Asianet Suvarna News Asianet Suvarna News

ಬರೆದಿಟ್ಟುಕೊಳ್ಳಿ.. ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳೂ ಬಿದ್ದು ಹೋಗುತ್ತವೆ: ಬೊಮ್ಮಾಯಿ ವಿಶೇಷ ಸಂದರ್ಶನ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ವರಿಷ್ಠರು ದೆಹಲಿಯಿಂದಲೇ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯ ನಾಯಕರಿಗೆ ಅದರ ಬಗ್ಗೆ ಮಾಹಿತಿಯೂ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮುಖಾಮುಖಿಯಾದಾಗ...

Former CM Basavaraj Bommai Exclusive Interview gvd
Author
First Published Sep 14, 2023, 4:24 AM IST

ವಿಜಯ್ ಮಲಗಿಹಾಳ

ಬೆಂಗಳೂರು (ಸೆ.14): ವಿಧಾನಸಭಾ ಚುನಾವಣೆ ಮುಗಿದು ನಾಲ್ಕು ತಿಂಗಳಾದರೂ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಒಂದು ರೀತಿಯ ಪ್ರಕ್ಷುಬ್ಧತೆಯ ವಾತಾವರಣ ಇದೆ. ಯಾವುದೂ ವ್ಯವಸ್ಥಿತವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ದರೂ ಹೊಸಬರ ನೇಮಕ ಆಗಿಲ್ಲ. ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರಬೇಕಾದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೂ ಆಗಿಲ್ಲ. ಇದರ ನಡುವೆಯೇ ಬಜೆಟ್ ಅಧಿವೇಶನವನ್ನೂ ಬಿಜೆಪಿ ಶಾಸಕರು ಎದುರಿಸಿದ್ದಾರೆ. ಇದೇ ವೇಳೆ ಬಿಜೆಪಿಯಲ್ಲಿನ ಅಸಮಾಧಾನಿತ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನವೂ ಗಂಭೀರವಾಗಿ ನಡೆಯುತ್ತಿಲ್ಲ. ಇದೆಲ್ಲದರ ಮಧ್ಯೆ ಈಗ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ವರಿಷ್ಠರು ದೆಹಲಿಯಿಂದಲೇ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯ ನಾಯಕರಿಗೆ ಅದರ ಬಗ್ಗೆ ಮಾಹಿತಿಯೂ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮುಖಾಮುಖಿಯಾದಾಗ...

* ವಿಧಾನಸಭಾ ಚುನಾವಣೆ ಮುಗಿದು ನಾಲ್ಕು ತಿಂಗಳಾಗಿದೆ. ಬಿಜೆಪಿ ಯಾವ ಹಂತಕ್ಕೆ ಬಂದು ತಲುಪಿದೆ?
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಇವತ್ತು ಇಡೀ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಹಂತ ಹಂತವಾಗಿ ಜನಮನ್ನಣೆ ಗಳಿಸಿಕೊಂಡು ಬಂದಿದೆ. ಅನೇಕ ಸೋಲು ಮತ್ತು ಗೆಲುವುಗಳನ್ನು ಕಂಡಿದೆ. ಯಾವಾಗ ಯಾವಾಗ ಸೋತಿದೆಯೋ ಮತ್ತೆ ಪುಟಿದೆದ್ದಿದೆ. 2004ರ ಚುನಾವಣೆಯಲ್ಲಿ ನಮಗೆ ಹಿನ್ನಡೆ ಉಂಟಾಯಿತು. ಬಳಿಕ 2008ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದೆವು. ಮುಂದೆ 2013ರಲ್ಲಿ ಸೋಲುಂಟಾಯಿತು. ನಂತರ 2018ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆವು. ಕರ್ನಾಟಕದಲ್ಲಿ ಬಿಜೆಪಿ ಸಂಘಟನೆ ಬಲವಾಗಿದೆ. ನಾಲ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಹುಸಿಯಾಯಿತು. ಈಗ ಮತ್ತೆ ಲೋಕಸಭಾ ಚುನಾವಣೆಗೆ ಸಿದ್ಧತೆ ಭರದ ಸಿದ್ಧತೆ ಆರಂಭಿಸಿದ್ದೇವೆ.

ತಮಿಳುನಾಡಿಗೆ ನೀರು ಹರಿಸಿದರೆ ರೈತರಿಗೆ ಅನ್ಯಾಯ ಮಾಡಿದಂತೆ: ಬೊಮ್ಮಾಯಿ ಕಿಡಿ

* ಕಾಂಗ್ರೆಸ್‌ನ ಗ್ಯಾರಂಟಿಗಳ ಹೊಡೆತಕ್ಕೆ ಬಿಜೆಪಿ ಸದ್ದು ಅಡಗಿದಂತಾಗಿದೆ?
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟರು. ಆದರೆ, ಕಾಂಗ್ರೆಸ್‌ನವರು ಇಡೀ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಅಭಿವೃದ್ಧಿಗೆ ಬಿಡಿಗಾಸು ಕೂಡ ಬಿಡುಗಡೆ ಆಗುತ್ತಿಲ್ಲ. ಅಂಥದ್ದರಲ್ಲಿ ವರ್ಗಾವಣೆ ದಂಧೆ ನಡೆಸುವ ಮೂಲಕ ಬಹಿರಂಗ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದಾರೆ. ಮಾನ ಮರ್ಯಾದೆ ಇಲ್ಲದೆ ಭ್ರಷ್ಟಾಚಾರ ನಡೆಯುತ್ತಿದೆ. ನವೆಂಬರ್-ಡಿಸೆಂಬರ್ ವೇಳೆಗೆ ಈ ಸರ್ಕಾರದ ಪರಿಸ್ಥಿತಿ ಅಧೋಗತಿಯಾಗುತ್ತದೆ. ನೀವು ಬರೆದಿಟ್ಟುಕೊಳ್ಳಿ. ಎಲ್ಲ ಗ್ಯಾರಂಟಿಗಳೂ ಬಿದ್ದು ಹೋಗುತ್ತವೆ. ರಾಜ್ಯದ ಜನರಿಗೆ ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ಮೋಸದಿಂದ ಭ್ರಮನಿರಸವಾಗುವುದು ಗ್ಯಾರಂಟಿ.

* ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಮೇಲೆ ಮುನಿಸಿಕೊಂಡಿದ್ದಾರಂತೆ?
ನಾನು ಜೆ.ಪಿ.ನಡ್ಡಾ, ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ಮುನಿಸಿಕೊಂಡಿಲ್ಲ. ಆದರೆ, ಚುನಾವಣೆ ವೇಳೆ ಕರ್ನಾಟಕದಲ್ಲಿ ನಮ್ಮ ಪರವಾಗಿ ಬಹಳ ಒಳ್ಳೆಯ ವಾತಾವರಣ, ಪ್ರತಿಕ್ರಿಯೆ ಇತ್ತು. ಎಲ್ಲಿ ಎಡವಿದೆವು ಎಂಬ ಚಿಂತನೆ ಅವರಲ್ಲಿ ಕಂಡು ಬಂತು.

* ಒಂದು ಪ್ರಬಲ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ನಾಯಕರಿಗೆ ಒಂದು ರಾಜ್ಯದ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವುದು ಅಷ್ಟು ದೊಡ್ಡ ಕೆಲಸವೇ?
ಇದೇನು ದೊಡ್ಡ ವಿಷಯ ಅಲ್ಲ. ಆದರೆ, ವರಿಷ್ಠರು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಎರಡೂ ಸ್ಥಾನಗಳನ್ನು ಒಟ್ಟಿಗೆ ಮಾಡಬೇಕು ಎಂಬ ಕಾರಣಕ್ಕಾಗಿ ವಿಳಂಬವಾಗಿದೆ. ಅತಿ ಶೀಘ್ರದಲ್ಲಿ ಎರಡೂ ನೇಮಕಗಳ ನಿರ್ಣಯ ಆಗಲಿದೆ.

* ವಿಧಾನಸಭಾ ಚುನಾವಣೆಯಲ್ಲಿ ನಾವು ಅಪಮಾನ ಅನುಭವಿಸಿದ್ದೇವೆ. ಈಗ ರಾಜ್ಯ ನಾಯಕರೂ ಕೆಲಕಾಲ ಅಪಮಾನ ಅನುಭವಿಸಲಿ ಎಂಬ ಧೋರಣೆ ಹೈಕಮಾಂಡ್‌ಗೆ ಇದ್ದಂತಿದೆ?
ಆ ರೀತಿಯ ಧೋರಣೆ ಏನೂ ಇಲ್ಲ. ವರಿಷ್ಠರೇನೂ ಸೋಲು ಗೆಲುವು ನೋಡಿರುವುದಿಲ್ಲವೇ? ಯಾವ ರಾಜ್ಯದಲ್ಲಿ ಪಕ್ಷ ಸೋತಿದೆಯೋ ಅಲ್ಲಿ ಗೆಲುವು ಕೂಡ ಸಾಧಿಸಿದೆ. ಕರ್ನಾಟಕದಲ್ಲಿಯೂ ಸೋತು ಗೆದ್ದ ಉದಾಹರಣೆಯಿದೆ. ಇದೇನೂ ಹೊಸದಲ್ಲ.

* ಮಾಜಿ ಮುಖ್ಯಮಂತ್ರಿಯಾಗಿರುವ ನೀವು ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಯಲ್ಲವೇ?
ಇಲ್ಲ. ನಾನು ಇದನ್ನುಮೊದಲೇ ಸ್ಪಷ್ಟಪಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಯಾರನ್ನೇ ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದರೂ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ.

* ನಿಮ್ಮ ನೇತೃತ್ವದಲ್ಲೇ ಚುನಾವಣೆಯಲ್ಲಿ ಸೋಲುಂಟಾಗಿದೆ. ಹೀಗಾಗಿ, ನಿಮಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡಬಾರದು ಎಂಬ ಕೂಗು ಕೇಳಿಬರುತ್ತಿದೆ?
ನಾನು ಈ ಸ್ಥಾನದ ಆಕಾಂಕ್ಷಿಯೇ ಅಲ್ಲ ಎಂದ ಮೇಲೆ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ.

* ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ರಾಜ್ಯ ಬಿಜೆಪಿ ನಾಯಕರಿಗೆ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿದೆ?
ಪ್ರೀತಿ ಅಲ್ಲ. ಪ್ರೀತಿ ಪ್ರಶ್ನೆಯೇ ಇಲ್ಲ. ಚುನಾವಣಾ ಪೂರ್ವದ ರಾಜಕಾರಣದ ಮಜಲುಗಳು ಚುನಾವಣೆಯ ಬಳಿಕ ಅದೇ ರೀತಿ ಇರುವುದಿಲ್ಲ. ಬದಲಾಗುತ್ತಿರುತ್ತವೆ. ರಾಜ್ಯದ ಈ ಅನಿಷ್ಟ ಸರ್ಕಾರ, ಭ್ರಷ್ಟ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ಹೀಗಾಗಿ, ಎಲ್ಲೆಲ್ಲಿ ಸಾಧ್ಯ ಇದೆಯೋ ಅಲ್ಲಿ ಕೂಡಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಒಂದು ವ್ಯತ್ಯಾಸವಿದೆ. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಬಾರಿ ಒಟ್ಟಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಒಂದು ಬಾರಿ ಒಟ್ಟಾಗಿದ್ದು ಅಧಿಕಾರ ಹಿಡಿಯುವುದಕ್ಕಾಗಿ. ಅಂದರೆ, ಸರ್ಕಾರ ರಚಿಸುವುದಕ್ಕಾಗಿ. ಈಗ ನಾವು ವಿರೋಧ ಪಕ್ಷದಲ್ಲಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಶಾಸಕರ ಸಂಖ್ಯೆ ಸೇರಿದರೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಜನರಿಗೆ ಅನ್ಯಾಯ ಆಗಬಾರದು, ಎರಡೂ ಪಕ್ಷಗಳು ಸೇರಿ ಕೆಲಸ ಮಾಡಿದರೆ ಪ್ರಬಲವಾಗಿ ಜನರ ಧ್ವನಿಯಾಗಬಹುದು ಎಂಬ ಸದುದ್ದೇಶವಿದೆ.

* ಬಿಜೆಪಿ ನಾಯಕರಿಗೆ ಏಕಾಂಗಿಯಾಗಿ ಹೋರಾಟ ನಡೆಸುವ ಸಾಮರ್ಥ್ಯ ಕುಗ್ಗಿದೆಯೇ?
ನೋಡಿ, ಇದನ್ನು ಯಾವ ರೀತಿ ಬೇಕಾದರೂ ವಿಶ್ಲೇಷಣೆ ಮಾಡಬಹುದು. ನಮ್ಮ ಶಕ್ತಿಯಂತೂ ಇದ್ದೇ ಇದೆ. ಆ ಶಕ್ತಿಗೆ ಮತ್ತೊಂದು ಶಕ್ತಿ ಸೇರುತ್ತದೆ ಎಂದರೆ ರಾಜಕಾರಣಲ್ಲಿ ಯಾರು ಬೇಡ ಎನ್ನುತ್ತಾರೆ. ಇದರರ್ಥ ನಮ್ಮ ಶಕ್ತಿ ಕುಂದಿದೆ ಎಂದಲ್ಲ. ಇದು ಸಕಾರಾತ್ಮಕ ರಾಜಕಾರಣ.

* ಕಳೆದ ನಾಲ್ಕು ತಿಂಗಳ ಅವಧಿಯನ್ನು ಗಮನಿಸಿದರೆ ಬಿಜೆಪಿ ನಾಯಕರು ಎಚ್‌.ಡಿ.ಕುಮಾರಸ್ವಾಮಿ ರೀತಿ ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಆಪಾದನೆ ಮಾಡುವಲ್ಲಿ ವಿಫಲವಾಗಿದ್ದಾರಲ್ಲವೇ?
ಹಾಗೇನಿಲ್ಲ. ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಿದ್ದನ್ನು ನಾನೇ ಮೊದಲು ಪ್ರಸ್ತಾಪ ಮಾಡಿದೆ. ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತಿದ್ದೇವೆ. ಬರಗಾಲದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು ಬಿಜೆಪಿ ನಾಯಕರು. ಕೆಲವು ವಿಷಯಗಳನ್ನು ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆ. ಇನ್ನು ಕೆಲವು ವಿಷಯಗಳನ್ನು ನಾವು ಪ್ರಸ್ತಾಪಿಸಿದ್ದೇವೆ. ವಿಷಯಾಧಾರಿತ ಹೋರಾಟ ಮಾಡುತ್ತಿದ್ದೇವೆ.

* ಅನೇಕ ವಿಷಯಗಳನ್ನು ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ ಬಳಿಕ ಬಿಜೆಪಿ ನಾಯಕರು ಅದನ್ನು ಪುನರುಚ್ಚರಿಸುವ ಕೆಲಸ ಮಾಡುತ್ತಿದ್ದಾರೆ?
ಇಲ್ಲ..ಇಲ್ಲ..ಎಷ್ಟೋ ವಿಷಯಗಳನ್ನು ನಾವು ಮೊದಲು ಬಯಲು ಮಾಡಿದ್ದೇವೆ. ಪ್ರತಿಪಕ್ಷ ಸ್ಥಾನದಲ್ಲಿದ್ದುಕೊಂಡು ಎರಡೂ ಪಕ್ಷಗಳು ಪೈಪೋಟಿಯಲ್ಲಿ ಹೋರಾಟ ಮಾಡುವುದರಿಂದ ಜನರಿಗೇ ಒಳ್ಳೆಯದಲ್ಲವೆ. ಇದರಲ್ಲಿ ತಪ್ಪೇನಿದೆ ಹೇಳಿ.

* ಬಿಜೆಪಿ ನಾಯಕರು ತಮ್ಮ ವಿರುದ್ಧದ ಹಗರಣಗಳು ಬಯಲಾಗಬಹುದು ಎಂಬ ಭಯದಿಂದ ರಾಜ್ಯ ಸರ್ಕಾರದ ವಿರುದ್ಧ ನೇರ ಆರೋಪ ಮಾಡದೆ ಕುಮಾರಸ್ವಾಮಿಯೇ ಪ್ರಸ್ತಾಪಿಸಲಿ ಎಂದು ಕಾಯುತ್ತಿರುತ್ತಾರಂತೆ?
ನಾವು ಬಹಳ ಸ್ಪಷ್ಟವಾಗಿ ಯಾವುದೇ ತನಿಖೆ ನಡೆಸಿದರೂ ಅದನ್ನು ಎದುರಿಸುತ್ತೇವೆ ಎಂದು ಹೇಳಿದ್ದೇವೆ. ಭಯಪಡುವ ಅಥವಾ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ವಿಚಾರಣಾ ಆಯೋಗಗಳನ್ನು ರಚಿಸಿದೆ. ಅವು ರಾಜಕೀಯ ಪ್ರೇರಿತ ವಿಚಾರಣೆ ಎಂಬುದು ನಮಗೆ ಗೊತ್ತಿದೆ. ಅದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧರಿದ್ದೇವೆ. ರಾಜಕಾರಣದಲ್ಲಿ ನಾವೇನು ಹೊಸಬರೇ? ಇಷ್ಟು ವರ್ಷಗಳ ಕಾಲ ರಾಜಕೀಯ ಮಾಡಿದ್ದೇವೆ. ಕಾಂಗ್ರೆಸ್ ನಾಯಕರ ಮೇಲೆ ಎಷ್ಟು ಆರೋಪಗಳಿವೆ, ಎಷ್ಟು ಪ್ರಕರಣಗಳಿವೆ ಎಂಬುದು ಗೊತ್ತಿದೆ. ಇವರೇನು ಸತ್ಯ ಹರಿಶ್ಚಂದ್ರರಲ್ಲ.

* ಕಾಂಗ್ರೆಸ್‌ ಸರ್ಕಾರದ ಹನಿಮೂನ್ ಪಿರಿಯಡ್ ಮುಗಿದಿದೆಯೇ?
ಇವರು ಹನಿಮೂನ್ ಪಿರಿಯಡ್‌ನಲ್ಲೇ ಭ್ರಷ್ಟಾಚಾರ ಮಾಡಲು ಆರಂಭಿಸಿದ್ದಾರೆ. ಮೊದಲ ದಿನದಿಂದಲೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆ ಪಕ್ಷದ ಶಾಸಕರೇ ತಿರುಗಿ ಬೀಳುತ್ತಿದ್ದಾರೆ.

* ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ವಲಸೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಇದು ಆಪರೇಷನ್ ಹಸ್ತವೋ ಅಥವಾ ಬಿಜೆಪಿಯಲ್ಲಿನ ಅಸಮಾಧಾನವೋ?
ಒಂದು ಚುನಾವಣೆ ನಡೆದ ಬಳಿಕ ಸ್ವಲ್ಪ ರಾಜಕೀಯ ಪ್ರಕ್ಷುಬ್ಧತೆ ಇದ್ದೇ ಇರುತ್ತದೆ. ಅಧಿಕಾರದ ಸೆಳೆತ ಇದ್ದೇ ಇರುತ್ತದೆ. ಅವರವರ ಕ್ಷೇತ್ರದ ಹಿನ್ನೆಲೆಯಲ್ಲಿ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ. ಬಗೆಹರಿಯಲಾರದಂಥ ಸಮಸ್ಯೆ ಏನೂ ಇಲ್ಲ. ಎಲ್ಲವೂ ಸರಿಯಾಗುತ್ತದೆ. ಯಾರೂ ಪ್ರಮುಖರು ಪಕ್ಷ ತೊರೆದು ಹೋಗುವುದಿಲ್ಲ ಎಂಬ ವಿಶ್ವಾಸ ನಮಗಿದೆ.

* ರಾಜ್ಯ ಬಿಜೆಪಿಯಲ್ಲಿ ಪ್ರಬಲ ನಾಯಕತ್ವದ ಕೊರತೆ ಕಾರಣಕ್ಕಾಗಿ ನಾವು ನಮ್ಮ ಭವಿಷ್ಯದ ರಾಜಕಾರಣಕ್ಕಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂಬ ಮಾತನ್ನು ಹಲವು ಶಾಸಕರು, ಮುಖಂಡರು ವಿಶೇಷವಾಗಿ ವಲಸೆ ಬಂದವರು ಆಂತರಿಕವಾಗಿ ಹೇಳುತ್ತಿದ್ದಾರೆ?
ಅಂಥ ಮುಖಂಡರೊಂದಿಗೆ ಯಡಿಯೂರಪ್ಪ, ನಾನು ಸೇರಿದಂತೆ ಪಕ್ಷದ ನಾಯಕರು ಮಾತನಾಡಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ.

* ಈಗಲೂ ರಾಜ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತೇ ನಡೆಯುತ್ತದೆಯಂತೆ ಹೌದೇ?
ಕರ್ನಾಟಕದಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು. ಅವರದೇ ಆದಂಥ ತ್ಯಾಗ, ಶ್ರಮವಿದೆ. ಹೀಗಾಗಿ, ಯಡಿಯೂರಪ್ಪ ಮಾತಿಗೇ ಯಾವಾಗಲೂ ಗೌರವ ಇದ್ದೇ ಇರುತ್ತದೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ. ಯಡಿಯೂರಪ್ಪನವರು ಯಡಿಯೂರಪ್ಪನವರೇ.

* ಯಡಿಯೂರಪ್ಪ ಅವರು ಕೆಲದಿನಗಳ ಮೌನದ ಬಳಿಕ ಮತ್ತೆ ಕ್ರಿಯಾಶೀಲವಾಗಿರುವುದಕ್ಕೂ ಮತ್ತು ಅವರ ಪುತ್ರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿಬರುತ್ತಿರುವುದಕ್ಕೂ ಸಂಬಂಧ ಇದೆಯೇ?
ಅವರು ಎಲ್ಲಿಯೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ಜನರಿಗೆ ತೊಂದರೆ ಆಗುತ್ತಿದೆ ಎಂಬ ಕಾರಣಕ್ಕಾಗಿ ಪಕ್ಷವನ್ನು ಪುನರ್‌ಸಂಘಟನೆ ಮಾಡಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ. ಅವರ ಸ್ವಭಾವವೇ ಹೋರಾಟ ಮಾಡುವಂಥದ್ದು. ಸುಮ್ಮನೆ ಕೂಡುವವರಲ್ಲ. ಅವರ ಛಲ ಮತ್ತು ಹೋರಾಟ ಅಂತರ್ಗತವಾಗಿದ್ದು.

* ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ನಡೆಯುತ್ತಿದೆ. ಬಿಜೆಪಿಗೆ ಅಂಥ ಅನಿವಾರ್ಯತೆ ಎದುರಾಗಿದೆಯೇ?
ಅನಿವಾರ್ಯತೆ ಪ್ರಶ್ನೆ ಅಲ್ಲ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡಬಾರದು ಎಂಬ ಕಾರಣಕ್ಕಾಗಿ ಮೈತ್ರಿ ಮಾತುಕತೆ ನಡೆದಿದೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವುದೇ ಮೈತ್ರಿಯ ಸ್ಪಷ್ಟ ಉದ್ದೇಶ. ಇದೊಂದು ರಾಜಕೀಯ ನಿರ್ಣಯ.

* ಜೆಡಿಎಸ್‌ ಜತೆಗಿನ ಸ್ಥಾನ ಹೊಂದಾಣಿಕೆ ಸಮಸ್ಯೆ ಉಂಟು ಮಾಡುವುದಿಲ್ಲವೇ?
ಸಮಸ್ಯೆಯೇನೂ ಉಂಟಾಗುವುದಿಲ್ಲ. ಅದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಮಾತುಕತೆ ಮೂಲಕ ವಸ್ತುಸ್ಥಿತಿ ಆಧಾರದ ಮೇಲೆ ಮತ್ತು ಗೆಲುವಿನ ಆಧಾರದ ಮೇಲೆ ತೀರ್ಮಾನಿಸುತ್ತಾರೆ.

* ಕೇಂದ್ರದಲ್ಲಿ ಸತತವಾಗಿ ಎರಡು ಬಾರಿ ಅಧಿಕಾರದ ಗದ್ದುಗೆ ಹಿಡಿದಿರುವ, ರಾಜ್ಯದಲ್ಲೂ ಬಲವಾದ ಸಂಘಟನೆ ಹೊಂದಿರುವ ಬಿಜೆಪಿಗೆ ಜೆಡಿಎಸ್‌ ಜತೆ ಕೈಜೋಡಿಸುವಂಥ ದುಸ್ಥಿತಿ ಯಾಕೆ ಬಂತು?
ದುಸ್ಥಿತಿ ಎನ್ನುವುದೇ ಮಾನಸಿಕತೆ. ದುಸ್ಥಿತಿ ಅಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತೆಗೆದುಕೊಳ್ಳಬೇಕಾಗಿರುವ ನಿರ್ಣಯ ಇದು.

ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್‌ ವಿರುದ್ಧ ರೇವಣ್ಣ ವಾಗ್ದಾಳಿ

* ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಒಟ್ಟಾಗಿ ಎದುರಿಸಿದರೂ ಪ್ರಯೋಜನವಾಗಲಿಲ್ಲ ಎಂಬುದು ನಿಮ್ಮ ಕಣ್ಣ ಮುಂದಿದೆ. ಈಗ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಯಶಸ್ವಿಯಾಗುವ ಯಾವ ವಿಶ್ವಾಸವಿದೆ?
ರಾಜ್ಯದಲ್ಲಿ 1996ರಿಂದ ಲೋಕಸಭಾ ಚುನಾವಣೆ ನೋಡಿದರೆ ವಿಧಾನಸಭಾ ಚುನಾವಣೆಯಲ್ಲಿ ಕಡಮೆ ಸ್ಥಾನ ಗಳಿಸಿದಾಗಲೂ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸಾಕಷ್ಟು ಬದಲಾವಣೆಯಾಗುತ್ತದೆ. ಹೀಗಾಗಿ, ಈ ಬಾರಿ ನಮಗೆ ಈ ಮೈತ್ರಿ ಅನುಕೂಲವಾಗಲಿದೆ ಎಂಬ ವಿಶ್ವಾಸ ನಮಗಿದೆ.

* ಜೆಡಿಎಸ್‌ ಜತೆಗಿನ ಮೈತ್ರಿ ಕುರಿತಂತೆ ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕರನ್ನು ದೂರ ಇಟ್ಟಂತಿದೆ?
ಆ ರೀತಿ ಏನೂ ಇಲ್ಲ. ಇದು ಆರಂಭಿಕ ಹಂತ ಆರಂಭವಾಗಿದೆ. ವಿವರಗಳನ್ನು ತೆಗೆದುಕೊಳ್ಳುವಾಗ ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಮ್ಮ ಅಭಿಪ್ರಾಯ ಕೇಳುತ್ತಾರೆ. ಸಮಾಲೋಚನೆ ನಡೆಸುತ್ತಾರೆ. ಸಮಯ ಬಂದಾಗ ಸಂಪರ್ಕಿಸುತ್ತೇವೆ ಎಂದಿದ್ದಾರೆ. ಇನ್ನೂ ಆ ಸಮಯ ಬಂದಿಲ್ಲ.

Follow Us:
Download App:
  • android
  • ios