ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?| ರಷ್ಯಾ ಗುಪ್ತಚರ ಸಂಸ್ಥೆಯ ಹ್ಯಾಕರ್‌ಗಳ ಕೃತ್ಯ| ಕೊರೋನಾ ಬೇನೆ ನಡುವೆಯೂ ರಷ್ಯಾದಿಂದ ‘ಸೈಬರ್‌ ಯುದ್ಧ’| ಬ್ರಿಟನ್‌, ಅಮೆರಿಕ, ಕೆನಡಾ ಗಂಭೀರ ಆರೋಪ| 

ವಾಷಿಂಗ್ಟನ್(ಜು.18): ಕೊರೋನಾ ವೈರಸ್‌ ಲಸಿಕೆ ಸಂಶೋಧನಾ ಮಾಹಿತಿಯನ್ನು ಕಳವು ಮಾಡಲು ರಷ್ಯಾ ಯತ್ನಿಸುತ್ತಿದೆ ಎಂದು ಬ್ರಿಟನ್‌, ಅಮೆರಿಕ ಹಾಗೂ ಕೆನಡಾ ಗಂಭೀರ ಆರೋಪ ಮಾಡಿವೆ. ಇದರಿಂದಾಗಿ ಕೊರೋನಾ ವೈರಸ್‌ ನಿಯಂತ್ರಿಸುವ ಲಸಿಕೆ ಸಂಶೋಧನೆಯ ವಿಚಾರದಲ್ಲೂ ದೇಶ-ದೇಶಗಳ ನಡುವೆ ಸಂಘರ್ಷ ಆರಂಭವಾದಂತಾಗಿದೆ.

‘ಎಟಿಪಿ29’ ಅಥವಾ ‘ಕೋಜಿ ಬೇರ್‌’ ಎಂದು ಕರೆಯಲ್ಪಡುವ ರಷ್ಯಾ ಗುಪ್ತಚರ ಸೇವೆಯ ಭಾಗವಾದ ಈ ಹ್ಯಾಕರ್‌ಗಳ ಗುಂಪು, ಕೊರೋನಾ ವೈರಸ್‌ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧನಾ ಸಂಸ್ಥೆಗಳ ಕಂಪ್ಯೂಟರ್‌ಗಳಲ್ಲಿನ ದತ್ತಾಂಶ ಕದಿಯುತ್ತಿದೆ ಎಂದು ಮೂರೂ ದೇಶಗಳು ಆಪಾದಿಸಿವೆ. ಆದರೆ ಈ ಆರೋಪಗಳನ್ನು ರಷ್ಯಾ ನಿರಾಕರಿಸಿದೆ.

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ಗಂಭೀರ ಆರೋಪ:

‘ಕೊರೋನಾ ವೈರಸ್‌ ವಿರುದ್ಧ ಹೋರಾಟ ನಡೆದಿರುವಾಗ ರಷ್ಯಾ ಗುಪ್ತಚರರು ದತ್ತಾಂಶಗಳನ್ನು ಕದಿಯುತ್ತಿರುವುದು ಸ್ವೀಕಾರಾರ್ಹವಲ್ಲ. ಇತರರು ಸ್ವಾರ್ಥ ಭಾವನೆಯನ್ನು ತಾಳಿದ್ದರೆ, ಬ್ರಿಟನ್‌ ಹಾಗೂ ಅದರ ಮಿತ್ರರು ಜಗತ್ತನ್ನು ವೈರಸ್‌ನಿಂದ ರಕ್ಷಿಸಲು ಶ್ರಮ ವಹಿಸುತ್ತಿವೆ’ ಎಂದು ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್‌ ರಾಬ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌, ಅಮೆರಿಕ ಹಾಗೂ ಕೆನಡಾ ಈ ಸಂಬಂಧ 16 ಪುಟಗಳ ಸಲಹಾ ಸೂಚಿಯನ್ನು ಸಂಶೋಧನಾ ಕೇಂದ್ರಗಳಿಗೆ ನೀಡಿವೆ. ‘ಕೋಜಿ ಬೇರ್‌ ಹ್ಯಾಕರ್‌ಗಳ ಗುಂಪು ದುರುದ್ದೇಶಪೂರಿತ ಸಾಫ್ಟ್‌ವೇರ್‌ ಒಂದನ್ನು ಸಿದ್ಧಪಡಿಸಿ ಸೈಬರ್‌ ದಾಳಿ ನಡೆಸುತ್ತಿದೆ’ ಎಂದು ಅದರಲ್ಲಿ ತಿಳಿಸಲಾಗಿದೆ.

ಆದರೆ ದತ್ತಾಂಶಗಳ ಕಳ್ಳತನ ಮಾಡುವ ಯತ್ನವನ್ನು ರಷ್ಯಾ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದರೂ, ದತ್ತಾಂಶ ಕಳವಾದ ವಿಚಾರ ದೃಢಪಟ್ಟಿಲ್ಲ. ರಹಸ್ಯ ಮಾಹಿತಿ ಸೋರಿಕೆ ಆಗಿಲ್ಲ ಎಂದು ಸಂಶೋಧನಾ ಕೇಂದ್ರದ ಮೂಲಗಳು ಹೇಳಿವೆ.

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!

ರಷ್ಯಾ ನಕಾರ:

ಆದರೆ ದತ್ತಾಂಶ ಕಳ್ಳತನ ಆರೋಪಗಳನ್ನು ರಷ್ಯಾ ನಿರಾಕರಿಸಿದೆ. ‘ಈ ವಿದ್ಯಮಾನಕ್ಕೂ ರಷ್ಯಾಗೂ ಸಂಬಂಧವಿಲ್ಲ. ಬ್ರಿಟನ್‌ ಸಂಶೋಧನಾ ಕೇಂದ್ರಗಳಲ್ಲಿನ ದತ್ತಾಂಶ ಮಾಹಿತಿ ಕಳವಾದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಒಂದು ಮಾತ್ರ ಸ್ಪಷ್ಟ. ಈ ಕೃತ್ಯದಲ್ಲಿ ರಷ್ಯಾ ಭಾಗಿಯಾಗಿಲ್ಲ’ ಎಂದು ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಸ್ಪಷ್ಟಪಡಿಸಿದ್ದಾರೆ.

ರಷ್ಯಾ ಮೇಲೆ ಹ್ಯಾಕಿಂಗ್‌ ಆರೋಪ ಕೇಳಿಬಂದಿದ್ದು ಇದು ಮೊದಲೇನಲ್ಲ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದತ್ತಾಂಶ ಕಳವು ಮಾಡಿದ ಆರೋಪವೂ ಕೇಳಿಬಂದಿತ್ತು.