ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ: ಮಾರ್ಚ್ 1ರ ಗಡುವು ವಿಧಿಸಿದ ಸಚಿವ ಅಶ್ವತ್ಥನಾರಾಯಣ
* ವಿಶ್ವವಿದ್ಯಾಲಯಗಳಲ್ಲಿ ಇ-ಆಫೀಸ್ ಕಡ್ಡಾಯ
* ಮಾರ್ಚ್ 1ರ ಗಡುವು ವಿಧಿಸಿದ ಸಚಿವ ಅಶ್ವತ್ಥನಾರಾಯಣ
*ಭೌತಿಕ ರೂಪದಲ್ಲಿ ಪತ್ರ, ಕಡತ, ಪ್ರಸ್ತಾವನೆ ಬಂದರೆ ವಾಪಸ್
ಬೆಂಗಳೂರು, (ಫೆ.25): ಕರ್ನಾಟಕದ (Karnataka) ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳು (University) ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ- ಕಚೇರಿ (E Office) ಮೂಲಕವೇ ಅನ್ ಲೈನ್ ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಇ-ಆಫೀಸ್’ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ’ ಎಂದು ಎಚ್ಚರಿಸಿದ್ದಾರೆ.
ಕಲೆ, ವಾಸ್ತುಶಿಲ್ಪ, ಮಹಾಕಾವ್ಯ, ವೇದಗಳ Online Course!
ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ ಇಲಾಖೆಗೆ ವಿ.ವಿ.ಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲೋದ್ದೇಶವೇ ವಿಫಲವಾದಂತಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿ.ವಿ.ಗಳ ಆಡಳಿತವೂ ಸೇರಿದಂತೆ ಪ್ರತಿಯೊಂದು ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿ.ವಿ.ಗಳು ಸಮಕಾಲೀನ ಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ, ಎನ್ಇಪಿ ಅನುಸಾರ ವಿ.ವಿ.ಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಳವಡಿಕೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್ಎಡಿ), ಇ-ಆಫೀಸ್ ಬಳಕೆಗೆ ವಿ.ವಿ.ಗಳಲ್ಲಿನ ಸಿಬ್ಬಂದಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿ, 15 ದಿನಗಳಲ್ಲಿ ತಮಗೆ ವರದಿ ನೀಡುವಂತೆಯೂ ಅವರು ಸೂಚಿಸಿದ್ದಾರೆ.
ಬದಲಾಯ್ತು ಶಾಲೆ ಬೇಸಿಗೆ ರಜೆ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ (Primary and High School) ಬೇಸಿಗೆ ರಜೆಯನ್ನು ಶಿಕ್ಷಣ ಇಲಾಖೆ ಕೆಲ ಬದಲಾವಣೆ ಮಾಡಿದೆ. ಏಪ್ರಿಲ್ 9ಕ್ಕೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಎಪ್ರಿಲ್ 10ರಿಂದ ಮೇ.15ರವರೆಗೆ ಬೇಸಿಗೆ ರಜೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮುಂದಿನ ಅಂದ್ರೆ 2022-23 ಶೈಕ್ಷಣಿಕ ವರ್ಷ ಮೇ.16ರಿಂದ ಆರಂಭವಾಗಲಿದೆ.
ಈ ಹಿಂದೆ ಶಾಲಾ ಶೈಕ್ಷಣಿಕ ವರ್ಷವು ಮೇ.29ರಿಂದ ಆರಂಭವಾಗಿ ಎಪ್ರಿಲ್ 10ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ ಈ ಬಾರಿ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬೇಗವೇ ಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮೇ.16ರಿಂದ 2022-23ರ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಕೋವಿಡ್ ಕಾರಣದಿಂದ ನಿರಂತರವಾಗಿ ಭೌತಿಕ ತರಗತಿಗಳು ನಡೆಯದೆ, ಆನ್ ಲೈನ್ ಶಿಕ್ಷಣ ಪರಿಣಾಮಕಾರಿಯಾಗಿಲ್ಲ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಈ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು 'ಕಲಿಕಾ ಚೇತರಿಕಾ ಕಾರ್ಯಕ್ರಮ"ವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಕೋವಿಡ್ ಕಾರಣ 2019-20, 2020-21 ಹಾಗೂ 2021-22 ಈ ಮೂರು ಶೈಕ್ಷಣಿಕ ಸಾಲಿನಲ್ಲಿ ಭೌತಿಕ ತಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ನಿವಾರಿಸಲು ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ ಆಯೋಜಿಸಲು ಕೂಡ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ16ರಿಂದ ಆರಂಭವಾಗಿಲಿದೆ.