Textbook Revision Row: ದಲಿತರ, ಮಹಿಳೆಯರ ಪಾಠಕ್ಕೆ ಕೊಕ್: ಬರಗೂರು
* ಬಸವಣ್ಣ, ಕುವೆಂಪು ತತ್ವಗಳಿಗೆ ವಿರುದ್ಧವಾಗಿ ಪರಿಷ್ಕರಣೆ
* ಚರ್ಚಿಸಿ ಬಗೆಹರಿಸಲು ಸಲಹೆ
* ನಾಡಪ್ರಭು ಆಳ್ವಿಕೆ ಬೆಂಗಳೂರಿಗೆ ಸೀಮಿತ
ಬೆಂಗಳೂರು(ಜೂ.05): ಬಸವಣ್ಣ, ಕುವೆಂಪು ತತ್ವಗಳಿಗೆ ವಿರುದ್ಧವಾಗಿ ಪಠ್ಯಪುಸ್ತಕ ಮರು ಪರಿಷ್ಕರಣೆ ನಡೆದಿದೆ. ಆದ್ದರಿಂದ ಮರು ಪರಿಷ್ಕರಣೆ ವಿರೋಧಿಸುತ್ತಿರುವವರನ್ನು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಆಗ್ರಹಿಸಿದ್ದಾರೆ. ಶನಿವಾರ ಪಠ್ಯಪುಸ್ತಕ ಮರು ಪರಿಷ್ಕರಣೆ ಕುರಿತು ಮುಖ್ಯಮಂತ್ರಿಯವರ ಹೇಳಿಕೆಯಲ್ಲಿರುವ ತಪ್ಪು ಮಾಹಿತಿಗಳನ್ನು ಅವರು ಪಟ್ಟಿ ಮಾಡಿದ್ದಾರೆ.
ಬರಗೂರು ಪ್ರಕಾರ ಸಿಎಂ ತಪ್ಪುಗಳೇನು?:
ಪಂಡಿತಾರಾಧ್ಯ ಸ್ವಾಮೀಜಿಯವರು ಮತ್ತು ಇತರೆ ಸ್ವಾಮೀಜಿಯವರು ಬಸವಣ್ಣನವರ ವಿಷಯದಲ್ಲಿ ಎತ್ತಿದ ಪ್ರಶ್ನೆಗೆ ಮುಖ್ಯಮಂತ್ರಿಯವರು, ‘ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯ ಅಂಶಗಳಿವೆ’ ಎಂದಿದ್ದರು. ಆದರೆ ವಾಸ್ತವದಲ್ಲಿ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರಲ್ಲಿ ನಾವು ಅಳವಡಿಸಿದ್ದ ವಿವರಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಮರುಪರಿಷ್ಕರಣೆಯಲ್ಲಿ ಉಳಿಸಿಕೊಂಡಿದ್ದರೂ 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿದ್ದ ಬಸವಣ್ಣನವರ ವಿವರಗಳಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಬಿಡಲಾಗಿದೆ.
ಸಿಎಂ ಮಧ್ಯಪ್ರವೇಶಿಸಿ ಪಠ್ಯಪುಸ್ತಕ ವಿವಾದಕ್ಕೆ ತೆರೆ ಎಳೆಯಬೇಕು Baraguru Ramachandrappa
ಮರುಪರಿಷ್ಕರಣೆಯ ಪಠ್ಯದಲ್ಲಿ ಬಸವಣ್ಣನವರ ವೈದಿಕ ಮೂಲ ಮೌಢ್ಯಾಚರಣೆಗಳನ್ನು ವಿರೋಧಿಸಿದ್ದು ಯಜ್ಞೋಪವೀತವನ್ನು ಕಿತ್ತೆಸೆದದ್ದು, ಉನ್ನತಾಧಿಕಾರದಲ್ಲಿದ್ದರೂ ಚಳವಳಿ ಕಟ್ಟಿದ್ದು, ದೇಹವೇ ದೇಗುಲ ಎಂಬ ಹೊಚ್ಚ ಹೊಸ ಪರಿಕಲ್ಪನೆ ನೀಡಿದ್ದು, ಜನಸಾಮಾನ್ಯರಿಗೆ ತಲುಪಲು ಸರಳ ಕನ್ನಡದಲ್ಲಿ ವಚನಕಾರರು ಬರೆದದ್ದು ಮುಂತಾದ ವಿಷಯಗಳನ್ನು ಕೈಬಿಡಲಾಗಿದೆ. ನಾವು ಪರಿಷ್ಕರಣೆ ಮಾಡಿದಾಗ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕಕ್ಕೆ ಬಸವಣ್ಣನವರ ಜೀವನ ದರ್ಶನ ಕುರಿತ ಹೊಸ ಪಾಠವನ್ನು ಸೇರಿಸಿದ್ದೆವು ಎಂದು ತಿಳಿಸಿದ್ದಾರೆ.
ಕುವೆಂಪು ಕುರಿತು..:
ಮರು ಪರಿಷ್ಕರಣೆಯಲ್ಲಿ ಕನ್ನಡ ಭಾಷಾ ಪಠ್ಯದಲ್ಲಿ ಕುವೆಂಪು ಅವರ ಹತ್ತು ರಚನೆಗಳನ್ನು ಸೇರಿಸಿರಬಹುದು. ಆದರೆ, ನಾವು ಪರಿಷ್ಕರಣೆ ಮಾಡಿದಾಗ ಮೂಲ ಪಠ್ಯಪುಸ್ತಕದಲ್ಲಿ ಇಲ್ಲದ ಕೆಲವು ಮುಖ್ಯ ಸಾಹಿತಿಗಳ ಪಾಠ ಸೇರಿಸುವುದಕ್ಕಾಗಿ ಸಾಮಾನ್ಯ ಮಾನದಂಡ ರೂಪಿಸಿಕೊಂಡಿದ್ದೆವು. ರಾಷ್ಟ್ರಕವಿ ಕುವೆಂಪು ಅವರ ಅಪೂರ್ವ ಸಾಧನೆಗೆ ಚ್ಯುತಿಯುಂಟು ಮಾಡದೆ, ಮೂಲ ಪಠ್ಯಪುಸ್ತಕಗಳಲ್ಲಿ ಇಲ್ಲದೆ ಇದ್ದ ಕಲ್ಯಾಣ ಕರ್ನಾಟಕದ ಸಿಂಪಿ ಲಿಂಗಣ್ಣ, ಶಾಂತರಸ, ಚೆನ್ನಣ್ಣ ವಾಲೀಕಾರ ಅವರಲ್ಲದೇ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕೆಲವು ಲೇಖಕಿಯರ ಪಾಠಗಳನ್ನು ಸೇರಿಸಿದೆವು. ಈ ನಮ್ಮ ನಡೆಯು ಕುವೆಂಪು ಅವರ ಅಖಂಡ ಕರ್ನಾಟಕ ಪರಿಕಲ್ಪನೆ ಮತ್ತು ಸಾಮಾಜಿಕ ನ್ಯಾಯ ಕಲ್ಪನೆಗೆ ಅನುಗುಣವಾಗಿತ್ತು. ಕುವೆಂಪು ಅವರ ಬಗ್ಗೆ ಮುಖ್ಯಮಂತ್ರಿಯವರು ನೀಡಿದ ಸಂಖ್ಯಾ ಮಾಹಿತಿಯಿಂದ ನಾಡಗೀತೆ, ನಾಡಧ್ವಜ, ಕನ್ನಡ ಭಾಷೆಗಳಿಗೆ ಮಾಡಿದ ಅವಮಾನಕ್ಕೆ ಖಂಡಿತ ರಿಯಾಯಿತಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ನಾಡಪ್ರಭು ಆಳ್ವಿಕೆ ಬೆಂಗಳೂರಿಗೆ ಸೀಮಿತ:
ಮರು ಪರಿಷ್ಕರಣೆಯಲ್ಲಿ ಯಲಹಂಕ ನಾಡಪ್ರಭುಗಳ ಆಳ್ವಿಕೆಯ ವಿಸ್ತೀರ್ಣವನ್ನು ಬೆಂಗಳೂರು ಜಿಲ್ಲೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಮ್ಮ ಪರಿಷ್ಕರಣೆಯಲ್ಲಿ ಬೆಂಗಳೂರು, ರಾಮನಗರ, ತುಮಕೂರು, ಅವಿಭಜಿತ ಕೋಲಾರ ಜಿಲ್ಲೆಗಳು ಕೂಡ ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದನ್ನು ವಿವರಿಸಲಾಗಿತ್ತು. ಇದನ್ನು ಮರುಪರಿಷ್ಕರಣೆಯಲ್ಲಿ ಬಿಟ್ಟಿದ್ದಾರೆ. ಮುಖ್ಯಮಂತ್ರಿಯವರು ತಿಳಿಸಿರುವ ಹೊಸ ಪಾಠವನ್ನು ಎಲ್ಲಿ ಸೇರಿಸಿದ್ದಾರೆಂದು ಸ್ಪಷ್ಟವಿಲ್ಲ ಎಂದು ಆರೋಪಿಸಿದ್ದಾರೆ.
ಕನ್ನಡ ಭಾಷಾ ಪಠ್ಯಗಳಲ್ಲಿ ದೇವನೂರರನ್ನು ಹೊರತುಪಡಿಸಿ ಎಲ್ಲಾ ದಲಿತ ಮೂಲದ ಸಾಹಿತಿಗಳ ರಚನೆಗಳನ್ನು ತೆಗೆಯಲಾಗಿದೆ. ಬಹುಪಾಲು ಮಹಿಳಾ ಸಾಹಿತಿಗಳ ರಚನೆಗಳನ್ನು ಬಿಡಲಾಗಿದೆ. ಬುದ್ಧ, ಅಂಬೇಡ್ಕರ್ ಅಂತಹವರ ವಸ್ತುವುಳ್ಳ ಕವನಗಳನ್ನು ಕೈಬಿಡಲಾಗಿದೆ. 6ನೇ ತರಗತಿಯ ಸಮಾಜ ವಿಜ್ಞಾನದಿಂದ ಬೌದ್ಧಧರ್ಮ ಮತ್ತು ಜೈನಧರ್ಮದ ವಿವರಗಳನ್ನು ತೆಗೆಯಲಾಗಿದೆ ಎಂದು ಟೀಕಿಸಿದ್ದಾರೆ.
22 ಬ್ರಾಹ್ಮಣರ ಬರಹ ಸೇರಿಸಿದ್ದು ಬರಗೂರು: ರೋಹಿತ್ ಚಕ್ರತೀರ್ಥ
ಪರಿಷ್ಕರಣೆ ವೇಳೆ ಕೆಲವನ್ನು ಬಿಡುವುದು ಮತ್ತು ಸೇರಿಸುವುದು ಇರುತ್ತದೆ. ಆದರೆ, ಈ ಕ್ರಿಯೆಗೆ ನ್ಯಾಯಸಮ್ಮತ ಮಾನದಂಡ ರೂಪಿಸಿಕೊಳ್ಳಬೇಕು. ಇಂತಹದೊಂದು ನ್ಯಾಯಸಮ್ಮತ ಮಾನದಂಡವು ಮರು ಪರಿಷ್ಕರಣೆಯಲ್ಲಿ ಕಾಣಿಸುತ್ತಿಲ್ಲ.
ಮತುಕತೆಗೆ ಆಹ್ವಾನಿಸಿ:
ನಾವು ಹೊಸದಾಗಿ ಸೇರಿಸಿದ್ದ ಸಾವಿತ್ರಿಬಾಯಿ ಫುಲೆ ಮುಂತಾದ ಸುಧಾರಕಿಯರ ಪಾಠ ಕೈಬಿಡಲಾಗಿದೆ. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ, ನಾಸಿಕ್ ದೇವಾಲಯ ಪ್ರವೇಶಗಳಂತಹ ಅನೇಕ ಸಾಲುಗಳು ಮರುಪರಿಷ್ಕರಣೆಯಲ್ಲಿ ಇಲ್ಲವಾಗಿವೆ. ನಾವು ಸೇರಿಸಿದ್ದ ನಾರಾಯಣ ಗುರು ಕುರಿತ ಪಾಠವನ್ನು ಬಿಟ್ಟಿದ್ದು ಮತ್ತೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಇಲ್ಲಿ ತೆಗೆದದ್ದು, ಸೇರಿಸಿದ್ದು ಯಾರನ್ನು ಮತ್ತು ಎಂಥ ಪಾಠವನ್ನು ಎಂಬುದನ್ನು ಪರಿಶೀಲಿಸಬೇಕು. ಜೊತೆಗೆ ಮುಖ್ಯಮಂತ್ರಿಯವರು ಮರು ಪರಿಷ್ಕರಣೆ ವಿರೋಧಿಸುತ್ತಿರುವವರನ್ನು ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.