Asianet Suvarna News Asianet Suvarna News

ಬೆಂಗಳೂರು: 20 ಸಾವಿರಕ್ಕೆ ಎಸ್ಸೆಸ್ಸೆಲ್ಸಿ, ಪಿಯು ಅಂಕಪಟ್ಟಿ ಬಿಕರಿ..!

ನಕಲಿ ದಂಧೆ ಮೇಲೆ ಸಿಸಿಬಿ ಕಾರ್ಯಾಚರಣೆ, 7100 ಖಾಲಿ ಅಂಕಪಟ್ಟಿ, 5500 ಉತ್ತರ ಪತ್ರಿಕೆಗಳು ಜಪ್ತಿ, ಸಂತ್ರಸ್ತ ದೂರು, ಮೂವರ ಬಂಧನ. 

Three Arrested for Fake Marks card Racket in Bengaluru grg
Author
First Published Apr 29, 2023, 5:43 AM IST

ಬೆಂಗಳೂರು(ಏ.29):  ಸಾರ್ವಜನಿಕರಿಗೆ .4 ಸಾವಿರದಿಂದ .20 ಸಾವಿರಕ್ಕೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿದ ಸಿಸಿಬಿ ಪೊಲೀಸರು, ಈ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಯ ಮೂವರನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ ವಿದ್ಯಾನಗರದ ಪ್ರಭುರಾಜ ಹೊಸಪೇಟೆ, ಕನಕಪುರ ರಸ್ತೆ ಜರಗನಹಳ್ಳಿ ಎಂ.ಎಸ್‌.ಲೇಔಟ್‌ ಮೈಲಾರಿ ಅಲಿಯಾಸ್‌ ಮೈಲಾರಿ ಪಾಟೀಲ… ಹಾಗೂ ಅರಕೆರೆಯ ಡಾಕ್ಟ​ರ್‍ಸ್ ಲೇಔಟ್‌ ನಿವಾಸಿ ಮೊಹಮದ್‌ ತೈಹಿದ್‌ ಅಹಮದ್‌ ಬಂಧಿತರಾಗಿದ್ದು, ಆರೋಪಿಗಳಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ 70 ನಕಲಿ ಅಂಕ ಪಟ್ಟಿಗಳು, ನೋಂದಣಿ ಸಂಖ್ಯೆ, ವಿದ್ಯಾರ್ಥಿ ಹೆಸರು ಮುದ್ರಿಸದ 190 ಅಂಕಪಟ್ಟಿ, 7100 ಖಾಲಿ ಅಂಕಪಟ್ಟಿ, 5500 ಉತ್ತರ ಪತ್ರಿಕೆಗಳು, 25 ಅಡ್ಮಿಷನ್‌ ರಿಜಿಸ್ಟರ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ.

ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ: ಗೆಳತಿ ಕತ್ತು ಬಿಗಿದು ಕೊಂದ ಗೆಳೆಯ ಅಂದರ್‌

ಕೆಲ ದಿನಗಳ ಹಿಂದೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಚಿನ್‌ ಎಂಬಾತನಿಗೆ .1.8 ಲಕ್ಷ ಪಡೆದು ಹೊರ ರಾಜ್ಯದ ಪ್ರತಿಷ್ಠಿತ ವಿವಿ ಹೆಸರಿನಲ್ಲಿ ನಕಲಿ ಅಂಕ ಪಟ್ಟಿಯನ್ನು ಮೈಲಾರಿ ಪಾಟೀಲ್‌ ನೀಡಿದ್ದ. ಬಳಿಕ ಉದ್ಯೋಗ ಅರ್ಜಿ ಸಲ್ಲಿಸಿದಾಗ ತನ್ನ ಶೈಕ್ಷಣಿಕ ಪ್ರಮಾಣ ಪತ್ರಗಳು ನಕಲಿ ಎಂಬುದು ಆತನಿಗೆ ಗೊತ್ತಾಗಿದೆ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ, ಆರೋಪಿಗಳ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ನಕಲಿ ಅಂಕಪಟ್ಟಿ ದಂಧೆ?

2017ರಲ್ಲಿ ಹುಬ್ಬಳ್ಳಿಯಲ್ಲಿ ‘ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್‌ (ಕೆಐಒಎಸ್‌)’ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದ ಪ್ರಭು, ಇದಕ್ಕಾಗಿ 2015ರಲ್ಲಿ ಸರ್ಕಾರದ ಮಾನ್ಯತೆ ಪಡೆದಿರುವುದಾಗಿ ದಾಖಲೆ ಸೃಷ್ಟಿಸಿದ್ದ. ತನ್ನ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗೆ ಸಮಾನವಾದ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ನೀಡುವುದಾಗಿ ಆತ ಪ್ರಕಟಿಸಿದ್ದ. ಆಗ ಹಣದಾಸೆಗೆ ಹಲವು ಜನರಿಗೆ 4 ರಿಂದ 20 ಸಾವಿರ ರು.ವರೆಗೆ ಹಣ ಪಡೆದು ಆತ ನಕಲಿ ಅಂಕಪಟ್ಟಿಯನ್ನು ವಿತರಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಈತನಿಗೆ ಬೆಂಗಳೂರಿನ ಮೈಲಾರಿ ಪಾಟೀಲ್‌ ಹಾಗೂ ಅಹಮದ್‌ ಸೇರಿದಂತೆ ನಕಲಿ ಅಂಕಪಟ್ಟಿದಂಧೆಕೋರರ ನಿಕಟ ಸಂಪರ್ಕವಿದ್ದು, ಎಲ್ಲರೂ ಒಂದು ಸಿಂಡಿಕೇಟ್‌ನಂತೆ ಇದ್ದರು.

ತನ್ನ ಸಂಸ್ಥೆಯಲ್ಲಿ ಪರೀಕ್ಷೆ ಬರೆದು ಅಂಕಪಟ್ಟಿಪಡೆದರೆ 20 ಸಾವಿರ ರು ಪಡೆಯುತ್ತಿದ್ದ ಪ್ರಭು, ಬೇರೆ ಸಂಸ್ಥೆಗಳಿಗೆ 4 ಸಾವಿರ ರುಗೆ ಅಂಕಪಟ್ಟಿಮಾರಾಟ ಮಾಡುತ್ತಿದ್ದ. ಬೆಂಗಳೂರಿನ ಅರೆಕೆರೆಯಲ್ಲಿ ವೈಇಟಿ ಶಾಲೆ (ಸ್ಟಡಿ ಇನ್‌ಸ್ಟಿಟ್ಯೂಟ್‌) ತೆರೆದಿದ್ದ ಮೈಲಾರಿ ಪಾಟೀಲ್‌, ಎಸ್‌ಎಸ್‌ಎಲ್‌ಸಿಯಿಂದ ಪದವಿ ವರೆಗೆ 30 ರಿಂದ 40 ಸಾವಿರ ಪಡೆದು ನಕಲಿ ಅಂಕಪಟ್ಟಿವಿತರಿಸುತ್ತಿದ್ದ. ಮತ್ತೊಬ್ಬ ಆರೋಪಿ ಅಹಮದ್‌, ‘ಇಗ್ನೈಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಹುಬ್ಬಳಿಯಲ್ಲಿ ಪ್ರಭುರಾಜ ಜತೆ ಅಹಮದ್‌ ಹಾಗೂ ಮೈಲಾರಿ ಸಂಪರ್ಕ ಹೊಂದಿದ್ದು, ತನ್ನ ಸಹಚರರಿಗೆ ಅನುಗುಣವಾಗಿ ನಕಲಿ ಅಂಕಪಟ್ಟಿಗಳನ್ನು ಪ್ರಭು ಪೂರೈಸುತ್ತಿದ್ದ. ಪ್ರಭು ಬಳಿ 4 ಸಾವಿರ ರುಗೆ ನಕಲಿ ಅಂಕಪಟ್ಟಿ ಖರೀದಿಸುತ್ತಿದ್ದ ಅಹಮದ್‌ ಹಾಗೂ ಮೈಲಾರಿ, ಬಳಿಕ ತಮ್ಮ ಅಭ್ಯರ್ಥಿಗಳಿಗೆ 20 ರಿಂದ 30 ಸಾವಿರ ರುಗೆ ಮಾರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಕರೆನ್ಸಿ ಟ್ರೇಡಿಂಗ್‌ ಹೆಸರಿನಲ್ಲಿ 870ಕ್ಕೂ ಹೆಚ್ಚು ಜನರಿಗೆ 31 ಕೋಟಿ ಮೋಸ..!

ಬಯಲಾಗಿದ್ದು ಹೇಗೆ?

ಎರಡು ವರ್ಷಗಳ ಹಿಂದೆ ಮುಕ್ತ ವಿವಿಯಲ್ಲಿ ಪದವಿ ಓದಲು ಆಸಕ್ತಿ ಹೊಂದಿದ್ದ ಚನ್ನಪಟ್ಟಣ ತಾಲೂಕಿನ ಸಚಿನ್‌, ತನ್ನ ಪರಿಚಿತರ ಮೂಲಕ ಮೈಲಾರಿ ಪಾಟೀಲ್‌ನ ವೈಟಿಟಿ ಇನ್‌ಸ್ಟಿಟ್ಯೂಟನ್ನು ಸಂಪರ್ಕಿಸಿದ್ದ. ಆಗ ಪದವಿ ಶೈಕ್ಷಣಿಕ ಪ್ರಮಾಣ ಹಾಗೂ ಅಂಕಪಟ್ಟಿಗೆ .1.8 ಲಕ್ಷ ಶುಲ್ಕವಾಗಲಿದೆ ಎಂದು ಆತನಿಗೆ ಮೈಲಾರಿ ಹೇಳಿದ್ದ. ಈ ಮಾತಿಗೆ ಒಪ್ಪಿದ ಸಚಿನ್‌, ಮೈಲಾರಿಗೆ .1.8 ಲಕ್ಷ ಪಾವತಿಸಿದ್ದ. ಆದರೆ ಸಚಿನ್‌ಗೆ ಪರೀಕ್ಷೆ ಬರೆಸದೆ ಹೊರ ರಾಜ್ಯದ ವಿವಿ ಹೆಸರಿನಲ್ಲಿ ಅಂಕಪಟ್ಟಿಯನ್ನು ಮೈಲಾರಿ ವಿತರಿಸಿದ್ದ.

ಈ ಅಂಕಪಟ್ಟಿಬಳಸಿ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸಚಿನ್‌ ಸಲ್ಲಿಸಿದ ಅರ್ಜಿ ತಿರಸ್ಕೃತವಾಗಿತ್ತು. ಆಗ ತನಗೆ ನಕಲಿ ಅಂಕಪಟ್ಟಿನೀಡಿದ ಆರೋಪದ ಮೇರೆಗೆ ಮೈಲಾರಿ ವಿರುದ್ಧ ಪುಟ್ಟೇನಹಳ್ಳಿ ಠಾಣೆಗೆ ಸಚಿನ್‌ ದೂರು ಸಲ್ಲಿಸಿದ. ಈ ಪ್ರಕರಣದ ತನಿಖೆಗೆ ಸಿಸಿಬಿಗೆ ಆಯುಕ್ತರು ವಹಿಸಿದ್ದರು. ಅಂತೆಯೇ ತನಿಖೆ ನಡೆಸಿದ ಎಸಿಪಿ ಜಗದೀಶ್‌ ಹಾಗೂ ಇನ್‌ಸ್ಪೆಕ್ಟರ್‌ ಕವಿತಾ ನೇತೃತ್ವದ ತಂಡವು, ಮೈಲಾರಿ ಸಂಸ್ಥೆಯ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿತು. ಬಳಿಕ ಆತನ ವಿಚಾರಣೆ ವೇಳೆ ನಕಲಿ ಅಂಕಪಟ್ಟಿ ಮಾರಾಟ ಜಾಲ ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios