ಒಂದು ಮಗುವಿಗೆ ಮೊಟ್ಟೆ, ಮತ್ತೊಂದು ಮಗುವಿಗೆ ಖಾಲಿ ತಟ್ಟೆ! ಶಿಕ್ಷಣ ಸಚಿವರೇ ಏನಿದೆಲ್ಲ?
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲು ಅನುಮತಿ ನೀಡಿ ಇದೀಗ ಮೂರು ಶೈಕ್ಷಣಿಕ ವರ್ಷಗಳೇ ಕಳೆದಿದೆ. ಆದರೆ ಅವರಿಗೆ ಬಿಸಿಯೂಟ ಸಹಿತ ಇತರ ಯಾವುದೇ ಸೌಕರ್ಯಗಳನ್ನು ಒದಗಿಸದೆ ಇರುವುದು ಶಾಲಾಭಿವೃದ್ಧಿ ಸಮಿತಿಗಳಿಗೆ ದೊಡ್ಡ ತಲೆನೋವಾಗಿದೆ.
ಮೌನೇಶ ವಿಶ್ವಕರ್ಮ
ಬಂಟ್ವಾಳ (ಮೇ.31) :ಒಂದು ಸಾಲಿನಲ್ಲಿ ಕುಳಿತ ಒಂದನೇ ತರಗತಿ ಮಕ್ಕಳು ಮೊಟ್ಟೆಯನ್ನು ತಿನ್ನುತ್ತಿದ್ದರೆ, ಅವರ ಮುಂಭಾಗದಲ್ಲಿ ಊಟಕ್ಕೆ ಕುಳಿತಿದ್ದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳು ತಟ್ಟೆ ಹಿಡಿದು ಆ ಮೊಟ್ಟೆಯನ್ನೇ ಮಿಕಿಮಿಕಿ ಎಂದು ನೋಡುತ್ತಿದ್ದರು.. ಊಟ ಬಡಿಸುವ ಸಿಬ್ಬಂದಿಗೂ ಇಲ್ಲಿ ಅಸಹಾಯಕತೆಯ ಸನ್ನಿವೇಶ..! ಸರ್ಕಾರಿ ಶಾಲೆಗಳಲ್ಲಿ ಅನುಮತಿ ಪಡೆದ ಪೂರ್ವ ಪ್ರಾಥಮಿಕ ತರಗತಿಗಳಿಗೆ ಯಾವುದೇ ಸೌಲಭ್ಯ ನೀಡದೆ ಇಂತಹ ಸನ್ನಿವೇಶ ಸೃಷ್ಟಿಸಿರುವ ಶಿಕ್ಷಣ ಇಲಾಖೆಯು ಮಕ್ಕಳಲ್ಲೇ ತಾರತಮ್ಯ ನೀತಿ ಅನುಸರಿಸುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲು ಅನುಮತಿ ನೀಡಿ ಇದೀಗ ಮೂರು ಶೈಕ್ಷಣಿಕ ವರ್ಷಗಳೇ ಕಳೆದಿದೆ. ಆದರೆ ಅವರಿಗೆ ಬಿಸಿಯೂಟ ಸಹಿತ ಇತರ ಯಾವುದೇ ಸೌಕರ್ಯಗಳನ್ನು ಒದಗಿಸದೆ ಇರುವುದು ಶಾಲಾಭಿವೃದ್ಧಿ ಸಮಿತಿಗಳಿಗೆ ದೊಡ್ಡ ತಲೆನೋವಾಗಿದೆ.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜೊತೆಯಲ್ಲಿ ಆಂಗ್ಲಭಾಷಾ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಶಾಲಾಭಿವೃದ್ಧಿ ಸಮಿತಿಗಳ ಒತ್ತಾಯಕ್ಕೆ ಮಣಿದು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲು ಇಲಾಖೆಯೇ ಅಧಿಕೃತ ಅನುಮತಿಯನ್ನು ಹಂತಹಂತವಾಗಿ ನೀಡುತ್ತಾ ಬಂದಿದೆ.
ಇಲಾಖೆಯದ್ದು ಅನುಮತಿ ಮಾತ್ರ..!: ಪೂರ್ವ ಪ್ರಾಥಮಿಕ ತರಗತಿಯನ್ನು ನಡೆಸಲು ಕೇವಲ ಅನುಮತಿ ಮಾತ್ರ ಇಲಾಖೆಯದ್ದಾಗಿದ್ದು, ಉಳಿದೆಲ್ಲವನ್ನೂ ಶಾಲಾಭಿವೃದ್ಧಿ ಸಮಿತಿಯೇ ನೋಡಿಕೊಳ್ಳುತ್ತಿದೆ. ಈ ತರಗತಿಗಳಿಗೆ ಶಿಕ್ಷಕರ ನೇಮಕ, ಆಯಾಗಳ ನಿಯೋಜನೆ, ಪುಸ್ತಕ ವಿತರಣೆ, ಶಾಲಾ ಸಮವಸ್ತ್ರ ವ್ಯವಸ್ಥೆ , ಬಿಸಿಯೂಟ ಹೀಗೆ ಮೂಲಭೂತ ಅಗತ್ಯಗಳನ್ನು ಶಾಲಾಭಿವೃದ್ಧಿ ಸಮಿತಿಗಳೇ ಒದಗಿಸುತ್ತಿದ್ದು ಕೆಲವು ಸರ್ಕಾರಿ ಶಾಲೆಗಳಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಎಲ್ಕೆಜಿ ಯುಕೆಜಿ ತರಗತಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಕ್ಕಳ ಪೋಷಕರು ಹಾಗೂ ದಾನಿಗಳಿಂದ ನೆರವು ಪಡೆದುಕೊಳ್ಳುತ್ತಿದೆ.
ನಮ್ಮ ಸರ್ಕಾರ ಬಂದಮೇಲೆ ಪರೀಕ್ಷಾ ಪಾವಿತ್ರ್ಯ ಕಾಪಾಡಿದ್ದೇವೆ: ಮಧು ಬಂಗಾರಪ್ಪ
ಈ ಎಲ್ಲದರ ನಡುವೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೂಲಭೂತ ಅಗತ್ಯಗಳನ್ನು ಸರ್ಕಾರ ಹಂತ ಹಂತಗಳಲ್ಲಿ ಒದಗಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಾಲಾ ಅಭಿವೃದ್ಧಿ ಸಮಿತಿಗಳಿಗೆ ಪ್ರತಿ ವರ್ಷವೂ ನಿರಾಶೆ ಕಾಡುತ್ತಿದೆ. ಮೊಟ್ಟೆಯೂ ಇಲ್ಲ.. ಚಿಕ್ಕಿಯೂ ಇಲ್ಲ!: ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ, ಚಿಕ್ಕಿ ಹೀಗೆ ಮಕ್ಕಳು ಬಯಸುವ ಎಲ್ಲವೂ ವಾರಕ್ಕೆ ಎರಡರಂತೆ 40 ವಾರಗಳ ಕಾಲ ಒದಗುತ್ತಿದ್ದು, ಮೊಟ್ಟೆಯ ಬದಲು ಚಿಕ್ಕಿಪಡೆಯಲು ಅವಕಾಶವಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಪೂರ್ವ ಪ್ರಾಥಮಿಕ ಶಾಲೆಗಳ ಮಕ್ಕಳಿಗೂ ಎಲ್ಲ ಸೌಲಭ್ಯಗಳಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿರುವ ಸರ್ಕಾರದ ಅನುಮತಿ ಪಡೆದ ಪೂರ್ವ ಪ್ರಾಥಮಿಕ ತರಗತಿ ಗಳ ಮಕ್ಕಳ ಮೇಲೇಕೆ ಮಲತಾಯಿ ಧೋರಣೆ ಎನ್ನುವುದೇ ಈಗ ಉದ್ಭವಿಸಿರುವ ಪ್ರಶ್ನೆ.ಒಂದೊಮ್ಮೆ ಇದು ಪೂರ್ವ ಪ್ರಾಥಮಿಕ ತರಗತಿಗಳಿಗೆ ಅನುಮತಿ ನೀಡುವಾಗಲೇ ಶಾಲಾ ಅಭಿವೃದ್ಧಿ ಸಮಿತಿಗಳಿಗೆ ಈ ಸೂಚನೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತದೆಯಾದರೂ, ಊಟದ ವಿಚಾರದಲ್ಲಿ ಈ ರೀತಿಯ ತಾರತಮ್ಯ ಬೇಡ. ಊಟ, ಹಾಲು, ಮೊಟ್ಟೆ, ಚಿಕ್ಕಿಗಳನ್ನು ಇತರ ಮಕ್ಕಳಿಗೆ ನೀಡುವಂತೆಯೇ ಈ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ನೀಡಬೇಕು ಎನ್ನುವುದು ಪೋಷಕರ ಬೇಡಿಕೆ. ಬಂಟ್ವಾಳ ತಾಲೂಕಿನ 30 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳು ನಡೆಯುತ್ತಿದ್ದು ಶಾಲಾ ಅಭಿವೃದ್ಧಿ ಸಮಿತಿ ಮೇಲುಸ್ತುವಾರಿ ವಹಿಸಿಕೊಂಡಿದೆ. 2023- 24ನೇ ಸಾಲಿನ ಅಂಕಿ ಅಂಶದಂತೆ ಬಂಟ್ವಾಳ ತಾಲೂಕಿನಲ್ಲಿ ಇಲಾಖೆಯ ಅನುಮತಿ ಪಡೆದ ಎಲ್‌ಕೆಜಿ ತರಗತಿಯಲ್ಲಿ 489 ಹಾಗೂ ಯುಕೆಜಿ ತರಗತಿಯಲ್ಲಿ 642 ಪುಟಾಣಿಗಳು ವ್ಯಾಸಂಗ ಮಾಡಿದ್ದಾರೆ. ಈ ಪೈಕಿ ಕಲ್ಲಡ್ಕ, ಮಜಿ ಸಹಿತ ಹಲವು ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಸಮಿತಿಯೇ ಮಕ್ಕಳ ಬಿಸಿಊಟ ಹಾಗೂ ಹಾಲು ಮೊಟ್ಟೆಯಂತಹ ಅಗತ್ಯತೆಗಳನ್ನು ಪೂರೈಸುತ್ತಿದ್ದು ಕೆಲವು ಶಾಲೆಗಳು ಬಹಳ ತ್ರಾಸದಾಯಕವಾಗಿ ಮಕ್ಕಳ ಬೇಡಿಕೆಗಳನ್ನು ಈಡೇರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಸರ್ಕಾರಿ ಶಾಲೆಗಳ ಎಲ್‌ಕೆಜಿ ಯುಕೆಜಿ ತರಗತಿಗಳಲ್ಲಿರುವ ಎಲ್ಲ ಮಕ್ಕಳಿಗೂ ಬಿಸಿಯೂಟ, ಹಾಲು, ಮೊಟ್ಟೆ ಸಹಿತ ಅಗತ್ಯದ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ
.'ಬೆಡ್' ಪರ್ಫಾಮೆನ್ಸ್ ಮಾಡಿದ್ದಕ್ಕೆ ಶಾಲೆಯ 13 ಶಿಕ್ಷಕಿಯರಿಗೆ ಇಲಾಖೆಯಿಂದ ಶಿಕ್ಷೆ!
ಸರ್ಕಾರ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ, ಜೊತೆಗೆ ಅದರ ನಿರ್ವಹಣೆಗೂ ಕನಿಷ್ಠ ನೆರವು ನೀಡಬೇಕಿದೆ. ನಮ್ಮ ಶಾಲೆಯಲ್ಲಿ ಸಮುದಾಯದ ನೆರವಿನೊಂದಿಗೆ ಪುಟಾಣಿಗಳಿಗೆ ಎಲ್ಲವನ್ನೂ ಪೂರೈಸುತ್ತಿದ್ದೇವೆ. ಸರ್ಕಾರವೂ ಗಮನಹರಿಸಬೇಕು.- ಚಿನ್ನಾ ಕಲ್ಲಡ್ಕ, ಶಿಕ್ಷಣ ಪ್ರೇಮಿ, ಮಜಿ ವೀರಕಂಭ