ಕೆಸರುಗದ್ದೆಯಲ್ಲೇ ಪಾಠ - ಕೃಷಿ ಮಾಡುವ ಮಹಿಳೆಯರೇ ಗುರುಗಳು!
ಉಡುಪಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಳೆಯ ನಡುವೆಯೂ ಕೆಸರು ಗದ್ದೆಯಲ್ಲಿ ಭತ್ತ ನಾಟಿ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಉಡುಪಿ (ಜು.23) : ಪುಸ್ತಕದ ಪಾಠ ಸಾಕು, ಜೀವನದ ಪಾಠ ಬೇಕು ಅನ್ನೋದು ಮಕ್ಕಳ ಹಂಬಲ . ಆದರೆ ಪುಟ್ಟ ಪ್ರಾಯದಲ್ಲಿ ಅದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳ ಮನದ ಇಂಗಿತವನ್ನು ಅರ್ಥ ಮಾಡಿಕೊಂಡು ಶಿಕ್ಷಕರೇ ವಿಶಿಷ್ಟ ರೀತಿಯ ಪಾಠ ನಡೆಸಿದ್ದಾರ.
ಉಡುಪಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಳೆಯ ನಡುವೆಯೂ ಕೆಸರು ಗದ್ದೆಯಲ್ಲಿ ಭತ್ತ ನಾಟಿ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೃಷಿ ರಂಗದತ್ತ ಯುವ ಜನತೆ ಬೆನ್ನು ಹಾಕುತ್ತಿರುವ ಮಧ್ಯೆಯೇ ಇಲ್ಲಿನ ಗುರುಕುಲ ವಿದ್ಯಾಸಂಸ್ಥೆಯ ಯುವ ವಿದ್ಯಾರ್ಥಿಗಳ ಕೃಷಿ ಆಸಕ್ತಿ ಮಾದರಿ ಎನಿಸಿತು.
Uttara Kannada; ರಾಜ್ಯಕ್ಕೆ ಮಾದರಿ ಈ ಕೃಷಿ ಪಾಠದ ಶಾಲೆ!
ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಶನಿವಾರ ಶಾಲೆಗೆ ಬಂದು ಅಲ್ಲಿ ಶಾಲಾ ವಾಹನವೇರಿ ನೇರಳಕಟ್ಟೆ ಹಾಗೂ ಆಜ್ರಿ ಮಧ್ಯಭಾಗದ ಬಾಂಡ್ಯ ಎಂಬ ಕುಗ್ರಾಮಕ್ಕೆ ಬಂದಿಳಿದರು. ಶಾಲಾ ಆಡಳಿತ ಮಂಡಳಿ ಆಯೋಜಿಸಿದ ನಾಟಿ ಕಾರ್ಯಕ್ಕಾಗಿ ಈ ಮಕ್ಕಳು ಆಗಮಿಸಿದ್ದು ಅವರನ್ನು ವಿಶೇಷವಾಗಿ ಬರ ಮಾಡಿಕೊಳ್ಳಲಾಯಿತು. ಗದ್ದೆಗೆ ಬಂದ ವಿದ್ಯಾರ್ಥಿಗಳು ಹಿಂದೆ ಮುಂದೆ ನೋಡದೇ ಮೊದಲೇ ಉಳುಮೆ ಮಾಡಿದ್ದ ಗದ್ದೆಗಿಳಿದುಕೃಷಿ ನಾಟಿ ಕಾರ್ಯಕ್ಕೆ ಮುಂದಾದರು.
ಸ್ಥಳೀಯರ ಕೃಷಿಕ ಮಹಿಳೆಯರು ಈ ವಿದ್ಯಾರ್ಥಿಗಳಿಗೆ ನಾಟಿ ಕೆಲಸಕ್ಕೆ ಗುರುಗಳಾದರು. ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಹಿರಿಯರು ಹೇಳಿಕೊಟ್ಟಂತೆಯೇ ಕೈಯಲ್ಲಿ ನೇಜಿ ಹಿಡಿದು ಸಾಲು ನಾಟಿ ಮಾಡಿ ಸಂಭ್ರಮಿಸಿದರು. ಮಕ್ಕಳ ಈ ಜೋಷ್ ನೋಡಿ ಅನುಭವಿ ಕೃಷಿಕ ಮಹಿಳೆಯರೇ ಒಂದು ಕ್ಷಣ ದಂಗಾಗುವಂತೆ ಮಕ್ಕಳು ನಾಜೂಕಾಗಿ ನಾಟಿ ಮಾಡಿ ಸೈ ಎನಿಸಿಕೊಂಡರು.
ವಿದ್ಯಾರ್ಥಿಗಳ ಜೊತೆ ನಾಟಿ ಕಾರ್ಯದಲ್ಲಿ ಸಂಸ್ಥೆಯ ಶಿಕ್ಷಕರೂ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಂಡ್ಯ ಎಜುಕೇಷನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮಾ.ಎಸ್.ಶೆಟ್ಟಿ ಅವರು, ಗುರುಕುಲ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಆಸಕ್ತಿ ನೀಡಲಾಗಿದೆ. ಭತ್ತದ ಹೇಗೆ ಬೆಳೆಯಲಾಗುತ್ತಿದೆ ಎನ್ನುವ ಗೊಂದಲ ಇರುವ ಮಕ್ಕಳಿಗೆ ಪ್ರಾಯೋಗಿಕವಾಗಿ ಭತ್ತದ ಗಿಡಗಳ ನಾಟಿ ಕಾರ್ಯ, ರೈತಾಪಿ ವರ್ಗದ ಶ್ರಮ ಅರ್ಥ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಗ್ರಾಮೀಣ ಭಾಗದ ಗದ್ದೆಗಳಲ್ಲಿ ಸಾವಯವ ಮಾದರಿಯ ಕೃಷಿ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಜುಲೈ 23 ರಂದು ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಉಡುಪಿಗೆ, 15 ಸಾವಿರ ಸಸಿ ವಿತರಣೆ
ನಾಟಿ ಜೊತೆಗೆ ಕೆಸರಲ್ಲಿ ಆಟ..!
ಬೆಂಗಳೂರು, ಬೆಳಗಾವಿ, ಗದಗ , ಬಾಗಲಕೋಟೆ , ಕೊಪ್ಪಳ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಕುಂದಾಪುರಕ್ಕೆ ವಿದ್ಯಾರ್ಜನೆ ಸಲುವಾಗಿ ಬಂದ ಮಕ್ಕಳಲ್ಲಿ ನಾಟಿ ಕಾರ್ಯ ಹೇಳಿಕೊಡುವ ಜೊತೆಗೆ ಕೆಸರಿನಲ್ಲಿ ಆಟೋಟ ನಡೆಸಲಾಯಿತು.
ಭತ್ತದ ಸಸಿಯನ್ನು ಹೊತ್ತು ತರುವುದರಿಂದ ಹಿಡಿದು, ಗದ್ದೆ ಹಸನ ಮಾಡುವುದು, ಅಂಚು ಕಡಿಯುವುದು, ಗದ್ದೆಯ ಕೆಸರಿನಲ್ಲಿ ನೆಡುವುದರ (ನಾಟಿ ಮಾಡುವುದರ) ವರೆಗೂ ಮಾರ್ಗದರ್ಶನ ಪಡೆದುಕೊಂಡರು.