Asianet Suvarna News Asianet Suvarna News

16ನೇ ವಯಸ್ಸಿಗೆ ಮಾಸ್ಟರ್ ಡಿಗ್ರಿ ಪಡೆದುಕೊಂಡ ಪ್ರತಿಭಾವಂತ

* ಅಗಸ್ತ್ಯ ತನ್ನ 14ನೇ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸಿದ ಭಾರತದ ಅತ್ಯಂತ ಕಿರಿಯ ಕೀರ್ತಿ ಪಡೆದಿದ್ದರು
* 9ನೇ ವಯಸ್ಸಿಗೆ ತೆಲಂಗಾಣದಲ್ಲಿ SSC ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿಶಿಷ್ಟ ಸಾಧನೆ ಮಾಡಿದ್ದರು
* ಅಗಸ್ತ್ಯ ಕೇವಲ 1.72 ಸೆಕೆಂಡುಗಳಲ್ಲಿ ಎ ನಿಂದ ಹಿಡಿ ಜೆಡ್ ಅಕ್ಷರಗಳನ್ನು ಟೈಪ್ ಮಾಡಬಲ್ಲರು
 

A 16 year old boy got master degree from Osmania University, Hyderabad
Author
First Published Dec 22, 2022, 12:26 PM IST

ಸಾಮಾನ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ 16ನೇ ವಯಸ್ಸಿನಲ್ಲಿ ಶಾಲಾ ಹಂತ ಮುಗಿಯುತ್ತದೆ. 10ನೇ ತರಗತಿ ಮುಗಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತಾರೆ. ಇನ್ನು ಪದವಿ ಪೂರೈಸುವಷ್ಟರಲ್ಲಿ ವಿದ್ಯಾರ್ಥಿ ವಯಸ್ಸು 21-22 ಆಗಿರುತ್ತದೆ. ಆನಂತರ ಸ್ನಾತಕೋತ್ತರ ಪದವಿ ಪಡೆದರೆ, ಇನ್ನೆರಡು ವರ್ಷ ಹೆಚ್ಚಾಗುತ್ತದೆ. ಅಂದ್ರೆ 23ರ ಆಸುಪಾಸಿನಲ್ಲಿ ವಿದ್ಯಾರ್ಥಿ ಡಬಲ್ ಗ್ರಾಜ್ಯುಯೇಷನ್ ಪಡೆಯುತ್ತಾನೆ. ಆದ್ರೆ ಇಲ್ಲೊಬ್ಬ ಬಾಲ ಪ್ರತಿಭೆ, ಕೇವಲ ತನ್ನ 16ನೇ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಹೌದು, ಹೈದರಾಬಾದ್‌ನ (Hyderabad) ಅಗಸ್ತ್ಯ ಜೈಸ್ವಾಲ್ (Agastya Jaiswal) ತಮ್ಮ 16 ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ (Master Degree) ಪೂರ್ಣಗೊಳಿಸಿದ್ದಾನೆ. ಈ ಮೂಲಕ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದ ಮೊದಲ ಭಾರತೀಯ ಹುಡುಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾನೆ. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅಗಸ್ತ್ಯ ಜೈಸ್ವಾಲ್,  ಸಮಾಜಶಾಸ್ತ್ರ (Sociology)ದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾನೆ. ಅಗಸ್ತ್ಯ ತನ್ನ ಅಂತಿಮ ವರ್ಷದ ಪರೀಕ್ಷೆಗಳಲ್ಲಿ ಫಸ್ಟ್ ಗ್ರೇಡ್ ನಲ್ಲಿ ತೇರ್ಗಡೆಯಾಗಿದ್ದಾನೆ. 

ಅಂದಹಾಗೆ ಅಗಸ್ತ್ಯನ‌ ಇಂತಹ ಸಾಧನೆ ಇದೇ ಮೊದಲಲ್ಲ. ಅಗಸ್ತ್ಯನಿಗೆ ಇದು ಹಲವು ‘ಮೊದಲ’ಗಳಲ್ಲಿ ಒಂದಾಗಿದೆ. 2020ರಲ್ಲಿ, 14ನೇ ವಯಸ್ಸಿನಲ್ಲಿ, ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ಭಾರತದ ಅತ್ಯಂತ ಕಿರಿಯ ಮತ್ತು ಮೊದಲ ಹುಡುಗರಾದರು. ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಬಿಎ ಪದವಿ ಪಡೆದರು. ಅದಕ್ಕೂ ಮೊದಲು, 9ನೇ ವಯಸ್ಸಿನಲ್ಲಿ ಅಗಸ್ತ್ಯ ಅವರು ತೆಲಂಗಾಣದಲ್ಲಿ SSC ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅತ್ಯಂತ ಕಿರಿಯ ಹುಡುಗ ಎನಿಸಿಕೊಂಡರು.

ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿದ ಕೇರಳದ ಈ ಕಾರ್ಮಿಕ ಎಲ್ಲರಿಗೂ ಸ್ಫೂರ್ತಿ!

ನನ್ನ ಹೆತ್ತವರು ನನ್ನ ಗುರುಗಳು. ನನ್ನ ತಂದೆ ಅಶ್ವನಿ ಕುಮಾರ್ ಜೈಸ್ವಾಲ್ ಮತ್ತು ನನ್ನ ತಾಯಿ ಭಾಗ್ಯಲಕ್ಷ್ಮಿ ಜೈಸ್ವಾಲ್ ಅವರ ಬೆಂಬಲ ಮತ್ತು ತರಬೇತಿಯೊಂದಿಗೆ, ನಾನು ಯಾವುದೂ ಅಸಾಧ್ಯವಲ್ಲ ಎಂದು ಸಾಬೀತುಪಡಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ ಅಂತ ತಮ್ಮ ಸಾಧನೆಯ ಬಗ್ಗೆ ಹೇಳ್ತಾರೆ ಅಗಸ್ತ್ಯ.

ಅಗಸ್ತ್ಯ 5 ವರ್ಷ ವಯಸ್ಸಿನಲ್ಲೇ ಸುಮಾರು 500 ಪ್ರಶ್ನೆಗಳಿಗೆ ಉತ್ತರಿಸುವ ಅಸಾಮಾನ್ಯ ಸಾಮರ್ಥ್ಯಕ್ಕಾಗಿ 'ಗೂಗಲ್ ಬಾಯ್' ಎಂದು ಕರೆಯಿಸಿಕೊಳ್ಳುತ್ತಿದ್ದ. ಅಗಸ್ತ್ಯ ಕೇವಲ 1.72 ಸೆಕೆಂಡುಗಳಲ್ಲಿ Aನಿಂದ Z ಅಕ್ಷರಗಳನ್ನು ಟೈಪ್ ಮಾಡಬಲ್ಲನು. ಅವನು ತನ್ನೆರಡು ಎರಡೂ ಕೈಗಳಿಂದ ಬರೆಯಬಲ್ಲನು. ಇದಿಷ್ಟೇ ಅಲ್ಲ,  ರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರ ಮತ್ತು ಅಂತರರಾಷ್ಟ್ರೀಯ ಪ್ರೇರಕ ಭಾಷಣಕಾರರೂ ಆಗಿದ್ದಾರೆ. ಅಗಸ್ತ್ಯ ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ್ತಿ ಮತ್ತು ಕಿರಿಯ ಸಂಶೋಧನಾ ವಿದ್ವಾಂಸ ನೈನಾ ಜೈಸ್ವಾಲ್ ಅವರ ಕಿರಿಯ ಸಹೋದರ.

ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳನ್ನು ವಾಪಸ್ ಕರೆ ತರಲು ತಮಿಳುನಾಡು ಸಖತ್ ಪ್ಲ್ಯಾನ್!

ಇನ್ನು ತಮ್ಮ ಸಹೋದರನ ಗಮನಾರ್ಹ ಸಾಧನೆಯನ್ನು ನೈನಾ ಜೈಸ್ವಾಲ್, ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 16 ವರ್ಷ ವಯಸ್ಸಿನಲ್ಲಿ ಎಂಎ ಸಮಾಜಶಾಸ್ತ್ರದಲ್ಲಿ ಪಿಜಿ ಪೂರ್ಣಗೊಳಿಸಿದ ಭಾರತದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನನ್ನ ಸಹೋದರ ಜೈಸ್ವಾಲ್ ಅಗಸ್ತ್ಯ ಅವರಿಗೆ ಅಭಿನಂದನೆಗಳು ಎಂದು ನೈನಾ ಹೇಳಿದ್ದಾರೆ.  ಬಾಲಕನ ಪೋಷಕರಾದ ಅಶ್ವನಿ ಕುಮಾರ್ ಮತ್ತು ಭಾಗ್ಯ ಲಕ್ಷ್ಮಿ ಜೈಸ್ವಾಲ್ ಅವರ ಪ್ರಕಾರ, ಪ್ರತಿ ಮಗುವೂ ವಿಶಿಷ್ಟವಾದ ಗುಣವನ್ನು ಹೊಂದಿದೆ ಮತ್ತು ಪೋಷಕರು ಸರಿಯಾದ ಗಮನವನ್ನು ಕೇಂದ್ರೀಕರಿಸಿದರೆ, ಪ್ರತಿ ಮಗುವೂ ತಮ್ಮ ವೃತ್ತಿಯಲ್ಲಿ ಇತಿಹಾಸವನ್ನು ಸೃಷ್ಟಿಸಬಹುದು. ಅಗಸ್ತ್ಯ ಯಾವಾಗಲೂ ಮನೆಶಿಕ್ಷಣವನ್ನು ಹೊಂದಿದ್ದಾನೆ ಮತ್ತು ಅವನ ಪೋಷಕರ ನಿರ್ದೇಶನ ಮತ್ತು ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆದಿದ್ದಾನೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಅನೇಕ ಮಹತ್ತರ ಸಾಧನೆಗಳನ್ನು ಮಾಡಿರುವ ಅಗಸ್ತ್ಯ ಜೈಸ್ವಾಲ್ ಇತರ ಹುಡುಗರಿಗೆ ಪ್ರೇರಣೆ, ಸ್ಫೂರ್ತಿಯಾಗಿದ್ದಾರೆ.

Follow Us:
Download App:
  • android
  • ios