ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ವಾರ್ಷಿಕ ಘಟಿಕೋತ್ಸವ: ಸಚಿವ ಅಶ್ವಥ್ ಭಾಗಿ
ಡಾ.ಸಿ.ಎನ್. ಅಶ್ವತ್ಠನಾರಾಯಣ ಅವರು ಪದವೀಧರರು ತಮ್ಮ ಶಿಕ್ಷಣವನ್ನು ಸಮಾಜದ ಏಳಿಗೆಗಾಗಿ ಅನ್ವಯಿಸಬೇಕೆಂದು ಪ್ರತಿಪಾದಿಸಿದರು. ಬೆಂಗಳೂರನ್ನು ದೇಶದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಅಲಯನ್ಸ್ ವಿಶ್ವವಿದ್ಯಾನಿಲಯವು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ
ಬೆಂಗಳೂರು (ಜ.14): ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮತ್ತು ದಕ್ಷಿಣ ಭಾರತದ ಮೊದಲ ಖಾಸಗಿ ವಿಶ್ವವಿದ್ಯಾಲಯವಾದ ಅಲಯನ್ಸ್ ವಿಶ್ವವಿದ್ಯಾಲಯವು ತನ್ನ ವಾರ್ಷಿಕ ಘಟಿಕೋತ್ಸವವನ್ನು ಬೆಂಗಳೂರಿನ ಆನೇಕಲ್‌ನಲ್ಲಿರುವ ವಿಶ್ವವಿದ್ಯಾಲಯದ ಕೇಂದ್ರ ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಮತ್ತು ಅವರ ಕುಟುಂಬದವರು ಭಾಗವಹಿಸಿದರು. ಘಟಿಕೋತ್ಸವದ ಅಧ್ಯಕ್ಷತೆಯನ್ನು ಅಲಯನ್ಸ್ ವಿಶ್ವವಿದ್ಯಾನಿಲಯದ ಸಹ-ಸಂದರ್ಶಕರು ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮತ್ತು ಕೌಶಲ್ಯಾಭಿವೃದ್ಧಿ, ವಾಣಿಜ್ಯೋದ್ಯಮ ಮತ್ತು ಜೀವನೋಪಾಯ ಖಾತೆಗಳ ಸಚಿವರಾದ ಗೌರವಾನ್ವಿತ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ವಹಿಸಿದ್ದರು.
ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾ.ಎಸ್.ಆರ್.ಬನ್ನೂರಮಠ ಹಾಗೂ ಡೆಲಾಯ್ಟ್‌ನ ಹ್ಯಾಶೆಡ್‌ಇನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಹರ್ಷಿತ್ ಸಿಂಘಾಲ್ ಅವರು ಘಟಿಕೋತ್ಸವದ ಗೌರವ ಅತಿಥಿಗಳಾಗಿದ್ದರು. ಸಮಾರಂಭವು ಸಹ-ಕುಲಾಧಿಪತಿಗಳಾದ ಶ್ರೀ ಅಭಯ್ ಜಿ. ಚೆಬ್ಬಿ ಅವರ ಸ್ವಾಗತ ನುಡಿಗಳೊಂದಿಗೆ ಆರಂಭವಾಯಿತು. ಅವರು ಪದವೀಧರರನ್ನು ಅವರ ಶೈಕ್ಷಣಿಕ ಸಾಧನೆಗಾಗಿ ಅಭಿನಂದಿಸಿದರು ಮತ್ತು ಪದವೀಧರರು ಸಂಪರ್ಕ ಮತ್ತು ಸಂವಹನ ಸಾಮರ್ಥ್ಯಗಳನ್ನು ಬಲಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಕಾಲಕ್ಕನುಗುಣವಾಗಿ ಅಗತ್ಯ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಮೂಲಕ, ಉದ್ಯಮಿಯಂತೆ ಯೋಚನಾ ಶಕ್ತಿಯನ್ನು ಹೊಂದಿ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಅವರು ಪ್ರೋತ್ಸಾಹದ ನುಡಿಗಳನ್ನಾಡಿದರು.
ಸಿದ್ದರಾಮಯ್ಯಗೆ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ: ಸಚಿವ ಮುನಿರತ್ನ
ಇದರ ನಂತರ ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನುಭಾ ಸಿಂಗ್ ಅವರು ವಿಶ್ವವಿದ್ಯಾನಿಲಯದ ವಾರ್ಷಿಕ ವರದಿಯನ್ನು ಮಂಡಿಸಿದರು. ವರದಿಯಲ್ಲಿ ಅವರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಸಾಧನೆಗಳ ಸಮಗ್ರ ನೋಟವನ್ನು ಒದಗಿಸಿದರು. ಈ ವರ್ಷವು ಅಲಯನ್ಸ್ ಶಿಕ್ಷಣ ಸಂಸ್ಥೆಯ 25 ನೇ ವಾರ್ಷಿಕೋತ್ಸವದ ವರ್ಷವಾಗಿದ್ದು, ಬೋಧನೆ, ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿಯಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವ ಮೂಲಕ ವ್ಯಕ್ತಿಗಳ ಜೀವನವನ್ನು ಪರಿವರ್ತನೆಯೆಡೆಗೆ ಕೊಂಡೊಯ್ಯುವ ಮೂಲಕ ವಿಶ್ವ-ದರ್ಜೆಯ ಸಂಸ್ಥೆಯಾಗುವ ದೂರದೃಷ್ಟಿಯನ್ನು ವಿಶ್ವವಿದ್ಯಾಲಯವು ಹೊಂದಿದೆ ಎಂದರು. ಕುಲಪತಿಗಳು ವಿಶ್ವವಿದ್ಯಾಲಯವು ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿದ್ದು, ಅನುಭವಿ ಪೂರ್ಣ ಕಾಲಿಕ ಅಧ್ಯಾಪಕರ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಒತ್ತು ನೀಡಿದೆ ಎಂದರು.
ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಕ್ಕೆ ದೊರೆತಿರುವ ಮನ್ನಣೆಗಳನ್ನು ಅವರು ಸ್ಮರಿಸಿದರು. ಕಾರ್ಯಕ್ರಮದ ಮುಖ್ಯ ಭಾಷಣವನ್ನು ಮಾಡಿದ ಮಾನ್ಯ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಪದವೀಧರರನ್ನು ಅಭಿನಂದಿಸಿ, ತಮ್ಮ ಶಿಕ್ಷಣವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕೆಂದು ಪ್ರತಿಪಾದಿಸಿದರು. ವಿಶ್ವವಿದ್ಯಾಲಯವನ್ನು ನವೀನ ಸಂಸ್ಥೆಯಾಗಿ ಬೆಳೆಸಲು ಪ್ರಯತ್ನಿಸುತ್ತಿರುವ ಆಡಳಿತ ಮಂಡಳಿ ಸದಸ್ಯರು, ವಿದ್ಯಾ ವಿಷಯಕ್ ಪರಿಷತ್ ಸದಸ್ಯರು, ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರಿಗೆ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು ಮತ್ತು ಪದವಿ ಪಡೆದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. ಭವಿಷ್ಯದ ನಾಯಕರನ್ನು ರೂಪಿಸುವಲ್ಲಿ ಮತ್ತು ಭಾರತದ ಉನ್ನತ ಶಿಕ್ಷಣ ಕ್ಷೇತ್ರವನ್ನು ವಿಕಸನಗೊಳಿಸುವಲ್ಲಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಮುಂದಿನ 10 ವರ್ಷಗಳಲ್ಲಿ ಸಂಪೂರ್ಣವಾಗಿ ಜಾರಿಗೊಳಿಸುವ ಮತ್ತು ರಾಷ್ಟ್ರೀಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದರು. ಅವರು 2022ರಲ್ಲಿ ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸಿದ ಅಲಯನ್ಸ್ ವಿಶ್ವವಿದ್ಯಾಲಯದ ಬೆಳವಣಿಗೆಯ ಪಯಣದ ಕುರಿತು ಪ್ರಸ್ತಾಪಿಸುತ್ತ ಉದಾರ ಕಲಾ ಶಿಕ್ಷಣದ ಮೂಲಕ ವಿಶ್ವವಿದ್ಯಾಲಯವು ವೈವಿಧ್ಯತೆಗೆ ಪ್ರಾಧಾನ್ಯತೆ ನೀಡಿದೆ ಮತ್ತು ಸಾಹಿತ್ಯೋತ್ಸವಗಳನ್ನು ಆಯೋಜಿಸುವ ಮೂಲಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ತಾಣವಾಗಿ ರೂಪುಗೊಳ್ಳುತ್ತಿದೆ ಎಂದರು. ತದನಂತರ, ಡೆಲಾಯ್ಟ್‌ನ ಹ್ಯಾಶೆಡ್‌ಇನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರ್ಷಿತ್ ಸಿಂಘಾಲ್ ಅವರು ಪದವೀಧರರು ಕಲಿಕಾ ಪ್ರಕ್ರಿಯನ್ನು ಮುಂದುವರೆಸಿಕೊಂಡು ಹೋಗಬೇಕು.
ಜಗತ್ತಿನಲ್ಲಿ ನಡೆಯುತ್ತಿರುವ ನಿರಂತರ ಬದಲಾವಣೆಗಳು ಮತ್ತು ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು. ಪದವೀಧರರು ವಿಶ್ವಾಸಾರ್ಹ ಸಲಹೆಗಾರರಾಗುವ ಮೂಲಕ ಕೇವಲ ಸ್ವಂತ ಲಾಭದ ಬಗ್ಗೆ ಯೋಚಿಸದೆ ವಿಶ್ವಾಸಾರ್ಹತೆ ಮತ್ತು ನಂಬುಗೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಪದವೀಧರರು ತಮ್ಮ ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂತೋಷದಿಂದ ಕೆಲಸದಲ್ಲಿ ತೊಡಗುವುದು ಸಾಧ್ಯವಾಗುತ್ತದೆ. ಇದು ವ್ಯಕ್ತಿಯ ಯಶಸ್ಸಿಗೆ ಮತ್ತು ಅತ್ಯುತ್ತಮ ಸಾಧನೆಗೆ ಅತ್ಯಗತ್ಯವಾಗಿದೆ ಎಂದರು.
ಸಂಯೋಜಿತ ಕಲಿಕೆ, ವಿಶ್ವಾಸಾರ್ಹ ಸಲಹಾ ಮನೋಧರ್ಮ ಮತ್ತು ತಾನು ಮಾಡುವ ಕೆಲಸವನ್ನು ಪ್ರೀತಿಸುವುದು ಈ ಮೂರು ತತ್ವಗಳು ವ್ಯಕ್ತಿಯ ಯಶಸ್ಸಿನ ಕೀಲಿ ಕೈಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅವರು ಪದವೀಧರರ ಯಶಸ್ಸಿನಲ್ಲಿ ಪೋಷಕರು, ಕುಟುಂಬ ಸದಸ್ಯರು ಮತ್ತು ಶಿಕ್ಷಕರ ಪಾತ್ರವನ್ನು ಶ್ಲಾಘಿಸಿದರು ಮತ್ತು ಯುವಜನರು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸಬೇಕೆಂದು ಪ್ರತಿಪಾದಿಸಿದರು. ವಿಶ್ವದ ಯುವ ದೇಶವಾಗಿ ಗುರುತಿಸಿಕೊಳ್ಳುವ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪದವೀಧರರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಅವರು ನುಡಿದರು.
Mandya: ರಾಜ್ಯ, ರಾಷ್ಟ್ರಕ್ಕೆ ಕಾಂಗ್ರೆಸ್ ಅನಿವಾರ್ಯ: ಚಲುವರಾಯಸ್ವಾಮಿ
ತಮ್ಮ ವಿಷಯಗಳಲ್ಲಿ ಉನ್ನತ ಶ್ರೇಣಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪದಕಗಳು ಮತ್ತು ಅರ್ಹತಾ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಎಲ್ಲಾ ಪದವೀಧರರಿಗೆ ಪದವಿ ಮತ್ತು ಡಿಪ್ಲೋಮಾಗಳನ್ನು ಪ್ರದಾನ ಮಾಡುವ ಮೂಲಕ ಘಟಿಕೋತ್ಸವವನ್ನು ಸ್ಮರಣೀಯವಾಗಿ ಸಂಪನ್ನಗೊಳಿಸಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 2445 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅವರಲ್ಲಿ 1615 ವಿದ್ಯಾರ್ಥಿಗಳು ಪದವಿಗಳನ್ನು, 830 ವಿದ್ಯಾರ್ಥಿಗಳು ಡಿಪ್ಲೋಮಾಗಳನ್ನು ಮತ್ತು 14 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಗಳನ್ನು ಪಡೆದುಕೊಂಡರು. ಉನ್ನತ ಶ್ರೇಯಾಂಕದಲ್ಲಿ ತೇರ್ಗಡೆಯಾದ 161 ವಿದ್ಯಾರ್ಥಿಗಳಿಗೆ ಪದಕ ಹಾಗೂ ಅರ್ಹತಾ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.