ಬಸವರಾಜ ಹಿರೇಮಠ

ಈ ಊರಲ್ಲಿ ಯಾರದ್ದೇ ಮನೆಯಲ್ಲಿ ಗಂಡು ಮಗು ಜನಿಸಿದರೂ ಹೆಸರಿಡುವ ಮುಂಚೆಯೇ ತೊಡೆಗೆ ಲಂಗೋಟಿ ಕಟ್ಟುತ್ತಾರೆ. ಮುಂದೆ ಆ ಮಗುವನ್ನು ಕುಸ್ತಿಗೆ ಕಳುಹಿಸುವುದು ಇದರ ಉದ್ದೇಶ. ಕಾರಣ ಆ ಊರಿನ ಪರಂಪರೆಯೇ ಕುಸ್ತಿ. ಗ್ರಾಮದ ಪ್ರತಿಯೊಂದು ಮನೆಯಲ್ಲಿ ಒಂದಿಬ್ಬರು ಕುಸ್ತಿ ಪೈಲ್ವಾನರನ್ನಾಗಿ ಸಿದ್ಧಗೊಳಿಸುವುದೇ ಈ ಊರಿನಲ್ಲಿ ಹಿಂದಿನಿಂದಲೂ ನಡೆದು ಬಂದ ಪರಂಪರೆ. ಸುತ್ತೂರುಗಳಲ್ಲಿ ಧಾರವಾಡದ ತಡಸಿನಕೊಪ್ಪ ಎಂದರೆ, ‘ಏ ಅದು ಪೈಲ್ವಾನರ ಊರೋ..’ ಎನ್ನುವ ಮಾತು. ಪೂರ್ವಜರ ಕಾಲದಿಂದಲೂ ತಡಸಿನಕೊಪ್ಪದಲ್ಲಿ ಕುಸ್ತಿ ಪರಂಪರೆಯಾಗಿಯೇ ಬೆಳೆದು ಬಂದಿದ್ದು, ಈಗಿನ ಪೀಳಿಗೆ ಸಹ ಅದನ್ನು ಮುಂದುವರಿಸಿದೆ. ಸುಮಾರು ಎರಡೂವರೆ ಸಾವಿರ ಜನಸಂಖ್ಯೆಯ ಈ ಊರಿನಲ್ಲಿ ನೂರಕ್ಕೂ ಹೆಚ್ಚಿನ ಪೈಲ್ವಾನರಿದ್ದು, ತಡಸಿನಕೊಪ್ಪ ಅಕ್ಷರಶಃ ಪೈಲ್ವಾನರ ಗರಡಿ ಎಂದೇ ಹೆಸರಾಗಿದೆ.

ಅಣ್ಣಾವ್ರ ಜತೆಗೆ ಕುಸ್ತಿ ಮಾಡಿದ ಗೌಡಪ್ಪ

1979ರಲ್ಲಿ ತೆರೆ ಕಂಡ ‘ಹುಲಿ ಹಾಲಿನ ಮೇವು’ ಚಿತ್ರದಲ್ಲಿ ಡಾ. ರಾಜಕುಮಾರ ಅವರೊಂದಿಗೆ ಕುಸ್ತಿ ಆಡಿದ ಗೌಡಪ್ಪ ಮುದಿಗೌಡರ ಸಹ ಇದೇ ತಡಸಿನಕೊಪ್ಪದವರು ಎನ್ನುವುದು ಹೆಮ್ಮೆಯ ವಿಷಯ. ದೊಡ್ಡಬಳ್ಳಾಪುರದಲ್ಲಿ 36 ವರ್ಷಗಳ ಕಾಲ ಕುಸ್ತಿಗಾಗಿಯೇ ಇದ್ದ ಗೌಡಪ್ಪ ಅವರು, ಈ ಚಿತ್ರಕ್ಕಾಗಿ ನಡೆದ ಶೂಟಿಂಗ್‌ ವೇಳೆ ಅಣ್ಣಾವರ ಜತೆಗೆ ಸೆಣಸಾಡಿದ್ದರು. ಇದೀಗ ಇವರ ಪುತ್ರ ಪರಮೇಶಿ ತಂದೆಯಿಂದ ಬಳುವಳಿಯಾಗಿ ಬಂದ ಕುಸ್ತಿಯನ್ನು ಶ್ರದ್ಧೆಯಿಂದ ಆಡಿ ಸ್ಕೂಲ್‌ ಗೇಮ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಹಲವು ಮಂದಿ ಕುಸ್ತಿ ವೀರರು

ಈ ಗ್ರಾಮದ ಖಾನಗೌಡ ಹೊಸಮನಿ ಅವರು ಮೈಸೂರು ದಸರಾ, ಕೋಲಾರ ಕುವರ ಹಾಗೂ ಧಾರವಾಡ ಕರ್ನಾಟಕ ವಿವಿಯಲ್ಲಿ ನಡೆದ ಕುಸ್ತಿಯಲ್ಲಿ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಇವರ ಹಿರಿಯರಾದ ದ್ಯಾಮಣ್ಣ ಬಿಲಕಾರ ಕನಕಪುರ, ಶಿವಮೊಗ್ಗ, ಬೈಲಹೊಂಗಲ, ಸವದತ್ತಿ ಕಿಲ್ಲಾ ಹಾಗೂ ಗೋವಾದಲ್ಲೂ ಹಲವು ಪೈಲ್ವಾನರನ್ನು ಒಗೆದ ಶ್ರೇಯಸ್ಸು ಹೊಂದಿದ್ದಾರೆ. ಗ್ರಾಮದಲ್ಲಿನ ಹಿರಿಯ ಕುಸ್ತಿ ಪೈಲ್ವಾನರು 70ರಿಂದ 90ನೇ ದಶಕದವರೆಗೆ ಮೈಸೂರು ದಸರಾ ಸೇರಿದಂತೆ ರಾಜ್ಯದಲ್ಲಿ ಎಲ್ಲಿಯೇ ನಡೆಯುವ ಥೇಟರ್‌ ಕುಸ್ತಿ, ಬಯಲು ಕುಸ್ತಿ ಹಾಗೂ ಜಾತ್ರೆಗಳಲ್ಲಿ ನಡೆಯುವ ಕುಸ್ತಿಗಳಲ್ಲಿ ಭಾಗವಹಿಸಿ ಕುಸ್ತಿ ಒಗೆದ ಸಾಕಷ್ಟುಉದಾಹರಣೆಗಳಿವೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ 2ನೇ ‘ಕರ್ನಾಟಕ ಕುಸ್ತಿ ಹಬ್ಬ’ದಲ್ಲೂ ಈ ಒಂದೇ ಊರಿನ 12 ಜನ ಪೈಲ್ವಾನರು ಭಾಗವಹಿಸಿ ಫೈನಲ್‌ ಹಂತದ ಪ್ರವೇಶಿಸಿದ್ದರು.

ಟ್ರಾಫಿಕ್ ವಿಚಾರಕ್ಕೆ ನಡು ರೋಡಲ್ಲೇ ಖಾಕಿ ಖಾಕಿ ಫೈಟ್

ಮಾಜಿ, ಹಾಲಿ ಪೈಲ್ವಾನರು

ಯಲ್ಲಪ್ಪಗೌಡ, ಪರಪ್ಪಗೌಡ, ಕೆಂಚಪ್ಪ, ಭೀಮನಗೌಡರ, ಶಿವನಪ್ಪ, ಈಶ್ವರಪ್ಪ, ಬಸಪ್ಪ ಗಂಜೆಪ್ಪನವರ, ಶಿವನಪ್ಪ ಬಂಗಾರಿ, ಸಿದ್ದಪ್ಪ ಸಕ್ರೆಪ್ಪನವರ ಹೀಗೆ ಅನೇಕ ಹಿರಿಯರು 80ರ ದಶಕದಲ್ಲಿ ಕುಸ್ತಿ ಹೆಸರು ಮಾಡಿದವರು. ಸದ್ಯ ರವಿ ಭೀಮಪ್ಪನವರ, ಮಹಾದೇವ ರೇವಡಿಹಾಳ, ಮಂಜುನಾಥ ಧೂಳಿಕೊಪ್ಪ, ನಾಗರಾಜ ಗುಡದರಿ, ಇಂದ್ರಕುಮಾರ ದ್ಯಾಮಣ್ಣ, ರಮೇಶ ದುರಗನ್ನವರ, ಖಾನಗೌಡ ಕೆಂಚಪ್ಪ ಹೊಸಮನಿ ಹಾಗೂ ಗೌಡಪ್ಪ ಅವರ ಪುತ್ರ ಪರಮೇಶಿ ಮುದಿಗೌಡರ ಸೇರಿದಂತೆ ಸಾಕಷ್ಟುಪೈಲ್ವಾನರಿದ್ದಾರೆ.

ಕುಸ್ತಿ ಪ್ರೀತಿ ಕಮ್ಮಿಯಾಗಿಲ್ಲ

ಗ್ರಾಮದಲ್ಲಿ ಒಂದೇ ಒಂದು ಗರಡಿ ಮನೆ ಇದ್ದು, ಇದರೊಂದಿಗೆ ಧಾರವಾಡದ ಬೇರೆ ಬೇರೆ ಗರಡಿ ಮನೆಗಳಲ್ಲಿ ಈಗಿನ ಪೀಳಿಗೆಯ ಪೈಲ್ವಾನರು ಸದ್ಯ ತರಬೇತಿ ಹೊಂದುತ್ತಿದ್ದಾರೆ. ವರ್ಷಗಳು ಉರುಳಿದಂತೆ ಕುಸ್ತಿಗೆ ಮಹತ್ವ ಕಡಿಮೆಯಾಗಿದ್ದರಿಂದ ಗ್ರಾಮದ ಸಾಕಷ್ಟುಪೈಲ್ವಾನರು ಕುಸ್ತಿ ಬಿಟ್ಟು ಬೇರೆ ಬೇರೆ ಉದ್ಯೋಗಗಳಲ್ಲಿ ಹೊರಳಿದ್ದಾರೆ. ಇಷ್ಟಾಗಿಯೂ ಕುಸ್ತಿ ಬಗ್ಗೆ ಗ್ರಾಮಸ್ಥರಿಗೆ ಮಾತ್ರ ಪ್ರೇಮ ಒಂಚೂರು ಕಡಿಮೆಯಾಗಿಲ್ಲ. ತಮ್ಮ- ತಮ್ಮ ಉದ್ಯೋಗಗಳ ನಂತರ ಕುಸ್ತಿ ಹಿಡಿಯೋದೇ ಎಂದು ಕುಸ್ತಿ ಮೇಲಿನ ಪ್ರೇಮವನ್ನು ಬಿಚ್ಚಿಡುತ್ತಾರೆ ಯುವ ಕುಸ್ತಿ ಪೈಲ್ವಾನರು.

ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳದ್ದೇ ದರ್ಬಾರ್!

ಪ್ರೋತ್ಸಾಹ ಬೇಕು

ತಡಸಿನಕೊಪ್ಪ ಗ್ರಾಮದಲ್ಲಿ 100ಕ್ಕೂ ಹೆಚ್ಚಿನ ಕುಸ್ತಿ ಪೈಲ್ವಾನರಿದ್ದು, ಅಂದಾಜು ಎಂಟತ್ತು ಜನರಿಗೆ ಮಾತ್ರ ಪಿಂಚಣಿ ಹಣ ಬರುತ್ತಿದೆ. ಉಳಿದವರು ಸಹ ಕ್ರೀಡಾ ಇಲಾಖೆಗೆ ಅರ್ಜಿ ಹಾಕಿದ್ದಾರೆ. ಆದರೆ ಸ್ಪಂದನೆ ಇಲ್ಲ. ಕ್ರೀಡಾ ಇಲಾಖೆಯಿಂದ ವಿಶೇಷವಾಗಿ ಈ ಗ್ರಾಮಸ್ಥರಿಗೆ ಪಿಂಚಣಿ ಸಹಕಾರ ಕುಸ್ತಿ ಬಗೆಗಿನ ಆಸಕ್ತಿ ಮತ್ತಷ್ಟುಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದರೆ ತಡಸಿನಕೊಪ್ಪದ ಪೈಲ್ವಾನರು ರಾಷ್ಟ್ರ ಮಟ್ಟದಲ್ಲಿ ಮಿಂಚುವುದರಲ್ಲಿ ಸಂಶಯವಿಲ್ಲ.- ಪರಮೇಶ್ವರ ಕಾಳೆ, ಕುಸ್ತಿ ಪ್ರೇಮಿ ಹಿಂದಿನ ಕಾಲದಿಂದಲೂ ನಮ್ಮೂರಲ್ಲಿ ಕುಸ್ತಿ ಬಗ್ಗೆ ಪ್ರೀತಿ, ಪ್ರೇಮವಿದೆ. ಈ ಊರಿನ ಮಣ್ಣು, ಆಹಾರ ಕ್ರಮ, ನಿರಂತರ ಶ್ರಮದ ಫಲವಾಗಿ ತಡಸಿನಕೊಪ್ಪದಲ್ಲಿ ಜಗಜಟ್ಟಿಗಳು ಹುಟ್ಟಿಕೊಂಡಿದ್ದಾರೆ. ಕುಸ್ತಿ ನಮಗೆ ಬಳುವಳಿಯಾಗಿ ಬಂದ ಕ್ರೀಡೆ. ಪ್ರತಿ ಮನೆಯಲ್ಲೂ ಒಬ್ಬನಾದರೂ ಪೈಲ್ವಾನ ಇರಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದ್ದು, ಮುಂದಿನ ಪೀಳಿಗೆ ಕುಸ್ತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗುತ್ತಿದ್ದೇವೆ. ಗೌಡಪ್ಪ ಮುದಿಗೌಡರ, ಅಣ್ಣಾವ್ರ ಜತೆ ಕುಸ್ತಿ ಹಿಡಿದ ಹಿರಿಯ ಪೈಲ್ವಾನರು