ಎಸ್ಸೆಸ್ಸೆಲ್ಸಿ ಅಂಕಪಟ್ಟಿ ತಿದ್ದುಪಡಿಗೆ ಇನ್ನು ಆನ್‌ಲೈನ್‌ನಲ್ಲಷ್ಟೇ ಅರ್ಜಿ!
ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಬಯಸಿದಲ್ಲಿ ಆಫ್‌ಲೈನ್ ಬದಲು ಇನ್ನು ಮುಂದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಬೆಂಗಳೂರು (ನ.13): ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಬಯಸಿದಲ್ಲಿ ಆಫ್‌ಲೈನ್ ಬದಲು ಇನ್ನು ಮುಂದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿಯು ತನ್ನ ಅಂಕಪಟ್ಟಿಯಲ್ಲಿ ಅಭ್ಯರ್ಥಿ, ತಂದೆ, ತಾಯಿಯ ಹೆಸರು, ಜನ್ಮದಿನಾಂಕ ಇತರೆ ತಿದ್ದುಪಡಿಗಳಿದ್ದಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರಿಗೆ ತಿದ್ದುಪಡಿಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಆ ಮುಖ್ಯ ಶಿಕ್ಷಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಶಾಲಾ ಲಾಗಿನ್ ಮೂಲಕ ಪ್ರಸ್ತಾವನೆ ಸಲ್ಲಿಸಬೇಕು. ಇದಕ್ಕೆ ನಿಗದಿತ ಶುಲ್ಕವನ್ನು ಕೂಡ ಆನ್‌ಲೈನ್ ಮೂಲಕವೇ ಅಂದರೆ ಯಾವುದೇ ಬ್ಯಾಂಕಿನ ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಸಲ್ಲಿಸಬೇಕು. ಈ ಸೌಲಭ್ಯ ಇಲ್ಲದವರಿಗೆ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಗೆ ವೆಬ್‌ಸೈಟ್‌ನಲ್ಲಿ ಚಲನ್ ನೀಡಲಾಗಿದ್ದು ಅದನ್ನು ಡೌನ್‌ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿಸಬಹುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
ಈ ರೀತಿ ಸಲ್ಲಿಸಿದ ಅರ್ಜಿ ಹಾಗೂ ಅಪ್‌ಲೋಡ್ ಮಾಡಲಾದ ದಾಖಲೆಗಳು ಸಂಬಂಧಿಸಿದ ವಿಭಾಗೀಯ ಕಚೇರಿಗೆ ತಲುಪಲಿದ್ದು ಅಲ್ಲಿ ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿ ಅಗತ್ಯವಿದ್ದರೆ ಅವಕಾಶ ನೀಡಲಾಗುತ್ತದೆ. ತಿದ್ದುಪಡಿಯಾದ ಅಂಕಪಟ್ಟಿ ಸ್ಪೀಡ್ ಪೋಸ್ಟ್ ಮೂಲಕ ಸಂಬಂಧಿಸಿದ ಶಾಲೆಗೆ ತಲುಪಲಿದೆ. ತಿದ್ದುಪಡಿಗೆ ಸಲ್ಲಿಸುವ ಯಾವುದೇ ದಾಖಲೆ ನಕಲಿಯಾಗಿದ್ದರೆ ಸಂಬಂಧಿಸಿದ ಅಭ್ಯರ್ಥಿ ಹಾಗೂ ಮುಖ್ಯೋಪಾಧ್ಯಾಯರನ್ನು ಹೊಣೆಯಾಗಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ನಾಡ್- ಡಿಜಿ ಲಾಕರ್‌ನಲ್ಲಿ ಡಿಗ್ರಿ ಅಂಕಪಟ್ಟಿ ಸಂಗ್ರಹ ಕಡ್ಡಾಯ
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ ಇಲಾಖೆಗಳು, ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಪ್ರಸಕ್ತ 2023ನೇ ಶೈಕ್ಷಣಿಕ ಸಾಲಿನಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳು, ವಿದ್ಯಾರ್ಥಿಗಳ ಪ್ರಮಾಣ ಪತ್ರಗಳು, ಶೈಕ್ಷಣಿಕ ದಾಖಲೆಗಳನ್ನು ನಾಡ್(ಎನ್‌ಎಡಿ)-ಡಿಜಿಲಾಕರ್‌ನಲ್ಲಿ ಡಿಜಿಟಲ್ ರೂಪದಲ್ಲಿ ಕಡ್ಡಾಯವಾಗಿ ಸಂಗ್ರಹಿಸಿಡಲು ಸರ್ಕಾರ ಆದೇಶಿಸಿದೆ.
ನಕಲಿ ಅಂಕಪಟ್ಟಿ ಹಾವಳಿ ತಡೆಯಲು ರಾಜ್ಯದ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್‌ನಲ್ಲಿ (ಎಬಿಸಿ) ನೋಂದಾಯಿಸಿಕೊಳ್ಳಲು ಹಾಗೂ ನೇಮಕಾತಿ ವೇಳೆ ಎನ್‌ಎಡಿ-ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲು ಕ್ರಮ ವಹಿಸುವುದಾಗಿ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಘೋಷಿಸಿತ್ತು.
9.6 ಲಕ್ಷ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್‌ಶಿಪ್: ಸಿಎಂ ಸಿದ್ದರಾಮಯ್ಯ
ಇದರಂತೆ ಡಿಜಿಲಾಕರ್‌ನಲ್ಲಿ ತಮ್ಮ ಅಂಕಪಟ್ಟಿ ಸೇರಿದಂತೆ ಇತರೆ ಶೈಕ್ಷಣಿಕ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈ ದಾಖಲೆಗಳನ್ನು ಉದ್ಯೋಗ ನೇಮಕಾತಿ ಪ್ರಾಧಿಕಾರಗಳು / ಸಂಸ್ಥೆಗಳು ನೇಮಕಾತಿ ಸಮಯದಲ್ಲಿ ದೃಢೀಕೃತವೆಂದು ಪರಿಗಣಿಸಲು ಸರ್ಕಾರ ಸೂಚಿಸಿದೆ.