Asianet Suvarna News Asianet Suvarna News

ಜೀವನದಿ ಉಳಿವಿಗೆ ‘ಕಾವೇರಿ ಕೂಗು’; ನೀವೇನು ಮಾಡ್ಬಹುದು?

ಜೀವನದಿಗಳ ಉಳಿವಿಗಾಗಿ ಜನರು ‘ಕಾವೇರಿ ಕೂಗು’ ಆಂದೋಲನದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ. ಈ ಆಶಯದೊಂದಿಗೆ ಕೈಜೋಡಿಸುವ ರೈತರಿಗೆ ಮೊದಲ 3-4 ವರ್ಷ ಅರಣ್ಯ ಕೃಷಿಗೆ ಬೇಕಾಗುವ ಮೂಲ ಸೌಕರ‍್ಯಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ಮುಖಾಂತರ ಕೊಡಿಸಲಾಗುತ್ತದೆ. 

All about cauvery Calling campaign launch by  Isha Foundation Jaggi Vasudev
Author
Bengaluru, First Published Aug 28, 2019, 5:20 PM IST

ಬೆಂಗಳೂರು (ಆ. 28): ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು. ಈ ಹಿನ್ನೆಲೆಯಲ್ಲಿ ‘ಕಾವೇರಿ ಕೂಗು’ ಜೀವನದಿಯನ್ನು ಹೇಗೆ ಮರುಪೂರಣ ಮಾಡಲಿದೆ? ಇದರ ಅನುಷ್ಠಾನ ಹೇಗೆ? ಇದರಿಂದ ರೈತರ ಆದಾಯ ಹೇಗೆ ಹೆಚ್ಚಲಿದೆ? ಈ ಅಭಿಯಾನದೊಂದಿಗೆ ನೀವೂ ಹೇಗೆ ಕೈಜೋಡಿಸಬಹುದು? ಎಂಬ ವಿಸ್ತೃತ ವಿವರ ಇಲ್ಲಿದೆ.

ಏನಿದು ಕಾವೇರಿ ಕೂಗು?

ಎಲ್ಲ ಭಾರತೀಯ ನದಿಗಳಂತೆ ಕಾವೇರಿಯು ಕೂಡ ಅರಣ್ಯಪೋಷಿತ ನದಿ. ಐತಿಹಾಸಿಕವಾಗಿ ಈ ಪ್ರಾಂತ್ಯವೆಲ್ಲ ಅರಣ್ಯ ಹಾಗೂ ಗಿಡಮರಗಳಿಂದ ಆವೃತವಾಗಿತ್ತು. ಪ್ರಾಣಿಗಳ ಗೊಬ್ಬರ ಹಾಗೂ ಗಿಡಮರಗಳ ತ್ಯಾಜ್ಯಗಳಿಂದ ಆ ಪ್ರಾಂತ್ಯದ ಮಣ್ಣಿಗೆ ನಿರಂತರವಾಗಿ ಪೌಷ್ಟಿಕಾಂಶಗಳು ಮತ್ತು ಜೈವಿಕ ಪದಾರ್ಥ ಮರುಪೂರೈಕೆಯಾಗುತ್ತಿತ್ತು. ಆದರೆ ಜನಸಂಖ್ಯೆ ಹೆಚ್ಚಾಗುತ್ತಾ ಅರಣ್ಯ ನಾಶವೂ ಹೆಚ್ಚುತ್ತಿದೆ.

ಮರ ನೆಟ್ಟು 3 ಪಟ್ಟು ಲಾಭ ಗಳಿಸಿ, ಕಾವೇರಿ ಉಳಿಸಿ

ಭೂಮಿಯ ಜೈವಿಕಾಂಶದ ಮರುಪೂರೈಕೆಯೂ ಆಗುತ್ತಿಲ್ಲ. ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ. ಪರಿಣಾಮ ಈ ಭೂಮಿಯು ಕಾವೇರಿಯನ್ನು ಪೋಷಿಸುವಲ್ಲಿ ವಿಫಲವಾಗುತ್ತಿದೆ ಮತ್ತು ಕಾವೇರಿ ಬತ್ತಿ ಹೋಗುತ್ತಿದೆ. ಇಂಥ ಸಂದರ್ಭದಲ್ಲಿ ಕಾವೇರಿಗೆ ಮತ್ತೆ ಜೀವಂತಿಕೆ ತಂದುಕೊಡುವ ಆಂದೋಲನವೇ ‘ಕಾವೇರಿ ಕೂಗು’. ಈಶ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಕಾವೇರಿ ಜಲಾನಯನ ಹಾಗೂ ನದಿ ಪಾತ್ರದ ಸರ್ಕಾರಿ ಭೂಮಿಗಳಲ್ಲಿ ಸ್ಥಳೀಯ ಪ್ರಭೇದದ ಮರಗಳು ಮತ್ತು ಖಾಸಗಿ ಜಮೀನಿನಲ್ಲಿ ಅರಣ್ಯ ಕೃಷಿ (ಆಗ್ರೋ ಫಾರೆಸ್ಟಿಅಂದರೆ ಸಾಂಪ್ರದಾಯಿಕ ಬೆಳೆಗಳ ಜೊತೆ ಹಣ್ಣುಗಳು ಮತ್ತು ಟಿಂಬರ್‌ ಮರಗಳನ್ನು ಒಂದೇ ಜಮೀನಿನಲ್ಲಿ ಬೆಳೆಯುವುದು) ಆರಂಭಿಸುವ ಪರಿಕಲ್ಪನೆಯಡಿ 242 ಕೋಟಿ ಮರ ನೆಡುವುದು ಇದರ ಉದ್ದೇಶ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಕಾವೇರಿ ನೀರಿನ ಹರಿವೂ ಹೆಚ್ಚಾಗುತ್ತದೆ. ಜೊತೆಗೆ ಮುಂದಿನ 10ರಿಂದ 12 ವರ್ಷದಲ್ಲಿ ರೈತರ ಆದಾಯವೂ ಹೆಚ್ಚಾಗಲಿದೆ. ಕಾವೇರಿ ಜಲಾನಯನ ಪ್ರದೇಶದ 83-85 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ.

ಪ್ರತಿ ಸಿಕ್ಸರ್‌ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!

ಕಾವೇರಿ ಕೂಗು ಅಭಿಯಾನದ ಗುರಿ ಏನು?

-ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡುವುದು, ಮೊದಲ ಹಂತದಲ್ಲಿ 73 ಕೋಟಿ ಸಸಿಗಳನ್ನು ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ನೆಡುವುದು.

-ರೈತರ ಆದಾಯವನ್ನು ಐದು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಿಸುವುದು.

-ಕಾವೇರಿ ಜಲಾನಯನ ಪ್ರದೇಶದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು 40% ವೃದ್ಧಿಸುವುದು.

ಅನುಷ್ಠಾನಗೊಳಿಸುವುದು ಹೇಗೆ?

ಜೀವನದಿಗಳ ಉಳಿವಿಗಾಗಿ ಜನರು ಈ ಆಂದೋಲನದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ. ಈ ಆಶಯದೊಂದಿಗೆ ಕೈಜೋಡಿಸುವ ರೈತರಿಗೆ ಮೊದಲ 3-4 ವರ್ಷ ಅರಣ್ಯ ಕೃಷಿಗೆ ಬೇಕಾಗುವ ಮೂಲ ಸೌಕರ‍್ಯಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ಮುಖಾಂತರ ಕೊಡಿಸಲಾಗುತ್ತದೆ. ಅಲ್ಲದೆ ಸಾಮಾನ್ಯ ಬೆಳೆ ಬೆಳೆಯುತ್ತಿರುವ ರೈತರು ಅರಣ್ಯ ಕೃಷಿಗೆ ಬದಲಾಗಲು ರೈತರನ್ನು ಮನವೊಲಿಸಲು ಆಡಳಿತ ವರ್ಗದ ಬೆಂಬಲ ಪಡೆಯಲಾಗುತ್ತದೆ.

ತಮಿಳುನಾಡಿನಲ್ಲಿ ಈಶ ಫೌಂಡೇಶನ್‌ ಅಲ್ಲಿನ 6000 ಗ್ರಾಮಗಳಲ್ಲಿ ಈಗಾಗಲೇ ಅರಣ್ಯ ಕೃಷಿ ಜಾರಿಗೊಳಿಸಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲೆಂದೇ 45 ವಾಹನಗಳು ಎಲ್ಲೆಡೆ ಓಡಾಡುತ್ತಿವೆ. ಇದರ ಫಲವಾಗಿ 2.7 ಲಕ್ಷ ರೈತರು ಅರಣ್ಯ ಕೃಷಿಯಲ್ಲಿ ಪಾಲ್ಗೊಳ್ಳುವುದಾಗಿ ಬರೆದುಕೊಟ್ಟಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ಈ ಅಭಿಯಾನಕ್ಕೆ ಈಗಾಗಲೇ ಕೈಜೋಡಿಸಿವೆ.

ಈ ನಿಟ್ಟಿನಲ್ಲಿ ಈಶ ಫೌಂಡೇಷನ್‌ 33 ಕಡೆ ನರ್ಸರಿಗಳನ್ನು ನಡೆಸುತ್ತಿದೆ.ಬೃಹತ್‌ ಪ್ರಮಾಣದಲ್ಲಿ ಗಿಡಗಳು ಬೇಕಾಗುವುದರಿಂದ ಇದು ಸಾಲುವುದಿಲ್ಲ. ನರ್ಸರಿ ಆರಂಭಿಸಲು ಕೊಡಗಿನಲ್ಲಿ ಉತ್ತಮ ವಾತಾವರಣವಿರುವುದರಿಂದ 1000 ಎಕರೆ ಜಾಗವನ್ನು ನೀಡುವಂತೆ ಅಲ್ಲಿನ ಕಾಫಿ ತೋಟದ ಮಾಲೀಕರನ್ನು ಕೇಳಲಾಗಿದೆ. ಹೀಗೆ ಸರ್ಕಾರ ಮತ್ತು ದಾನಿಗಳ ನೆರವಿನಿಂದ ಈ ಅಭಿಯಾನವನ್ನು ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ.

ಕಾವೇರಿ ಕೂಗು ಅಭಿಯಾನಕ್ಕೆ ಕೊಯಮತ್ತೂರಲ್ಲಿ ಚಾಲನೆ

ರೈತರ ಆದಾಯ ದ್ವಿಗುಣವಾಗುವುದು ಹೇಗೆ?

ರೈತರು ತಮ್ಮ ಪೂರ್ತಿ ಜಮೀನಿನಲ್ಲಿ ಅರಣ್ಯ ಕೃಷಿ ಆರಂಭಿಸದೆ ಕೇವಲ ಮೂರನೇ ಒಂದರಷ್ಟುಕೃಷಿ ಭೂಮಿಯಲ್ಲಿ ಅರಣ್ಯ ಕೃಷಿ ಆರಂಭಿಸುವಂತೆ ಮಾಡುವುದು ಈ ಆಂದೋಲನದ ಉದ್ದೇಶ. ಉಳಿದ ಭಾಗದಲ್ಲಿ ರೈತ ತನಗೆ ಬೇಕಾದ ಬೆಳೆ ಬೆಳೆದುಕೊಳ್ಳಬಹುದು. ಒಂದು ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ 1,500 ಮರ ನೆಟ್ಟು ನಾಲ್ಕು ಅಥವಾ 5 ವರ್ಷ ಕಳೆದ ನಂತರ 700 ಮರಗಳನ್ನು ಕಡಿದು ಮಾರಬಹುದು. ಇಂತಿಷ್ಟುವರ್ಷದ ನಂತರ ರೈತರು ತಮ್ಮ ಜಮೀನಿನಲ್ಲಿ ನೆಟ್ಟಮರಗಳನ್ನು ಕಡಿಯಲು ಅವಕಾಶ ಮಾಡಿಕೊಡಲಾಗುವುದು.

ಹೀಗೆ ಮರ ಕಡಿದ ಜಾಗದಲ್ಲಿ ಬೇರೆ ಮರ ನೆಡುತ್ತಾ ಹೋದರೆ ಪ್ರತಿ ನಾಲ್ಕೈದು ವರ್ಷಕ್ಕೆ ಆದಾಯ ಬಂದೇ ಬರುತ್ತದೆ. ಅಲ್ಲದೆ ನಮ್ಮ ಅಗತ್ಯಕ್ಕೆ ಬೇಕಾದ ಮರಗಳಿಗೆ ಕಾಡನ್ನು ಆಶ್ರಯಿಸುವುದೂ ತಪ್ಪುತ್ತದೆ. ಆಗ ಅರಣ್ಯವೂ ಹೆಚ್ಚುತ್ತದೆ, ರೈತರ ಆದಾಯವೂ ಹೆಚ್ಚುತ್ತದೆ ಎಂಬುದು ಇದರ ಆಶಯ.

ನೀರಿಲ್ಲದೆ ಒಣಗುತ್ತಿದ್ದಾಳೆ ಕಾವೇರಿ!

ಕಾವೇರಿ ನದಿಯು ಕಳೆದ 70 ವರ್ಷಗಳಲ್ಲಿ 39% ಕ್ಷೀಣಿಸಿದ್ದಾಳೆ. ಕಾವೇರಿ ಜಲಾನಯನ ಪ್ರದೇಶದ ಅರ್ಧದಷ್ಟುಭಾಗ ತೀವ್ರ ಅಂತರ್ಜಲ ಇಳಿಕೆಯಿಂದ ಬಳಲುತ್ತಿದೆ. ನದಿಯ ಜಲಾನಯನ ಪ್ರದೇಶದ 87% ಮರಗಳು ಮಾಯವಾಗಿವೆ. ಬೇಸಿಗೆಯಲ್ಲಿ ಕಾವೇರಿ ನದಿ ನೀರು ಸಮುದ್ರ ತಲುಪುತ್ತಿಲ್ಲ. ಬತ್ತಿಹೋದ, ಮರಳುಗಾಡಿನಂತಿರುವ ನದಿಯ ತಳವನ್ನಷ್ಟೇ ಲಕ್ಷಾಂತರ ಜನರು ವರ್ಷದ ಹಲವಾರು ತಿಂಗಳು ನೋಡುವ ಸ್ಥಿತಿ ಬಂದಿದೆ. ಇನ್ನು ನೀರಿನ ಕೊರತೆ ಮತ್ತಿತರೆ ಕಾರಣಗಳಿಂದ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ರೈತರ ಬವಣೆ ಮತ್ತು ಆತ್ಮಹತ್ಯೆಗಳು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಿವೆ.

ತಮಿಳುನಾಡಿನ 83% ರೈತರು ಮತ್ತು ಕರ್ನಾಟಕದ 77% ರೈತರು ಸಾಲದ ಸುಳಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಳೆದ 18 ವರ್ಷಗಳಲ್ಲಿ 15 ವರ್ಷಗಳು ಬರಪೀಡಿತವಾಗಿದ್ದವು. 2019ರಲ್ಲಿ ತಮಿಳುನಾಡಿನ 17 ಜಿಲ್ಲೆಗಳು ಬರಪೀಡಿತ ಸ್ಥಿತಿಯಲ್ಲಿವೆ. ಕಾವೇರಿಯ ಈ ದುಸ್ಥಿತಿಗೆ ತುರ್ತು ಪರಿಹಾರದ ಅಗತ್ಯವಿದೆ. ಇದಕ್ಕಾಗಿ ಅಲ್ಲಿನ ಮಣ್ಣಿನ ಪೌಷ್ಟಿಕಾಂಶ ಮತ್ತು ಇಂಗಾಲದ ಅಂಶವನ್ನು ಮರುಪೂರೈಕೆ ಮಾಡಿದರೆ, ಅದು ಮತ್ತೊಮ್ಮೆ ಫಲವತ್ತಾಗುತ್ತದೆ. ಮಳೆ ನೀರನ್ನು ಹೀರಿ ಕಾವೇರಿಯನ್ನು ಪೋಷಿಸುತ್ತದೆ. ಇದು ನದಿಯ ಪರಿಸರವನ್ನು ಪುನರುಜ್ಜೀವನಗೊಳಿಸುವುದಲ್ಲದೆ ರೈತನ ಆರ್ಥಿಕ ಪರಿಸ್ಥಿತಿಯನ್ನೂ ಸುಧಾರಿಸುತ್ತದೆ ಎನ್ನುವುದು ಸದ್ಗುರು ಅವರ ಸದಾಶಯ.

‘ಕಾವೇರಿ ಕೂಗು’ ಜನಕ ಸದ್ಗುರು

ಸದ್ಗುರು ಅವರು ಕಾವೇರಿ ನದಿ ತೀರದಲ್ಲಿ 160 ಕಿ.ಮೀ. ಸಂಚರಿಸುವ ಮೂಲಕ ಕಾವೇರಿಯ ದುಸ್ಥಿತಿಯ ನೈಜಚಿತ್ರಣವನ್ನು ಅರಿತು ಕಾವೇರಿ ಉಳಿವಿಗಾಗಿ ‘ಕಾವೇರಿ ಕೂಗು’ ಅಭಿಯಾನ ಆರಂಭಿಸಿದ್ದಾರೆ. ಸೆಪ್ಟೆಂಬರ್‌ 3ರಂದು ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಮುಂದಿನ ಎರಡು ವಾರಗಳ ಕಾಲ ಮೋಟರ್‌ ಸೈಕಲ… ರಾರ‍ಯಲಿ ಮಾಡುವ ಮೂಲಕ ಅಭಿಯಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಸದ್ಗುರು ಕಾವೇರಿಯ ಮೂಲಸ್ಥಳವಾದ ತಲಕಾವೇರಿಯಿಂದ ತಿರುವರೂರಿನವರೆಗೂ ಸಂಚರಿಸಿ ಪ್ರಮುಖ ನಗರಗಳಲ್ಲಿ ಬೃಹತ್‌ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಮತ್ತು ಕಾವೇರಿ ನದಿ ಆಸುಪಾಸಿನಲ್ಲಿ ಇರುವ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ನೂರಾರು ಸಣ್ಣ ಕಾರ್ಯಕ್ರಮಗಳನ್ನೂ ನಡೆಸಲಿದ್ದಾರೆ.

ಕಾವೇರಿ ಉಳಿವಿಗೆ ನೀವೂ ಕೈಜೋಡಿಸಬಹುದು

್ಚa್ಠvಛ್ಟಿy್ಚa್ಝ್ಝಜ್ಞಿಜ.ಟ್ಟಜವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಮೊಬೈಲ್‌ ಸಂಖ್ಯೆ 80009 80009ಕ್ಕೆ ಕರೆ ಮಾಡಿ ಪ್ರತಿ ಗಿಡಕ್ಕೆ 42 ರು. ನಂತೆ ಪಾವತಿಸಿ ‘ಕಾವೇರಿ ಕೂಗು’ ಅಭಿಯಾನ ಬೆಂಬಲಿಸಬಹುದು. ಈಗಾಗಲೇ 85,842 ಬೆಂಬಲಿಗರು 222,87,820 ಮರಗಳಿಗೆ ದೇಣಿಗೆ ನೀಡಿದ್ದಾರೆ. ಒಬ್ಬರು ಎಷ್ಟುಸಸಿಗಳನ್ನು ನೆಡಲು ಬೇಕಾದರೂ ನೆರವಾಗಬಹುದು.

ಅಭಿಯಾನ ಬೆಂಬಲಿಸಿ ಪ್ರಶಸ್ತಿ ಪಡೆಯಿರಿ!

ಕಾವೇರಿ ಉಳಿವಿಗೆ ಸಸಿ ನೀಡಿವವರಿಗೆ ಈಶ ಫೌಂಡೇಶನ್‌ ವತಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ 1 ಸಸಿ ನೀಡುವವರಿಗೆ ‘ಕಾವೇರಿ ಉಪಾಸಕ’, 10 ಸಸಿ ನೀಡುವವರಿಗೆ ‘ಕಾವೇರಿ ಶೂರ’, 100 ಸಸಿ ನೀಡುವವರಿಗೆ ‘ಕಾವೇರಿ ಮಿತ್ರ’, 1000 ಸಸಿ ನೀಡುವವರಿಗೆ ‘ಕಾವೇರಿ ವೀರ’ ಎಂದೂ 10000ಕ್ಕೂ ಹೆಚ್ಚು ಸಸಿ ನೀಡುವವರಿಗೆ ‘ಕಾವೇರಿ ಪರಮವೀರ’ ಎಂದು ಬಿರುದು ನೀಡಲಾಗುತ್ತದೆ. ಹಾಗೆಯೇ 10,000 ಸಸಿ ಕೊಡುಗೆ ನೀಡಿದವರಿಗೆ ‘ಕಾವೇರಿ ರಕ್ಷಕ’, 1 ಲಕ್ಷ ನೀಡುವವರಿಗೆ ‘ಕಾವೇರಿ ಯೋಧ’, 10 ಲಕ್ಷ ಸಸಿ ನೀಡುವವರಿಗೆ ‘ಕಾವೇರಿ ನಾಯಕ’ ಪ್ರಶಸ್ತಿ ನೀಡಲಾಗುವುದು.

ಕರ್ನಾಟಕ- ತಮಿಳುನಾಡು ಹಗ್ಗ ಜಗ್ಗಾಟಕ್ಕೆ ಸುಸ್ಥಿರ ಪರಿಹಾರ

ಕಾವೇರಿ ವಿಷಯವಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಬಹು ಕಾಲದಿಂದಲೂ ಹಗ್ಗಜಗ್ಗಾಟ ನಡೆಯುತ್ತಿದೆ. ಆದರೆ ಎರಡೂ ರಾಜ್ಯದವರು ಇರುವ ನೀರನ್ನೇ ವ್ಯವಸ್ಥಿತವಾಗಿ ಬಳಸಿಕೊಂಡರೆ ಯಾವ ನೀರಿನ ಸಮಸ್ಯೆಯೂ ಉಂಟಾಗದು. ಏಕೆಂದರೆ ತಮಿಳುನಾಡುನಲ್ಲಿ ಇನ್ನೂ ನೆರೆ ನೀರಾವರಿಯ ಅಭ್ಯಾಸವಿದೆ. ಇದು ನೀರನ್ನು ಬಳಸುವ ಅತ್ಯಂತ ಕ್ರೂರ ಮಾರ್ಗ.

ಇದರಿಂದ ಭೂಮಿಗಾಗಲೀ ಬೆಳೆಗಳಿಗಾಗಲೀ ಒಳ್ಳೆಯದಲ್ಲ. ಒಂದೇ ಪ್ರದೇಶದಲ್ಲಿ ಅಷ್ಟೊಂದು ಪ್ರಮಾಣದ ನೀರು ಸುರಿದರೆ ಮಣ್ಣು ತನ್ನ ಸತ್ವ ಕಳೆದುಕೊಳ್ಳುತ್ತದೆ. ಈ ಪದ್ಧತಿ ಬದಲಾದರೆ ತಮಿಳುನಾಡು ಮತ್ತು ಕರ್ನಾಟಕದ ವ್ಯಾಜ್ಯ ಪರಿಹಾರವಾಗುತ್ತದೆ. ಜೊತೆಗೆ ಈ ಅಭಿಯಾನಕ್ಕೆ ಎರಡೂ ರಾಜ್ಯಗಳು ಕೈಜೋಡಿಸಿರುವುದರಿಂದ ಕಾವೇರಿ ಪುನಶ್ಚೇತನಗೊಂಡು ಕಾವೇರಿ ನೀರಿನ ಪ್ರಮಾಣ ಹೆಚ್ಚಾಗಬಹುದು ಎನ್ನುತ್ತಾರೆ ಸದ್ಗುರು.

ಕಾವೇರಿ ಕೂಗು ಅಭಿಯಾನದೊಂದಿಗೆ ಚಿತ್ರರಂಗ

ಸದ್ಗುರು ನೇತೃತ್ವದಲ್ಲಿ ಜೀವನದಿ ಕಾವೇರಿ ಉಳಿವಿಗಾಗಿ ನಡೆಯುತ್ತಿರುವ ಅಭಿಯಾನಕ್ಕೆ ಕನ್ನಡ ಚಿತ್ರರಂಗವೂ ಕೈಜೋಡಿಸಿದೆ. ಈಗಾಗಲೇ ಸುಹಾಸಿನಿ, ಉಪೇಂದ್ರ, ರಕ್ಷಿತ್‌ ಶೆಟ್ಟಿ, ಯಶ್‌ ಮುಂತಾದವರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios