ಟೀಮ್ ಇಂಡಿಯಾದ ಯುವ ವೇಗಿ ಎದುರಾಳಿ ಬ್ಯಾಟರ್‌ಗಳ ಪಾಲಿನ 'ಸ್ಪೀಡ್ ಗನ್' ಮಯಾಂಕ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಮಯಾಂಕ್ ತಮ್ಮ ಹಳೆಯ ಲಯಕ್ಕೆ ಮರಳಿರುವುದನ್ನು ಸಾರಿದ್ದಾರೆ.
ಹರಾರೆ/ಮಥುರಾ: ಟೀಮ್ ಇಂಡಿಯಾದ ಯುವ ವೇಗಿ ಎದುರಾಳಿ ಬ್ಯಾಟರ್‌ಗಳ ಪಾಲಿನ 'ಸ್ಪೀಡ್ ಗನ್' ಮಯಾಂಕ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಮಯಾಂಕ್ ತಮ್ಮ ಹಳೆಯ ಲಯಕ್ಕೆ ಮರಳಿರುವುದನ್ನು ಸಾರಿದ್ದಾರೆ.
ಆದರೆ ಮಗ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ಬ್ಯಾಟರ್‌ಗಳನ್ನು ನಡುಗಿಸುತ್ತಿದ್ದರೆ, ಅತ್ತ ಮಗನ ಯಶಸ್ಸಿಗಾಗಿ ಅವರ ತಂದೆ ಪ್ರಭು ಯಾದವ್ ಮಥುರಾದಲ್ಲಿ 'ಗೋವರ್ಧನ ಪರ್ವತ'ದ ಪ್ರದಕ್ಷಿಣೆ ಹಾಕುತ್ತಿದ್ದರು! ಮಯಾಂಕ್ ಯಾದವ್ ಅವರ ತಂದೆ ಪ್ರಭು ಯಾದವ್ ಅವರು ಓಖ್ಲಾದ ಫ್ಯಾಕ್ಟರಿಯೊಂದರಲ್ಲಿ ಆಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳಿಗೆ ಸೈರನ್ ತಯಾರಿಸುವ ಕೆಲಸ ಮಾಡುತ್ತಾರೆ. ಮಗನ ಪ್ರದರ್ಶನದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಅವರು, ನಾನು ಮಗನ ಪಂದ್ಯವನ್ನು ನೋಡಿಯೇ ಇಲ್ಲ. ಕಳೆದ ರಾತ್ರಿಯೇ ಮಥುರಾಗೆ ಬಂದಿದ್ದೆ. ಗೋವರ್ಧನ ಭಗವಂತನ ಪರಿಕ್ರಮ (ಪ್ರದಕ್ಷಿಣೆ) ಮುಗಿಸಿ ಈಗಷ್ಟೇ ವಾಪಸ್ ಹೊರಟಿದ್ದೇನೆ. ಮಗ ಫಿಟ್ ಆಗಿರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ಕಳೆದ ಎರಡು ವರ್ಷ ಮಗನಿಗೆ ಬಹಳ ಕಷ್ಟವಿತ್ತು ಎಂದು ಭಾವುಕರಾಗಿ ಹೇಳಿದ್ದಾರೆ.
ಮೊದಲ ಎಸೆತದಲ್ಲೇ ವಿಕೆಟ್
ಪಂದ್ಯದ ಆರಂಭದಲ್ಲೇ ಮಯಾಂಕ್ ಯಾದವ್ ಮ್ಯಾಜಿಕ್ ಮಾಡಿದರು. ತಾವು ಎಸೆದ ಮೊದಲ ಎಸೆತದಲ್ಲೇ ಜಿಂಬಾಬ್ವೆಯ ಅಪಾಯಕಾರಿ ಬ್ಯಾಟರ್ ಬ್ರಿಯಾನ್ ಬೆನೆಟ್ ಅವರನ್ನು ಔಟ್ ಮಾಡಿದರು. ಬೆನೆಟ್ ಇದೇ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 97 ರನ್ ಸಿಡಿಸಿ ಆತಂಕ ಹುಟ್ಟಿಸಿದ್ದರು. ಈ ವಿಕೆಟ್‌ನೊಂದಿಗೆ ಮಯಾಂಕ್ ಯಾದವ್ ಒಂದು ವಿಶಿಷ್ಟ ದಾಖಲೆ ಬರೆದಿದ್ದಾರೆ. ಟಿ20 ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ವಿಕೆಟ್ ಪಡೆದ ಭಾರತದ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ (3 ಬಾರಿ), ಹಾರ್ದಿಕ್ ಪಾಂಡ್ಯ (3 ಬಾರಿ) ಮತ್ತು ಅರ್ಶದೀಪ್ ಸಿಂಗ್ (2 ಬಾರಿ) ಅವರ ನಂತರ ಮಯಾಂಕ್ ಸ್ಥಾನ ಪಡೆದಿದ್ದಾರೆ.
ಗಾಯದ ಸಮಸ್ಯೆಯಿಂದ ಹೊರಬಂದ ವೇಗಿ
24 ವರ್ಷದ ಮಯಾಂಕ್ ಯಾದವ್ 2024ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪದಾರ್ಪಣೆ ಮಾಡಿದ್ದರು. ಸರಣಿಯ ಮೂರು ಪಂದ್ಯಗಳಲ್ಲಿ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು. ನಂತರ ಬೆನ್ನು ನೋವು ಮತ್ತು ಸ್ನಾಯು ಸೆಳೆತದಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಗಾಯದ ಕಾರಣ ಅವರು ಐಪಿಎಲ್‌ನಲ್ಲೂ ಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ. ಈಗ ಸುಮಾರು ಎರಡು ವರ್ಷಗಳ ಕಠಿಣ ಹೋರಾಟದ ನಂತರ ಟೀಮ್ ಇಂಡಿಯಾಗೆ ಮರಳಿ ತಮ್ಮ ವೇಗದ ಮೂಲಕ ಮಿಂಚುತ್ತಿದ್ದಾರೆ. ಮಯಾಂಕ್ ಅವರ ಈ ಪುನರಾಗಮನವು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.


