುವು ವಿಧಿಸಿದ ಸಚಿವ ಅಶ್ವತ್ಥನಾರಾಯಣ
ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಮೊದಲಿನಿಂದಲೂ ದೇಶದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ನೂರಾರು ವರ್ಷಗಳ ಹಿಂದೆಯೇ ರಾಜ್ಯದಲ್ಲಿ ಭದ್ರ ಬುನಾದಿ ಬಿದ್ದಿದೆ. ರಾಜ್ಯವು ಸಾಧಿಸಿರುವ ಸಾಮಾಜಿಕ ಸುಧಾರಣೆಗಳ ಹಿಂದೆಯೂ ತಂತ್ರಜ್ಞಾನದ ಕೊಡುಗೆ ಇದೆ ಎಂದು ಅವರು ಬಣ್ಣಿಸಿದರು.
ಬದುಕಿನ ಪ್ರತೀ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ. ಆದ್ದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನಗಳ ಬಗ್ಗೆ ಒಲವು ಮೂಡಿಸಬೇಕು. ಈಗ ಮಾನವಿಕಗಳ ಕಲಿಕೆಯಲ್ಲೂ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಏನನ್ನೇ ಕಲಿತರೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಜೊತೆಗೆ, ವಿಜ್ಞಾನವು ನಮ್ಮ ಸಂಸ್ಕೃತಿ ಮತ್ತು ಧರ್ಮಗಳ ಭಾಗವಾಗಬೇಕು ಎಂದು ಸಚಿವರು ಸಲಹೆ ನೀಡಿದರು.
ಮಕ್ಕಳ ಕಲಿಕೆಯಲ್ಲಿ ಮೂರರಿಂದ ಹನ್ನೆರಡನೇ ವರ್ಷದವರೆಗೆ ನಿರ್ಣಾಯಕ ಹಂತವಾಗಿದೆ. ಈ ಹಂತದಲ್ಲೇ ಮಕ್ಕಳು ಶೇ.85ರಷ್ಟು ಕಲಿಕೆ ನಡೆಯುತ್ತದೆ. ಆದ್ದರಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈಜ್ಞಾನಿಕ ಕಲಿಕೆಗೆ ಒತ್ತು ಕೊಡಲಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ, ವಿಜ್ಞಾನಿ ಡಾ.ಅನುರಾಧಾ, ಕೆ.ವಿ.ಮಾಲಿನಿ, ಬಿ.ಎನ್. ಶ್ರೀನಾಥ್, ಶ್ರೀಮತಿ ಹರಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಬಾಲವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ
ಕರ್ನಾಟಕದ (Karnataka) ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳು (University) ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ- ಕಚೇರಿ (E Office) ಮೂಲಕವೇ ಅನ್ ಲೈನ್ ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಇ-ಆಫೀಸ್’ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ’ ಎಂದು ಎಚ್ಚರಿಸಿದ್ದಾರೆ.
ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ ಇಲಾಖೆಗೆ ವಿ.ವಿ.ಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲೋದ್ದೇಶವೇ ವಿಫಲವಾದಂತಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿ.ವಿ.ಗಳ ಆಡಳಿತವೂ ಸೇರಿದಂತೆ ಪ್ರತಿಯೊಂದು ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿ.ವಿ.ಗಳು ಸಮಕಾಲೀನ ಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.