Asianet Suvarna News Asianet Suvarna News

2030ರೊಳಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಾಧ್ಯತೆ: ಬಿ.ಸಿ. ನಾಗೇಶ್‌

ಇಂದಿನ ಶಿಕ್ಷಣ ಜನರಿಗೆ ಉದ್ಯೋಗವನ್ನು ನೀಡುವಲ್ಲಿ ಸಫಲವಾಗಿದೆ ಆದರೆ ನೆಮ್ಮದಿಯ ಜೀವನಕ್ಕೆ ಅಡಿಪಾಯವಾಗುತ್ತಿಲ್ಲ. ಇದಕ್ಕಾಗಿ ನೂತನ ನೀತಿಯ ಅಗತ್ಯವಿದೆ ಎಂದ ಬಿ.ಸಿ. ನಾಗೇಶ್‌ 

National Education Policy Likely to be Implemented by 2030 Says BC Nagesh grg
Author
First Published Sep 17, 2022, 11:44 AM IST

ಬೆಳ್ತಂಗಡಿ(ಸೆ.17):  ಶಿಕ್ಷಣ ಕ್ಷೇತ್ರದ ಮಹತ್ತರ ಬದಲಾವಣೆಯ ಉದ್ದೇಶದಿಂದ ರೂಪಿಸಲಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಾಕಷ್ಟು ಸಮೀಕ್ಷೆ, ಪರಿಶೀಲನೆಗಳು ನಡೆಯುತ್ತಿದ್ದು ಯಾವುದೇ ವರ್ಗದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇದನ್ನು ರೂಪಿಸಲಾಗುವುದು. ಈ ಬಗ್ಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದು ಇದು 2030ರ ಒಳಗೆ ಜಾರಿಗೊಳ್ಳುವ ಸಂಭವವಿದೆ. ಇಂದಿನ ಶಿಕ್ಷಣ ಜನರಿಗೆ ಉದ್ಯೋಗವನ್ನು ನೀಡುವಲ್ಲಿ ಸಫಲವಾಗಿದೆ ಆದರೆ ನೆಮ್ಮದಿಯ ಜೀವನಕ್ಕೆ ಅಡಿಪಾಯವಾಗುತ್ತಿಲ್ಲ. ಇದಕ್ಕಾಗಿ ನೂತನ ನೀತಿಯ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಇಲಾಖೆಯ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಅವರು ಶುಕ್ರವಾರ ಉಜಿರೆಯ ಸಿದ್ಧವನ ಗುರುಕುಲದಲ್ಲಿ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಜರುಗಿದ ಜಿಲ್ಲಾಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದರು.

National Education Policy ಯಲ್ಲಿ ಪ್ರಾಯೋಗಿಕತೆ, ಕೌಶಲ್ಯ ಕಲಿಕೆಗೆ ಒತ್ತು: ಅಶ್ವತ್ಥನಾರಾಯಣ

ಸಮಾವೇಶ ಉದ್ಘಾಟಿಸಿದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗಕ್ಕೆ ಸರಿಯಾಗಿ ಶಿಕ್ಷಕರು ತಮ್ಮ ಜ್ಞಾನವನ್ನುಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ವೇಗವಾಗಿರುವುದರಿಂದ, ಮಕ್ಕಳನ್ನು ಹಗುರವಾಗಿ ತೆಗೆದುಕೊಳ್ಳಲಾಗದು. ಹೀಗಾಗಿ ಶಿಕ್ಷಕರು ಸದಾ ಅಧ್ಯಯನ ಶೀಲರಾಗುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅದರದೇ ಆದ ವಿಶೇಷ ಮಹತ್ವವಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ವ್ಯಾಪಾರ ಮನೋಭಾವದಿಂದ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಸವಾಲುಗಳನ್ನು ಎದುರಿಸುವ ಶಕ್ತಿಯೊಂದಿಗೆ ಮೌಲ್ಯಗಳನ್ನು ಅಳವಡಿಸಿಕೊಂಡು ಪರಿಕಲ್ಪನೆಗೆ ತಕ್ಕ ಶಿಕ್ಷಣ ನೀಡಬೇಕು. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆಗಳಿಗೆ ಬೇಕಾದ ಅಗತ್ಯ ತರಬೇತಿ ನೀಡುವ ಕೆಲಸವಾಗಬೇಕು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಿ.ಡಿ. ಜಯಣ್ಣ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್‌. ಸತೀಶ್‌ಚಂದ್ರ, ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್‌ ಚೌಟ, ಉಪನಿರ್ದೇಶಕರ ಕಚೇರಿಯ ಶಾಖಾಧಿಕಾರಿ ನಿತಿನ್‌, ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಸುಧೀರ್‌, ವಿನಾಯಕ, ಬಿಇಒ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

ಪ್ರಾಂಶುಪಾಲರದ ಸಂಘದ ಅಧ್ಯಕ್ಷ ಕೆ.ಎನ್‌. ಗಂಗಾಧರ ಆಳ್ವ ಸ್ವಾಗತಿಸಿದರು. ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ದೀಕ್ಷಿತ್‌ ರೈ ಹಾಗೂ ಮಹಾವೀರ ಜೈನ್‌ ಕಾರ್ಯಕ್ರಮ ನಿರೂಪಿಸಿದರು.
ಸಚಿವ ಬಿ.ಸಿ. ನಾಗೇಶ್‌ ಅವರು ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಶಿಕ್ಷಣ ಸಚಿವರನ್ನು ಗೌರವಿಸಿದರು.

ಪಿಯು ಕಾಲೇಜುಗಳಲ್ಲಿ ಡಿಸೆಂಬರ್‌ ಬಳಿಕ NEP ಪಠ್ಯಕ್ರಮ: BC Nagesh

ತುಳು ಭಾಷೆಯನ್ನು ಬೋಧಿಸಲಾಗುತ್ತಿರುವ 43 ಪ್ರೌಢಶಾಲೆಗಳ ಶಿಕ್ಷಕರಿಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಧನ ನೀಡಲಾಗುತ್ತಿದೆ. ಆದರೆ ಇದೀಗ ಈ ವಿಷಯವನ್ನು ಕೆಲವು ಶಾಲೆಗಳಲ್ಲಿ ಕೈಬಿಡುವ ಸ್ಥಿತಿ ಏರ್ಪಟ್ಟಿದೆ. ಸರ್ಕಾರ ತುಳು ಭಾಷೆ ಬೋಧನೆಗೆ ಗೌರವ ಶಿಕ್ಷಕರನ್ನು ನೇಮಿಸುವಂತೆ ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು.

ಕೋವಿಡ್‌ ವೇಳೆ 240ಕ್ಕಿಂತ ಅಧಿಕ ತರಗತಿ ನಡೆಸಿದ್ದ ಚಿತ್ರದುರ್ಗ ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮಂಜುನಾಥ ತುಂಬಿನಕಟ್ಟೆಅವರು ಕೋವಿಡ್‌ನಿಂದ ಮೃತಪಟ್ಟಿದ್ದು ಸರ್ಕಾರದಿಂದ ಅವರಿಗೆ ಯಾವುದೇ ಸಹಾಯ ಸಿಕ್ಕಿಲ್ಲ. ಹಾಗೂ ಪೆನ್ಶನ್‌ ಸ್ಕೀಂಗೂ ಒಳಪಟ್ಟಿಲ್ಲ, ಮೃತರ ಪತ್ನಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗವನ್ನು ನೀಡಲಾಗಿಲ್ಲ. ಇಬ್ಬರು ಹೆಣ್ಣು ಮಕ್ಕಳಿರುವ ಈ ಕುಟುಂಬ ತೀರಾ ಸಂಕಷ್ಟದಲ್ಲಿದೆ. ಈ ಕುಟುಂಬಕ್ಕೆ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ 1,25,000 ರು. ನಗದು ಸಹಾಯಧನ ನೀಡಲಾಯಿತು.
 

Follow Us:
Download App:
  • android
  • ios