ಬೆಂಗಳೂರು ಮೂಲದ 19 ವರ್ಷದ ವಿದ್ಯಾರ್ಥಿನಿ ಶ್ರೇಯಾ ಹೆಗಡೆ ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಇವರ ಜತೆಗೆ ದೇಶದ ಇನ್ನಿಬ್ಬರು ವಿದ್ಯಾರ್ಥಿಗಳು ಸಹ ಈ ರೇಸ್‌ನಲ್ಲಿದ್ದಾರೆ. ಹೌದು, ಗ್ಲೋಬಲ್‌ ಸ್ಟೂಡೆಂಟ್‌ ಪ್ರೈಜ್‌ನ ಟಾಪ್‌ 50 ರ ಪಟ್ಟಿಯಲ್ಲಿ ಈ ಮೂವರು ವಿದ್ಯಾರ್ಥಿಗಳಿದ್ದಾರೆ. 

ಬೆಂಗಳೂರು ಮೂಲದ 19 ವರ್ಷದ ವಿದ್ಯಾರ್ಥಿನಿ ಶ್ರೇಯಾ ಹೆಗಡೆ ಸೇರಿ ಭಾರತದ 3 ವಿದ್ಯಾರ್ಥಿಗಳು ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ 2022ರ (ಗ್ಲೋಬಲ್‌ ಸ್ಟೂಡೆಂಟ್‌ ಪ್ರೈಜ್‌) ಟಾಪ್‌ 50ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಲಂಡನ್‌ ಮೂಲದ ಎನ್‌ಜಿಒ ಚೆಗ್‌ ಸಂಸ್ಥೆ ಆಯೋಜಿಸಿದ್ದು, ಅಸಾಮಾನ್ಯ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ 100 ಸಾವಿರ ಅಮೆರಿಕನ್‌ ಡಾಲರ್‌ ಅಂದರೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಭಾರಿ ಬಹುಮಾನ ನೀಡಿ ಗೌರವಿಸುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ 150 ದೇಶಗಳಿಂದ 7000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಇವರಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ಶ್ರೇಯಾ ಹೆಗಡೆ, ಗೋವಾದ ಬಿರ್ಲಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾರ್ಥಿನಿಯಾದ 20 ವರ್ಷದ ಅನಘಾ ರಾಜೇಶ್‌ ಹಾಗೂ ರಿಷಿಕೇಶದ ಏಮ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ಓಶಿನ್‌ ಪುರಿ ಶಾರ್ಟ್‌ಲಿಸ್ಟ್‌ ಆಗಿ ಅಂತಿಮ ಹಂತಕ್ಕೆ ತಲುಪಿದ್ದಾರೆ.

ಐಐಟಿ ವಿದ್ಯಾರ್ಥಿಗೆ ಪ್ರತಿಷ್ಠಿತ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ಶಿಪ್

ಶ್ರೇಯಾ ಹೆಗಡೆ 17 ವರ್ಷದವರಾಗಿದ್ದಾಗಲೇ ಎಂಐಟಿ ಉದ್ಯಮಶೀಲತೆ ಯೋಜನೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ಗುರುತ್ವಾಕರ್ಷಣ ಅಲೆಗಳು, ಪ್ಯಾಲಿಯೋಬಯಾಲಜಿ, ಕಂಪ್ಯೂಟರ್‌ ಗ್ರಾಫಿಕ್ಸ್‌ ಮೊದಲಾದ ವಿಷಯಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಹಳ್ಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ಗಣಿತ ಮೊದಲಾದ ವಿಷಯಗಳ ಪಾಠ ಮಾಡಿದ್ದಾರೆ.

ಅನಘಾ ಸಂಶೋಧಕಿಯಾಗಿದ್ದು, ಅಣು ತಂತ್ರಜ್ಞಾನ ಹಾಗೂ ಮಾನಸಿಕ ಆರೋಗ್ಯ ಮೊದಲಾದ ವಿಚಾರಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.

ಓಶಿನ್‌ ಪುರಿ ಏಷ್ಯನ್‌ ವೈದ್ಯಕೀಯ ವಿದ್ಯಾರ್ಥಿಗಳ ಸಂಘಟನೆ ನಡೆಸುವ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದು, ಹಲವಾರು ಸಾರ್ವಜನಿಕ ಆರೋಗ್ಯ ಉಪಕ್ರಮಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡಿದ್ದಾರೆ.

ಅಂತಿಮವಾಗಿ 10 ವಿದ್ಯಾರ್ಥಿಗಳ ಪಟ್ಟಿಯನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಹಾಗೂ ಅವರಲ್ಲಿ ಒಬ್ಬರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಚೆಗ್‌ ಸಂಸ್ಥೆಯ ಸಿಇಒ ಡಾನ್‌ ರೋಸೆನ್ಸ್‌ವಿಗ್‌ ಹೇಳಿದ್ದಾರೆ.

"ಈಗ, ಎಂದಿಗಿಂತಲೂ ಹೆಚ್ಚಾಗಿ, ಅನಘಾ, ಓಶಿನ್ ಮತ್ತು ಶ್ರೇಯಾ ಅವರಂತಹ ವಿದ್ಯಾರ್ಥಿಗಳು ತಮ್ಮ ಕಥೆಗಳನ್ನು ಹೇಳಲು ಮತ್ತು ಅವರ ಧ್ವನಿಯನ್ನು ಕೇಳಲು ಅರ್ಹರಾಗಿದ್ದಾರೆ. ನಮ್ಮ ಜಗತ್ತು ಎದುರಿಸುತ್ತಿರುವ ಮತ್ತು ತುರ್ತು ಸವಾಲುಗಳನ್ನು ನಿಭಾಯಿಸಲು ನಾವು ಅವರ ಕನಸುಗಳು, ಅವರ ಒಳನೋಟಗಳು ಮತ್ತು ಅವರ ಸೃಜನಶೀಲತೆಯನ್ನು ಬಳಸಿಕೊಳ್ಳಬೇಕು’’ ಎಂದೂ ಅವರು ಹೇಳಿದರು.

ಈ ಮಧ್ಯೆ, 2022 ರ ಅಂತಿಮ ಸ್ಪರ್ಧಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರಲು ಆಯ್ಕೆ ಮಾಡಲಾಗಿದೆ.

India@75: ಬ್ರಿಟನ್‌ನಿಂದ 75 ವಿದ್ಯಾರ್ಥಿ ವೇತನ!

ಪ್ರಶಸ್ತಿಯ ಹಣ ನೀಡುವವರು ಇವರೇ..!
ಚೆಗ್‌ ಎಂಬ ಶಿಕ್ಷಣ ತಂತ್ರಜ್ಞಾನ ಕಂಪನಿಯ ಲಾಭ ರಹಿತ ಸಂಸ್ಥೆಯಾದ Chegg.org ವೆಬ್‌ಸೈಟ್‌ ಈ 50 ಸ್ಪರ್ಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚೆಗ್‌ ಸಂಸ್ಥೆಯ ಜತೆಗೆ ವಾರ್ಕಿ ಫೌಂಡೇಶನ್‌ ಎಂಬ ಸಂಸ್ಥೆ ಸಹ 80 ಲಕ್ಷ ರೂ. ಬಹುಮಾನದ ಹಣದಲ್ಲಿ ಪಾಲುದಾರರು ಎಂದು ತಿಳಿದುಬಂದಿದೆ. 

ಈ ಪಟ್ಟಿಯಲ್ಲಿ ನೀವೂ ಸ್ಥಾನ ಪಡೆಯಬೇಕಾ..?
ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ 2022ರ ಟಾಪ್‌ 50 ರ ಪಟ್ಟಿಯಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದೇ ರೀತಿ, ನೀವೂ ಸಹ ಈ ಪಟ್ಟಿಯಲ್ಲಿ ಆಯ್ಕೆಯಾಗಲು ಬಯಸುತ್ತೀರಾ..? ಹಾಗಾದರೆ ಇದರ ಮಾನದಂಡಗಳು ಹೀಗಿದೆ ನೋಡಿ..

16 ವರ್ಷಕ್ಕೂ ಹೆಚ್ಚು ವಯಸ್ಸಿನ ವಿಶ್ವದ ಎಲ್ಲ ವಿದ್ಯಾರ್ಥಿಗಳು ಸಹ ಈ ಪಟ್ಟಿಯಲ್ಲಿ ನೇಮಕವಾಗುವ ಅವಕಾಶವಿದೆ. ಇದಕ್ಕಾಗಿ ನೀವು ಶೈಕ್ಷಣಿಕ ಸಂಸ್ಥೆ ಅಥವಾ ತರಬೇತಿ ಮತ್ತು ಕೌಶಲ್ಯ ಕಾರ್ಯಕ್ರಮವೊಂದಕ್ಕೆ ಸೇರಿಕೊಂಡಿರಬೇಕು ಅಷ್ಟೇ.

ಇನ್ನು, ಈ ಪ್ರಶಸ್ತಿ ಪಡೆಯಲು ನೀವು ಫುಲ್‌ ಟೈಮ್‌ ವಿದ್ಯಾರ್ಥಿಯಾಗಬೇಕೆಂದೇನೂ ಇಲ್ಲ, ಪಾರ್ಟ್‌ ಟೈಮ್‌ ವಿದ್ಯಾರ್ಥಿಗಳು ಹಾಗೂ ಆನ್‌ಲೈನ್‌ ಕೋರ್ಸ್‌ಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಸಹ ಈ ಜಾಗತಿಕ ಪ್ರಶಸ್ತಿಗೆ ಅರ್ಹರು ಎಂಬುದು ಗಮನಾರ್ಹ.