ದೇಶದಲ್ಲಿ ದುಬಾರಿ ಕರ್ನಾಟಕ, ಮೇ.1ರಿಂದ ಟ್ಯಾಕ್ಸಿ, ಸಣ್ಣ ಗೂಡ್ಸ್, ಎಲೆಕ್ಟ್ರಿಕ್ ಕಾರು ತೆರಿಗೆ ಹೆಚ್ಚಳ

Synopsis
ಕರ್ನಾಟಕದಲ್ಲಿ ವಾಹನ ಖರೀದಿ ಇದೀಗ ಬಲು ದುಬಾರಿಯಾಗಿದೆ. ಮೇ.1ರಿಂದ ಪರಿಷ್ಕೃತ ತೆರಿಗೆ ಜಾರಿಗೆ ಬರುತ್ತಿದೆ. ಇದು ಲೈಫ್ ಟೈಮ್ ತೆರಿಗೆ. ಸಣ್ಣ ಗೂಡ್ಸ್, ಟ್ಯಾಕ್ಸಿ ಸೇರಿದಂತೆ ಯೆಲ್ಲೋ ಬೋರ್ಡ್ ವಾಹನ, ಎಲೆಕ್ಟ್ರಿಕ್ ವಾಹನ ಖರೀದಿಗೆ ಜೀವಿತಾವಧಿ ತೆರಿಗೆ ಪಾವತಿಸಬೇಕು. ಹೊಸ ತೆರಿಗೆ ನೀತಿ ನಾಳೆಯಿಂದಲೇ ಜಾರಿಯಾಗುತ್ತಿದೆ.
ಬೆಂಗಳೂರು(ಏ.30) ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ವಾಹನ ಖರೀದಿ ಕರ್ನಾಟಕದಲ್ಲಿ ಬಲು ದುಬಾರಿಯಾಗಿದೆ. ಈಗಾಲೇ ರಾಜ್ಯ ಸರ್ಕಾರಕ್ಕೆ ಹಲವು ರೂಪದಲ್ಲಿ ತೆರಿಗೆ ಪಾವತಿಸಬೇಕು. ಇದರ ಜೊತೆಗೆ ನಾಳೆಯಿಂದ ಅಂದರೆ ಮೇ ತಿಂಗಳ ಆರಂಭದಿಂದ ಲೈಫ್ ಟೈಮ್ ಟ್ಯಾಕ್ಸ್ ಹೆಚ್ಚಾಗುತ್ತಿದೆ. ಸಣ್ಣ ಗೂಡ್ಸ್, ಟ್ಯಾಕ್ಸಿ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಯಲ್ಲೋ ಬೋರ್ಡ್ ವಾಹನ ಖರೀದಿ ಕರ್ನಾಟಕದಲ್ಲಿ ಬಲು ದುಬಾರಿಯಾಗಿದೆ. ಮೇ.1 ರಿಂದ ಕರ್ನಾಟಕದಲ್ಲಿ ಯೆಲ್ಲೋ ಬೋರ್ಡ್ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಅಥವಾ ಜೀವಿತಾವಧಿ ತೆರಿಗೆ ಪಾವತಿಸಬೇಕು. ಹೊಸ ಆದೇಶ ನಾಳೆಯಿಂದಲೇ ಜಾರಿಯಾಗುತ್ತಿದೆ. ಈ ಸಂಬಂಧ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ- 2025’ಕ್ಕೆ ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ.
ಯಾವ ವಾಹನಗಳಿಗೆ ಜೀವಿತಾವಧಿ ತೆರಿಗೆ?
ಯೆಲ್ಲೋ ಬೋರ್ಡ್ ವಾಹನ ಖರೀದಿಸುವ ರಾಜ್ಯದ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಕ್ ಕೊಟ್ಟಿದೆ. ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಹೀಗಾಗಿ ನಾಳೆಯಿಂದ ಹೊಸ ತೆರಿಗೆ ನೀತಿ ಜಾರಿಯಾಗುತ್ತಿದೆ. 10 ಲಕ್ಷ ರೂಪಾಯಿ ಒಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿಸುವ ಪ್ರತಿಯೊಬ್ಬರು ಜೀವಿತಾವಧಿ ತೆರಿಗೆ ಪಾವತಿಸಬೇಕು. ಇಷ್ಟೇ ಅಲ್ಲ ಕಟ್ಟಡ ಸಾಮಾಗ್ರಿಗಳನ್ನು ಕೊಂಡೊಯ್ಯುವ ವಾಹನಗಳು, ವಾಣಿಜ್ಯ ಬಳಕೆ ವಾಹನಗಳು, ಎಲೆಕ್ಟ್ರಿಕ್ ಕಾರುಗಳಿಗೆ ದುಬಾರಿ ತೆರಿಗೆ ಪಾವತಿಸಬೇಕು.
ಹೊಸ ಕಾರು-ಬೈಕ್ ಖರೀದಿದಾರರಿಗೆ ಸೆಸ್ ಹೆಚ್ಚಳ ಮಾಡಿದ ಸರ್ಕಾರ; ಫೆ.1ರಿಂದ ಅನ್ವಯ!
ಶೇಕಡಾ 5 ರಷ್ಟು ಲೈಫ್ ಟೈಮ್ ಟ್ಯಾಕ್ಸ್
ಹೊಸ ತೆರಿಗೆ ನೀತಿಯಲ್ಲಿ ಎಲ್ಲವೂ ಬದಲಾಗಿದೆ. ಕಾರಣ ಈ ಹಿಂದೆ ಹತ್ತು ಲಕ್ಷ ರೂಪಾಯಿ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್‌ಗೆ 100 ರೂಪಾಯಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿ ಮಾಡಬೇಕು. 4 ಸೀಟರ್ ವಾಹನಕ್ಕೆ 400 ರೂಪಾಯಿ ಪಾವತಿ ಮಾಡಬೇಕಿತ್ತು. ಪರಿಷ್ಕೃತ ತೆರಿಗೆ ನೀತಿಯಲ್ಲಿ ಈ ನಿಯಮ ಬದಲಿಸಲಾಗಿದೆ. ಇದರ ಬದಲಾಗಿ 10 ಲಕ್ಷ ರೂಪಾಯಿ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇಕಡಾ 5 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. ಅಂದರೆ ನಾಳೆಯಿಂದ ಕರ್ನಾಟಕದಲ್ಲಿ ಯಾರಾದರೂ 10 ಲಕ್ಷ ರೂಪಾಯಿಯ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡಿದರೆ ಜೀವಿತಾವಧಿ ಟ್ಯಾಕ್ಸ್ ಎಂದು 50,000 ರೂಪಾಯಿ ತೆರಿಗೆ ಪಾವತಿಸಬೇಕು. ಹೀಗಾದಲ್ಲಿ ರಸ್ತೆ ತೆರಿಗೆ, ಇತರ ಎಲ್ಲಾ ತೆರಿಗೆ, ವಿಮೆ ಸೇರಿ ವಾಹನದ ಆನ್‌ರೋಡ್ ಬೆಲೆ ದುಪ್ಪಟ್ಟಾಗಲಿದೆ.
25 ಲಕ್ಷ ರೂ ಮೇಲ್ಪಟ್ಟ ವಾಹನಗಳಿಗೂ ತೆರಿಗೆ
ಹೊಸ ತೆರಿಗೆ ನೀತಿಯಲ್ಲಿ 25 ಲಕ್ಷ ರೂಪಾಯಿ ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 10 ರಷ್ಟು ತೆರಿಗೆ ಪಾವತಿ ಮಾಡಬೇಕು. ಈ ಹಿಂದೆ ತೆರಿಗೆ ನೀತಿಯಲ್ಲಿ 25 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಎಲೆಕ್ಟ್ರಿಕ್ ವಾಣಿಜ್ಯ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ತಿದ್ದುಪಡಿ ವಿಧೇಯಕದಿಂದ ರಾಜ್ಯದಲ್ಲಿ ಇನ್ಮುಂದೆ ನೋಂದಣಿಯಾಗುವ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಇವಿ-ಕ್ಯಾಬ್‌ಗಳಿಗೆ ಶೇ.10ರಷ್ಟು ಅಂದರೆ, ಎರಡೂವರೆ ಲಕ್ಷ ರು.ತೆರಿಗೆ ವಿಧಿಸಲಾಗುತ್ತದೆ. ಇದು ಜೀವತಾವಧಿ ತೆರಿಗೆಯಾಗಿದ್ದು, ಹಳದಿ ನಾಮಫಲಕ (ಯೆಲ್ಲೋ ಬೋರ್ಡ್) ಹೊಂದಿರುವ ವಾಹನಗಳಿಗೆ ಅನ್ವಯವಾಗಲಿದೆ. ಈ ತಿದ್ದುಪಡಿ ವಿಧೇಯಕದ ಮೂಲಕ ವಾರ್ಷಿಕ 112.5 ಕೋಟಿ ರು.ಹೆಚ್ಚುವರಿ ಆದಾಯ ಹರಿದು ಬರುವ ಇದೆ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ, ಹೊಸದಾಗಿ ರಸ್ತೆಗಿಳಿಯುವ ಹತ್ತು ಲಕ್ಷ ರು.ವರೆಗಿನ ಮೌಲ್ಯದ ಬಾಡಿಗೆ ಮೋಟಾರು ವಾಹನ (ಹಳದಿ ನಾಮಫಲಕ ಹೊಂದಿರುವ ಕ್ಯಾಬ್)ಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದೇ ವೇಳೆ, ನಿರ್ಮಾಣ ವಲಯದ ಉಪಕರಣಗಳನ್ನು ಸಾಗಿಸುವ ವಾಹನಗಳಿಗೆ ಜೀವಿತಾವಧಿ ತೆರಿಗೆಯನ್ನು ಶೇ. 6ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ.
ವಾಹನಗಳ ಪ್ರಮುಖ ಬಿಡಿಭಾಗಗಳಿಗೆ ಟ್ರಂಪ್ ಶೇ.25ರಷ್ಟು ತೆರಿಗೆ: ಹಲವು ಭಾರತೀಯ ಕಂಪನಿಗಳಿಗೆ ಸಂಕಷ್ಟ