ರಾಜಕೀಯ ದ್ವೇಷಕ್ಕಾಗಿ ಎನ್‌ಇಪಿ ರದ್ಧತಿ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಬಿಜೆಪಿ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಈಗಿನ ರಾಜ್ಯ ಸರ್ಕಾರ ಕೇವಲ ರಾಜಕೀಯ ದ್ವೇಷಕ್ಕಾಗಿ ರದ್ದುಪಡಿಸಲು ಹೊರಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ರಾಜಕಾರಣ ಮಾಡುತ್ತಿರುವುದು ದುರ್ದೈವ. ಇದರ ವಿರುದ್ಧ ರಾಜ್ಯದ ಜನತೆ ಕ್ರಾಂತಿಕಾರಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು (ಸೆ.15): ಬಿಜೆಪಿ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಈಗಿನ ರಾಜ್ಯ ಸರ್ಕಾರ ಕೇವಲ ರಾಜಕೀಯ ದ್ವೇಷಕ್ಕಾಗಿ ರದ್ದುಪಡಿಸಲು ಹೊರಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ರಾಜಕಾರಣ ಮಾಡುತ್ತಿರುವುದು ದುರ್ದೈವ. ಇದರ ವಿರುದ್ಧ ರಾಜ್ಯದ ಜನತೆ ಕ್ರಾಂತಿಕಾರಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರಿನಲ್ಲಿ ಗುರುವಾರ ಪೀಪಲ್ಸ್ ಫೋರಂ ಆಫ್ ಕರ್ನಾಟಕ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಈಗಿನ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎನ್‌ಇಪಿ ರದ್ದುಪಡಿಸಲು ತೀರ್ಮಾನಿಸಿದೆ. ಇವರು ಯಾವ ಕ್ಷೇತ್ರದಲ್ಲಿ ಬೇಕಾದರೂ ರಾಜಕಾರಣ ಮಾಡಲಿ, ಆದರೆ ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಸರಿಯಲ್ಲ. ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಮಾಡಿದರೆ ಮಕ್ಕಳ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ. ಮುಖ್ಯಮಂತ್ರಿಗಳು ಎನ್‌ಇಪಿ ಕಲಿಯುವುದಿಲ್ಲ, ಅವರಿಗೆ ಅದರ ಅಗತ್ಯವೂ ಇಲ್ಲ, ಅವರ ಮಕ್ಕಳಿಗೂ ವಯಸ್ಸಾಗಿದೆ. ಈಗ ಎಸ್‌ಇಪಿ ಎಂಬ ಹೊಸ ನೀತಿಯನ್ನು ತರುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಬರೆದಿಟ್ಟುಕೊಳ್ಳಿ.. ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳೂ ಬಿದ್ದು ಹೋಗುತ್ತವೆ: ಬೊಮ್ಮಾಯಿ ವಿಶೇಷ ಸಂದರ್ಶನ
ಬಡವರ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ: ಈಗಾಗಲೇ ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಎನ್‌ಇಪಿ ಶಿಕ್ಷಣವನ್ನು ಬದಲಾಯಿಸುವ ಮೂಲಕ ಬಡವರ ಶಿಕ್ಷಣಕ್ಕೆ ಹೊಡೆತ ನೀಡುತ್ತೀರಿ. ಶ್ರೀಮಂತರ ಮಕ್ಕಳಿಗೆ ಇದರಿಂದ ತೊಂದರೆಯಾಗುವುದಿಲ್ಲ. ಅರ್ಧ ರೊಟ್ಟಿ ತಿಂದು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಡವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದೀರಿ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಅಧ್ಯಯನ ನಡೆಸಿಯೇ ಎನ್‌ಇಪಿ ಜಾರಿಗೊಳಿಸಿದ್ದು: ಎನ್‌ಇಪಿ ರದ್ದುಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಕ್ರೆಡಿಟ್ ಬೇಕಾಗಿಲ್ಲ. ಅವರು ಆಡಳಿತದಲ್ಲೂ ಸಾಧನೆ ಮಾಡಲು ಹೊರಟಿದ್ದಾರೆ. ಆದರೆ ಎನ್‌ಇಪಿ ಶಿಕ್ಷಣದ ಪ್ರಯೋಜನ ಈಗಿನ ಮಕ್ಕಳಿಗೆ ಬೇಕು. ಕೇಂದ್ರದಲ್ಲಿ ಎನ್‌ಇಪಿ ಜಾರಿಗೊಳಿಸುವಂತೆ ಸೂಚಿಸಿದಾಗ ನಾವು ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದಿಲ್ಲ. ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಸಾಧಕ ಬಾಧಕ ಬಗ್ಗೆ ಚರ್ಚಿಸಿಯೇ ಎನ್‌ಇಪಿ ಜಾರಿಗೆ ತಂದಿದ್ದೇವೆ. ಆದರೆ ಈಗ ರಾಜ್ಯ ಸರ್ಕಾರ ಅದರನ್ನು ರದ್ದುಗೊಳಿಸಲು ಹೊರಟಿರುವುದು ಸರ್ವಥಾ ಸರಿಯಲ್ಲ. ಎನ್‌ಇಪಿ ರದ್ದುಗೊಳಿಸಲು ಅಂತಹ ಬೇಡದ ಅಂಶ ಅದರಲ್ಲಿ ಏನಿದೆ ಎಂಬ ನೈಜ ಕಾರಣವನ್ನು ಶಿಕ್ಷಣ ಸಚಿವರು ಜನತೆಯ ಮುಂದಿಡಲಿ ಎಂದು ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು. ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹರಾಪುರ್, ಶಾರದಾ ವಿದ್ಯಾಲಯ ಸಂಚಾಲಕ ಪ್ರೊ.ಎಂ.ಬಿ.ಪುರಾಣಿಕ್, ಸಂಘಟಕರಾದ ರಮೇಶ್ ಕೆ., ಪ್ರೊ.ರಾಜಶೇಖರ್ ಹೆಬ್ಬಾರ್, ರವೀಶ್ ಮತ್ತಿತರರಿದ್ದರು. ಸೆಸ್ ನಿರ್ದೇಶಕ ಡಾ.ಗೌರೀಶ್ ಪ್ರಾಸ್ತಾವಿಕ ಮಾತನಾಡಿದರು.
ಎನ್‌ಇಪಿ ರದ್ದತಿಗೆ ಕೇಂದ್ರವನ್ನು ಕೇಳಿದ್ದಾರಾ?: ರಾಜ್ಯದಲ್ಲಿನ ಎಲ್ಲ ಸಮಸ್ಯೆಗೆ ಪ್ರತಿ ಬಾರಿಯೂ ಕೇಂದ್ರದ ಕಡೆಗೆ ಕೈತೋರಿಸುವ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವೇ ಜಾರಿಗೊಳಿಸಿದ ಎನ್‌ಇಪಿ ರದ್ದುಗೊಳಿಸುವ ವೇಳೆ ಕೇಂದ್ರವನ್ನು ಕೇಳಿದ್ದಾರೆಯೇ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ, ಮಹದಾಯಿ ವಿಚಾರ, ಬರಗಾಲ ವಿಚಾರಗಳಿಗೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು, ನಿಯೋಗ ತೆರಳುತ್ತೇವೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರು, ಎನ್‌ಇಪಿ ರದ್ದತಿ ವಿಚಾರದಲ್ಲಿ ಮಾತ್ರ ಕೇಂದ್ರ ಸರ್ಕಾರದ ಜತೆ ಮಾತನಾಡುತ್ತೇನೆ ಎನ್ನುತ್ತಿಲ್ಲ ಯಾಕೆ?
ಹಳೆ ಸಿದ್ದರಾಮಯ್ಯ ಆಗಿದ್ದರೆ ಅವರು ಎನ್‌ಇಪಿ ಒಪ್ಪಿಕೊಳ್ಳುತ್ತಿದ್ದರು. ಅವರ ವಾತಾವರಣದಲ್ಲಿ ಈಗ ಹೊಸ ಚಿಂತನೆಗೆ ಅವಕಾಶ ಇಲ್ಲ. ಸ್ಥಾಪಿತ ವ್ಯವಸ್ಥೆಯಲ್ಲಿ ಜೋರಾಗಿ ಜೋರಾಗಿ ಮಾತನಾಡುವ ಮೂಲಕ ನಾವೇ ಹೊಸತನದ ಪ್ರತಿಪಾದಕರು ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಜನಪರವಾದ ರಾಜಕಾರಣ ಮಾಡಿದರೆ ಮಾತ್ರ ಜನತೆ ನಿಮ್ಮ ಹಿಂದೆ ಇರುತ್ತಾರೆ, ಇಲ್ಲದಿದ್ದರೆ, ಜನರ ಕ್ರಾಂತಿ ಎದುರು ರಾಜಶಕ್ತಿ ನಿಲ್ಲವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಕಿವಿ ಮಾತು ಹೇಳಿದರು.
ಕಾಂಗ್ರೆಸ್ ಸರ್ಕಾರ ಸುಪ್ರೀಂಗೆ ಹೋಗುವ ಬದಲು ಸ್ಟಾಲಿನ್ ಮನವೊಲಿಸಲಿ: ಬೊಮ್ಮಾಯಿ
ಹಿಂದಿನ ಸರ್ಕಾರ ಜಾರಿಗೊಳಿಸಿದ ಎನ್‌ಇಪಿಯನ್ನು ಪೂರ್ತಿ ತೆಗೆದುಹಾಕಲು ಈಗಿನ ಸರ್ಕಾರದಿಂದ ಸಾಧ್ಯವೂ ಇಲ್ಲ. ಎನ್‌ಇಪಿ ಬದಲು ಎಸ್‌ಇಪಿ ಎಂದು ಹೆಸರು ಬದಲಾಯಿಸಬಹುದಷ್ಟೆ. ಎನ್‌ಇಪಿಯಲ್ಲಿ ಇರುವುದನ್ನು ಏನು ತೆಗೆದುಹಾಕಬೇಕು ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ, ತೆಗೆದುಹಾಕುವಂಥದ್ದು ಅದರಲ್ಲಿ ಏನೂ ಇಲ್ಲ, ಎಲ್ಲವೂ ಭವಿಷ್ಯದ ವಿದ್ಯಾರ್ಥಿಗಳನ್ನು ರೂಪಿಸಿ ರಚಿಸಲಾಗಿದೆ. ಇದನ್ನು ರದ್ದುಗೊಳಿಸಲು ಹೊರಟರೆ ರಾಜ್ಯಕ್ಕೆ ರಾಜ್ಯವೇ ಸಿಡಿದೆದ್ದು ಹೋರಾಟಕ್ಕೆ ಇಳಿದಾಗ ಮಾತ್ರ ಸರ್ಕಾರಕ್ಕೆ ಅರ್ಥವಾಗುತ್ತದೆ.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಕರ್ನಾಟಕ