SSLC Results 2022: ಗ್ರೇಸ್‌ ಅಂಕ ಪಡೆದು 40,000 ಎಸ್ಸೆಸ್ಸೆಲ್ಸಿ ಮಕ್ಕಳು ಪಾಸ್‌..!

*  3 ವಿಷಯಗಳಲ್ಲಿ ಪಾಸ್‌ಗೆ ಕೆಲ ಅಂಕ ಕೊರತೆ ಎದುರಿಸುತ್ತಿದ್ದವರಿಗೆ ಶೇ.10ರಷ್ಟು ಗ್ರೇಸ್‌ ಅಂಕ
*  3920 ಶಾಲೆಯಲ್ಲಿ ಶೇ.100, 20 ಶಾಲೆಗಳಲ್ಲಿ ‘ಶೂನ್ಯ’ ಫಲಿತಾಂಶ
*  ಶೇ.100 ಫಲಿತಾಂಶದಲ್ಲಿ ಖಾಸಗಿ ಶಾಲೆಗಳ ಮೇಲುಗೈ
 

40000 Children Pass With Grace Marks in SSLC Exam in Karnataka grg

ಬೆಂಗಳೂರು(ಮೇ.20): ರಾಜ್ಯದಲ್ಲಿರುವ 15335 ಪ್ರೌಢ ಶಾಲೆಗಳ ಪೈಕಿ ಈ ಬಾರಿ 3920 ಶಾಲೆಗಳಲ್ಲಿ ಎಲ್ಲ ಮಕ್ಕಳೂ ಪಾಸಾಗಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಶೇ.100ರಷ್ಟು ಫಲಿತಾಂಶದ ಶಾಲೆಗಳ ಪೈಕಿ ಅನುದಾನರಹಿತ ಖಾಸಗಿ ಶಾಲೆಗಳ ಸಂಖ್ಯೆ ಅತಿ ಹೆಚ್ಚು 1991, ಸರ್ಕಾರಿ ಶಾಲೆಗಳ ಸಂಖ್ಯೆ 1462 ಮತ್ತು ಅನುದಾನಿತ ಖಾಸಗಿ ಶಾಲೆಗಳ ಸಂಖ್ಯೆ 467ರಷ್ಟಿದೆ. ಶೂನ್ಯ ಫಲಿತಾಂಶ ಪಡೆದ ಶಾಲೆಗಳಲ್ಲಿ ಸರ್ಕಾರಿ ಶಾಲೆ 2, ಅನುದಾನಿತ 3, ಅನುದಾನ ರಹಿತ 15 ಶಾಲೆಗಳಿವೆ.

ಶಾಲಾವಾರು ಒಟ್ಟಾರೆ ಫಲಿತಾಂಶದಲ್ಲಿ ಕೂಡ ಖಾಸಗಿ ಶಾಲಾ ಮಕ್ಕಳ ಸಾಧನೆಯೇ ಅತ್ಯುತ್ತಮವಾಗಿದೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಶೇ.92.29 ಮಂದಿ ಉತ್ತೀರ್ಣರಾಗಿದ್ದಾರೆ. ನಂತರದ ಸಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಲ್ಲಿ ಶೇ.88ರಷ್ಟು ಹಾಗೂ ಅನುದಾನಿತ ಶಾಲೆಯ ಶೇ.87.84 ರಷ್ಟುಮಕ್ಕಳು ತೇರ್ಗಡೆ ಹೊಂದಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ತಾಯಿ, ಮಗಳು ಪಾಸ್‌..!

ಸಡಿಲ ಮೌಲ್ಯಮಾಪನ

ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷ ವಿದ್ಯಾರ್ಥಿಗಳು ಕಲಿಕಾ ಕೊರತೆ ಎದುರಿಸಿದ್ದರು. ಹಾಗಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಯಲ್ಲಿ ಸರಳವಾದ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗಿತ್ತು. ಕಠಿಣ ಪ್ರಶ್ನೆಗಳ ಪ್ರಮಾಣವನ್ನು ಶೇ.10ಕ್ಕೆ ಇಳಿಸಲಾಗಿತ್ತು. ಮೌಲ್ಯಮಾಪನವನ್ನೂ ಕಟ್ಟುನಿಟ್ಟಾಗಿ ಮಾಡದಂತೆ ಸೂಚಿಸಲಾಗಿತ್ತು. ಜೊತೆಗೆ ಉತ್ತೀರ್ಣಕ್ಕೆ ಕೆಲವೇ ಅಂಕಗಳ ಅಂಚಿನಲ್ಲಿದ್ದ ವಿದ್ಯಾರ್ಥಿಗಳಿಗೆ ಶೇ.10ರಷ್ಟುಗ್ರೇಸ್‌ ಅಂಕ ನೀಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. 

ಗ್ರೇಸ್‌ ಅಂಕ ಪಡೆದು 40000 ಎಸ್ಸೆಸ್ಸೆಲ್ಸಿ ಮಕ್ಕಳು ಪಾಸ್‌!

ಬೆಂಗಳೂರು: ಪಾಸಾಗಲು ಅಂಕಗಳ ಕೊರತೆ ಎದುರಿಸುತ್ತಿದ್ದ 40 ಸಾವಿರ ವಿದ್ಯಾರ್ಥಿಗಳು, ಈ ಸಲ ಗ್ರೇಸ್‌ ಅಂಕ ಪಡೆದು ಪಾಸಾಗಿರುವುದು ವಿಶೇಷ. ಮೌಲ್ಯಮಾಪನದಲ್ಲಿ ಕೊಂಚ ಬಿಗಿ ನಿಯಮ ಸಡಿಲಿಸಿ, ಉದಾರತೆ ತೋರಿದ್ದೇ ಇದಕ್ಕೆ ಕಾರಣ.

Chikkamagaluru: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಾಫಿನಾಡಿಗೆ ಎ ಶ್ರೇಣಿ: 6 ಮಂದಿ ವಿದ್ಯಾರ್ಥಿಗಳು 625 ಕ್ಕೆ 625

‘ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನದ ಬಳಿಕ ಉತ್ತೀರ್ಣವಾಗಲು ಮೂರು ವಿಷಯಗಳಲ್ಲಿ ಕೆಲವೇ ಅಂಕಗಳ ಕೊರತೆ ಎದುರಿಸುತ್ತಿದ್ದ 40,061 ವಿದ್ಯಾರ್ಥಿಗಳಿಗೆ ಆ ವಿಷಯಗಳಲ್ಲಿ ಗರಿಷ್ಠ ಶೇ.10ರಷ್ಟುಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ. ಆರೂ ವಿಷಯಗಳಲ್ಲಿ ಕನಿಷ್ಠ 178 ಅಂಕ ಗಳಿಸಿದ್ದವರಿಗೆ ಮಾತ್ರ ಗ್ರೇಸ್‌ ಅಂಕಕ್ಕೆ ಪರಿಗಣಿಸಲಾಗಿದೆ’ ಎಂದು ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

‘ಫಲಿತಾಂಶ ಉತ್ತಮಗೊಳಿಸಲು ಈ ಹಿಂದೆ ಎರಡು ವಿಷಯಗಳಲ್ಲಿ ತಲಾ ಶೇ.5ರಷ್ಟುಗ್ರೇಸ್‌ ಅಂಕ ನೀಡಲು ಅವಕಾಶವಿತ್ತು. ಇದನ್ನು 2020ರಲ್ಲಿ ಮೂರು ವಿಷಯಗಳಲ್ಲಿ ಶೇ.10ಕ್ಕೆ ಹೆಚ್ಚಿಸಲಾಗಿತ್ತು. ಅದನ್ನು ಈ ವರ್ಷವೂ ಮುಂದುವರೆಸಲಾಗಿದೆ. ಈ ಅವಕಾಶದಿಂದ 35,931 ವಿದ್ಯಾರ್ಥಿಗಳು ಕೇವಲ ಒಂದು ವಿಷಯದಲ್ಲಿ ಗ್ರೇಸ್‌ ಅಂಕ ಪಡೆದು ಪಾಸಾಗಿದ್ದಾರೆ. ಅದೇ ರೀತಿ 3,940 ಮಕ್ಕಳು ಎರಡು ವಿಷಯದಲ್ಲಿ ಹಾಗೂ 190 ವಿದ್ಯಾರ್ಥಿಗಳು ಮೂರೂ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios