ಬೆಂಗಳೂರು: ಕೆಲವೊಮ್ಮೆ ತಪ್ಪುಗಳಾಗುವುದು ಸಹಜ. ಆದರೆ, ಆ ತಪ್ಪು ಬೇರೆಯವರಿಗೆ ಹೊರೆ ಆಗಬಾರದೆಂಬ ವಿಷಯವನ್ನು ಬೆಸ್ಕಾಂ ಕಲಿತುಕೊಂಡರೆ ಒಳ್ಳೆಯದು. ಬೆಸ್ಕಾಂ ಸಿಬ್ಬಂದಿ ಅವಸರವೋ, ಅಚಾತುರ್ಯವೋ ಬಿಲ್ ನೀಡುವಾಗ ತಪ್ಪಾಗುತ್ತದೆ. ಅದು ಗ್ರಾಹಕರಿಗೆ ಹೊರೆಯಾಗದಂತೆ ನಡೆದುಕೊಂಡು, ತಪ್ಪನ್ನು ತಿದ್ದುಕೊಳ್ಳುವ ಬದಲು, ಗ್ರಾಹಕರಿಂದ ಮತ್ತಷ್ಟು ಪೀಕಲು ಯತ್ನಿಸುವ ಬೆಸ್ಕಾಂ ನಡತೆಗೆ ಇಲ್ಲಿದೆ ಮತ್ತೊಂದು ಸಾಕ್ಷಿ.

ಕನಕಪುರ ರಸ್ತೆಯಲ್ಲಿ ನ್ಯೂ ಲೈಫ್ ಡಿ-ಅಡಿಕ್ಷನ್ ಮತ್ತು ಕೌನ್ಸೆಲಿಂಗ್ ಸೆಂಟರೊಂದು ಸರ್ಕಾರೇತರ ಸಂಸ್ಥೆ. ನೋಂದಿತ ದುಶ್ಚಟ ನಿವಾರಣ ಕೇಂದ್ರವಾದ ಈ ಕಟ್ಟಡದ ಮುಂದೆ ಕೇಂದ್ರದಲ್ಲಿ ನೀಡುವ ಚಿಕಿತ್ಸೆ ಬಗ್ಗೆ ವಿವರಗಳು ಬೋರ್ಡಿನಲ್ಲಿಯೇ ಕಾಣಿಸುತ್ತದೆ.  ಈಗಿರುವ ಕಟ್ಟಡದಲ್ಲಿ ಈ ಸಂಸ್ಥೆ ಕಳೆದ ಎರಡು ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, ತಪ್ಪದೇ ವಿದ್ಯುತ್ ಬಿಲ್ ಅನ್ನು ಕಟ್ಟುತ್ತಿದೆ. ಆದರೆ, ಇದೀಗ ಬೆಸ್ಕಾಂ ಒಟ್ಟಿಗೇ 38,207 ರೂ. ಬಿಲ್ ನೀಡಿದೆ. ಅಲ್ಲದೇ, ಕಂತಿನಲ್ಲಿ ಕಟ್ಟುತ್ತೇನೆಂದು ಹೇಳುತ್ತಿದ್ದರೂ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸುತ್ತಿದೆ.

ಕಾರಣವೇನು ಗೊತ್ತಾ?

ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಕಾರಣ ನೀಡಲಾಗುತ್ತಿದೆ. 

ಫೈನ್. ಬಿಲ್ ಕಟ್ಟಲು ಸಂಸ್ಥೆಯ ನಿರ್ದೇಶಕರಾದ ಕೆ.ಸಿ.ಸದಾನಂದ್ ಅವರು ಸಿದ್ಧರಾಗಿದ್ದು, ಕಂತಿನಲ್ಲಿ ಕಟ್ಟುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ಇಸ್ರೋ ಲೇ ಔಟ್ ವ್ಯಾಪ್ತಿಯಲ್ಲಿ ಬರುವ ಸಹಾಯಕ ಎಂಜಿನಿಯರ್ ಸಹ ಭಾಗಶಃ ಒಪ್ಪಿದ್ದಾರೆ. ಆದರೆ, ಇದೀಗ ಪದೆ ಪದೇ ಬೆಸ್ಕಾಂ ಸಿಬ್ಬಂದಿ ಬಂದು ತೊಂದರೆ ನೀಡುತ್ತಿದ್ದು, ಹಣ ಪೀಕಲು ಯತ್ನಿಸುತ್ತಿದ್ದಾರೆ. ಅಲ್ಲದೇ ಅಷ್ಟೂ ಹಣವನ್ನು ಒಟ್ಟಿಗೇ ಪಾವತಿಸಬೇಕೆಂದು ಹಠ ಹಿಡಿಯುತ್ತಿದ್ದು, ಬೆಸ್ಕಾಂ ಸಿಬ್ಬಂದಿ ತಪ್ಪಿಗೆ ಈ ಎನ್‌ಜಿಒ ತೊಂದರೆ ಅನುಭವಿಸಬೇಕಾಗಿದೆ.

ಎರಡು ವರ್ಷಗಳಿಂದ ಬೆಸ್ಕಾಂ ಉದ್ಯೋಗಿಗಳು ಸುಮಾರು 25ಕ್ಕಿಂತಲೂ ಹೆಚ್ಚು ಬಾರಿ ಬಿಲ್ ನೀಡಲು ಬಂದಾಗ ಬೋರ್ಡ್ ಇರುವುದು ಗಮನಿಸಿಯೇ ಇಲ್ಲವೇ? ಆಗೇಕೆ ಕಮರ್ಷಿಯಲ್ ದರವನ್ನೇಕೆ ನಿಗದಿಗೊಳಿಸಲಿಲ್ಲ? ಇದೀಗ ಅವರ ತಪ್ಪಿನಿಂದಾಗಿ ಒಂದೇ ತಿಂಗಳಲ್ಲಿ ಸಾವಿರಾರು ರೂ. ಬಿಲ್ ನೀಡಿದ್ದು, ಕಂತಿನಲ್ಲಿ ಕಟ್ಟುತ್ತೇವೆಂದರೂ ಈ ಬೆದರಿಕೆ ಏಕೆ? ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಪದೆ ಪದೇ ಎಚ್ಚರಿಕೆ ನೀಡುತ್ತಿರುವುದೇಕೆ?

ಹಲವು ಕಂಪನಿ, ಕಾರ್ಖಾನೆಗಳು ಲಕ್ಷಾಂತರ ರೂ. ಬಿಲ್ ಪಾವತಿ ಮಾಡಬೇಕಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಬೆಸ್ಕಾಂ ಬಿಲ್ ಕಟ್ಟುತ್ತೇವೆ ಎಂದರೂ, ಈ ಸಣ್ಣ ಎನ್‌ಜಿಒ ಮೇಲೇಕೆ ಈ ಮುನಿಸು? 

ಬೆಸ್ಕಾಂ ಅಧಿಕಾರಿಗಳೇ ದಯವಿಟ್ಟು, ಇತ್ತ ಗಮನಿಸಿ. ಬೆಸ್ಕಾಂ ಸಿಬ್ಬಂದಿ ಮಾಡಿರುವ ತಪ್ಪಿಗೆ ಅವರಿಗೆ ಶಿಕ್ಷೆ ಆಗಲಿ. ಬದಲಿಗೆ ದುಶ್ಚಟ ಬಿಡಿಸುವಂಥ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಎನ್‌ಜಿಒ ಮೇಲೆ ಮುನಿಸೇಕೆ?  ಈ ಸಮಸ್ಯೆಗೊಂದು ಪರಿಹಾರ ಸೂಚಿಸಿ.

ಬೆಸ್ಕಾಂ ನೀಡುತ್ತಿರುವ ಬಿಲ್ ಅನ್ನು ತಪ್ಪದೇ ಪಾವತಿಸುತ್ತಿದ್ದೇವೆ. ಆದರೆ, ಒಟ್ಟಿಗೆ ಇಷ್ಟು ಮೊತ್ತದ ಬಿಲ್ ಪಾವತಿಸಲು ಕಷ್ಟವೆನಿಸುತ್ತಿದೆ. ಸಮಯ ಕೇಳಿದ್ದು, ಕಂತಿನಲ್ಲಿ ಪಾವತಿಸುವುದಾಗಿ ಹೇಳುತ್ತಿದ್ದೇವೆ. ಆದರೂ, ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ವಿದ್ಯುತ್ ಬಿಲ್ ಪಾವತಿಗೆ ನೀಡುತ್ತಿರುವ ಚೆಕ್ ಅನ್ನೂ ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಪೂರ್ತಿ ಬಿಲ್ ಮೊತ್ತವನ್ನು ಪಾವತಿಸಬೇಕೆಂದು ಹೇಳುತ್ತಿದ್ದಾರೆ.

- ಕೆ.ಸಿ.ಸದಾನಂದ್, ನಿರ್ದೇಶಕರು, ನ್ಯೂಲೈಫ್ ಡಿ-ಅಡಿಕ್ಷನ್ ಆ್ಯಂಡ್ ಕೌನ್ಸೆಲಿಂಗ್ ಸೆಂಟರ್

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿ