ಎನ್‌.ಎಲ್‌. ಶಿವಮಾದು

ಬೆಂಗಳೂರು(ಜು.18): ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶಗಳಲ್ಲಿ ಮಾತ್ರ ಆರ್‌ಟಿಇ ಸೀಟು ನೀಡುವುದಾಗಿ ತನ್ನ ನಿಯಮಾವಳಿಯನ್ನು ರಾಜ್ಯ ಸರ್ಕಾರ ಬದಲಿಸಿದ ನಂತರ ರಾಜ್ಯದಲ್ಲಿ ಆರ್‌ಟಿಇ ಸೀಟುಗಳಿಗೆ ಬೇಡಿಕೆ ಕುಸಿದಿದೆ. ಅರ್ಜಿ ಸಲ್ಲಿಸಲು ಪೋಷಕರು ಸಹ ಆಸಕ್ತಿ ತೋರುತ್ತಿಲ್ಲ. ತನ್ಮೂಲಕ ಬಡ ಮಕ್ಕಳಿಗೆ ಸಮಾನ ಶಿಕ್ಷಣ ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಕ್ರಮೇಣ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ.

ಈ ಯೋಜನೆ ರಾಜ್ಯದಲ್ಲಿ ಆರಂಭವಾದ ವರ್ಷಗಳಲ್ಲಿ ಸೀಟುಗಳ ಲಭ್ಯತೆಯೂ ಹೆಚ್ಚಿತ್ತು. ಆದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಮೂಲಕ ಬೇಡಿಕೆಯೂ ಹೆಚ್ಚಿತ್ತು. ಆದರೆ, 2020-​21ನೇ ಸಾಲಿನಲ್ಲಿ ಕೇವಲ 10,478 ಸೀಟುಗಳು ಲಭ್ಯವಿದ್ದು, ಅದಕ್ಕೆ 11,466 ಅರ್ಜಿಗಳು ವåಾತ್ರ ಬಂದಿವೆ. ಅಂದರೆ ಕೇವಲ ಒಂದು ಸಾವಿರ ಅರ್ಜಿಗಳ ಮಾತ್ರ ಹೆಚ್ಚುವರಿಯಾಗಿ ಸಲ್ಲಿಕೆಯಾಗಿವೆ.

ಕೊರೋನಾ ಸಂಕಷ್ಟ: RTE ಹಣ ಮರುಪಾವತಿಗೆ ಆಗ್ರಹ

ಕೇಂದ್ರ ಸರ್ಕಾರದ ಸೂಚನೆಯಂತೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ರಾಜ್ಯದಲ್ಲಿ 2012ರಲ್ಲಿ ಜಾರಿಗೆ ಬಂದಿತ್ತು.ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟುಸೀಟುಗಳನ್ನು ನೀಡುವ ಈ ಯೋಜನೆಗೆ ಆರಂಭದ ವರ್ಷಗಳಲ್ಲಿ ಭರ್ಜರಿ ಸ್ಪಂದನೆ ದೊರಕಿತ್ತು. ಖಾಸಗಿ ಶಾಲೆಗಳಲ್ಲಿ ಸೀಟುಗಳನ್ನು ಪಡೆಯಲು ಪೋಷಕರು ಮುಗಿಬೀಳುತ್ತಿದ್ದರು.

ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭ ತಕ್ಕಮಟ್ಟಿಗೆ ಕಡಿಮೆಯಾಗುತ್ತಿದ್ದಂತೆಯೇ ಆರ್‌ಟಿಇಗೆ ವಿವಿಧ ಆಯಾಮಗಳನ್ನು ನೀಡುವ ಮೂಲಕ ಯೋಜನೆಗೆ ವಿರೋಧ ಹುಟ್ಟುಹಾಕುವ ಪ್ರಯತ್ನ ಆರಂಭವಾಯಿತು. ಸರ್ಕಾರಿ ಶಾಲೆಗಳು ಇರುವ ಕಡೆಯೂ ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೀಟು ಕೊಡುವುದರಿಂದ ಸರ್ಕಾರಿ ಶಾಲೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಬಿಂಬಿಸಲಾಯಿತು. ಸರ್ಕಾರವೇ ಖಾಸಗಿ ಶಾಲೆಗಳನ್ನು ಪೋಷಿಸಿ, ಸರ್ಕಾರಿ ಶಾಲೆಗಳನ್ನು ಅವನತಿಯತ್ತ ದೂಡುತ್ತಿದೆ. ಇದೇ ಅನುದಾನದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವತ್ತ ಸರ್ಕಾರಿ ಚಿಂತನೆ ನಡೆಸುತ್ತಿಲ್ಲ ಎಂಬ ಟೀಕೆಗಳನ್ನು ಹುಟ್ಟುಹಾಕಲಾಯಿತು.

ಇದರಿಂದಾಗಿ ಸರ್ಕಾರ, ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಖಾಸಗಿ ಶಾಲೆಗಳಿಗೆ ನೀಡುವ ಆರ್‌ಟಿಇ ಮರುಪಾವತಿ ಶುಲ್ಕದ ಹೊರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಖಾಸಗಿ ಶಾಲೆಗಳಿಗೆ ಸೀಟು ನೀಡುವುದನ್ನು ನಿಲ್ಲಿಸಿತು. 2019-20ನೇ ಸಾಲಿನಿಂದ ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶಗಳಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಆರ್‌ಟಿಇ ಸೀಟುಗಳನ್ನು ನೀಡಲಾಗುತ್ತಿದೆ ಎಂದು ಘೋಷಿಸಿತು. ಈ ನಿರ್ಧಾರ ಆರ್‌ಟಿಇ ಸೀಟು ಹಂಚಿಕೆಯಲ್ಲಿ ಸಾಕಷ್ಟುಪರಿಣಾಮಕಾರಿ ಬದಲಾವಣೆಗೆ ಕಾರಣವಾಯಿತು. 2017​-18ರಲ್ಲಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಲಭ್ಯವಿದ್ದ 1,53,117 ಸೀಟುಗಳಿಗೆ ನಾಲ್ಕು ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದವು. ಕೊನೆಗೆ 1,19,678 ಸೀಟುಗಳು ಭರ್ತಿಯಾಗಿದ್ದವು.

ಆರ್‌ಟಿಇ ‘ತಿದ್ದುಪಡಿ’ ಎತ್ತಿಹಿಡಿದ ಹೈಕೋರ್ಟ್‌

ಖಾಸಗಿ ಶಾಲೆಗಳಿಗೆ ಸೀಟುಗಳನ್ನು ನಿಲ್ಲಿಸಿದ ಬಳಿಕ 2019​-20ರಲ್ಲಿ 17,720 ಸೀಟುಗಳಿಗೆ ಕುಸಿಯಿತು. ಈ ಪೈಕಿ ಕೇವಲ 4,698 ಸೀಟುಗಳು ಮಾತ್ರ ಭರ್ತಿಯಾಗಿದ್ದವು. 13,022 ಸೀಟುಗಳು ಬಾಕಿ ಉಳಿದಿದ್ದವು. ಈ ವರ್ಷ ಕೂಡ 2020-​21ನೇ ಸಾಲಿನಲ್ಲಿ ಲಭ್ಯವಿರುವ 10,478 ಸೀಟುಗಳಿಗೆ ಕೇವಲ 11,466 ಅರ್ಜಿಗಳು ವåಾತ್ರ ಬಂದಿವೆ. ಅಂದರೆ ಕೇವಲ ಒಂದು ಸಾವಿರ ಅರ್ಜಿಗಳ ಮಾತ್ರ ಹೆಚ್ಚುವರಿಯಾಗಿ ಸಲ್ಲಿಕೆಯಾಗಿವೆ.

ಈ ಬಾರಿ ಸಲ್ಲಿಕೆಯಾಗಿರುವ 11,466 ಅರ್ಜಿಗಳಲ್ಲಿ ಅನುದಾನಿತ ಶಾಲೆಗಳಲ್ಲಿ 9,205 ಸೀಟು ಮತ್ತು ಖಾಸಗಿ ಶಾಲೆಗಳಲ್ಲಿ 1,273 ಸೀಟುಗಳಿವೆ. ಕೇವಲ ಒಂದು ಸಾವಿರ ಅರ್ಜಿಗಳು ಮಾತ್ರ ಹೆಚ್ಚುವರಿಯಾಗಿ ಸಲ್ಲಿಕೆಯಾಗಿರುವುದರಿಂದ ಅರ್ಧಕ್ಕರ್ಧ ಸೀಟುಗಳು ಉಳಿಯುವ ಸಾಧ್ಯತೆಗಳಿವೆ ಎನ್ನುತ್ತಿವೆ ಇಲಾಖೆ ಮೂಲಗಳು. ವೇಳಾಪಟ್ಟಿಪ್ರಕಾರ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಜು.22ರಂದು ನಡೆಸಲಾಗುತ್ತದೆ. ಎಷ್ಟುಸೀಟುಗಳು ಭರ್ತಿಯಾಗಲಿವೆ ಎಂದು ತಿಳಿಯಲಿದೆ.

ಸೀಟುಗಳು ಉಳಿಯಲು ಕಾರಣವೇನು?:

‘ಸರ್ಕಾರದಿಂದ ಅನುದಾನ ಸಿಗಲಿದೆ ಎಂಬ ಉದ್ದೇಶದಿಂದ ಆರ್‌ಟಿಇ ಸೀಟು ನೀಡುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ, ಗುಣಾತ್ಮಕ ಕಲಿಕೆ, ಶೌಚಾಲಯ, ಆಟದ ಮೈದಾನ ಸೇರಿದಂತೆ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸೀಟುಗಳನ್ನು ನೀಡುವುದನ್ನು ನಿಲ್ಲಿಸಿದ ಬಳಿಕ ಬೆರಳೆಣಿಕೆಯಷ್ಟುಶಾಲೆಗಳಿಗೆ ಸೀಟು ನೀಡಲಾಗುತ್ತಿದೆ. ಈ ಶಾಲೆಗಳಿಗೆ ಹೋಲಿಸಿಕೊಂಡರೆ ಸಕಾರಿ ಶಾಲೆಗಳೇ ಉತ್ತಮವಾಗಿವೆ’ ಎಂಬ ಮಾತುಗಳು ಪೋಷಕ ವಲಯದಿಂದ ಕೇಳಿ ಬರುತ್ತಿದೆ.

RTE ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಠ !

ಖಾಸಗಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ, ಕಳಪೆ ಬೋಧನೆ ಜೊತೆಗೆ ಆರ್‌ಟಿಇ ವಿದ್ಯಾರ್ಥಿಗಳಿಗೆ ತಾರತಮ್ಯ, ಕಿರುಕುಳ ಹಾಗೂ ಇತರೆ ವಿದ್ಯಾರ್ಥಿಗಳಂತೆ ಆರ್‌ಟಿಇ ವಿದ್ಯಾರ್ಥಿಗಳಿಗೂ ಶುಲ್ಕ ಪಡೆಯಲಾಗುತ್ತಿದೆ. ಈ ಮೊತ್ತವನ್ನು ಪೋಷಕರಿಂದ ಭರಿಸಲು ಸಾಧ್ಯವಾಗದೆ ಆರ್‌ಟಿಇ ಸೀಟುಗಳನ್ನು ಪಡೆಯಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.