ಪಬ್ಲಿಕ್ ಟಾಯ್ಲೆಟ್ಟಾದ ಸರ್ಕಾರಿ ಶಾಲೆ; ತರಗತಿಯೊಳಗೆ ಮಕ್ಕಳಿದ್ದಾಗಲೂ ಬಂದು ಮೂತ್ರ ಮಾಡ್ತಾರೆ!

ರಾಷ್ಟ್ರೀಯ ಹೆದ್ದಾರಿ-63ರ ಅಗಲೀಕರಣದ ನೆಪದಲ್ಲಿ ಕಾಂಪೌಂಡ್‌ ಗೋಡೆ ತೆರವುಗೊಳಿಸಿದ್ದೇ ತಡ ಈ ಸರ್ಕಾರಿ ಶಾಲೆ ಅಕ್ಷರಶಃ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ!

alehuballi Government Senior Primary School19 plight rav

ಶಿವಾನಂದ ಅಂಗಡಿ

 ಹುಬ್ಬಳ್ಳಿ (ಜು.15) :  ರಾಷ್ಟ್ರೀಯ ಹೆದ್ದಾರಿ-63ರ ಅಗಲೀಕರಣದ ನೆಪದಲ್ಲಿ ಕಾಂಪೌಂಡ್‌ ಗೋಡೆ ತೆರವುಗೊಳಿಸಿದ್ದೇ ತಡ ಈ ಸರ್ಕಾರಿ ಶಾಲೆ ಅಕ್ಷರಶಃ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ!

ವರ್ಗದ ಕೋಣೆಯಲ್ಲಿ ಶಿಕ್ಷಕಿಯರು ಮಕ್ಕಳಿಗೆ ಪಾಠ ಮಾಡುತ್ತಿರುವಾಗಲೇ ಹೊರಗೆ ಸಾರ್ವಜನಿಕರು ಯಾವುದೇ ಮುಜುಗರವಿಲ್ಲದೇ ಮೂತ್ರ ವಿಸರ್ಜನೆ ಮಾಡುತ್ತಾರೆ. ರಾತ್ರಿಯಾದರೆ ಸಾಕು ಬಡವರು, ಅಲೆಮಾರಿಗಳು ಇಲ್ಲಿ ಬಹಿರ್ದೆಸೆಗೆ ಹೋಗುತ್ತಾರೆ. ಶಾಲಾ ಆವರಣದಲ್ಲಿ ಯಾರಾರ‍ಯರೋ ಕುಡಿದ ಮತ್ತಿನಲ್ಲಿ ಬೇಕಾಬಿಟ್ಟಿಮಲಗುತ್ತಾರೆ. ಹಂದಿ, ನಾಯಿ, ಬಿಡಾಡಿ ದನಗಳಂತೂ ಇದನ್ನು ತಮ್ಮ ಬಿಡಾರ ಮಾಡಿಕೊಂಡಿವೆ. ತಕ್ಷಣಕ್ಕೆ ಇದು ಶಾಲೆಯೋ, ಕೊಂಡವಾಡವೊ ಅರ್ಥವಾಗುವುದಿಲ್ಲ. ಹಳೇಹುಬ್ಬಳ್ಳಿ ಇಂಡಿ ಪಂಪ್‌ ವೃತ್ತದಲ್ಲಿ ಇರುವ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-19’ರ ಕರುಣಾಜನಕ ಚಿತ್ರಣವಿದು.

 

ಸೋರುವ ಶಾಲೆ: ಛತ್ರಿ ಹಿಡಿದೇ ಪಾಠ ಕೇಳುವ ವಿದ್ಯಾರ್ಥಿಗಳು!

ಶಾಲೆಗೆ ಮುಳುವಾದ ಹೆದ್ದಾರಿ:

ಈ ಶಾಲೆಯ ಮುಂದಿರುವ ಕಾರವಾರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ನಂ-63. ಈ ಹೆದ್ದಾರಿಯ ಅಗಲೀಕರಣ ಮತ್ತು ಕಾಂಕ್ರೀಟಿಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಗಲೀಕರಣ ವೇಳೆ ಈ ಶಾಲೆಯ ಕಾಂಪೌಂಡ್‌ ಸೇರಿದಂತೆ ಆವರಣದ ತುಸು ಜಾಗ ರಸ್ತೆಗೆ ಸ್ವಾಧೀನವಾಗಿದೆ. ಗುತ್ತಿಗೆದಾರರು ಕಾಂಪೌಂಡ್‌ ತೆರವುಗೊಳಿಸಿ ಅರೆಬರೆ ತಗಡಿನ (ಪತ್ರಾಸ್‌) ಗೋಡೆ ನಿರ್ಮಿಸಿದ್ದರು. ಆದರೆ, ಕಾಂಕ್ರೀಟ್‌ ಕಾಮಗಾರಿ ವಿಳಂಬವಾಗಿದ್ದರಿಂದ ಕೆಲವಷ್ಟುತಗಡುಗಳು ಕಿತ್ತುಹೋಗಿ ದನ, ನಾಯಿ, ಹಂದಿಗಳು ಮತ್ತು ನಿಸರ್ಗ ಕರೆ ಅರ್ಜಂಟಾದ ಮಂದಿ ಎಗ್ಗಿಲ್ಲದೇ ಒಳ ನುಗ್ಗುತ್ತಾರೆ.

ಇಲ್ಲಿ ಐವರು ಶಿಕ್ಷಕಿಯರು, ಓರ್ವ ಹೆಡ್‌ಮಾಸ್ಟರ್‌ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಬೆಳಗ್ಗೆ ಶಾಲೆಗೆ ಬಂದಾಗ ಶಾಲಾ ಆವರಣದ ಗಲೀಜು ಸ್ವಚ್ಛಗೊಳಿಸುವುದೇ ಇವರಿಗೆ ಕಾಯಕವಾಗಿದೆ. ಸ್ವೀಪರ್‌, ಜವಾನ ಇಲ್ಲದಿರುವುದರಿಂದ ಶಿಕ್ಷಕಯರೇ ಮೂಗಿಗೆ ಬಟ್ಟೆಕಟ್ಟಿಕೊಂಡು ಸ್ವಚ್ಛಗೊಳಿಸುತ್ತಾರೆ. ಆದಾಗ್ಯೂ ಇದು ಶಾಲೆ ಎನ್ನುವ ಖಬರು ಇಲ್ಲದೇ ಹಗಲಿನಲ್ಲೇ ಜನರು ಇಲ್ಲಿ ಮೂತ್ರ ಮಾಡುತ್ತಲೇ ಇರುತ್ತಾರೆ. ಈ ಅವ್ಯವಸ್ಥೆಯ ಮಧ್ಯೆಯೇ ಶಿಕ್ಷಕಿಯರಿಗೆ ಪಾಠ ಮಾಡುವುದು ಮತ್ತು ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುವುದು ಅನಿವಾರ್ಯವಾಗಿದೆ.

ಶಾಲೆಗೆ ಬರಲು ಮಕ್ಕಳು ಹಿಂದೇಟು:

ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಇದೂ ಒಂದು. 1ರಿಂದ 7ನೇ ತರಗತಿ ವರೆಗೂ ಇದೆ. 170 ಮಕ್ಕಳು ಇಲ್ಲಿ ಓದುತ್ತಿದ್ದರು. ಯಾವಾಗ ಈ ಶಾಲೆ ದುಸ್ಥಿತಿಗೆ ತಲುಪಿತೋ ಅಂದಿನಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತ ಬಂದು ಇದೀಗ 117ಕ್ಕೆ ಇಳಿದಿದೆ. ಹಾಜರಾತಿ ದಿನದಿನವೂ ಕಡಿಮೆಯಾಗುತ್ತಿದೆ. ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದರೆ, ಪಾಲಕರು ಕೂಡ ಇಂಥ ಗಲೀಜು ಶಾಲೆಯಲ್ಲಿ ನಮ್ಮ ಮಕ್ಕಳನ್ನು ಹೇಗೆ ಓದಿಸುವುದು ಎನ್ನುತ್ತಿದ್ದಾರೆ.

ನಗರದ ಪ್ರಮುಖ ವೃತ್ತದಲ್ಲಿ ಈ ಶಾಲೆ ಇದೆ. ಪ್ರತಿಷ್ಠಿತರು ಓಡಾಡುವ ಜಾಗವಿದು. ಪಕ್ಕದಲ್ಲೇ ಪೊಲೀಸ್‌ ಠಾಣೆ, ಎದುರಿಗೇ ದೊಡ್ಡ ಮಸೀದಿ ಇದ್ದು, ಸದಾ ಜನಜಂಗುಳಿಯ ಪ್ರದೇಶ ಇದಾಗಿದ್ದರೂ ಈ ಜ್ಞಾನದೇಗುಲ ಮಾತ್ರ ಅನಧಿಕೃತ ಸಾರ್ವಜನಿಕ ಶೌಚಾಲಯವಾಗಿದೆ.

ಈ ಶಾಲೆಯ ಅವ್ಯವಸ್ಥೆ ಸರಿಪಡಿಸುವಂತೆ ಮತ್ತು ತಕ್ಷಣ ಕಾಂಪೌಂಡ್‌ ನಿರ್ಮಿಸಿ ಕೊಡುವಂತೆ ಹೆಡ್‌ಮಾಸ್ಟರ್‌ ಎಚ್‌.ವಿ. ಕುಂದರಗಿ ಅವರು ಬಿಇಒ, ಗುತ್ತಿಗೆದಾರರು, ಮಹಾನಗರ ಪಾಲಿಕೆಗೆ ದುಂಬಾಲು ಬಿದ್ದಿದ್ದರೂ ಯಾರೂ ಈ ವರೆಗೆ ಕ್ಯಾರೇ ಎಂದಿಲ್ಲ.

Viral Photo : ಬಿಸಿಲಿನಲ್ಲಿ ರಿಕ್ಷಾವಾಲಾನಿಗೆ ಛತ್ರಿ ಹಿಡಿದು ಮಾನವೀಯತೆ ಮೆರೆದ ಟೀಚರ್

ಈ ಶೌಚಾಲಯದಂತಹ ಶಾಲೆಯಲ್ಲಿ ಬಡವರ ಮಕ್ಕಳ ಜ್ಞಾನಾರ್ಜನೆ ಮುಂದುವರಿದಿದೆ.

ಕೇಂದ್ರ-ರಾಜ್ಯ ಸರ್ಕಾರದ ಅನುದಾನದಲ್ಲಿ ಈ ಹೆದ್ದಾರಿ ಅಗಲೀಕರಣ, ಕಾಂಕ್ರೀಟಿಕರಣ ಕಾಮಗಾರಿ ನಡೆದಿದೆ. ರಾಜ್ಯ ಸರ್ಕಾರ ಬಿಲ್‌ ತಡೆಹಿಡಿದಿದ್ದರಿಂದ ಶಾಲಾ ಕಾಂಪೌಂಡ್‌ ನಿರ್ಮಿಸಲು ಆಗಿಲ್ಲ. ಬಿಲ್‌ ಬಂದೊಡನೆ ಕಾಂಪೌಂಡ್‌ ನಿರ್ಮಿಸುತ್ತೇವೆ.

ಎಚ್‌.ಆರ್‌. ಗೋಣಿ, ವ್ಯವಸ್ಥಾಪಕ, ಟ್ರಿನಿಟಿ ಗುತ್ತಿಗೆದಾರ ಸಂಸ್ಥೆ

ಕಾಂಪೌಂಡ್‌Ü ತೆರವುಗೊಳಿಸಿದ್ದರಿಂದ ಅವ್ಯವಸ್ಥೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ನಿಗಮಕ್ಕೆ ಈ ಕುರಿತು ಪತ್ರ ಬರೆದಿದ್ದೇವೆ. ಅಲ್ಲಿ ಜಾಗದ ಸಮಸ್ಯೆಯೂ ಇದೆ. ಆದಾಗ್ಯೂ ಅವರು ಶೀಘ್ರದಲ್ಲಿ ಕಾಂಪೌಂಡ್‌ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ.

ಚೆನ್ನಪ್ಪಗೌಡ, ಬಿಇಒ

Latest Videos
Follow Us:
Download App:
  • android
  • ios