'ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಮೊದಲ ರಾಜ್ಯ ಕರ್ನಾಟಕ'
ಮೋದಿ ಸರ್ಕಾರ ಹೊಸ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದು ಜಾರಿಯಾಗುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದು ಡಿಸಿಎಂ ತಿಳಿಸಿದ್ದಾರೆ.
ಬೆಂಗಳೂರು, (ಆ.24): ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಬೇಕಿರುವ ಎಲ್ಲ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ರಾಜ್ಯ ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ ಬಗ್ಗೆ ಹಮ್ಮಿಕೊಂಡಿದ್ದ ಐದು ದಿನಗಳ ಆನ್‍ಲೈನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇಡೀ ದೇಶದಲ್ಲೇ ಈ ನೀತಿಯನ್ನು ಮೊಟ್ಟ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಹೇಳಿದರು.
'ಕೇಂದ್ರದ ಶಿಕ್ಷಣ ನೀತಿಯಿಂದ ತಾಂತ್ರಿಕ ಶಿಕ್ಷಣದ ದಿಕ್ಕು ಬದಲು'
ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ರಾಜ್ಯವು ಮೊದಲಿನಿಂದಲೂ ಉತ್ಸುಕತೆಯನ್ನು ಹೊಂದಿದೆ. ನೀತಿಯ ಕರಡು ಪ್ರತಿ ಕೈಸೇರುತ್ತಿದ್ದಂತೆ, ನೀತಿಯ ಜಾರಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಯಿತು ಎಂದ ಉಪ ಮುಖ್ಯಮಂತ್ರಿಗಳು, ನೀತಿ ಪ್ರಕಟವಾಗುವುದಕ್ಕೂ ಮೊದಲು, ಪ್ರಕಟವಾದ ನಂತರ ಕಾರ್ಯಪಡೆ ಜತೆ ಹತ್ತು ಹಲವು ಮಹತ್ವದ ಸಭೆಗಳನ್ನು ನಡೆಸಲಾಗಿದೆ ಎಂದರು.
ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡುವ ಬಗ್ಗೆ ಈಗಾಗಲೇ ಕಾರ್ಯಪಡೆ ಅತ್ಯಮೂಲ್ಯ ಸಲಹೆಗಳನ್ನು ನೀಡಿದೆ. ಇನ್ನು ಅಂತಿಮ ಹಂತದ ಶಿಫಾರಸುಗಳನ್ನಷ್ಟೇ ನೀಡುವುದು ಬಾಕಿ ಇದೆ. ಆ ಶಿಫಾರಸುಗಳು ಬಂದ ಕೂಡಲೇ ಸರಕಾರ ನೀತಿಯ ಜಾರಿಯತ್ತ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಇಡಲಿದೆ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಗೆ ಕೇಂದ್ರದ ಅನುಮೋದನೆ, ಮಾತೃಭಾಷೆಯಲ್ಲಿ ಪಾಠ!
ಇನ್ನೊಂದು ವರ್ಷದ ಅವಯಲ್ಲಿ ಇಡೀ ನೀತಿಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು ಹಾಗೂ ಆಂದೋಲನದಂಥ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಉದ್ದೇಶವಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕ ನಮ್ಮ ದೇಶದ ಅತ್ಯಂತ ಪ್ರಗತಿಶೀಲ ರಾಜ್ಯ. ಹೀಗಾಗಿ ಶಿಕ್ಷಣ ನೀತಿ ಜಾರಿಯ ನಂತರ ನಮ್ಮ ರಾಜ್ಯದ ದಿಕ್ಕೇ ಬದಲಾಗಲಿದೆ ಎಂದು ತಿಳಿಸಿದರು.
ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಗುರುತರವಾಗಿ ತರಬಲ್ಲ ಈ ನೀತಿಯಿಂದ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶದ ಸ್ವರೂಪವೇ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಬೋಧನೆ ಸಿಕ್ಕಿ ಇಡೀ ವ್ಯವಸ್ಥೆಯೇ ಸುಧಾರಿಸಲಿದೆ. ಶಿಕ್ಷಣದಿಂದ ಮಾತ್ರ ಇದು ಸಾಧ್ಯವಾಗುತ್ತದೆ ಎಂಬ ಬಲವಾದ ನಂಬಿಕೆ ನನ್ನದು ಎಂದು ವಿಶ್ವಾಸ ವ್ಯಕ್ತಪಡಿಸಿದರು.