Asianet Suvarna News Asianet Suvarna News

ವಿಶ್ವವಿದ್ಯಾಲಯಗಳ ಪಾರದರ್ಶಕ ಆಡಳಿತಕ್ಕೆ 50 ಮಾರ್ಗಸೂಚಿ

ಇನ್ನುಮುಂದೆ ವಿವಿಗಳ ಸಿಂಡಿಕೇಟ್‌, ಶೈಕ್ಷಣಿಕ ಪರಿಷತ್ತು, ವಿದ್ಯಾವಿಷಯ ಪರಿಷತ್ತು, ಹಣಕಾಸು ಸಮಿತಿಗಳ ಸಭೆಗಳನ್ನು ಯೂಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡಬೇಕು. 

50 Guidelines for Transparent Governance of Universities in Karnataka grg
Author
First Published Dec 3, 2022, 2:30 PM IST

ಬೆಂಗಳೂರು(ಡಿ.03):  ರಾಜ್ಯದ 25 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಹಾಗೂ ಪಾರದರ್ಶಕ ಆಡಳಿತ ತರಲು ಹಾಗೂ ಶಿಕ್ಷಣ ವ್ಯವಸ್ಥೆ ಬಲಪಡಿಸಿ ದಾಖಲಾತಿ ದ್ವಿಗುಣಗೊಳಿಸುವ ದೃಷ್ಟಿಯಿಂದ ಉನ್ನತ ಶಿಕ್ಷಣ ಇಲಾಖೆಯು 50ಕ್ಕೂ ಹೆಚ್ಚು ಮಹತ್ವದ ಮಾರ್ಗಸೂಚಿಗಳನ್ನು ರೂಪಿಸಿದ್ದು ಅವುಗಳನ್ನು ಮುಂದಿನ 10 ದಿನಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲು ಎಲ್ಲ ವಿವಿಗಳ ಉನ್ನತ ಅಧಿಕಾರಿಗಳಿಗೆ ಸೂಚಿಸಿದೆ.

ಪ್ರಮುಖವಾಗಿ ಆಯಾ ವಿವಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಆಯಾ ವರ್ಷದ ವಾರ್ಷಿಕ ಆಯವ್ಯಯ, ಪ್ರತಿ ಮಾಸಿಕ ಆದಾಯ ಮತ್ತು ವ್ಯಚ್ಚ, ಚರಾಸ್ತಿ, ಸ್ತಿರಾಸ್ತಿ, ಬ್ಯಾಂಕ್‌ ಖಾತೆಗಳಲ್ಲಿರುವ ಹಣ, ಕಾರ್ಪಸ್‌ ಹಣ, ಸರ್ಕಾರ ಹಾಗೂ ಬೇರೆ ಬೇರೆ ಮೂಲಗಳಿಂದ ಮಂಜೂರಾದ ಅನುದಾನ, ಪ್ರತಿ ತಿಂಗಳು ಬಿಡುಗಡೆ ಮಾಡುವ ವೇತನ, ಪಿಂಚಿಣಿ ಬಟವಾಡೆ, ಎಲ್ಲಾ ರೀತಿಯ ಟೆಂಡರ್‌ಗಳು, ವಿವಿಗಳ ಮಾಸಿಕ ಆದಾಯ ಮತ್ತು ವೆಚ್ಚ, ವಾರ್ಷಿಕ ವರದಿಗಳು, ಲೆಕ್ಕಪರಿಶೋಧನಾ ವರದಿಗಳು ಸೇರಿದಂತೆ ವಿಶ್ವವಿದ್ಯಾಲಯಗಳ ಪ್ರತಿಯೊಂದು ಮಾಹಿತಿಯನ್ನೂ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮುಕ್ತವಾಗಿ ಪ್ರಕಟಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಆದೇಶಿಸಿದ್ದಾರೆ.

Karnataka Folklore University ಹಿಂದಿನ ಅಧ್ಯಯನ ಭವಿಷ್ಯದ ಅಭಿವೃದ್ಧಿಗೆ ಕೀಲಿ ಕೈ: ರಾಜ್ಯಪಾಲ ಗೆಹ್ಲೋಟ್

ಅಲ್ಲದೆ, ಇನ್ನುಮುಂದೆ ವಿವಿಗಳ ಸಿಂಡಿಕೇಟ್‌, ಶೈಕ್ಷಣಿಕ ಪರಿಷತ್ತು, ವಿದ್ಯಾವಿಷಯ ಪರಿಷತ್ತು, ಹಣಕಾಸು ಸಮಿತಿಗಳ ಸಭೆಗಳನ್ನು ಯೂಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡಬೇಕು. ಬೋಧಕರು, ವಿದ್ಯಾರ್ಥಿಗಳು, ಪೋಷಕರು ಸೇರಿ ವಿವಿಯ ಎಲ್ಲ ಭಾಗೀದಾರರೊಂದಿಗೆ ಅಧಿಕಾರಿಗಳು ಆನ್‌ಲೈನ್‌ ವೇದಿಕೆಯಲ್ಲಿ ಚರ್ಚೆ ನಡೆಸಿ ಅವರ ಕುಂದುಕೊರತೆಗಳನ್ನು ನಿವಾರಿಸಲು ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳಡಿ 3,417 ಸಂಯೋಜಿತ ಕಾಲೇಜುಗಳಿದ್ದು, 3.50 ಲಕ್ಷ ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯದ ಒಟ್ಟು ದಾಖಲಾತಿ ಅನುಪಾತ 29ರಷ್ಟಿದ್ದು ಅದನ್ನು ದ್ವಿಗುಣ ಗೊಳಿಸಲು ವಿವಿಗಳು ಕ್ರಮ ವಹಿಸಬೇಕು. ಪ್ರವೇಶ ಪ್ರಕ್ರಿಯೆ, ಪರೀಕ್ಷಾ ವೇಳಾಪಟ್ಟಿ, ಶುಲ್ಕದ ವಿವರಗಳು, ಸಂಗ್ರಹಿಸುವ ದಂಡ ಶುಲ್ಕದ ಮಾಹಿತಿ ಪ್ರತಿಯೊಂದನ್ನೂ ಅಪ್‌ಲೋಡ್‌ ಮಾಡಬೇಕು. ಸರ್ಕಾರ, ರಾಜ್ಯಪಾಲರು, ಕುಲಪತಿಗಳು ಹೊರಡಿಸಿದ ಆದೇಶ, ಸುತ್ತೋಲೆ, ನಡಾವಳಿಗಳನ್ನು ಆಯಾದಿನವೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ತಿಳಿಸಿದೆ.

5 ವರ್ಷದ ಶೈಕ್ಷಣಿಕ ಮಾಹಿತಿ ಕಡ್ಡಾಯ:

ವಿವಿಗಳ ಜತೆಗೆ ಎಲ್ಲ ಸಂಯೋಜಿತ ಕಾಲೇಜುಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಕಳೆದ 5 ವರ್ಷಗಳ ಶೈಕ್ಷಣಿಕ ಕಾರ್ಯಕ್ರಮಗಳ ಸೆಮಿಸ್ಟರ್‌ವಾರು ಫಲಿತಾಂಶಗಳ ವಿವರಗಳನ್ನು ಪ್ರಕಟಿಸಬೇಕು. ಜತೆಗೆ ತಮ್ಮಲ್ಲಿರುವ ಅಧ್ಯಯನ ವಿಭಾಗಗಳು, ಕೋರ್ಸುಗಳು, ಬೋಧಕ ಸಿಬ್ಬಂದಿ, ಅವರ ಸಾಧನೆ, ಸಂಶೋಧನೆಗಳನ್ನು ಪ್ರಕಟಿಸಬೇಕು. ಒಂದು ವೇಳೆ ಯಾವುದೇ ಕಾಲೇಜಿಗೆ ವೆಬ್‌ಸೈಟ್‌ ಇಲ್ಲದಿದ್ದರೆ ವಿವಿಯ ವೆಬ್‌ಸೈಟ್‌ನಲ್ಲೇ ಒಂದು ಟ್ಯಾಬ್‌ ಅಡಿಯಲ್ಲಿ ಮಾಹಿತಿ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ.

ವಿವಿ ಸಭೆಗಳು ಇನ್ನು ನೇರಪ್ರಸಾರ: ಸಚಿವ ಅಶ್ವತ್ಥ್‌ನಾರಾಯಣ

ಪ್ರತೀ ವರ್ಷ ಸುಶಾಸನ ದಿನದಂದು ಭಾರತೀಯ ಜ್ಞಾನ ವ್ಯವಸ್ಥೆ, ಎನ್‌ಇಪಿ ಅನುಷ್ಠಾನ, ಪರೀಕ್ಷಾ ಸುಧಾರಣೆ ಸೇರಿದಂತೆ ವಿವಿಧ ವಿಭಾಗದಲ್ಲಿ ಉತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ, ಕಾಲೇಜುಗಳಿಗೆ ಅತಿ ಹೆಚ್ಚು ಉದ್ಯೋಗ ದೊರಕಿಸಿದ, ಕೈಗಾರಿಕೆಗಳೊಂದಿಗೆ ತರಬೇತಿಯ ಒಪ್ಪಂದ, ಉತ್ತಮ ಮಾರ್ಗದರ್ಶಕ ಕಾಲೇಜುಗಳ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ಪ್ರಮುಖ ಅಂಶಗಳು

- ವಿವಿ ವೆಬ್‌ನಲ್ಲಿ ಆಯಾ ವರ್ಷದ ವಾರ್ಷಿಕ ಆಯವ್ಯಯ, ಎಲ್ಲ ಹಣಕಾಸು ವ್ಯವಹಾರ ಪ್ರಕಟಿಸಬೇಕು
- ವಿವಿಗಳ ಸಿಂಡಿಕೇಟ್‌ ಸಭೆ ಸೇರಿ ಎಲ್ಲ ಸಭೆಗಳನ್ನು ಯೂಟ್ಯೂಬಲ್ಲಿ ನೇರಪ್ರಸಾರ ಮಾಡಬೇಕು
-ವಿವಿ ಅಧಿಕಾರಿಗಳು ಪೋಷಕರು, ಬೋಧಕರು, ವಿದ್ಯಾರ್ಥಿಗಳ ಜತೆ ಆನ್‌ಲೈನ್‌ ಸಂವಾದ ನಡೆಸಬೇಕು
- ಪ್ರತಿ ವಿವಿಗಳು ಜನವರಿ 2023ರೊಳಗೆ ಹಳೆ ವಿದ್ಯಾರ್ಥಿಗಳ ಪೋರ್ಟಲ್‌, ಸಂಪರ್ಕ ಕಚೇರಿ ಆರಂಭಿಸಬೇಕು
- ವಿದ್ಯಾರ್ಥಿ, ಪೋಷಕರ ಸಮಸ್ಯೆ ಪರಿಹಾರಕ್ಕೆ ಕುಲಪತಿ, ಕುಲಸಚಿವರು ಸೋಷಿಯಲ್‌ ಮೀಡಿಯಾ ಖಾತೆ ತೆರೆಯಬೇಕು
- ವಿವಿಗಳ ಸಂಯೋಜಿತ ಕಾಲೇಜುಗಳು ವೆಬ್‌ಸೈಟಲ್ಲಿ 5 ವರ್ಷದ ಶೈಕ್ಷಣಿಕ ಮಾಹಿತಿ ಪ್ರಕಟಿಸಬೇಕು
- ವಿದ್ಯಾರ್ಥಿಗಳ ಇಂಟರ್‌ಶಿಪ್‌ ಕೊಡಿಸುವುದಕ್ಕಾಗಿ ಕನಿಷ್ಠ 5 ಕಡೆ ಒಪ್ಪಂದ ಮಾಡಿಕೊಳ್ಳಬೇಕು
- ಪ್ರತಿ ತಿಂಗಳು ನಿವೃತ್ತ ನೌಕರರಿಗಾಗಿ ಪಿಂಚಣಿ ಅದಾಲತ್‌ ಆಯೋಜಿಸಬೇಕು
 

Follow Us:
Download App:
  • android
  • ios