ಸಿದ್ದರಾಮಯ್ಯಗೆ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ: ಸಚಿವ ಮುನಿರತ್ನ

ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ನಡೆಯಲಿದ್ದು, ಕಾಂಗ್ರೆಸ್‌ ಲೆಕ್ಕಕ್ಕೇ ಇಲ್ಲ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. 

Minister Muniratna Speaks About Siddaramaiah at Kolar gvd

ಕೋಲಾರ (ಜ.14): ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ನಡೆಯಲಿದ್ದು, ಕಾಂಗ್ರೆಸ್‌ ಲೆಕ್ಕಕ್ಕೇ ಇಲ್ಲ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಶಾಸಕರು ಹಾಗೂ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸಿದ್ದರಾಮಯ್ಯರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 

ಹೇಗಾದರೂ ಮಾಡಿ ಸೋಲಿಸಬೇಕೆಂದು ಒಳಸಂಚು ರೂಪಿಸುತ್ತಿದ್ದಾರೆ. ಒಳ ಜಗಳದ ಸೂಕ್ಷ್ಮವನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ತಮ್ಮ ನಿಜವಾದ ಹಿತೈಷಿಗಳು ಯಾರು ಎಂಬುದು ಗೊತ್ತಾಗುತ್ತದೆ. ಜಿಲ್ಲೆಯ ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸೋಲುವ ಭಯದಿಂದ ಅವರನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ

ಸಿದ್ದು ಕ್ಷೇತ್ರ ಬದಲಿಸಿದರೆ ಒಳಿತು: ಡಿ.ಕೆ.ಶಿವಕುಮಾರ್‌ ಮನೆ ದೇವರ ಪ್ರಕಾರ ಸಿದ್ದರಾಮಯ್ಯ ಒಂದು ಕಡೆ ನಿಂತರೆ ಮಾತ್ರ ಗೆಲ್ಲುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಮನೆ ದೇವರು ಎರಡು ಕಡೆ ನಿಂತುಕೊಳ್ಳಬೇಕೆಂದು ಹೇಳುತ್ತಿದೆ. ಶಿವಕುಮಾರ್‌ ಅವರ ಮನೆ ದೇವರ ಮಾತಿನಂತೆ ಕೋಲಾರ ಕ್ಷೇತ್ರ ಬಿಟ್ಟರೆ ಬಹಳ ಒಳ್ಳೆಯದು ಎಂದರು. ಮುಸ್ಲಿಮರ 40 ಸಾವಿರ ಓಟು ಇವೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಾದಾಮಿ ಮುಗಿಸಿ ಈಗ ಕೋಲಾರಕ್ಕೆ ಬಂದಿದ್ದಾರೆ. ರಾಜಕೀಯದಲ್ಲಿ ಒಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು. ಆ ಕ್ಷೇತ್ರಕ್ಕೆ ನಮ್ಮ ಕೊಡುಗೆ ಹೆಚ್ಚಾಗಿರಬೇಕು ಎಂದರು.

ಪದೇ ಪದೇ ಕ್ಷೇತ್ರ ಬದಲಿಸಬಾರದು: ಆ ಕ್ಷೇತ್ರದ ಜನರ ವಿಶ್ವಾಸಗಳಿಸಿದಾಗ ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಬರಲ್ಲ. ಹಲವರು ಒಂದೊಂದು ಕ್ಷೇತ್ರದಲ್ಲಿ ಏಳೆಂಟು ಬಾರಿ ಗೆದ್ದ ಉದಾಹರಣೆಗಳಿವೆ. ಸಿದ್ದರಾಮಯ್ಯ ಏಕೆ ಆಗಾಗ್ಗೆ ಕ್ಷೇತ್ರ ಬದಲಾಯಿಸುತ್ತಾರೋ ನಮಗೆ ಅರ್ಥವಾಗಿಲ್ಲ. ಇದು ಒಳ್ಳೆಯ ಸಂದೇಶವಂತೂ ಅಲ್ಲ. ಅವರದ್ದು ತಪ್ಪು ನಿರ್ಧಾರ. ಬೆಂಗಳೂರಿಗೆ ಹತ್ತಿರವಿರುವ ಕೋಲಾರದ ಯಾವುದಾದರೂ ಕ್ಷೇತ್ರ ಅಭಿವೃದ್ಧಿಯಾಗಿದೆಯೇ, ಸಾರ್ವಜನಿಕರು ಬುದ್ಧಿವಂತರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ್ದಾರೆ ಎಂದರು.

ಪಕ್ಷ ಏಕೆ ಬಿಡುತ್ತಿದ್ದಾರೋ ಗೊತ್ತಿಲ್ಲ: ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಕಾಂಗ್ರೆಸ್‌ ಸೇರುತ್ತಿರುವ ಕುರಿತ ಪ್ರಶ್ನೆಗೆ, ನಾಗೇಶ್‌ ನಮ್ಮ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಮಾಡಿ ಗೆದ್ದವರಲ್ಲ. ಪಕ್ಷೇತರ ಶಾಸಕರಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಪಕ್ಷಕ್ಕೆ ಬೆಂಬಲ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸಚಿವರನ್ನಾಗಿ ಮಾಡಿದ್ದೇವು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೇವು. ಯಾವ ಉದ್ದೇಶದಿಂದ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

4 ದಶಕ ರಾಜಕೀಯ ಮಾಡಿದ್ದರೂ ಸಿದ್ದುಗೆ ಸೋಲಿನ ಭೀತಿ: ಸಿ.ಟಿ.ರವಿ

ಕೋಲಾರದ ಅಭಿವೃದ್ಧಿ ಕೆಲಸ ನಡೆಯದ ಕುರಿತು, ಎಲ್ಲಾ ಶಾಸಕರಿಗೆ ಸರ್ಕಾರ ಅನುದಾನ ನೀಡುತ್ತಿದೆ. ಕೋಲಾರಕ್ಕೆ ಎಷ್ಟುಅನುದಾನ ಬಂದಿದೆ ಎಂಬುದನ್ನು ಬೇಕಾದರೆ ಪಟ್ಟಿಮಾಡಲಿ. ಉಳಿದೆಲ್ಲಾ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಈ ಕೋಲಾರಕ್ಕೆ ಸಿಕ್ಕಿದೆ. ಅದು ಸರಿಯಾಗಿ ಅನುದಾನ ಬಳಕೆ ಆಗಿದೆಯೇ? ಎಲ್ಲೂ ಅಭಿವೃದ್ಧಿ ಕಾಣುತ್ತಿಲ್ಲ. ಇದಕ್ಕೆ ನೇರ ಹೊಣೆ ಕ್ಷೇತ್ರದ ಶಾಸಕರು ಎಂದು ಟೀಕಾ ಪ್ರಹಾರ ನಡೆಸಿದರು.

Latest Videos
Follow Us:
Download App:
  • android
  • ios