ಬೆಳಗಾವಿ: ನಕಲಿ ಅಂಕಪಟ್ಟಿ, 51 ವಿದ್ಯಾರ್ಥಿಗಳ ಇಂಜಿನಿಯರಿಂಗ್ ಪ್ರವೇಶ ತಿರಸ್ಕರಿಸಿದ ವಿಟಿಯು
ಎಲ್ಲ ಅಂಕಪಟ್ಟಿಗಳನ್ನ ತಾಂತ್ರಿಕ ಶಿಕ್ಷಣ ಇಲಾಖೆ ಮಾನ್ಯ ಮಾಡಿತ್ತು. ಆದರೆ ಕಾಲೇಜುವಾರು ಅನುಮೋದನೆ ನೀಡುವಾಗ ವಿಟಿಯು ಅಮಾನ್ಯ ಮಾಡಿದೆ. ಈ ನಕಲಿ ಅಂಕಪಟ್ಟಿಗಳ ಹಿಂದೆ ದೊಡ್ಡ ಹಗರಣ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ವಿಟಿಯು
ಬೆಳಗಾವಿ(ಮೇ.17): ನಕಲಿ ಅಂಕಪಟ್ಟಿ ಕಾರಣ ನೀಡಿ 51 ವಿದ್ಯಾರ್ಥಿಗಳ ಇಂಜಿನಿಯರಿಂಗ್ ಪ್ರವೇಶವನ್ನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಿರಸ್ಕರಿಸಿದೆ. ಮೊದಲ ವರ್ಷದ ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಿಗೆ 51 ವಿದ್ಯಾರ್ಥಿಗಳು ಪ್ರವೇಶ ಬಯಸಿದ್ದರು. ಈ ಎಲ್ಲ ವಿದ್ಯಾರ್ಥಿಗಳ ದ್ವಿತೀಯ ಪಿಯು ಅಂಕ ಪಟ್ಟಿ ನಕಲಿ ಎಂಬುದು ಸಾಬೀತಾದ ಹಿನ್ನಲೆಯಲ್ಲಿ ಇವರ ಪ್ರವೇಶಕ್ಕೆ ವಿಟಿಯು ತಿರಸ್ಕರಿಸಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನೀಡಿದ ಪ್ರಮಾಣ ಪತ್ರ ನಕಲಿ ಎಂಬುದು ಸಾಬೀತಾಗಿದೆ. ದಾಖಲೆಗಳ ಪರಿಶೀಲನೆ ವೇಳೆ ಕ್ಯೂಆರ್ ಕೋಡ್ ಸ್ಕ್ಯಾನ್ ವೇಳೆ ಎನ್ಐಓಎಸ್ ನೀಡಿದ ಅಂಕ ಪಟ್ಟಿ ನಕಲಿ ಎಂಬುದು ದೃಢಪಟ್ಟಿದೆ. ಈ ಕಾರಣಕ್ಕೆ 51 ವಿದ್ಯಾರ್ಥಿಗಳ ಪ್ರವೇಶಕ್ಕೆ ವಿಟಿಯು ತಿರಸ್ಕರಿಸಿದೆ.
ಬೆಂಗಳೂರು: 20 ಸಾವಿರಕ್ಕೆ ಎಸ್ಸೆಸ್ಸೆಲ್ಸಿ, ಪಿಯು ಅಂಕಪಟ್ಟಿ ಬಿಕರಿ..!
ಇದಕ್ಕೂ ಮುನ್ನ ಎಲ್ಲ ಅಂಕಪಟ್ಟಿಗಳನ್ನ ತಾಂತ್ರಿಕ ಶಿಕ್ಷಣ ಇಲಾಖೆ ಮಾನ್ಯ ಮಾಡಿತ್ತು. ಆದರೆ ಕಾಲೇಜುವಾರು ಅನುಮೋದನೆ ನೀಡುವಾಗ ವಿಟಿಯು ಅಮಾನ್ಯ ಮಾಡಿದೆ. ಈ ನಕಲಿ ಅಂಕಪಟ್ಟಿಗಳ ಹಿಂದೆ ದೊಡ್ಡ ಹಗರಣ ನಡೆದಿರುವ ಬಗ್ಗೆ ವಿಟಿಯು ಶಂಕೆ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ, ಎನ್ಐಓಎಸ್‌ಗೆ ಪತ್ರ ಬರೆಯಲು ವಿಟಿಯು ಉದ್ದೇಶಿಸಿದೆ ಅಂತ ತಿಳಿದು ಬಂದಿದೆ.
51 ವಿದ್ಯಾರ್ಥಿಗಳು ಮ್ಯಾನೆಜ್‌ಮೆಂಟ್ ಕೋಟಾದಡಿ ಪ್ರವೇಶ ಬಯಸಿದ್ದರು. ಎಲ್ಲ ವಿದ್ಯಾರ್ಥಿಗಳು ತುಮಕೂರು, ಚಿಕ್ಕಬಳ್ಳಾಪುರ ಮೂಲದವರೆಂಬ ಮಾಹಿತಿ ಲಭ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಬಯಸಿದ್ದರು ಅಂತ ತಿಳಿದು ಬಂದಿದೆ.