ಚಿತ್ರದುರ್ಗ (ಸೆ. 20):  ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತದಲ್ಲಿ ಭದ್ರಾ ಕಾಲುವೆಗಳಿಂದ ಚಿತ್ರದುರ್ಗದ ವಾಣಿವಿಲಾಸ (ವಿವಿ ಸಾಗರ) ಜಲಾಶಯಕ್ಕೆ ಶುಕ್ರವಾರದಿಂದ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗುತ್ತಿದೆ. ಇದರೊಂದಿಗೆ ಈ ಭಾಗದ ರೈತರ ದಶಕಗಳ ಕನಸು ಇದೀಗ ಈಡೇರಲಿದೆ.

ಅ.1 ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀರು ಮೇಲೆತ್ತುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಅಲ್ಲಿಯವರೆಗೆ ಪ್ರಾಯೋಗಿಕವಾಗಿ ನೀರು ಹಾಯಿಸಲಾಗುತ್ತದೆ.

ವೃಷಭೆಯನ್ನು ಶುಚಿಗೊಳಿಸೋಣ ಬನ್ನಿ; ಯುವ ಬ್ರಿಗೇಡ್ ನಿಂದ ಕರೆ

ಭದ್ರಾ ಜಲಾಶಯದ ನೀರು ವಾಣಿ ವಿಲಾಸ ಸಾಗರ ತಲುಪಬೇಕಾದರೆ ಎರಡು ಕಡೆ ಲಿಫ್ಟ್‌ ಮಾಡಬೇಕು. ಲಿಫ್ಟ್‌ ಮಾಡಲು 18 ಸಾವಿರ ಹಾರ್ಸ್‌ಪವರ್‌ನ ನಾಲ್ಕು ಮೋಟರ್‌ ಪಂಪ್‌ಗಳನ್ನು ಎರಡು ಕಡೆ ಅಳವಡಿಸಲಾಗಿದೆ. ಶಾಂತಿಪುರದ ಬಳಿ ಮೊದಲು ನೀರನ್ನು ಲಿಫ್ಟ್‌ ಮಾಡಿ ಕಾಲುವೆಗೆ ಬಿಡಲಾಗುತ್ತದೆ.

ನಂತರ ಬೆಟ್ಟದ ತಾವರಕೆರೆ ಬಳಿ ಮತ್ತೊಂದು ಲಿಫ್ಟ್‌ ಮಾಡಿ ಅಜ್ಜಂಪುರ ಸಮೀಪದ 7 ಕಿ.ಮೀ. ಉದ್ದದ ಸುರಂಗ ಮಾರ್ಗಕ್ಕೆ ಹಾಯಿಸಲಾಗುತ್ತದೆ. ಅಲ್ಲಿಂದ ನೀರು ವೈ ಜಂಕ್ಷನ್‌ ಮೂಲಕ ವೇದಾವತಿ ನದಿ ಸೇರಿ ನೇರವಾಗಿ ವಿವಿ ಸಾಗರ ತಲುಪುತ್ತದೆ.

ಅಜ್ಜಂಪುರ ಬಳಿ ರೈಲ್ವೆ ಹಳಿಗಳ ಕೆಳಭಾಗದಲ್ಲಿ ಪೈಪ್‌ಗಳ ಜೋಡಣೆಗೆ ಅಡ್ಡಿಯಾಗಿರುವುದರಿಂದ ಸದ್ಯಕ್ಕೆ ಒಂದು ಪೈಪ್‌ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹಾಗಾಗಿ, ಒಂದು ಮೋಟರ್‌ ಪಂಪು ಸ್ಟಾರ್ಟ್‌ ಮಾಡಿ ನಿತ್ಯ 450 ಕ್ಯುಸೆಕ್‌ ನೀರು ಮಾತ್ರ ವಿವಿ ಸಾಗರಕ್ಕೆ ಬಿಡಲಾಗುತ್ತದೆ.

ಜೀವನದಿ ಉಳಿವಿಗೆ ‘ಕಾವೇರಿ ಕೂಗು’; ನೀವೇನು ಮಾಡ್ಬಹುದು?

ವೈ ಜಂಕ್ಷನ್‌ ಬಳಿ ರೈತರೊಬ್ಬರು ಕಾಲುವೆ ನಿರ್ಮಾಣಕ್ಕೆ ಭೂಮಿ ನೀಡಲು ನಿರಾಕರಿಸಿದ್ದರಿಂದ ಪಕ್ಕದಲ್ಲೇ ಮತ್ತೊಬ್ಬ ರೈತನ ಭೂಮಿಯನ್ನು ಗುತ್ತಿಗೆ ಮೇಲೆ ಪಡೆದು ತಾತ್ಕಾಲಿಕವಾಗಿ ಕಾಲುವೆ ತೋಡಿದ್ದಾರೆ.

ಇಂದು ಅನುಮಾನ?:

ನೀರೆತ್ತುವ ಮೋಟಾರ್‌ ಪಂಪ್‌ ಬಿಸಿಯಾದಲ್ಲಿ ಮಾತ್ರ ಶುಕ್ರವಾರ ಕಾಲುವೆ ನೀರು ಹರಿಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಬುಧವಾರ ಮಧ್ಯಾಹ್ನ ಮೋಟಾರ್‌ ಪಂಪು ಚಾಲನೆಯಾಗಿರಲಿಲ್ಲ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಚಾಲನೆಯಾದರೆ ಸಂಜೆ ಹೊತ್ತಿಗೆ ಭದ್ರೆ ನೀರು ವೇದಾವತಿ ನದಿ ಪಾತ್ರ ಸೇರಲಿದ್ದಾಳೆ ಎಂದಿದ್ದಾರೆ.