ಹೊಸ ಶಿಕ್ಷಣ ನೀತಿಗೆ ಕೇಂದ್ರದ ಅನುಮೋದನೆ, ಮಾತೃಭಾಷೆಯಲ್ಲಿ ಪಾಠ!

ಹೊಸ ಶಿಕ್ಷಣ ನೀತಿಗೆ ಕೇಂದ್ರದ  ಅನುಮೋದನೆ/ ಯಾವೆಲ್ಲ ಮಹತ್ವದ ಬದಲಾವಣೆ/  5 ನೇ ತರಗತಿವರೆಗೆ ಮಕ್ಕಳಿಗೆ ಮಾತೃಭಾಷೆ ಅಥವಾ ಆಯಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು/ ಶಿಕ್ಷಣ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಲಿದೆ

New National Education Policy 2020 NEP gets Union Cabinet Approval

ಬೆಂಗಳೂರು(ಜು. 29): ದೇಶದ ಶೈಕ್ಷಣಿಕ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಿಸುವ ಗುರಿಯೊಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿಗೆ ಅನುಮೋದನೆ ನೀಡಿದೆ.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಬಹುವರ್ಷಗಳ ಬೇಡಿಕೆಯನ್ನು ಈ ನೀತಿಯಲ್ಲಿ ಈಡೇರಿಸಲಾಗಿದೆ. ಜತೆಗೆ ವೈದ್ಯ ಹಾಗೂ ಕಾನೂನು ಹೊರತಾದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ನಿಯಂತ್ರಣ ಸಂಸ್ಥೆ ಸ್ಥಾಪಿಸುವ ಅಂಶವಿದೆ. 3 ವರ್ಷಗಳ ಪದವಿ ಅವಧಿಯನ್ನು 4 ವರ್ಷದವರೆಗೂ ಹೆಚ್ಚಳ ಮಾಡಿ, ವಿದ್ಯಾರ್ಥಿ ತನಗೆ ಬೇಕಾದಾಗ ಆ ಕೋರ್ಸ್‌ನಿಂದ ಹೊರಬರುವ, ಆತನ ಕಲಿಕೆಗೆ ತಕ್ಕಂತೆ ಪ್ರಮಾಣ ಪತ್ರ ನೀಡುವ ಹೊಸ ಚಿಂತನೆಯೂ ಇದೆ. ಎಂಫಿಲ್‌ ಅನ್ನು ರದ್ದುಗೊಳಿಸಿ ಪದವಿ, ಸ್ನಾತಕ ಪದವಿ ಹಾಗೂ ಪಿಎಚ್‌ಡಿ ಮಟ್ಟದ ಅಧ್ಯಯನಗಳನ್ನು ಅಂತರ ಶಿಕ್ಷಣ ಕಲಿಕೆಯಾಗಿಸುವುದಾಗಿ ನೀತಿ ಹೇಳುತ್ತದೆ. ಖಾಸಗಿ ಹಾಗೂ ಸರ್ಕಾರಿ ಸೇರಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶ ಹೊಂದಿದೆ.

‘ಹೊಸ ಶಿಕ್ಷಣ ನೀತಿ-2020’ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಶೇ.6ಕ್ಕೆ ಏರಿಸುವುದು, ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲೂ ಮೂರು ವರ್ಷ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದು ಮುಂತಾದ ಮಹತ್ವದ ಅಂಶಗಳು ಹೊಸ ಶಿಕ್ಷಣ ನೀತಿಯಲ್ಲಿವೆ.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ಭಾಷೆಯ ಮಾಧ್ಯಮ ಯಾವುದಾಗಿರಬೇಕು ಎಂಬ ವಿಷಯದಲ್ಲಿ ಮಹತ್ವದ ಅಂಶ ಹೊಸ ಶಿಕ್ಷಣ ನೀತಿಯಲ್ಲಿದೆ. ‘5ನೇ ತರಗತಿಯವರೆಗೆ, ಸಾಧ್ಯವಾದರೆ 8ನೇ ತರಗತಿಯವರೆಗೆ ಹಾಗೂ ನಂತರವೂ, ವಿದ್ಯಾರ್ಥಿಗಳಿಗೆ ಮನೆಯ ಭಾಷೆ/ ಮಾತೃಭಾಷೆ/ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಭಾರತದ ಎಲ್ಲಾ ಭಾಷೆಗಳನ್ನು ಮಕ್ಕಳಿಗೆ ತಿಳಿಸುವ ಚಟುವಟಿಕೆ ಇರಬೇಕು. ಯಾವ ಮೂರು ಭಾಷೆಗಳನ್ನು ಮಕ್ಕಳಿಗೆ ಕಲಿಸಬೇಕು ಎಂಬುದನ್ನು ರಾಜ್ಯಗಳು ನಿರ್ಧರಿಸಬಹುದು. ಎಲ್ಲಾ ಶಾಸ್ತ್ರೀಯ ಭಾಷೆಗಳನ್ನು ಕಲಿಯುವ ಐಚ್ಛಿಕ ಅವಕಾಶವನ್ನು ಮಕ್ಕಳಿಗೆ ನೀಡಬೇಕು’ ಎಂದು ಹೊಸ ನೀತಿಯಲ್ಲಿ ಹೇಳಲಾಗಿದೆ.

ಬಲವಂತ ಹೇರಿಕೆ ಬೇಡ:

ಯಾವುದೇ ಭಾಷೆಯನ್ನು ಯಾವುದೇ ವಿದ್ಯಾರ್ಥಿಯ ಮೇಲೂ ಬಲವಂತವಾಗಿ ಹೇರುವಂತಿಲ್ಲ ಎಂದೂ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ಶಿಕ್ಷಣ ನೀತಿಯ ಕರಡನ್ನು ಪ್ರಕಟಿಸಿದಾಗ ಇದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹಿಂದಿ ಹೇರಿಕೆ ಮಾಡುವ ನೀತಿ ಎಂದು ದಕ್ಷಿಣದ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಹೀಗಾಗಿ ಅಂತಿಮ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಮುಂದುವರೆಸುವ ಬಗ್ಗೆಯೇ ಹೇಳಲಾಗಿದೆಯೇ ಹೊರತು, ಆ ಭಾಷೆಗಳು ಯಾವುವು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯಗಳಿಗೆ ಬಿಡಲಾಗಿದೆ. ಇನ್ನು, ಸಂಸ್ಕೃತವನ್ನು ಎಲ್ಲಾ ಹಂತದಲ್ಲೂ ಕಲಿಯುವ ಅವಕಾಶ ನೀಡಬೇಕು ಮತ್ತು ಮಾಧ್ಯಮಿಕ ತರಗತಿಯ ಮಟ್ಟದಲ್ಲಿ ವಿದೇಶಿ ಭಾಷೆಗಳನ್ನು ಕಲಿಯಲು ಅವಕಾಶ ನೀಡಬೇಕು ಎಂದೂ ನೀತಿಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ 1986ರಲ್ಲಿ ರೂಪಿಸಿದ ಶಿಕ್ಷಣ ನೀತಿಯನ್ನು 1992ರಲ್ಲಿ ಒಮ್ಮೆ ಪರಿಷ್ಕರಿಸಲಾಗಿತ್ತು. ನಂತರ ಶಿಕ್ಷಣ ನೀತಿಯ ಪರಿಷ್ಕರಣೆ ನಡೆದಿರಲಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯನ್ನು 21ನೇ ಶತಮಾನಕ್ಕೆ ತಕ್ಕಂತೆ ಮರುರೂಪಿಸಲಾಗುವುದು ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದರಂತೆ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ.

ವೈದ್ಯಕೀಯ ಮತ್ತು ಕಾನೂನು ಶಿಕ್ಷಣ ಹೊರತುಪಡಿಸಿ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಂದೇ ನಿಯಂತ್ರಣ ಪ್ರಾಧಿಕಾರದ ಅಡಿ ತರಲಾಗುವುದು. ಎಲ್ಲಾ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಷನಲ್‌ ಟೆಸ್ಟ್‌ ಏಜೆನ್ಸಿ)ಯಿಂದ ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುವುದು. 15 ವರ್ಷಗಳಲ್ಲಿ ಕಾಲೇಜುಗಳಿಗೆ ಮಾನ್ಯತೆ ನೀಡುವ ವ್ಯವಸ್ಥೆ ತೆಗೆದುಹಾಕಿ ಕಾಲೇಜುಗಳಿಗೆ ಸ್ವಾಯತ್ತೆ ನೀಡಲಾಗುವುದು ಎಂಬ ಅಂಶ ಹೊಸ ಶಿಕ್ಷಣ ನೀತಿಯಲ್ಲಿದೆ.

ಕೇಂದ್ರ ಸರ್ಕಾರವು ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್‌ಆರ್‌ ಸುಬ್ರಮಣಿಯನ್‌ ನೇತೃತ್ವದಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲು ರಚಿಸಿದ್ದ ಸಮಿತಿ 2016ರಲ್ಲಿ ತನ್ನ ವರದಿ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಕರಡು ನೀತಿಯನ್ನು ರೂಪಿಸಿ, ಇಸ್ರೋದ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ ನೇತೃತ್ವದಲ್ಲಿ ಶಿಕ್ಷಣ ನೀತಿಯ ಹೊಸ ಕರಡು ರೂಪಿಸಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಕಳೆದ ವರ್ಷ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಒಂದು ವರ್ಷದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಅವೆಲ್ಲವುಗಳನ್ನೂ ಗಮನಿಸಿ ಅಂತಿಮ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಭಾಷೆ ನಿರ್ಧಾರ ರಾಜ್ಯಗಳಿಗೆ ಬಿಟ್ಟದ್ದು

5ನೇ ತರಗತಿಯವರೆಗೆ ಮಕ್ಕಳಿಗೆ ಮಾತೃಭಾಷೆ, ಮನೆಭಾಷೆ ಅಥವಾ ಸ್ಥಳೀಯ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು. ಈ ಭಾಷೆ ಯಾವುದು ಎಂಬುದನ್ನು ನಿರ್ಧರಿಸುವುದು ರಾಜ್ಯಗಳಿಗೆ ಬಿಟ್ಟದ್ದು ಎಂದು ನೀತಿ ಹೇಳುತ್ತದೆ.

ಇನ್ನು 4 ವರ್ಷದ ಪದವಿ, ನಿರ್ಗಮನಕ್ಕೆ ಅವಕಾಶ

3 ವರ್ಷಗಳ ಪದವಿಯನ್ನು 4 ವರ್ಷಕ್ಕೂ ಹೆಚ್ಚಿಸುವ ಪ್ರಸ್ತಾವ ಶಿಕ್ಷಣ ನೀತಿಯಲ್ಲಿದೆ. ಆದರೆ, ಇದರಲ್ಲಿ ಯಾವಾಗ ಬೇಕಾದರೂ ಪದವಿ ಶಿಕ್ಷಣದಿಂದ ಹೊರಬರಬಹುದಾದ, ಅದಕ್ಕೆ ಸೂಕ್ತ ಪ್ರಮಾಣಪತ್ರ ನೀಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಉದಾಹರಣೆಗೆ, 1 ವರ್ಷದ ಪದವಿ ಮುಗಿಸಿದವರಿಗೆ ಸಟಿಫಿಕೇಟ್‌ ನೀಡಲಾಗುತ್ತದೆ. 2 ವರ್ಷ ಅಧ್ಯಯನ ಮಾಡಿದವರಿಗೆ ಡಿಪ್ಲೊಮಾ ನೀಡಲಾಗುತ್ತದೆ. 3 ವರ್ಷ ಮುಗಿಸಿದವರಿಗೆ ಪದವಿ ನೀಡಲಾಗುತ್ತದೆ. 4 ವರ್ಷ ಪೂರ್ಣಗೊಳಿಸಿದವರಿಗೆ ಸಂಶೋಧನಾ ಪದವಿ ನೀಡಲಾಗುತ್ತದೆ.

ಒಂದೇ ಪ್ರವೇಶ ಪರೀಕ್ಷೆ

ದೇಶದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಂದೇ ನಿಯಂತ್ರಣ ಪ್ರಾಧಿಕಾರದಡಿ ತಂದು ಎಲ್ಲಾ ಕೋರ್ಸ್‌ಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ನೀತಿಯಲ್ಲಿ ತಿಳಿಸಲಾಗಿದೆ. ಆದರೆ ವೈದ್ಯಕೀಯ ಮತ್ತು ಕಾನೂನು ಕೋರ್ಸ್‌ಗಳಿಗೆ ಇದು ಅನ್ವಯಿಸುವುದಿಲ್ಲ.

10+2 ಬದಲು ಹೊಸ ವ್ಯವಸ್ಥೆ

ದೇಶದಲ್ಲಿ ಸದ್ಯ ಇರುವ 10+2 ಶಿಕ್ಷಣ ವ್ಯವಸ್ಥೆಯನ್ನು 5+3+3+4 ಎಂದು ಬದಲಿಸಬೇಕು ಎಂದು ನೀತಿ ಹೇಳಿದೆ. ಇದರಲ್ಲಿ ಮೊದಲ 3 ವರ್ಷ ಪೂರ್ವ ಪ್ರಾಥಮಿಕ ಅಥವಾ ಅಂಗನವಾಡಿ ಶಿಕ್ಷಣ. ಇಲ್ಲಿಯವರೆಗೆ ಸರ್ಕಾರದ ಅಧಿಕೃತ ಶಿಕ್ಷಣ ನೀತಿ ಮಗುವಿನ 6ನೇ ವರ್ಷದಿಂದ ಆರಂಭವಾಗುತ್ತಿತ್ತು. ಇನ್ನುಮುಂದೆ ಜಾಗತಿಕ ಮಾನದಂಡದಂತೆ ಮಗುವಿನ 3ನೇ ವರ್ಷದಿಂದಲೇ ಆರಂಭವಾಗುತ್ತದೆ.

3, 5, 8ನೇ ಕ್ಲಾಸಲ್ಲಿ ಮಾತ್ರ ಪರೀಕ್ಷೆ

ಶಾಲೆಗಳಲ್ಲಿ ಪ್ರತಿ ವರ್ಷ ಪರೀಕ್ಷೆ ನಡೆಸುವ ಬದಲು 3, 5 ಮತ್ತು 8ನೇ ತರಗತಿಗೆ ಮಾತ್ರ ಪರೀಕ್ಷೆ ನಡೆಸಬೇಕು. ಇನ್ನುಳಿದ ವರ್ಷಗಳಲ್ಲಿ ‘ಜಾಣ್ಮೆಯ ಆಂತರಿಕ ಪರೀಕ್ಷೆ’ ನಡೆಸುವುದು. 10 ಮತ್ತು 12ನೇ ಕ್ಲಾಸ್‌ಗೆ ಪಬ್ಲಿಕ್‌ ಪರೀಕ್ಷೆ ಹಿಂದಿನಂತೆಯೇ ಮುಂದುವರೆಯುತ್ತದೆ.

ನೀತಿಯಲ್ಲಿನ ಇತರೆ ಅಂಶಗಳು

- 10 ಮತ್ತು 12ನೇ ಕ್ಲಾಸ್‌ಗೆ ಪಬ್ಲಿಕ್‌ ಪರೀಕ್ಷೆ ಇನ್ನುಮುಂದೆಯೂ ಇರುತ್ತದೆ. ಆದರೆ, ಅದನ್ನು ನಿಜವಾದ ಜ್ಞಾನದ ಪರೀಕ್ಷೆಯಾಗುವಂತೆ ಬದಲಿಸುವುದು.

- ಮೂಲಭೂತ ಶಿಕ್ಷಣದ ಅಂಶಗಳಿಗೆ ತಕ್ಕಂತೆ ಶಾಲಾ ಪಠ್ಯವನ್ನು ಇಳಿಕೆ ಮಾಡುವುದು ಮತ್ತು 6ನೇ ತರಗತಿಯಿಂದ ವೃತ್ತಿಶಿಕ್ಷಣವನ್ನು ಸೇರ್ಪಡೆ ಮಾಡುವುದು.

- ರಿಪೋರ್ಟ್‌ ಕಾರ್ಡ್‌ಗಳಲ್ಲಿ ಕೇವಲ ಅಂಕ ಅಥವಾ ಗ್ರೇಡ್‌ಗಳನ್ನು ನೀಡುವುದರ ಬದಲು ಮಕ್ಕಳ ಕೌಶಲ ಮತ್ತು ಸಾಮರ್ಥ್ಯಗಳನ್ನು ಬಿಂಬಿಸುವಂತೆ ನೀಡುವುದು.

- ದೇಶದಲ್ಲಿ 45,000 ನೋಂದಾಯಿತ ಕಾಲೇಜುಗಳಿದ್ದು, ಅವುಗಳಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಹಣಕಾಸು ವಿಚಾರಗಳಲ್ಲಿ ಸ್ವಾಯತ್ತೆ ನೀಡುವುದು.

- ಪ್ರಾದೇಶಿಕ ಭಾಷೆಗಳಲ್ಲಿ ಇ-ಕೋರ್ಸ್‌ಗಳನ್ನು ರೂಪಿಸುವುದು. ಆನ್‌ಲೈನ್‌ ಪ್ರಯೋಗಾಲಯಗಳನ್ನು ಆರಂಭಿಸುವುದು. ರಾಷ್ಟ್ರೀಯ ಶಿಕ್ಷಣ ತಾಂತ್ರಿಕ ವೇದಿಕೆ (ಎನ್‌ಇಟಿಎಫ್‌) ರೂಪಿಸುವುದು.

- ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯಲು ನ್ಯಾಷನಲ್‌ ಅಸೆಸ್‌ಮೆಂಟ್‌ ಸೆಂಟರ್‌ (ಪರಾಖ್‌) ಸ್ಥಾಪನೆ.

ಟಾಪ್‌-5 ಅಂಶಗಳು

1. ವೈದ್ಯಕೀಯ, ಕಾನೂನು ಹೊರತಾಗಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಒಂದೇ ಸಂಸ್ಥೆ

2. ಎಲ್ಲ ಖಾಸಗಿ ಹಾಗೂ ಸರ್ಕಾರಿ ವಿವಿಗಳಲ್ಲಿನ ಕೋರ್ಸ್‌ಗಳ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ

3. ಎಂ.ಫಿಲ್‌ ಪದವಿ (ಮಾಸ್ಟರ್‌ ಆಫ್‌ ಫಿಲಾಸಫಿ) ರದ್ದು. ಪದವಿ ಕೋರ್ಸ್‌ 4 ವರ್ಷಗಳಿಗೆ ಏರಿಕೆ

4 ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವಿಧಿಸುವ ಶೈಕ್ಷಣಿಕ ಶುಲ್ಕಗಳಿಗೆ ಗರಿಷ್ಠ ಮಿತಿ ವ್ಯವಸ್ಥೆ ಜಾರಿ

5. ಸದ್ಯ 6ರಿಂದ 14 ವರ್ಷಗಳವರೆಗೆ ಇರುವ ಕಡ್ಡಾಯ ಶಿಕ್ಷಣದ ಹಕ್ಕನ್ನು 3ರಿಂದ 18 ವರ್ಷಕ್ಕೆ ಏರಿಕೆ

Latest Videos
Follow Us:
Download App:
  • android
  • ios