ದೇಶಾದ್ಯಂತ ಪರೀಕ್ಷಾ ಪೇಪರ್ ಲೀಕ್ ಹಗರಣಗಳು ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆಯಂತಿರುವ ಮತ್ತೊಂದು ಘಟನೆ ರಜಾಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಾ ರೆಡ್‌ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ!

ಜೈಸಲ್ಮೇರ್: ದೇಶಾದ್ಯಂತ ಪರೀಕ್ಷಾ ಪೇಪರ್ ಲೀಕ್ ಹಗರಣಗಳು ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆಯಂತಿರುವ ಮತ್ತೊಂದು ಘಟನೆ ರಜಾಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಶಿಕ್ಷಕರೇ (ಇನ್ವಿಜಿಲೇಟರ್‌ಗಳು), ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಾ ರೆಡ್‌ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ!

ಘಟನೆಯ ವಿವರ

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕಜೋಯಿ ಗ್ರಾಮದ ಶ್ರೀ ಕರ್ಣಿ ಕಾಲೇಜಿನಲ್ಲಿ ಕಳೆದ ಶನಿವಾರ (ಜುಲೈ 18) ಬಿಎ 2ನೇ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ನಡೆಯುತ್ತಿತ್ತು. ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ (JNVU) ಫ್ಲೈಯಿಂಗ್ ಸ್ಕ್ವಾಡ್ ಆಕಸ್ಮಿಕವಾಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಮಹಾ ಅಕ್ರಮ ಬಯಲಿಗೆ ಬಂದಿದೆ.

ಫ್ಲೈಯಿಂಗ್ ಸ್ಕ್ವಾಡ್ ಸದಸ್ಯರಾದ ಪ್ರೊಫೆಸರ್ ಅಮನ್ ಸಿಂಗ್ ಮತ್ತು ಅವರ ತಂಡ ತಪಾಸಣೆ ನಡೆಸಿದಾಗ ಪರೀಕ್ಷಾ ಕೊಠಡಿಯಲ್ಲಿದ್ದ ಇನ್ವಿಜಿಲೇಟರ್‌ಗಳಾದ ಜೈ ಕರಣ್ ಮತ್ತು ಓಂ ಪ್ರಕಾಶ್ ವಿದ್ಯಾರ್ಥಿಗಳಿಗೆ ನೇರವಾಗಿ ಉತ್ತರಗಳನ್ನು ಹೇಳುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಸ್ಥಳದಲ್ಲಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ರೀತಿಯ ಉತ್ತರಗಳನ್ನು ಬರೆದಿರುವುದು ದೃಢಪಟ್ಟಿದೆ.

93 ಉತ್ತರ ಪತ್ರಿಕೆಗಳು ಸೀಜ್

ಈ ಸಾಮೂಹಿಕ ಕಾಪಿಯಿಂಗ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಪರೀಕ್ಷಾ ಕೊಠಡಿಯಲ್ಲಿದ್ದ ಎಲ್ಲಾ 93 ಉತ್ತರ ಪತ್ರಿಕೆಗಳನ್ನು ತಕ್ಷಣವೇ ವಶಪಡಿಸಿಕೊಂಡಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಲೇಜಿನ ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗಲೂ ಶಿಕ್ಷಕರು ಉತ್ತರ ಹೇಳಿಕೊಡುತ್ತಿರುವ ದೃಶ್ಯಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ, ಸಾಮೂಹಿಕ ಕಾಪಿಯಿಂಗ್ ಅಥವಾ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅಂತಹ ವಿದ್ಯಾರ್ಥಿಗಳನ್ನು 1 ರಿಂದ 3 ವರ್ಷಗಳ ಕಾಲ ಪರೀಕ್ಷೆಗಳಿಂದ ಡಿಬಾರ್ ಮಾಡುವ ಅವಕಾಶವಿದೆ. ಸದ್ಯ 93 ಉತ್ತರ ಪತ್ರಿಕೆಗಳನ್ನು ಸೀಜ್ ಮಾಡಲಾಗಿದ್ದು, ಆ ವಿದ್ಯಾರ್ಥಿಗಳಿಗೆ ಹೊಸ ಉತ್ತರ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಮೊದಲಿನ ಪತ್ರಿಕೆಗಳ ಬಗ್ಗೆ ವಿಶ್ವವಿದ್ಯಾಲಯದ ಉನ್ನತ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಪವನ್ ಕುಮಾರ್ ಶರ್ಮಾ, ಪರೀಕ್ಷಾ ಅಕ್ರಮಗಳ ವಿಷಯದಲ್ಲಿ ನಮ್ಮ ವಿಶ್ವವಿದ್ಯಾಲಯವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ಯಾರೇ ನಿಯಮ ಉಲ್ಲಂಘಿಸಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜೈಸಲ್ಮೇರ್ ಮಾತ್ರವಲ್ಲದೆ ಪಕ್ಕದ ಬಾರ್ಮರ್ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲೂ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದು, ಅಲ್ಲಿಯೂ ಕಾಪಿಯಿಂಗ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Scroll to load tweet…