ಬೆಂಗಳೂರು, (ಆ.19): ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಹೊಸ ಶಿಕ್ಷಣ ನೀತಿಯಿಂದ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಲಿದ್ದು, ಭವಿಷ್ಯದಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಜಾಗತಿಕ ಗುಣಮಟ್ಟ ಸಾಧಿಸಲಿವೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ʼಆವಿಷ್ಕಾರ್‌-2020ʼ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕವೇ ಉದ್ದೇಶಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣದ ದಿಕ್ಕನ್ನು ಶಿಕ್ಷಣ ನೀತಿ ಬದಲಿಸಲಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕಾಲೇಜುಗಳ ಪುನಶ್ಚೇತನಕ್ಕೂ ಇದರಿಂದ ಅನುಕೂಲವಾಗಲಿದೆ. ಸಂಶೋಧನೆ ಮತ್ತು ಗುಣಮಟ್ಟದ ಬೋಧನೆಯ ದಿಕ್ಕಿನಲ್ಲಿ ಮುಂದಿನ ದಿನಗಳಲ್ಲಿ ಗಮನಾರ್ಹ ಬದಲಾವಣೆಗಳು ಗೋಚರವಾಗಲಿವೆ ಎಂದು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರಾಜ್ಯದಲ್ಲೇ ಮೊದಲು ಜಾರಿ

ಕೇಂದ್ರ ಸರಕಾರದ ನೆರವಿನೊಂದಿಗೆ ನಡೆಯುತ್ತಿರುವ ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ಅವಿಷ್ಕಾರ್‌ ಪ್ರದರ್ಶನ ನಡೆಯುತ್ತಿದೆ. ವಿದ್ಯಾರ್ಥಿಗಳು ರೂಪಿಸುತ್ತಿರುವ ಹೊಸ ರೀತಿಯ, ಸೃಜನಶೀಲವಾದ ಪ್ರಾಜೆಕ್ಟ್ ಗಳು ಪ್ರೋತ್ಸಾಹ ಮತ್ತು ಧನ ಸಹಾಯ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

134 ಪ್ರಾಜೆಕ್ಟ್:
ಒಟ್ಟು 134 ಪ್ರಾಜೆಕ್ಟ್ ಗಳನ್ನು ಪಟ್ಟಿ ಮಾಡಲಾಗಿತ್ತು. ಇದರಲ್ಲಿ ಮಹಿಳಾ ಸುರಕ್ಷತೆ, ಸ್ವಚ್ಛ ಭಾರತ, ಸ್ವಸ್ಥ್ಯ ಭಾರತ್‌, ಡಿಜಿಟಲ್‌ ಇಂಡಿಯಾ, ಗ್ರೀನ್‌ ಎನರ್ಜಿ, ಪರಿಸರ ರಕ್ಷಣೆ, ಕೃಷಿ ಸಲಕರಣೆಗಳು ಸೇರಿದಂತೆ ಹತ್ತು ಹಲವು ಆವಿಷ್ಕಾರಗಳ ಬಗ್ಗೆ ವಿದ್ಯಾರ್ಥಿಗಳು ಪ್ರಾಜೆಕ್ಟ್ ಮಂಡಿಸಿದ್ದು, ಇವುಗಳಲ್ಲಿ ವಿಜೇತರಾಗುವ ಪ್ರಾಜೆಕ್ಟ್ ಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಕ್ರಮವಾಗಿ 25, 20, 15 ಸಾವಿರ ರೂಪಾಯಿ ನಗದು ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ, ರಿಜಿಸ್ಟ್ರಾರ್‌ ಪ್ರೊ. ಎಸ್‌. ಅಣ್ಣಗೇರಿ, ವಿವಿಯ ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಸಂಚಾಲಕ ಡಾ. ಎಸ್.ಎಲ್.‌ ದೇಶಪಾಂಡೆ, ವಿವಿಯ ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮ ಸೆಲ್‌ನ ಸದಸ್ಯ ಪ್ರೊ. ಎನ್.ಸಿ. ಶಿವಪ್ರಕಾಶ್‌ ಮುಂತಾದವರು ಉಪಸ್ಥಿತರಿದ್ದರು.