ಇನ್ನುಮುಂದೆ ನೀವು ಎಷ್ಟು ಹಣ ಕಟ್ಟುವಿರೋ ಅಷ್ಟೇ ವಿದ್ಯುತ್ ಬಳಕೆ ಮಾಡಬೇಕು. ರೀಚಾರ್ಜ್ ಮಾಡಿಕೊಂಡು ವಿದ್ಯುತ್ ಬಳಕೆ ಮಾಡುವ ನಿಯಮವನ್ನು ಶೀಘ್ರ ಬೆಸ್ಕಾಂ ಜಾರಿ ಮಾಡಲಿದೆ. 

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ ವ್ಯಾಪ್ತಿಯ ನಗರಸಭೆಗಳು ಹಾಗೂ ಗ್ರಾಮಪಂಚಾಯಿತಿ ಸೇರಿದಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆಯೂ ಇನ್ನು ಮುಂದೆ ವಿದ್ಯುತ್‌ ಬಳಕೆ ಮಾಡುವ ಮೊದಲೇ ಬೆಸ್ಕಾಂಗೆ ವಿದ್ಯುತ್‌ ಶುಲ್ಕ ಪಾವತಿಸಬೇಕು!

ಹೌದು, ಬಿಬಿಎಂಪಿ ಸೇರಿದಂತೆ ನಗರ ಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಕೆ ಮಾಡುವ ಬೀದಿ ದೀಪಗಳು ಹಾಗೂ ಕುಡಿಯುವ ನೀರು ಸರಬರಾಜು ಮಾಡಲು ಪಡೆಯುವ ವಿದ್ಯುತ್‌ ಸಂಪರ್ಕಗಳಿಗೆ ಇನ್ನು ಮುಂದೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಲು ಬೆಸ್ಕಾಂ ಮುಂದಾಗಿದೆ.

ಸ್ಥಳೀಯ ಸಂಸ್ಥೆಗಳು ಬೆಸ್ಕಾಂಗೆ ನಿಗದಿತ ಅವಧಿಯಲ್ಲಿ ವಿದ್ಯುತ್‌ ಶುಲ್ಕ ಪಾವತಿಸುವುದಿಲ್ಲ. ಹೀಗಾಗಿ ಕೋಟ್ಯಂತರ ರು. ಶುಲ್ಕ ಪಾವತಿ ಬಾಕಿ ಉಳಿದುಕೊಂಡಿದೆ. ಇದನ್ನು ಸಮರ್ಪಕವಾಗಿ ವಸೂಲಿ ಮಾಡಲು ಅನುವಾಗುವಂತೆ ಇನ್ನು ಮುಂದೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಲಾಗುವುದು. ಬಿಬಿಎಂಪಿ ಸೇರಿದಂತೆ ಎಲ್ಲಾ ಸಂಸ್ಥೆಗಳೂ ಮೊದಲು ವಿದ್ಯುತ್‌ ಶುಲ್ಕ ಪಾವತಿಸಿ ರೀಚಾರ್ಚ್ ಮಾಡಿಸಿಕೊಳ್ಳಬೇಕು. ರೀಚಾಜ್‌ರ್‍ ಮಾಡಿಕೊಂಡಿರುವ ಮೊತ್ತ ಇರುವವರೆಗೆ ವಿದ್ಯುತ್‌ ಪೂರೈಕೆಯಾಗುತ್ತದೆ. ರೀಚಾಜ್‌ರ್‍ ಹಣ ಮುಗಿದ ಬಳಿಕ ತನ್ನಿಂದ ತಾನೇ ವಿದ್ಯುತ್‌ ಸಂಪರ್ಕ ಕಡಿತಗೊಳ್ಳಲಿದೆ.

ಇಂತಹ ಪ್ರಸ್ತಾವನೆಯೊಂದನ್ನು ಬೆಸ್ಕಾಂ ಸಂಸ್ಥೆಯು ಕರ್ನಾಟಕ ವಿದ್ಯುತ್‌ ನಿಯಂತ್ರಣಾ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿತ್ತು. ಕೆಇಆರ್‌ಸಿ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಈ ನಿಯಮ ಜಾರಿಯಾಗಬಹುದು ಎಂದು ಬೆಸ್ಕಾಂನ ಉನ್ನತ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬೆಸ್ಕಾಂನ ನೂತನ ನಿಯಮ ಜಾರಿಗೆ ಬಂದರೆ ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ ಭಾಗದ ಎಲ್ಲಾ ನಗರ ಸಭೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲೂ ಶುಲ್ಕ ಪಾವತಿಸದೆ ವಿದ್ಯುತ್‌ ಪಡೆಯಲಾಗದ ಸ್ಥಿತಿ ಉಂಟಾಗಲಿದೆ.

ಕೋಟ್ಯಂತರ ರು. ಸಾಲ:

ಬೀದಿ ದೀಪ ನಿರ್ವಹಣೆ ಹಾಗೂ ಕುಡಿಯುವ ನೀರು ಪೂರೈಕೆಗೆ ಪಂಪ್‌ಸೆಟ್‌ಗಾಗಿ ಬಿಬಿಎಂಪಿ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಪಡೆದಿರುತ್ತದೆ. ಬಿಬಿಎಂಪಿಯ ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ವರ್ಷ 200 ಪ್ಯಾಕೇಜ್‌ಗೆ ಟೆಂಡರ್‌ ಕರೆಯಲಾಗಿತ್ತು. ಕಳೆದ ಒಂದು ವರ್ಷದಿಂದ .25 ಕೋಟಿ ಮೊತ್ತದ ಹಣ ಗುತ್ತಿಗೆದಾರರಿಗೆ ಪಾವತಿಯಾಗಿಲ್ಲ. ಹೀಗಾಗಿ ಗುತ್ತಿಗೆದಾರರು .15 ಕೋಟಿಗೂ ಹೆಚ್ಚು ಮೊತ್ತವನ್ನು ಬೆಸ್ಕಾಂಗೆ ಸಾಲ ಉಳಿಸಿಕೊಂಡಿದ್ದಾರೆ. ಜತೆಗೆ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ 5 ಎಚ್‌ಪಿ ಹಾಗೂ 10 ಎಚ್‌ಪಿ ಪಂಪ್‌ಸೆಟ್‌ ಸಂಪರ್ಕದ ಹಣವನ್ನೂ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಬೆಸ್ಕಾಂ ಅಧಿಕಾರಿಗಳು ಎಫ್‌ಐಆರ್‌ ಕೂಡ ದಾಖಲು ಮಾಡಿದ್ದರು.

ಇದೀಗ ಬಿಬಿಎಂಪಿ ಹಾಗೂ ಬೆಸ್ಕಾಂ ನಡುವಿನ ಶುಲ್ಕ ವಸೂಲಾತಿ ಸಮರ ತೀವ್ರಗೊಂಡಿದ್ದು, ಕೇವಲ ನಿರ್ಮಾಣ ಹಂತದ ಖಾಸಗಿ ಕಟ್ಟಡಗಳಿಗೆ ಕಡ್ಡಾಯಗೊಳಿಸಿದ್ದ ಪ್ರಿಪೇಯ್ಡ್‌ ಮೀಟರ್‌ಗಳನ್ನು ಸರ್ಕಾರದ ಸಂಸ್ಥೆಗಳಿಗೆ ಅಳವಡಿಕೆ ಮಾಡಲು ಮುಂದಾಗಿದೆ.

ಅನುಷ್ಠಾನಕ್ಕೆ ಹಲವು ಸವಾಲು:

ಪ್ರಸ್ತುತ ನಿರ್ಮಾಣ ಹಂತದ ಕಟ್ಟಡಗಳಿಗೆ ಸಂಪೂರ್ಣವಾಗಿ ಪ್ರಿಪೇಯ್ಡ್‌ ಮೀಟರ್‌ಗಳ ಪೂರೈಕೆ ಮಾಡಲು ಬೆಸ್ಕಾಂ ಬಳಿ ದಾಸ್ತಾನು ಇಲ್ಲ. ಹಲವು ಕಡೆ ಪ್ರಿಪೇಯ್ಡ್‌ ಮೀಟರ್‌ಗಳಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇದೀಗ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸಂಸ್ಥೆಗಳಿಗೂ ಕಡ್ಡಾಯಗೊಳಿಸಲು ಮುಂದಾದರೆ ಮೀಟರ್‌ಗಳ ಕೊರತೆ ಮತ್ತಷ್ಟುಹೆಚ್ಚಾಗಲಿದೆ. ಜತೆಗೆ ಪರಸ್ಪರ ಸರ್ಕಾರಿ ಸಂಸ್ಥೆಗಳ ನಡುವೆ ಸಮನ್ವಯತೆ ಲೋಪ ಉಂಟಾಗಿ ತಿಕ್ಕಾಟ ಶುರುವಾಗುವ ಸಾಧ್ಯತೆ ಇದೆ. ಜತೆಗೆ, ಈಗಾಗಲೇ ಕೋಟ್ಯಂತರ ರು. ಶುಲ್ಕ ಬಾಕಿ ಉಳಿಸಿಕೊಂಡಿದ್ದು, ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆಗೆ ಮುಂದಾದರೆ ಹಳೆಯ ಬಾಕಿ ವಸೂಲಿ ಕಷ್ಟವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಎಲ್ಲಾ ಸಾರ್ವಜನಿಕರಿಗೂ ಪ್ರಿಪೇಯ್ಡ್‌ ಮೀಟರ್‌?

ಕೇಂದ್ರ ಸರ್ಕಾರುವ ದೇಶಾದ್ಯಂತ 2019ರ ಏಪ್ರಿಲ್‌ 1ರಿಂದ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಅಳವಡಿಕೆ ಕಾರ್ಯ ಶುರುವಾಗಿದೆ. ಸದ್ಯದಲ್ಲೇ ರಾಜ್ಯದಲ್ಲೂ ಈ ನಿಯಮ ಜಾರಿಗೆ ಮುಂದಾದರೆ ಎಲ್ಲಾ ಸಾರ್ವಜನಿಕರೂ ಮೊದಲು ಹಣ ರೀಚಾಜ್‌ರ್‍ ಮಾಡಿ ಬಳಿಕ ಹಣದ ಮೊತ್ತಕ್ಕೆ ಹೊಂದುವಷ್ಟುವಿದ್ಯುತ್‌ ಬಳಕೆ ಮಾಡಿಕೊಳ್ಳಬೇಕು. ರೀಚಾಜ್‌ರ್‍ ಮಾಡಿಸಿದ ಮೊತ್ತ ಮುಗಿದ ತಕ್ಷಣ ಸಂಪರ್ಕ ಕಟ್‌ ಆಗಲಿದೆ. ಈ ಬಗ್ಗೆ ಬೆಸ್ಕಾಂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವಾದರೂ ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೂ ಅನ್ವಯಿಸುವ ಸಾಧ್ಯತೆ ದಟ್ಟವಾಗಿದೆ.

ವಿದ್ಯುತ್‌ ಶುಲ್ಕ ಸಂಗ್ರಹಿಸುವಲ್ಲಿ ಸಾಕಷ್ಟುಸಮಸ್ಯೆಗಳನ್ನು ಎದುರಾಗುತ್ತಿವೆ. ಹೀಗಾಗಿ ಪ್ರಿಪೇಯ್ಡ್‌ ಮೀಟರ್‌ ಅಳವಡಿಸಿ ವಿದ್ಯುತ್‌ ಶುಲ್ಕವನ್ನು ಕರೆನ್ಸಿ ರೂಪದಲ್ಲಿ ಮೊದಲೇ ಕಟ್ಟಿಸಿಕೊಂಡರೆ ಅನುಕೂಲವಾಗಲಿದೆ. ಹೀಗಾಗಿ ಬಿಬಿಎಂಪಿ, ನಗರ ಸಭೆ, ಗ್ರಾಮಪಂಚಾಯಿತಿಗಳಿಗೆ ಕುಡಿಯುವ ನೀರು, ಬೀದಿ ದೀಪಗಳ ಬಳಕೆಗೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆಗೆ ಕೆಇಆರ್‌ಸಿ ಅನುಮತಿ ನೀಡಿದೆ. ಆದರೆ, ಬೆಸ್ಕಾಂ ಈ ನಿಯಮವನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ.

-ನಾಗರಾಜ್‌, ಮುಖ್ಯ ಎಂಜಿನಿಯರ್‌, ಬೆಸ್ಕಾಂ.

ಈವರೆಗೂ ನಿರ್ಮಾಣ ಹಂತದ ಕಟ್ಟಡಗಳಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ನೀಡಲು ಪ್ರಿಪೇಯ್ಡ್‌ ಮೀಟರ್‌ ಅಳವಡಿಸಲಾಗುತ್ತಿತ್ತು. ಇತ್ತೀಚೆಗೆ ಎಲ್‌ಟಿ 6, ನೀರು ಸರಬರಾಜು ಹಾಗೂ ಬೀದಿ ದೀಪ ಅಳವಡಿಕೆಗೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಇದಕ್ಕೆ ಆಯೋಗ ಅನುಮತಿ ನೀಡಿದೆ.

-ಸಿ.ಶಿಖಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು.