ಬೆಂಗಳೂರು :  ನಾಗರಬಾವಿಯ ಆರ್ಕಿಡ್ಸ್‌ ಸ್ಕೂಲ್‌ನಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪಾಠ ಮಾಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನಾಗರಬಾವಿಯ ಆರ್ಕಿಡ್ಸ್‌ ಸ್ಕೂಲ್‌ ಹೆಸರಿನಲ್ಲಿ ಆರ್‌ಟಿಇ ಮಕ್ಕಳಿಗೆ ಪ್ರವೇಶ ಪಡೆಯಲಾಗಿದೆ. ಇತ್ತೀಚೆಗೆ ಆರ್‌.ಎಂ.ಇ. ಹೆಸರಿನಲ್ಲಿ ಮತ್ತೊಂದು ಶಾಲೆ ನಡೆಸಲಾಗುತ್ತಿದೆ. ಆರ್ಕಿಡ್ಸ್‌ ಸ್ಕೂಲ್‌ಗೆ ಪ್ರವೇಶ ಪಡೆದ ಆರ್‌ಟಿಇ ಮಕ್ಕಳನ್ನು ಆರ್‌ಎಂಇ ಶಾಲೆಯಲ್ಲಿ ಪ್ರತ್ಯೇಕವಾಗಿ ಪಾಠ ಮಾಡಲಾಗುತ್ತಿದೆ ಎಂದು ಪೋಷಕರು ತಿಳಿಸಿದ್ದಾರೆ.

ಶಾಲೆಯಲ್ಲಿ ವಿದ್ಯಾರ್ಥಿಗಳ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳಿಗೆ .15 ಸಾವಿರಗಳನ್ನು ಪಡೆಯಲಾಗುತ್ತಿದೆ. ಅಲ್ಲದೆ, ಕಳೆದ ವರ್ಷದಿಂದ ಶಾಲೆಯನ್ನು ಎರಡು ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಹಳೆಯ ಕಟ್ಟಡಗಳಲ್ಲಿ ಆರ್‌ಟಿಇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಅಧಿಕೃತ ಶುಲ್ಕ ಪಾವತಿ ಮಾಡುವವರಿಗೆ ಹೊಸ ಕಟ್ಟಡಗಳಲ್ಲಿ ಪಾಠ ಮಾಡಲಾಗುತ್ತಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೆ, ಯಾವುದೇ ರೀತಿಯ ಸ್ಪಷ್ಟನೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಪೋಷಕರೊಬ್ಬರು, ತಮ್ಮ ಮಗು ಮೂರನೇ ತರಗತಿಯಲ್ಲಿ ಓದುತ್ತಿದೆ. 1ರಿಂದ 5ನೇ ತರಗತಿವರೆಗೆ ಸುಮಾರು 80ಕ್ಕೂ ಹೆಚ್ಚಿನ ಆರ್‌ಟಿಇ ಮಕ್ಕಳು ಓದುತ್ತಿದ್ದಾರೆ. ಕಳೆದ ವರ್ಷದಿಂದ ಶಾಲೆಯನ್ನು ಎರಡು ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಈ ಪೈಕಿ ಒಂದು ಶಾಲೆಗೆ ಈವರೆಗೆ ಅನುಮತಿ ದೊರೆತಿಲ್ಲ. ಇದರಿಂದಾಗಿ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಆರ್‌ಟಿಇ ಮಕ್ಕಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇತ್ತ ಪೋಷಕರು ಮಕ್ಕಳನ್ನು ಬೇರೊಂದು ಶಾಲೆಗಳಿಗೆ ದಾಖಲಿಸಲೂ ಸಾಧ್ಯವಾಗದೆ, ಇರುವ ಶಾಲೆಯಲ್ಲಿಯೂ ಗುಣಾತ್ಮಕ ಶಿಕ್ಷಣ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಲು ‘ಕನ್ನಡ ಪ್ರಭ’ ಸತತವಾಗಿ ಪ್ರಯತ್ನಿಸಿದರೂ ಕೂಡ ಕರೆ ಸ್ವೀಕರಿಸಲಿಲ್ಲ.

ಆರ್‌ಎಂಇ ಹೆಸರಿನಲ್ಲಿ ಪ್ರವೇಶಾತಿ

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಸ್‌.ಜಯಕುಮಾರ್‌, ಆರ್‌ಎಂಇ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಆರ್‌ಟಿಇ ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿದೆ. ಪಾಲುದಾರಿಕೆಯಲ್ಲಿದ್ದವರು ಮತ್ತೊಂದು ಶಾಲೆ ನಡೆಸಲು ಹೊರಟಿದ್ದಾರೆ. ಹೀಗಾಗಿ, ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಸ ಶಾಲೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಆರ್‌ಟಿಇ ಮಕ್ಕಳಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

(ಸಾಂದರ್ಬಿಕ ಚಿತ್ರ)