ತಾಯಿಯ ಐಟಿಆರ್ ಅನ್ನು ಮೊದಲ ಬಾರಿಗೆ ಸಲ್ಲಿಸುವಾಗ ಕೇವಲ 2.5 ಗಂಟೆ ತಡವಾದ ಕಾರಣಕ್ಕೆ ವ್ಯಕ್ತಿಯೊಬ್ಬರು ಎಷ್ಟು ದಂಡ ಪಾವತಿಸಿದ್ದಾರೆ ಗೊತ್ತಾ? ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆದಾಯ ತೆರಿಗೆ ನಿಯಮಗಳ ಕಠಿಣತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಮುಖ್ಯ ಕರ್ತವ್ಯವಾಗಿದೆ. ಆದರೆ, ನಿಗದಿತ ಸಮಯಕ್ಕಿಂತ ಕೆಲವೇ ಕೆಲವು ನಿಮಿಷ ಅಥವಾ ಗಂಟೆ ತಡವಾದರೂ ತೆರಿಗೆ ಇಲಾಖೆಯ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿರುತ್ತವೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಮೊದಲ ಬಾರಿಗೆ ತನ್ನ ತಾಯಿಯ ಐಟಿಆರ್ ಸಲ್ಲಿಸಲು ಹೊರಟ ವ್ಯಕ್ತಿಯೊಬ್ಬರು ಕೇವಲ 2.5 ಗಂಟೆ ತಡ ಮಾಡಿದ್ದಕ್ಕಾಗಿ ಬರೋಬ್ಬರಿ ₹5,000 ವಿಳಂಬ ಶುಲ್ಕ ತೆರಬೇಕಾಗಿ ಬಂದಿದೆ. ಈ ಘಟನೆ ಈಗ ಸಾಮಾಜಿಕ ಜಾಲತಾಣವಾದ 'X' ನ ಪೋಸ್ಟ್ ಮೂಲಕ ಭಾರತದ ಐಟಿಆರ್ ಫೈಲಿಂಗ್ ನಿಯಮಗಳ ಕುರಿತು ಭಾರಿ ಚರ್ಚೆಗೆ ನಾಂದಿ ಹಾಡಿದೆ.

ಘಟನೆ ಹಂಚಿಕೊಂಡವರು ಯಾರು?

'X' ಬಳಕೆದಾರರಾದ ಪೂಜಾ (@poojaofficial5) ಎಂಬುವವರು ಈ ಆಸಕ್ತಿಕರ ಘಟನೆ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಮೊದಲ ಬಾರಿಗೆ ಐಟಿಆರ್ ಫೈಲ್ ಮಾಡುತ್ತಿದ್ದರು. ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾಗಬಾರದು ಹಾಗೂ ಎಲ್ಲಾ ವಿವರಗಳು ನಿಖರವಾಗಿರಬೇಕು ಎಂಬ ಕಾರಣಕ್ಕೆ ಅವರು ಪ್ರಮುಖ ಹಣಕಾಸಿನ ದಾಖಲೆಯೊಂದಕ್ಕಾಗಿ ಕಾಯುತ್ತಿದ್ದರು. ಪ್ರಮುಖ ದಾಖಲೆ ಸಿಕ್ಕ ನಂತರವೇ ಫೈಲ್ ಮಾಡುವುದು ಸೂಕ್ತ ಎಂದು ಭಾವಿಸಿ ಅವರು ಉದ್ದೇಶಪೂರ್ವಕವಾಗಿ ಕೊಂಚ ತಡ ಮಾಡಿದ್ದರು.

ದಂಡ ಬಿದ್ದಿದ್ದು ಎಷ್ಟು?

ಆದರೆ, ಎಲ್ಲಾ ವಿವರಗಳನ್ನು ಸರಿಯಾಗಿ ಜೋಡಿಸಿಕೊಂಡು ಅವರು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ಗೆ ಲಾಗಿನ್ ಆಗುವ ಹೊತ್ತಿಗೆ, ಐಟಿಆರ್ ಸಲ್ಲಿಸಲು ನೀಡಲಾಗಿದ್ದ ಅಂತಿಮ ಗಡುವು ಮುಗಿದು ಕೇವಲ ಎರಡೂವರೆ ಗಂಟೆಗಳು ಕಳೆದಿತ್ತು. ಅವರ ಉದ್ದೇಶ ಪ್ರಾಮಾಣಿಕವಾಗಿದ್ದರೂ, ತೆರಿಗೆ ಪೋರ್ಟಲ್‌ನ ಸ್ವಯಂಚಾಲಿತ ವ್ಯವಸ್ಥೆಗೆ ಮಾನವೀಯ ಭಾವನೆಗಳಿಗಿಂತ ನಿಯಮಗಳೇ ಮುಖ್ಯವಾಗಿದ್ದವು. ಗಡುವು ದಾಟಿದ್ದೇ ತಡ, ಪೋರ್ಟಲ್ ತನ್ನ ನಿಯಮದಂತೆ ₹5,000 ವಿಳಂಬ ಶುಲ್ಕವನ್ನು ಮೂಲ ತೆರಿಗೆಗೆ ಸೇರ್ಪಡೆಗೊಳಿಸಿತು.

ಮಾರಕವಾದ 2.5 ಗಂಟೆ!

ಇದರ ಪರಿಣಾಮವಾಗಿ, ಆರಂಭದಲ್ಲಿ ಕೇವಲ ₹850 ಬಾಕಿ ಇದ್ದ ಮೂಲ ತೆರಿಗೆ ಪಾವತಿಯು, ₹5,000 ದಂಡ ಸೇರಿದ ನಂತರ ಒಟ್ಟು ₹5,850 ಕ್ಕೆ ಏರಿಕೆಯಾಯಿತು. ಅಂದರೆ, ಕೇವಲ 2.5 ಗಂಟೆಯ ವಿಳಂಬದಿಂದಾಗಿ ಅವರು ಪಾವತಿಸಬೇಕಿದ್ದ ನಿಜವಾದ ತೆರಿಗೆಗಿಂತ ಸುಮಾರು ಏಳು ಪಟ್ಟು ಹೆಚ್ಚು ಮೊತ್ತವನ್ನು ಕೇವಲ ದಂಡದ ರೂಪದಲ್ಲೇ ನೀಡಬೇಕಾಯಿತು. "ಅವರು ಪೋರ್ಟಲ್‌ಗೆ ಲಾಗಿನ್ ಆಗುವ ಹೊತ್ತಿಗೆ ಕೇವಲ 2.5 ಗಂಟೆ ತಡವಾಗಿತ್ತು, ಅಷ್ಟಕ್ಕೇ ವ್ಯವಸ್ಥೆ ದಂಡ ವಿಧಿಸಿತು ಎಂದು ಪೋಸ್ಟ್‌ನಲ್ಲಿ ಅಳಲು ತೋಡಿಕೊಳ್ಳಲಾಗಿದೆ.

ವಿಭಿನ್ನ ಅಭಿಪ್ರಾಯ ಸಂಗ್ರಹ!

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು "ಐಟಿಆರ್ ಸಲ್ಲಿಸಲು ಸರ್ಕಾರ ತಿಂಗಳುಗಳ ಕಾಲ ಸಮಯ ನೀಡುತ್ತದೆ, ಕೊನೆಯ ದಿನದವರೆಗೂ ಕಾಯುವುದು ಏಕೆ, ಸಿಸ್ಟಮ್ ಅಂದಮೇಲೆ ನಿಯಮಗಳು ಎಲ್ಲರಿಗೂ ಒಂದೇ" ಎಂದು ತೆರಿಗೆದಾರರ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಆದರೆ ಇನ್ನೊಂದೆಡೆ, "ಮೊದಲ ಬಾರಿಗೆ ಫೈಲ್ ಮಾಡುವಾಗ ಸಣ್ಣಪುಟ್ಟ ವಿಳಂಬ ಸಹಜ, ಕೇವಲ ₹850 ತೆರಿಗೆಗೆ ₹5,000 ದಂಡ ಹಾಕುವುದು ಅತಿಯಾಯಿತು, ನಿಯಮಗಳಲ್ಲಿ ಮಾನವೀಯ ವಿನಾಯಿತಿಗೆ ಅವಕಾಶವಿರಬೇಕು" ಎಂದು ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪೋರ್ಟಲ್‌ನಲ್ಲಿ ಟೆಕ್ನಿಕಲ್ ಎರರ್!

ಅಷ್ಟೇ ಅಲ್ಲದೆ, ಅನೇಕ ಬಳಕೆದಾರರು ತಮಗಾದ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. 2022 ರಲ್ಲೂ ಕೊನೆಯ ದಿನದಂದು ತೆರಿಗೆ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆ ಎದುರಾಗಿ, ಕೊನೆಯ ಕ್ಷಣದಲ್ಲಿ ಲಾಗಿನ್ ಆಗಲಾಗದೆ ಕೇವಲ ಒಂದು ನಿಮಿಷದ ವಿಳಂಬಕ್ಕೂ ₹5,000 ದಂಡ ತೆರಬೇಕಾಗಿ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಈ ಘಟನೆಯು ಪ್ರತಿಯೊಬ್ಬ ತೆರಿಗೆದಾರರಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಕಡೆಯ ನಿಮಿಷದವರೆಗೂ ಕಾಯದೆ ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸುವುದು ಎಷ್ಟು ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿದೆ.