Asianet Suvarna News Asianet Suvarna News

ಕೊರೋನಾ ಕಡಿಮೆಯಾಗುತ್ತಿದ್ದಂತೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕುಸಿತ..!

ಒಂದೇ ವರ್ಷದ ಅಂತರದಲ್ಲಿ 6060 ಮಕ್ಕಳು ಸಂಖ್ಯೆ ಇಳಿಕೆ, ಖಾಸಗಿ ಶಾಲೆಗಳಿಗೆ ಸೇರ್ಪಡೆ

Admission Decline Government Schools in Chikkaballapur grg
Author
First Published Sep 23, 2022, 12:29 PM IST

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಸೆ.23):  ಮಹಾಮಾರಿ ಕೋವಿಡ್‌ ಸೃಷ್ಟಿಸಿದ್ದ ಆರ್ಥಿಕ ಸಂಕಷ್ಟದ ಪರಿಣಾಮ ಕಳೆದ 2 ವರ್ಷಗಳಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಪೋಷಕರು ದಂಬಾಲು ಬಿದ್ದು ತಮ್ಮ ಮಕ್ಕಳನ್ನು ಸೇರಿದ್ದರಿಂದ ಮಕ್ಕಳ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಆದರೆ ಕೋವಿಡ್‌ ಸೋಂಕು ತಗ್ಗುತ್ತಿದ್ದಂತೆ ಈಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕೂಡ ಕುಸಿತ ಕಂಡಿದೆ. ಹೌದು, ಜಿಲ್ಲೆಯಲ್ಲಿ 2021-22 ಹಾಗೂ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾಗಿರುವ ಮಕ್ಕಳ ವಿವರ ಕನ್ನಡಪ್ರಭಗೆ ಲಭ್ಯವಾಗಿದ್ದು ಕೊರೋನಾ ಸೋಂಕು ಕಡಿಮೆ ಆಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸಿ ಖಾಸಗಿ ಶಾಲೆಗಳಿಗೆ ದಾಖಲು ಮಾಡಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ 6 ಸಾವಿರ ಮಕ್ಕಳ ದಾಖಲಾತಿ ಸರ್ಕಾರಿ ಶಾಲೆಗಳಲ್ಲಿ ಕುಸಿತ ಕಂಡಿದೆ.

6,060 ಮಕ್ಕಳ ದಾಖಲಾತಿ ಕುಸಿತ

ಜಿಲ್ಲೆಯ 190 ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಎರಡಂಕಿ ದಾಟದ ಬಗ್ಗೆ ಕನ್ನಡಪ್ರಭ ಇತ್ತೀಚೆಗೆ ಅಷ್ಟೇ ವಿಶೇಷ ವರದಿ ಪ್ರಕಟಿಸಿದ್ದನ್ನು ನೀವು ಓದಿದ್ದಿರಿ. ಆದರೆ ಇದೀಗ ಕೋವಿಡ್‌ ಸೋಂಕು ಕಡಿಮೆ ಆಗುತ್ತಿದ್ದಂತೆ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿರುವ ಪರಿಣಾಮ ಒಂದೇ ವರ್ಷದ ಅಂತರದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 6,000 ಅಧಿಕ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 2021-22 ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯವರೆಗೂ ಒಟ್ಟು 82,703 ವಿದ್ಯಾರ್ಥಿಗಳು ಓದುತ್ತಿದ್ದರು. ಆದರೆ 2022-23ನೇ ಸಾಲಿನಲ್ಲಿ 1 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳ ಸಂಖ್ಯೆ 76,643ಕ್ಕೆ ಕುಸಿದಿದೆ. ಕೋವಿಡ್‌ ತಗ್ಗಿದ ಬಳಿಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿದಿದೆ.

Education: ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿ ಶೇ.25 ರಷ್ಟುಸಂಖ್ಯಾಬಲ ಹೆಚ್ಚಳ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮಾಹಿತಿ ಪ್ರಕಾರ ಕಳೆದ 2021-22ನೇ ಸಾಲಿನಲ್ಲಿ 1 ನೇ ತರಗತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಟ್ಟು 10,595 ಮಕ್ಕಳು ಓದುತ್ತಿದ್ದರು. 2022-23ಕ್ಕೆ 1 ನೇ ತರಗತಿಯಲ್ಲಿ ಕೇವಲ 7,281 ಮಕ್ಕಳು ಓದುತ್ತಿದ್ದಾರೆ. 4ನೇ ತರಗತಿಯಲ್ಲಿ ಕಳೆದ 2021-22ರಲ್ಲಿ ಒಟ್ಟು 8,437 ಮಕ್ಕಳು ಓದುತ್ತಿದ್ದು 2022-23ನೇ ಸಾಲಿನಲ್ಲಿ ಆ ಸಂಖ್ಯೆ 7,865ಕ್ಕೆ ಇಳಿದಿದೆ. 6ನೇ ತರಗತಿಯಲ್ಲಿ 2021-22 ರಲ್ಲಿ ಒಟ್ಟು 8,434 ಮಕ್ಕಳು ಓದುತ್ತಿದ್ದರು ಆ ಸಂಖ್ಯೆ 2022-23ಕ್ಕೆ 6231ಕ್ಕೆ ಇಳಿದಿದೆ. 9ನೇ ತರಗತಿಯಲ್ಲಿ 2021-22 ರಲ್ಲಿ 7,368 ಮಕ್ಕಳು ಇದ್ದು, 2022-23ಕ್ಕೆ ಒಟ್ಟು 7041 ಮಕ್ಕಳು ಮಾತ್ರ ಓದುತ್ತಿದ್ದಾರೆ. 

ಕೋವಿಡ್‌ ನಿವಾರಣೆ ಕಾರಣ?

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ದಿಢೀರ್‌ನೆ ಈ ವರ್ಷ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ ಕಂಡಿರುವ ಬಗ್ಗೆ ಶಿಕ್ಷಣಾಧಿಕಾರಿಗಳು ಕೋವಿಡ್‌ ಪರಿಣಾಮ ಎನ್ನುತ್ತಿದ್ದಾರೆ. ಕೋವಿಡ್‌ ಇದ್ದಾಗ ಆನ್‌ಲೈನ್‌ ಪಾಠಕ್ಕೆಲ್ಲಾ ಏಕೆ ಶುಲ್ಕ ಕಟ್ಟಬೇಕೆಂದು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರು. ಕೊರೋನಾ ಕಡಿಮೆ ಆಗಿ ಶಾಲೆಗಳಲ್ಲಿ ಈಗ ಭೌತಿಕ ತರಗತಿಗಳು ಶುರುವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ಪೋಷಕರು ಟಿಸಿ ಪಡೆದು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಗೆ ತಿಳಿಸಿದರು.
 

Follow Us:
Download App:
  • android
  • ios