ವೃದ್ಧಾಪ್ಯದಲ್ಲಿ ಆರ್ಥಿಕ ಸ್ಥಿತಿ ದುರ್ಬಲವಾಗಿದ್ರೆ ಜೀವನ ಕಷ್ಟ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲ ಕೆಲಸಗಾರರಿಗೆ ವಿಶೇಷ ಯೋಜನೆ ಶುರು ಮಾಡಿದ್ದು, ಯೋಜನೆಯಡಿ ನಿಮಗೆ 3 ಸಾವಿರ ರೂಪಾಯಿ ತಿಂಗಳು ಸಿಗುತ್ತೆ. ಆ ಯೋಜನೆ ಡಿಟೇಲ್ಸ್ ಇಲ್ಲಿದೆ.
ವೃದ್ಧಾಪ್ಯ (old age)ದಲ್ಲಿ ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆ ಒದಗಿಸಲು, ಸರ್ಕಾರ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (Pradhan Mantri Shrama Yogi Maan Dhan Scheme)ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, 15,000 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು 60 ವರ್ಷದ ನಂತ್ರ ತಿಂಗಳಿಗೆ 3000 ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ.
ಯೋಜನೆ ಯಾವಾಗ ಶುರುವಾಗಿದೆ? : ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ (PM-SYM) ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ, ಅಸಂಘಟಿತ ವಲಯದ ಕಾರ್ಮಿಕರು 60 ವರ್ಷದ ನಂತರ 3000 ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ. ಯೋಜನೆಯಡಿಯಲ್ಲಿ, ಫಲಾನುಭವಿಯು ಪ್ರತಿ ತಿಂಗಳು ಹೂಡಿಕೆ ಮಾಡುವ ಹಣದಷ್ಟೇ ಹಣವನ್ನು ಸರ್ಕಾರ ಸೇರಿಸುತ್ತದೆ. ಉದಾಹರಣೆಗೆ ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳು 100 ರೂಪಾಯಿ ಸೇರಿಸಿದ್ರೆ ಸರ್ಕಾರ ಕೂಡ ನಿಮ್ಮ ಹಣಕ್ಕೆ 100 ರೂಪಾಯಿ ಸೇರಿಸುತ್ತದೆ. ಅಂದ್ರೆ ತಿಂಗಳಿಗೆ ನೀವು 200 ರೂಪಾಯಿ ಕೂಡಿಟ್ಟಂತಾಗುತ್ತದೆ.
ಈ ಯೋಜನೆ ಲಾಭ ಯಾರಿಗೆ ಸಿಗಲಿದೆ? : ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಈ ಯೋಜನೆ ಶುರುವಾಗಿದೆ. ಆದ್ರೆ ಅನೇಕರಿಗೆ ಈ ಯೋಜನೆ ಬಗ್ಗೆ ಮಾಹಿತಿ ಇಲ್ಲ. ನೀವು ಈ ಕೆಳಗಿನ ಕೆಲಸದಲ್ಲಿ ಯಾವುದೇ ಕೆಲಸ ಮಾಡ್ತಿದ್ದರೆ ನಿಮಗೆ ಈ ಯೋಜನೆ ಲಾಭ ಸಿಗಲಿದೆ.
• ಮನೆ ಕೆಲಸಗಾರರು
• ಬೀದಿ ವ್ಯಾಪಾರಿಗಳು
• ಚಾಲಕರು
• ಪ್ಲಂಬರ್ ಗಳು
• ಟೈಲರ್ ಗಳು
• ಮಧ್ಯಾಹ್ನದ ಊಟ ತಯಾರಿಸುವ ಕೆಲಸಗಾರರು
• ರಿಕ್ಷಾ ಎಳೆಯುವವರು
• ನಿರ್ಮಾಣ ಕಾರ್ಮಿಕರು
• ಕಸ ತೆಗೆಯುವವರು
• ಬೀಡಿ ತಯಾರಕರು
• ಕೈಮಗ್ಗ ಕಾರ್ಮಿಕರು
• ಕೃಷಿ ಕಾರ್ಮಿಕರು
• ಚಮ್ಮಾರರು
• ಬಟ್ಟೆ ಒಗೆಯುವವರು
• ಚರ್ಮದ ಕೆಲಸಗಾರರು
ಈ ಯೋಜನೆಯಲ್ಲಿರುವ ಷರತ್ತುಗಳು ಏನು? : ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಈ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಲಭ್ಯವಿದೆ. ಈ ಅಸಂಘಟಿತ ವಲಯದ ಕಾರ್ಮಿಕರ ಆದಾಯ 15,000 ರೂಪಾಯಿ ಮೀರಬಾರದು. ಹಾಗೆಯೇ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದು. 40 ವರ್ಷ ಮೇಲ್ಪಟ್ಟ ಕಾರ್ಮಿಕರು ಇದ್ರ ಲಾಭ ಪಡೆಯಲು ಸಾಧ್ಯವಿಲ್ಲ. ಹಾಗೆಯೆ ಉಳಿತಾಯ ಬ್ಯಾಂಕ್ ಖಾತೆ ಅಥವಾ ಜನ-ಧನ್ ಖಾತೆಯ ದಾಖಲೆ ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಈ ಹಿಂದೆ ಕೇಂದ್ರ ಸರ್ಕಾರದ ಯಾವುದೇ ಇತರ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆದ ಕಾರ್ಮಿಕರಿಗೆ ಇದ್ರ ಲಾಭ ಸಿಗೋದಿಲ್ಲ.
ಯೋಜನೆ ಅಡಿ ನಿಮಗೆ ಎಷ್ಟು ಹಣ ಸಿಗುತ್ತದೆ? : ಈ ಯೋಜನೆಯಲ್ಲಿ 18 ವರ್ಷ ವಯಸ್ಸಿನ ಅರ್ಜಿದಾರ ತಿಂಗಳಿಗೆ 55 ರೂಪಾಯಿ ಠೇವಣಿ ಇಡಬೇಕು. 19 ವರ್ಷ ವಯಸ್ಸಿನ ಅರ್ಜಿದಾರರು 58 ರೂಪಾಯಿ ಠೇವಣಿ ಇಡಬೇಕು. 20 ವರ್ಷ ವಯಸ್ಸಿನವರು 61 ರೂಪಾಯಿ ಠೇವಣಿ ಹಾಗೂ 21 ವರ್ಷ ವಯಸ್ಸಿನವರು 64 ರೂಪಾಯಿ ಠೇವಣಿ ಇಡಬೇಕು. ನೀವು 22ನೇ ವರ್ಷಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ಠೇವಣಿ ಹಣ 68 ರೂಪಾಯಿ ಆಗುತ್ತದೆ. ವರ್ಷ ಹೆಚ್ಚಾದಂತೆ ಠೇವಣಿ ಹಣ ಹೆಚ್ಚಾಗುತ್ತದೆ. ನಿಮ್ಮ ವಯಸ್ಸು 35 ವರ್ಷವಾಗಿದ್ದರೆ ನೀವು ಪ್ರತಿ ತಿಂಗಳು 150 ರೂಪಾಯಿ ಠೇವಣಿ ಇಡಬೇಕಾಗುತ್ತದೆ. 36 ವರ್ಷ ವಯಸ್ಸಿನ ಅರ್ಜಿದಾರರು 160 ರೂಪಾಯಿ ಹಾಗೂ 37 ವರ್ಷ ವಯಸ್ಸಿನವರು 170 ರೂಪಾಯಿ ಪಾವತಿಸಬೇಕಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು? : ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಲು ನೀವು ಸಾಮಾನ್ಯ ಸೇವಾ ಕೇಂದ್ರ (CSC) ಕ್ಕೆ ಭೇಟಿ ನೀಡ್ಬೇಕು. ಅಲ್ಲಿ ಕೇಳುವ ದಾಖಲೆಗಳನ್ನು ನೀಡಿ, ಅರ್ಜಿ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.